More

    ಇ-ಪಾವತಿ ವ್ಯವಸ್ಥೆ ಸರಳೀಕರಿಸಿ: ರೇಷ್ಮೆ ರೀಲರ್ಸ್‌ಗಳ ಪಟ್ಟು

    ಕೋಲಾರ:  ನಗರದಲ್ಲಿನ ಸರ್ಕಾರಿ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಜಾರಿಗೊಳಿಸಿರುವ ಇ-ಪಾವತಿ ವ್ಯವಸ್ಥೆಯಲ್ಲಿನ ಕೆಲ ಅನನುಕೂಲತೆ ಹಿನ್ನೆಲೆಯಲ್ಲಿ ರೀಲರ್ಸ್‌ಗಳು ಸೋಮವಾರವೂ ಹರಾಜು ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ದು, ವ್ಯವಸ್ಥೆ ಸರಳೀಕರಣಕ್ಕೆ ಒಂದು ವಾರದ ಗಡುವು ನೀಡಿದ್ದಾರೆ.

    ನಗರದ ರೇಷ್ಮೆ ಗೂರು ಮಾರುಕಟ್ಟೆಯಲ್ಲಿ ನ.8ರಿಂದ ಇ-ಪಾವತಿ ವ್ಯವಸ್ಥೆ ಚಾಲ್ತಿಗೆ ಬಂದಿದೆ. ಇ-ಪಾವತಿ ವ್ಯವಸ್ಥೆಯಲ್ಲಿ ಆಗುತ್ತಿರುವ ಅನನುಕೂಲಗಳ ಬಗ್ಗೆ ರೀಲರ್ಸ್‌ಗಳು ಅಂದೇ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸರಳೀಕರಣಕ್ಕೆ ಮನವಿ ಮಾಡಿದ್ದರಾದರೂ ಸುಧಾರಣೆ ಕಂಡಿರಲಿಲ್ಲ.

    ಈ ಹಿನ್ನೆಲೆಯಲ್ಲಿ ರೀಲರ್ಸ್‌ಗಳು ಸೋಮವಾರ ಬೆಳಗ್ಗೆ ಮತ್ತೆ ಹರಾಜು ಸ್ಥಗಿತಗೊಳಿಸಿದರು. ನಂತರ ರೀಲರ್ಸ್‌ ಸಂಘದ ಅಧ್ಯಕ್ಷ ಅನ್ಸರ್ ಪಾಷಾ, ರೇಷ್ಮೆ ಬೆಳೆಗಾರರ ಸಂಘದ ಅಧ್ಯಕ್ಷ ನಾಗನಾಳ ಶ್ರೀನಿವಾಸ್ ಮಾರುಕಟ್ಟೆ ಉಪ ನಿರ್ದೇಶಕರ ಕೊಠಡಿಯಲ್ಲಿ ಚರ್ಚೆ ನಡೆಸಿ ಸಮಸ್ಯೆಗಳ ಮನವರಿಕೆ ಮಾಡಿಕೊಟ್ಟರು.

    ತೂಕಕ್ಕೆ ಅನುಗುಣವಾಗಿ ಬುಟ್ಟಿ ತೂಕ ಎಷ್ಟಿದೆಯೋ ಅಷ್ಟು ಮಾತ್ರ ತೂಕದಲ್ಲಿ ಹಣ ಕಟಾವಣೆ ಆಗಬೇಕು, ಹಣ ಕಡಿಮೆ ಇದ್ದರೂ ತೂಕ ಮಾಡಬೇಕು, ತೂಕ ಮುಗಿದ ನಂತರ ಉಳಿಕೆ ಹಣವನ್ನು ರೀಲರ್ಸ್‌ ಪಾವತಿಸಲು ಅನುಕೂಲ ಆಗುವಂತೆ ನಗದು ಕೌಂಟರ್ ಮತ್ತು ನಗದು ಠೇವಣಿಗೆ ವ್ಯವಸ್ಥೆ ಕಲ್ಪಿಸಬೇಕು. ರೀಲರ್ಸ್‌ ಖಾತೆಯಲ್ಲಿ ಹೆಚ್ಚಿಗೆ ಹಣ ಉಳಿದಿದ್ದರೆ ಅದನ್ನು ಐಎಂಪಿಎಸ್ ಮೂಲಕ ಅಂದೇ ವಾಪಸ್ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಸಿಲ್ಕ್ ರೀಲರ್ಸ್‌ ಅಸೊಸಿಯೇಷನ್ ಅಧ್ಯಕ್ಷ ಅನ್ಸರ್‌ಪಾಷಾ ಮನವಿ ಮಾಡಿದರು.

    ಶ್ರೀನಿವಾಸಪುರ ಮತ್ತು ಕ್ಯಾಲನೂರು ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಇ-ಹರಾಜು, ಇ-ಪಾವತಿ ವ್ಯವಸ್ಥೆ ಆಗದೆ ನಗದು ಹಾಗೂ ಬಹಿರಂಗ ಹರಾಜಿನಿಂದಾಗಿ ರೈತರು ಅಲ್ಲಿಗೆ ಹೋಗಿ ಈ ಮಾರುಕಟ್ಟೆಗೆ ಕಡಿಮೆ ಗೂಡು ಬರುತ್ತಿದೆ. ಎಲ್ಲ ಮಾರುಕಟ್ಟೆಯಲ್ಲೂ ಒಂದೇ ವ್ಯವಸ್ಥೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.

    ರೀಲರ್ ಮುಂಗಡ ಹಣ ಪಾವತಿಸಿ ಹರಾಜಿನಲ್ಲಿ ಭಾಗವಹಿಸುವುದರಿಂದ ತೂಕ ಮುಗಿದ ನಂತರ ಗೂಡಿನ ಪೂರ್ತಿ ಹಣ ಪಾವತಿಸಿ ನಿರ್ಗಮನದ ಪಾಸ್ ಪಡೆದು ಗೂಡನ್ನು ಸಾಕಾಣಿಕೆ ಮಾಡಬೇಕು, ಒಂದು ವೇಳೆ ಹಣ ಪಾವತಿಸದ ರೀಲರ್ಸ್‌ ರಹದಾರಿಯನ್ನು ಒಂದು ವಾರ ತಡೆಹಿಡಿಯಿರಿ ಎಂದು ರೀಲರ್ ಮುನಾವರ್‌ಬೇಗ್ ಅಧಿಕಾರಿಗಳ ಗಮನಕ್ಕೆ ತಂದರು.

    ಪ್ರತಿಕ್ರಿಯಿಸಿದ ರೇಷ್ಮೆ ಇಲಾಖೆ ಉಪನಿರ್ದೇಶಕ ಕಾಳಪ್ಪ, ಮಾರುಕಟ್ಟೆ ಉಪ ನಿರ್ದೇಶಕ ರಾಧಾಕೃಷ್ಣ, ಮಾರುಕಟ್ಟೆ ಅಧಿಕಾರಿ ವಿ.ಲಕ್ಷ್ಮೀ, ತೂಕದ ಯಂತ್ರಕ್ಕೆ ಅಳವಡಿಸಿರುವ ತಂತ್ರಾಂಶವನ್ನು ಸ್ಥಳೀಯವಾಗಿ ಬದಲಿಸಲು ಸಾಧ್ಯವಿಲ್ಲ. ತಲಘಟ್ಟಪುರದಿಂದಲೇ ತಂತ್ರಜ್ಞರು ಬರಬೇಕು, ಇ-ಪಾವತಿಯಲ್ಲಿ ಆಗಬೇಕಾದ ಸುಧಾರಣೆಗಳ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.
    ಒಂದು ವಾರದೊಳಗೆ ವ್ಯವಸ್ಥೆಯಲ್ಲಿ ಸುಧಾರಣೆ ಮಾಡಿಕೊಡದಿದ್ದರೆ ಮತ್ತೆ ಹರಾಜು ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ನೀಡಿದ ರೀಲರ್ಸ್‌ಗಳು ಮಧ್ಯಾಹ್ನ 12.30ರ ನಂತರ ಗೂಡು ಹರಾಜು ಕೂಗಿದರು.

    ತೂಕದ ಯಂತ್ರಕ್ಕೆ ಬುಟ್ಟಿಗೆ 10 ಕೆಜಿಗೆ ನಿಗದಿಪಡಿಸಿದ್ದಾರೆ, ಆದರೆ ಬುಟ್ಟಿಗೆ 8.500-9 ಕೆಜಿ ಬರುವುದರಿಂದ ತೂಕ ಆಗುತ್ತಿಲ್ಲ. ಬುಟ್ಟಿ ಎಷ್ಟು ತೂಗುತ್ತದೋ ಅಷ್ಟಕ್ಕೆ ಹಣ ತೆಗೆದುಕೊಳ್ಳುವ ವ್ಯವಸ್ಥೆ ಮಾಡಿಕೊಡಬೇಕು. ರೇಷ್ಮೆ ಉದ್ಯಮ ಉಳಿಯಬೇಕಾದರೆ ಶೇ. 60ರಷ್ಟಿರುವ ಸಣ್ಣ ಸಣ್ಣ ರೀಲರ್ಸ್‌ಗಳಿಗೆ ಅನುಕೂಲಕರ ವ್ಯವಸ್ಥೆ ಮಾಡಿಕೊಡಬೇಕು.
    ಅನ್ಸರ್‌ಪಾಷಾ, ಅಧ್ಯಕ್ಷ, ಸಿಲ್ಕ್ ರೀಲರ್ಸ್‌ ಅಸೋಸಿಯೇಷನ್, ಕೋಲಾರ

    ರೀಲರ್ಸ್‌ಗಳು ತೂಕದ ಯಂತ್ರಕ್ಕೆ ಅಳವಡಿಸಿರುವ ತಂತ್ರಾಂಶದಲ್ಲಿ ಬದಲಾವಣೆ ಸೇರಿ ಹಲವು ಬೇಡಿಕೆ ಮುಂದಿಟ್ಟಿದ್ದು, ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು.
    ಎಂ. ರಾಧಾಕೃಷ್ಣ, ಉಪನಿರ್ದೇಶಕ, ರೇಷ್ಮೆ ಮಾರುಕಟ್ಟೆ, ಕೋಲಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts