More

    ಇ ಖಾತಾ ನೋಂದಣಿಗೆ ಅಡ್ಡಿ

    ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರ ಅಧಿಕೃತ ಹಾಗೂ ಅನಧಿಕೃತವಲ್ಲದ ನಿವೇಶನ, ಕಟ್ಟಡಗಳ ಆಸ್ತಿ ಹಕ್ಕಿಗೆ ಸಂಬಂಧಿಸಿದ ಸಮಗ್ರ ಮಾಹಿತಿ ವಿವರ ದಾಖಲಿಸುವ ಇ ಖಾತಾ ನೋಂದಣಿ ಪ್ರಕ್ರಿಯೆ ನಡೆಯುತ್ತಿದ್ದು, ಇದಕ್ಕೆ ತಂತ್ರಾಂಶದಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಎದುರಾಗಿವೆ.

    ಗ್ರಾಮಾಂತರ ಭಾಗದಲ್ಲಿ ಆರ್‌ಟಿಸಿ ಇದ್ದ ಹಾಗೆ ಪಾಲಿಕೆ ವ್ಯಾಪ್ತಿಯಲ್ಲಿ ಖಾತಾ ನೀಡಲಾಗುತ್ತಿತ್ತು. ಬಳಿಕ ಕರ್ನಾಟಕ ಮುನಿಸಿಪಲ್ ಡಾಟಾ ಸೊಸೈಟಿ ರಾಷ್ಟ್ರೀಯ ಸೂಚ್ಯಂಕ ಕೇಂದ್ರದ ಸಹಯೋಗದೊಂದಿಗೆ ಆಸ್ತಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ಇ ಖಾತಾ ಅನುಷ್ಠಾನಿಸಲಾಗಿದೆ. ತಂತ್ರಾಂಶದ ಮೂಲಕ ನಗರ ಸ್ಥಳೀಯ ಸಂಸ್ಥೆಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಅಧಿಕೃತ, ಅನಧಿಕೃತವಲ್ಲದ ಅಕ್ರಮ ಆಸ್ತಿಗಳ ಮಾಹಿತಿಯನ್ನು ದಾಖಲಿಸಲು, ತಿದ್ದುಪಡಿ ಮಾಡಲು ಆಸ್ತಿಗಳ ಮಾಲೀಕತ್ವ ಹಕ್ಕು ವರ್ಗಾವಣೆ ಮಾಡಲು ಆಸ್ತಿ ತೆರಿಗೆಯ ನಕಲನ್ನು ಡಿಜಿಟಲ್ ಸಹಿಯೊಂದಿಗೆ ತಂತ್ರಾಂಶ ಪಡೆಯಲು ಅವಕಾಶ ನೀಡಲಾಗಿದೆ. ಪಾಲಿಕೆಯಲ್ಲಿ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ.

    ಪ್ರಮುಖ ಸಮಸ್ಯೆ: ಪಾಲಿಕೆ ವ್ಯಾಪ್ತಿಯ ಪ್ರತೀ ಭೂಮಿಯನ್ನು ಪಾಲಿಕೆ ಸರ್ವೇ ಮಾಡಿ ನಿಗದಿತ ಐಡಿ ನೀಡಲಾಗುತ್ತದೆ. 2004ರಲ್ಲಿ ಕೇಂದ್ರ ಸರ್ಕಾರದ ನಿರ್ಮಲ ನಗರ ಯೋಜನೆಯಲ್ಲಿ ಐಡಿ ನೀಡುವ ಪ್ರಕ್ರಿಯೆ ಆರಂಭವಾಗಿದ್ದರೂ, ಇದು ಶೇ.50ರಷ್ಟು ಪ್ರದೇಶಕ್ಕೆ ಮಾತ್ರ ಆಗಿದೆ. ಉಳಿದ ಭೂಮಿಗೆ ಪ್ರಾಪರ್ಟಿ ಐಡಿ ಆಗಿಲ್ಲ. ಈಗ ಇ ಖಾತಾ ಮಾಡುವಾಗ ಪ್ರಾಪರ್ಟಿ ಐಡಿಯನ್ನೂ ನಮೂದಿಸಬೇಕಿದ್ದು, ಬಹುತೇಕ ಮಂದಿಗೆ ಈ ಐಡಿ ಇಲ್ಲದೆ ಸಮಸ್ಯೆಯಾಗಿದೆ. ಪ್ರಸ್ತುತ ಐಡಿ ಇಲ್ಲದವರಿಗೆ ಹತ್ತಿರದ ಭೂಮಿಯ ಐಡಿಗೆ ಸರಿ ಹೊಂದುವ ಹೊಸ ಐಡಿ ಹಾಕಲಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಸಮಸ್ಯೆಗೆ ಕಾರಣವಾಗಲಿದೆ ಎನ್ನುವ ಆತಂಕವೂ ಇದೆ.

    ಇ ಖಾತಾಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಅದು ಅನುಮೋದನೆಯಾಗಿ ಇ ಖಾತಾ ದೊರೆಯಲು ಕೆಲವು ಸಮಯ ಕಾಯಬೇಕಾಗುತ್ತದೆ. ಪಾಲಿಕೆಗೆ ಆಗಾಗ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಒಮ್ಮೆ ಇ ಖಾತಾ ನೋಂದಣಿ ಮಾಡಿದ ಬಳಿಕ ತಪ್ಪುಗಳಿದ್ದರೆ ಅದನ್ನು ಬೆಂಗಳೂರು ಕಚೇರಿ ಮೂಲಕ ಮಾತ್ರ ಸರಿ ಮಾಡಲು ಅವಕಾಶವಿದೆ.

    ಪರಿಹಾರ ಏನು?: ಪ್ರಸ್ತುತ ಇರುವ ಎಲ್ಲ ಪ್ರಾಪರ್ಟಿಯನ್ನು ಮೊದಲು ಸರ್ವೇ ಮಾಡಿ ಎಲ್ಲ ಆಸ್ತಿಯ ಪ್ರಾಪರ್ಟಿ ಐಡಿ ನಂಬರ್ ಪಡೆಯಬೇಕು. ಬಳಿಕ ಪಾಲಿಕೆಯು ಇ ಖಾತಾ ನೀಡುವ ಪ್ರಕ್ರಿಯೆಯನ್ನು ಜಾರಿಗೆ ತರಬೇಕು. ಆಗ ಉಂಟಾಗಿರುವ ಎಲ್ಲ ಸಮಸ್ಯೆಗಳು ಇತ್ಯರ್ಥವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

    ಮಹಾನಗರ ಪಾಲಿಕೆಯಲ್ಲಿ ಇ ಖಾತಾ ನೋಂದಣಿ ಪ್ರಕ್ರಿಯೆ ನಡೆಯುತ್ತಿದೆ. ಆಸ್ತಿಯ ಸಂಪೂರ್ಣ ದಾಖಲಾತಿಯನ್ನು ನೀಡುವ ಮೂಲಕ ಇ ಖಾತಾ ಮಾಡಿಸಲು ಅವಕಾಶವಿದೆ. ಜನರಿಗೆ ಸಮಸ್ಯೆ ಆಗದಂತೆ ಪಾಲಿಕೆಯಲ್ಲಿ ವ್ಯವಸ್ಥೆ ಮಾಡಲಾಗಿದೆ.
    ಅಕ್ಷಿ ಶ್ರೀಧರ್, ಮನಪಾ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts