More

    ದ್ವಾರಕ ನಗರ ಶಿಥಿಲ ರಸ್ತೆಗೆ ವರ್ಷ, ಹಿರಿಜೀವಗಳಿಗೆ ಗೃಹಬಂಧನ ಶಿಕ್ಷೆ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ‘ಅನುದಾನದ ಕೊರತೆ ಇಲ್ಲ. ಕರೊನಾ ಸಂದರ್ಭ ಗುತ್ತಿಗೆದಾರರ ಕಡೆಯಿಂದ ಸಕಾಲದಲ್ಲಿ ಅಗತ್ಯ ಪ್ರಮಾಣದ ಕಾರ್ಮಿಕರನ್ನು ಪೂರೈಸಲು ಕಷ್ಟವಾಗಿದೆ. ಕಾಮಗಾರಿಗೆ ವೇಗ ಕೊಡಲು ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಈ ಭಾಗದ ಜನರ ಸಮಸ್ಯೆಯನ್ನು ಶೀಘ್ರ ಬಗೆಹರಿಸಲಾಗುವುದು.’

    – ಇದು ಮಂಗಳೂರು ಮಹಾನಗರ ನಡುವೆಯೇ ದುಸ್ಥಿತಿಯಲ್ಲಿದ್ದ ಕೊಟ್ಟಾರ ದ್ವಾರಕ ನಗರದ ರಸ್ತೆಯ ಬಗ್ಗೆ ಸಂಬಂಧಿಸಿದ ಜನಪ್ರತಿನಿಧಿಯೊಬ್ಬರು ಎಂಟು ತಿಂಗಳ ಹಿಂದೆ ಪತ್ರಿಕೆಗೆ ನೀಡಿದ ಭರವಸೆ. ಆದರೆ ಈ ಪ್ರದೇಶದ ದುರವಸ್ಥೆ ಕಡಿಮೆಯಾಗುವುದರ ಬದಲು ಮತ್ತಷ್ಟು ಹೆಚ್ಚಾಗಿದೆ. ಧೂಳೆಬ್ಬಿಸುತ್ತಿರುವ ರಸ್ತೆ, ನಡುವೆ ಧುತ್ತೆಂದು ಎದುರಾಗುವ ದೊಡ್ಡ ಹೊಂಡಗಳನ್ನು ನಿಭಾಯಿಸಲು ಸಾಧ್ಯವಾಗದೆ ನೆಲಕ್ಕೆ ಉರುಳುವ ದ್ವಿಚಕ್ರ ವಾಹನ ಸವಾರರು, ಬಾಗಿಲು, ಕಿಟಕಿ ಮುಚ್ಚಿ ಸ್ವಯಂ ಗೃಹಬಂಧನಕ್ಕೆ ಒಳಗಾಗಿರುವ ಮನೆ ಹಿರಿಯರು… ಎಲ್ಲ ಪರಿಸ್ಥಿತಿ ಈಗಲೂ ಮುಂದುವರಿದಿದೆ.
    ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್ ಯೋಜನೆಯಡಿ ನಡೆಯುತ್ತಿರುವ ಇಲ್ಲಿನ ಚರಂಡಿ ಕಾಮಗಾರಿಗೆ ಒಂದು ವರ್ಷ ಎರಡು ತಿಂಗಳ ಹಿಂದೆ ಭೂಮಿಪೂಜೆ ನಡೆದಾಗ ಊರಿನ ಜನ ಸಂಭ್ರಮಿಸಿದ್ದರು. ನಗರದ ಪ್ರತಿ ಮನೆಗಳನ್ನು ಸಂಪರ್ಕಿಸುವ ರಸ್ತೆಯ ಇಂಟರ್‌ಲಾಕ್ ಕಿತ್ತು ಹಾಕಿ ರಸ್ತೆಯನ್ನು ಎಲ್ಲ ಕಡೆ ಅಗೆದು ಹಾಕಿದಾಗಲೂ ಇನ್ನೇನು ಸ್ವಲ್ಪ ದಿನಗಳಲ್ಲಿ ಎಲ್ಲವೂ ಸರಿ ಹೋಗುತ್ತದೆ ಎಂದು ಜನ ಸಹಿಸಿಕೊಂಡಿದ್ದರು. ಆದರೆ ಅಗೆದ ರಸ್ತೆ ಬಿಟ್ಟು ತೆರಳಿದ ಕಾರ್ಮಿಕರು ವಾಪಸ್ ಬರದೆ ಇದ್ದಾಗ ಇಲ್ಲಿನ ಜನರು ತೀವ್ರ ಆತಂಕಗೊಂಡರು.

    ನೆಮ್ಮದಿಗೆ ಅಡ್ಡಿ: ನಾವು ಇಲ್ಲಿ ನೆಲೆಸಿರುವವರಲ್ಲಿ ಹೆಚ್ಚಿನವರು ಸೇವೆಯಿಂದ ನಿವೃತ್ತರಾದವರು. ನೆಮ್ಮದಿಯಿಂದ ವಿಶ್ರಾಂತ ಜೀವನ ಕಳೆಯಲು ಕೂಡ ಇಲ್ಲಿನ ರಸ್ತೆ ಅಡ್ಡಿಯಾಗಿದೆ. ಅಗತ್ಯದ ಕೆಲಸಗಳಿಗೆ ಕೂಡ ಈ ರಸ್ತೆ ಬಳಸುವುದು ಅಸಾಧ್ಯ. ಸಾಯಂಕಾಲ ಗಾಳಿಗೆ ಸ್ವಲ್ಪ ಅಡ್ಡಾಡಲೂ ಸಾಧ್ಯವಿಲ್ಲ. ಒಂದು ಕಡೆ ಧೂಳು. ಇನ್ನೊಂದು ಕಡೆಯಿಂದ ಅಲ್ಲಲ್ಲಿ ಇರುವ ಹೊಂಡಗಳು ಭಯ ಹುಟ್ಟಿಸುತ್ತವೆ ಎಂದು ಸ್ಥಳೀಯ ನಿವಾಸಿ, ನಿವೃತ್ತ ಅಧಿಕಾರಿ ಪಿ.ಆರ್.ಕಾಮತ್ ದಿಗಿಲು ತೋಡಿಕೊಂಡಿದ್ದಾರೆ.

    ವರ್ಷದ ಹಿಂದೆ ಒಳಚರಂಡಿ ಕಾಮಗಾರಿಗೆ ಭೂಮಿಪೂಜೆ ನಡೆದಾಗ ಎಲ್ಲರಿಗೂ ಸಂತೋಷವಾಗಿತ್ತು. ಆದರೆ ನಂತರದ ಪರಿಸ್ಥಿತಿ ನೋಡಿದರೆ ನಮಗೆ ಪಿಟ್ ವ್ಯವಸ್ಥೆ ಇದ್ದರೂ ತೊಂದರೆ ಇರಲಿಲ್ಲ ಎನಿಸುತ್ತಿದೆ. ಈಗ ನಾವು ಅಷ್ಟು ಕಷ್ಟ ಅನುಭವಿಸುತ್ತಿದ್ದೇವೆ. ಇರುವ ಚರಂಡಿ ಹಾಳಾಗಿದೆ. ಮಳೆ ಬಂದಾಗ ರಸ್ತೆಯ ನೀರು ಕಾಂಪೌಂಡ್ ಒಳಗೆ ನುಗ್ಗುತ್ತಿದೆ. ರಸ್ತೆಯಲ್ಲಿ ದಿಢೀರನೇ ಎದುರಾಗುವ ಹೊಂಡಗಳಿಂದ ದ್ವಿಚಕ್ರ ವಾಹನ ಸವಾರರು ಮುಗ್ಗರಿಸಿ ನೆಲಕ್ಕೆ ಉರುಳುವುದು ಸಾಮಾನ್ಯವಾಗಿದೆ.

    ಹೇಮಲತಾ ಪೈ,
    ನಿವೃತ್ತ ಬ್ಯಾಂಕ್ ಅಧಿಕಾರಿ

    ದ್ವಾರಕ ನಗರದ ನಿವಾಸಿಗಳ ಸಮಸ್ಯೆ ಬಗೆಹರಿಸಲು ತಕ್ಷಣ ಗಮನ ಹರಿಸಲಾಗುವುದು. ತಾಂತ್ರಿಕ ಕಾರಣಗಳಿಂದ ಕೆಲವು ಕಾಮಗಾರಿ ಬಾಕಿ ಉಳಿದಿರಬಹುದು. ಸಂಬಂಧಪಟ್ಟ ಕುಡ್ಸೆಂಪ್ ಇಂಜಿನಿಯರ್‌ಗಳ ಜತೆ ಮಾತನಾಡಿದ್ದೇನೆ. ವಾರದೊಳಗೆ ಕಾಮಗಾರಿ ಆರಂಭಿಸಲಾಗುವುದು.

    ಪ್ರೇಮಾನಂದ ಶೆಟ್ಟಿ
    ಮೇಯರ್ ಮಂಗಳೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts