More

    ಮಳೆಗಾಲದೊಳಗೆ ಎಲ್ಲ ಕಾಮಗಾರಿ ಮುಗಿಸಿ

    ಬೆಳಗಾವಿ: ಸ್ಮಾರ್ಟ್‌ಸಿಟಿ ಯೋಜನೆಯಡಿ ಬೆಳಗಾವಿ ನಗರದಲ್ಲಿ ಕೈಗೊಂಡಿರುವ ಎಲ್ಲ ಕಾಮಗಾರಿಗಳನ್ನು ಮಳೆಗಾಲದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಲ್.ಕೆ. ಅತೀಕ್ ಸೂಚನೆ ನೀಡಿದರು.

    ನಗರದ ಸ್ಮಾರ್ಟ್‌ಸಿಟಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜರುಗಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ನಾಲ್ಕೈದು ವರ್ಷಗಳಿಂದ ಸ್ಮಾರ್ಟ್‌ಸಿಟಿ ಕಾಮಗಾರಿ ಪ್ರಗತಿ ಹಂತದಲ್ಲಿವೆ ಎಂದು ಹೇಳಲಾಗುತ್ತಿದೆ. ಆದರೆ, ಯಾವುದೇ ಕಾಮಗಾರಿ ಇನ್ನೂ ಪೂರ್ಣವಾಗಿ ಮುಗಿದಿಲ್ಲ. ಹಾಗಾಗಿ, ಈ ವರ್ಷ ಮಳೆಗಾಲ ಆರಂಭವಾಗುವ ಮೊದಲೇ ಕಾಮಗಾರಿ ಮುಗಿಸಿ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

    ಗುಣಮಟ್ಟ ಕಾಪಾಡಿ: ಸ್ಮಾರ್ಟ್‌ಸಿಟಿ ಯೋಜನೆಯಡಿ 66 ಕಾಮಗಾರಿ ಕೈಗೊಳ್ಳಲಾಗಿದ್ದು, ಅದರಲ್ಲಿ 30 ರಿಂದ 40 ರಸ್ತೆಗಳ ಕಾಮಗಾರಿಗಳಿವೆ. ಹಾಗಾಗಿ ಈ ಎಲ್ಲ ಕಾಮಗಾರಿಗಳಲ್ಲಿ ಗುಣಮಟ್ಟ ಕಾಪಾಡಿಕೊಳ್ಳಬೇಕು. ಅವಶ್ಯಬಿದ್ದರೆ ಖುದ್ದಾಗಿ ಪರಿಶೀಲನೆ ನಡೆಸಬೇಕು. ನಿಗದಿತ ಸಮಯದ ಒಳಗಾಗಿ ಎಲ್ಲ ರಸ್ತೆ ಕಾಮಗಾರಿ ಮುಗಿಯಬೇಕು ಎಂದು ಸಲಹೆ ನೀಡಿದರು.

    ಏಕಕಾಲದಲ್ಲಿ ಕಾಮಗಾರಿ ಕೈಗೊಂಡಿದ್ದರಿಂದ ಉಂಟಾಗಿರುವ ಸಂಚಾರ ದಟ್ಟಣೆಯಿಂದ ನಿತ್ಯವೂ ಜನರು ಕಿರಿಕಿರಿ ಅನುಭವಿಸುತ್ತಿದ್ದಾರೆ. ಈ ಕುರಿತು ಪದೇಪದೆ ದೂರುಗಳು ಬರುತ್ತಿವೆ. ಹಾಗಾಗಿ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಂಡ ಬಳಿಕ ಕಾಮಗಾರಿ ಕೈಗೊಳ್ಳಿ. ಏಕಾಏಕಿ ರಸ್ತೆ ಬಂದ್ ಮಾಡಬೇಡಿ. ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಬೇಕು. ವಿಳಂಬ ಮಾಡಿದರೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಜಿಪಂ ಸಿಇಒ ಎಚ್.ವಿ.ದರ್ಶನ, ಪಾಲಿಕೆ ಆಯುಕ್ತ ಜಗದೀಶ ಕೆ.ಎಚ್. ಸೇರಿ ಇತರರು ಇದ್ದರು.

    2021ರ ಡಿಸೆಂಬರ್ ಅಂತ್ಯದೊಳಗಾಗಿ ಪ್ರಗತಿಯಲ್ಲಿರುವ ಎಲ್ಲ 66 ಕಾಮಗಾರಿಗಳನ್ನೂ ಪೂರ್ಣಗೊಳಿಸಲಾಗುವುದು. ರಸ್ತೆ, ಚರಂಡಿ ಕಾಮಗಾರಿಯನ್ನು ಜೂನ್ ಒಳಗಾಗಿ ಮುಗಿಸಲಾಗುವುದು. ಪ್ರತಿ ಕಾಮಗಾರಿಯ ಗುಣಮಟ್ಟವನ್ನು ಕುರಿತು ಖುದ್ದು ಪರಿಶೀಲನೆ ನಡೆಸಲಾಗುತ್ತಿದೆ.
    | ಶಶಿಧರ ಕುರೇರ ಎಂಡಿ, ಸ್ಮಾರ್ಟ್‌ಸಿಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts