More

    ಇನ್ಮುಂದೆ ಮಹಿಳಾ ಮಣಿಗಳ ದರ್ಬಾರ್

    ಗದಗ: ನಿರೀಕ್ಷೆಯಂತೆ ಗದಗ- ಬೆಟಗೇರಿ ನಗರಸಭೆ ಆಡಳಿತ ಬಿಜೆಪಿ ಪಾಲಾಗಿದೆ. ನಗರದ 35ನೇ ವಾರ್ಡ್ ಸದಸ್ಯೆ ಉಷಾ ಮಹೇಶ ದಾಸರ ಅಧ್ಯಕ್ಷೆಯಾಗಿ ಹಾಗೂ 32ನೇ ವಾರ್ಡ್ ಸದಸ್ಯೆ ಸುನಂದಾ ಪ್ರಕಾಶ ಬಾಕಳೆ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.

    ನಗರಸಭೆ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನದ ಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಚುನಾವಣಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಅಧಿಕೃತವಾಗಿ ಆಯ್ಕೆ ಘೋಷಿಸಿದರು.

    ಚುನಾವಣೆ ಪ್ರಕ್ರಿಯೆಯಲ್ಲಿ ಸದಸ್ಯರು ಕೈ ಮೇಲೆತ್ತುವುದು ಮತ್ತು ತಲೆ ಎಣಿಸುವ ಮೂಲಕ ಅಧ್ಯಕ್ಷ- ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಆದರೆ, ಚುನಾವಣಾ ಅಧಿಕಾರಿಗಳು ಪಾರದರ್ಶಕವಾಗಿ ಚುನಾವಣೆ ನಡೆಸಲಿಲ್ಲ ಎಂದು ಕಾಂಗ್ರೆಸ್ ಸದಸ್ಯರು ಮತ್ತು ಶಾಸಕ ಎಚ್.ಕೆ. ಪಾಟೀಲ ಅವರು ಧಿಕ್ಕಾರ ಕೂಗುತ್ತ ಸಭಾಂಗಣದಿಂದ ಹೊರನಡೆದರು.

    ಗದಗ- ಬೆಟಗೇರಿ ನಗರಸಭೆ 35 ವಾರ್ಡ್​ಗಳಲ್ಲಿ 18 ಬಿಜೆಪಿ, 15 ಕಾಂಗ್ರೆಸ್ ಮತ್ತು ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಇಬ್ಬರು ಪಕ್ಷೇತರ ಸದಸ್ಯರು ಇತ್ತೀಚೆಗೆ ಕಾಂಗ್ರೆಸ್​ಗೆ ಸೇರ್ಪಡೆಯಾಗಿದ್ದರು. ಹೀಗಾಗಿ, ಕಾಂಗ್ರೆಸ್ ಸಂಖ್ಯಾಬಲ 17ಕ್ಕೆ ಏರಿಕೆಯಾಗಿತ್ತು. ಸ್ಥಳೀಯ ಶಾಸಕರ ಮತವನ್ನು ಪರಿಗಣಿಸಲು ಕಾನೂನಿನಲ್ಲಿ ಅವಕಾಶ ಇದ್ದುದರಿಂದ ಶಾಸಕ ಎಚ್.ಕೆ. ಪಾಟೀಲ ಮತ ಸೇರಿ ಕಾಂಗ್ರೆಸ್ ಬಳಿಯೂ 18 ಮತಗಳಿದ್ದವು. ಬಿಜೆಪಿ ಬಳಿ 18 ಸದಸ್ಯರು, ಒಬ್ಬ ಸಂಸದ (ಶಿವಕುಮಾರ ಉದಾಸಿ) ಸೇರಿ 19 ಸಂಖ್ಯಾಬಲವಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚು ಮತಗಳನ್ನು ಹೊಂದಿರುವ ಬಿಜೆಪಿ ಚುನಾವಣೆ ಪ್ರಕ್ರಿಯೆಯಲ್ಲಿ ಮೇಲುಗೈ ಸಾಧಿಸಿದ್ದರಿಂದ ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾಯಿತು. ಫಲಿತಾಂಶ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಸದಸ್ಯರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು. ಇದಕ್ಕೂ ಮುನ್ನ ನಗರಸಭೆ ಆವರಣದ ಹೊರಗೆ ಜಮಾಯಿಸಿದ್ದ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರು ತಮ್ಮ ಪಕ್ಷದ ಪರವಾಗಿ ಘೋಷಣೆ ಕೂಗಿದರು.

    ನಗರಸಭೆ ಆಡಳಿತ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಸರ್ವ ಪ್ರಯತ್ನ ನಡೆಸಿತು. ಬಿಜೆಪಿಯಿಂದ ಗೆಲುವು ಸಾಧಿಸಿರುವ 28 ಮತ್ತು 24ನೇ ವಾರ್ಡ್ ಸದಸ್ಯರ ಜಾತಿ ಪ್ರಮಾಣಪತ್ರ ಸಮರ್ಪಕವಾಗಿಲ್ಲ ಎಂದು ಕೋರ್ಟ್ ಮೊರೆ ಹೋಯಿತು. ಜತೆಗೆ ವಿಧಾನ ಪರಿಷತ್ ಸದಸ್ಯರಾದ ಸಲೀಂ ಅಹ್ಮದ್, ಪ್ರಕಾಶ ರಾಠೋಡ, ಮೋಹನ ಕೊಂಡಜ್ಜಿ ಮತ್ತು ರಾಜ್ಯಸಭೆ ಸದಸ್ಯ ಎಲ್. ಹನುಮಂತಯ್ಯ ಅವರ ಹೆಸರನ್ನು ಗದಗ ಮತಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿ ಅಧಿಕಾರ ಹಿಡಿಯಲು ಶತಪ್ರಯತ್ನ ನಡೆಸಿತು. ಜಾತಿ ಪ್ರಮಾಣಪತ್ರ ಕುರಿತು ದಾಖಲಿಸಿದ್ದ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ. ಅಲ್ಲದೆ, ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆಯಲ್ಲಿ ಸಂಬಂಧಿಸಿದ ಸದಸ್ಯರಿಗೆ ಮತ ಚಲಾಯಿಸಲು ಅವಕಾಶ ನೀಡಿತು. ಇದರಿಂದ ಕಾಂಗ್ರೆಸ್​ಗೆ ಮೊದಲ ಹಂತದ ಪ್ರಯತ್ನಕ್ಕೆ ಹಿನ್ನಡೆಯಾಯಿತು. ವಿಧಾನ ಪರಿಷತ್ ಸದಸ್ಯರು ಮತ್ತು ರಾಜ್ಯಸಭೆ ಸದಸ್ಯರ ಹೆಸರು ಸೇರಿಸುವ ಯತ್ನವೂ ಕೈಗೂಡಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts