More

    ಡುಂಡಿರಾಜ್​ ಅಂಕಣ: ಚಾಲಾಕಿ ಚಾಲಕರು, ರೈಲು ಬಿಡುವ ಮಹಿಳೆಯರು

    ಉಳ್ಳವರು ಹಣ ಚೆಲ್ಲುವರು

    ಶೇರಿಗೆ, ಮಾರುತಿ ಕಾರಿಗೆ

    ನಮಗೋ ಸಂಬಳ

    ಸಾಲುವುದಿಲ್ಲ

    ಅಕ್ಕಿ, ಬೇಳೆ, ತರಕಾರಿಗೆ!

    ಡುಂಡಿರಾಜ್​ ಅಂಕಣ: ಚಾಲಾಕಿ ಚಾಲಕರು, ರೈಲು ಬಿಡುವ ಮಹಿಳೆಯರುಇದು ಸುಮಾರು ನಾಲ್ಕು ದಶಕಗಳ ಹಿಂದೆ ಮಧ್ಯಮ ವರ್ಗದವರ ಪರಿಸ್ಥಿತಿ. ಆಗ ನಾವೆಲ್ಲ ಮಾರುತಿ ಕಾರಿನಲ್ಲಿ ತಿರುಗಾಡುವವರನ್ನು ]ೕಮಂತರು ಅಂತ ಬೆರಗಿನಿಂದ ನೋಡುತ್ತಿದ್ದೆವು. ಕಾರು ಕೊಳ್ಳುವವರು ಮುಂಗಡ ಹಣ ತೆತ್ತು ತಿಂಗಳುಗಟ್ಟಲೆ ಕಾಯಬೇಕಾಗಿತ್ತು. ವರಮಹಾಶಯ ವರದಕ್ಷಿಣೆಯ ಜೊತೆಗೆ ಹೊಸ ಕಾರು ಕೊಡಬೇಕೆಂಬ ಷರತ್ತು ಹಾಕುತ್ತಿದ್ದ. ಬ್ಯಾಂಕಿನಲ್ಲಿ ಬೆರಳೆಣಿಕೆಯ ಉನ್ನತ ಅಧಿಕಾರಿಗಳಿಗೆ ಮಾತ್ರ ಕಾರಿನ ಸೌಲಭ್ಯವಿತ್ತು.

    ಎರಡು ದಶಕಗಳ ನಂತರ ನಾನು ಚೀಫ್ ಮ್ಯಾನೇಜರ್ ಆಗಿ ಬಡ್ತಿ ಹೊಂದುವ ಸಮಯದಲ್ಲಿ ಪರಿಸ್ಥಿತಿ ಬದಲಾಗಿತ್ತು. ಜಾಗತೀಕರಣ ಮತ್ತು ಉದಾರ ಆರ್ಥಿಕ ನೀತಿಯ ಪರಿಣಾಮವಾಗಿ ಹತ್ತಾರು ನಮೂನೆಯ ದೇಶಿ ಹಾಗೂ ವಿದೇಶಿ ಕಾರುಗಳು ಮಾರುಕಟ್ಟೆಯಲ್ಲಿ ಕೊಳ್ಳುವವರಿಗಾಗಿ ಕಾಯುತ್ತಿದ್ದವು. ಕಾರು ಖರೀದಿಸಲು ಸಾಲ ಸುಲಭವಾಗಿ ಸಿಗುತ್ತಿದ್ದದ್ದರಿಂದ ಬ್ಯಾಂಕಿನಲ್ಲಿ ಗುಮಾಸ್ತರ ಹುದ್ದೆಯಲ್ಲಿದ್ದವರೂ ಕಾರಿನೊಡೆಯರಾಗಿದ್ದರು. ಸೀನಿಯರ್ ಮೆನೇಜರ್ ಆಗಿದ್ದ ನಾನು ಇನ್ನೊಂದು ಪ್ರಮೋಶನ್ ಆದರೆ ಬ್ಯಾಂಕಿನ ಕಾರು ಸಿಗುತ್ತದೆ ಎಂದು ಕಾರು ಖರೀದಿಸಿರಲಿಲ್ಲ. ನಿರೀಕ್ಷಿಸಿದಂತೆ ನನಗೆ ಚೀಫ್ ಮ್ಯಾನೇಜರ್ ಆಗಿ ಬಡ್ತಿ ಸಿಕ್ಕಿದರೂ ಬ್ಯಾಂಕಿನ ಕಾರು ಸಿಗಲಿಲ್ಲ.

    ನನ್ನ ದುರದೃಷ್ಟಕ್ಕೆ ಆಗ ಎಜಿಎಂ ಮತ್ತು ಅದಕ್ಕಿಂತ ಮೇಲಿನ ದರ್ಜೆಯ ಅಧಿಕಾರಿಗಳಿಗೆ ಮಾತ್ರ ಬ್ಯಾಂಕಿನ ಕಾರು ಕೊಡಬಹುದು ಎಂಬ ಹೊಸ ನಿಯಮ ಜಾರಿಗೆ ಬಂದಿತ್ತು. ಚೀಫ್ ಮ್ಯಾನೇಜರ್ ಆಗಿ ಕಾರಿಲ್ಲದಿದ್ದರೆ ನೀವು ತುಂಬಾ ಚೀಪ್ ಆಗುತ್ತೀರಿ ಅಂತ ಕೆಲವು ಸಹೋದ್ಯೋಗಿಗಳು ಹೇಳಿದ್ದರಿಂದ ಸಾಲ ಮಾಡಿ ಕಾರು ಖರೀದಿಸಿದೆ. ಕಾರು ಬಿಡುವುದನ್ನೂ ಕಲಿತೆ.

    ನಿವೃತ್ತಿಗೆ ಎರಡು ವರ್ಷ ಇರುವಾಗ ಎಜಿಎಂ ಆಗಿ ಬಡ್ತಿ ದೊರಕಿದ್ದರಿಂದ ನನಗೂ ಬ್ಯಾಂಕಿನ ಕಾರುಭಾಗ್ಯ ಸಿಕ್ಕಿತು. ಕಾರಿನ ಚಾಲಕರಿಗೆಂದು ಬ್ಯಾಂಕು ಕೊಡುತ್ತಿದ್ದ ಭತ್ತೆ ಕೇವಲ ಏಳು ಸಾವಿರ ರೂಪಾಯಿ. ಜುಜುಬಿ ಏಳು ಸಾವಿರಕ್ಕೆ ಇಡೀ ದಿನ ಕೆಲಸ ಮಾಡಲು ಯಾರು ಬರುತ್ತಾರೆ? ಹೀಗಾಗಿ ಕಾರು ಸಿಕ್ಕರೂ ಡ್ರೈವರ್ ಸಿಗುವುದು ತುಂಬಾ ಕಷ್ಟವಾಗಿತ್ತು. ನನಗೆ ಬ್ಯಾಂಕಿನ ಕಾರು ಸಿಗುವುದು ತಡವಾದರೂ ಚಾಲಕ ಬೇಗ ಸಿಕ್ಕಿದ. ನನ್ನನ್ನು ಕಚೇರಿಗೆ ಕರೆದುಕೊಂಡು ಹೋಗಲು ಆರಂಭದಲ್ಲಿ ಸರಿಯಾದ ಸಮಯಕ್ಕೆ ಬರುತ್ತಿದ್ದ ಆತ ನಂತರ ತಡಮಾಡತೊಡಗಿದ. ಬ್ಯಾಂಕಿಗೆ ಹೊರಡಲು ತಯಾರಾಗಿ ನಿಂತು ಚಾಲಕನಿಗಾಗಿ ಕಾಯುವ ಪರಿಸ್ಥಿತಿ ಬಂತು.

    ಆದರೂ ಆತನಿಗೆ ಗದರಿಸುವಂತಿರಲಿಲ್ಲ. ಕಾರಣ ಬೈದರೆ ಆತ ಕೆಲಸ ಬಿಟ್ಟು ಹೋಗಬಹುದೆಂಬ ಭಯ. ಡ್ರೈವರ್ ಬರುವುದು ತೀರಾ ತಡವಾದ ದಿನ ನಾನೇ ಕಾರು ಚಲಾಯಿಸಿಕೊಂಡು ಬ್ಯಾಂಕಿಗೆ ಹೋಗಿ ಆತನಿಗೆ ಬಸ್ಸಿನಲ್ಲಿ ಬ್ಯಾಂಕಿಗೆ ಬಾ ಎಂದು ತಿಳಿಸುತ್ತಿದ್ದೆ. ಚಾಲಕನಿಗೆ ಒಮ್ಮೆಯೂ ಬೈಯದೆ ಆತ ಕೇಳಿದಾಗಲೆಲ್ಲ ರಜೆ ಕೊಟ್ಟರೂ ಎರಡು ತಿಂಗಳ ನಂತರ ಒಂದು ದಿನ ಇದ್ದಕ್ಕಿದ್ದಂತೆ ನಾಳೆಯಿಂದ ತಾನು ಬರುವುದಿಲ್ಲ ಎಂಬ ಶಾಕಿಂಗ್ ಸುದ್ದಿ ಕೊಟ್ಟ. ಸಂಬಳ ಜಾಸ್ತಿ ಸಿಗುತ್ತದೆ ಎಂದು ಕಸ ಸಾಗಿಸುವ ಕಾರ್ಪೆರೇಶನ್ ಟೆಂಪೋ ಚಾಲಕನ ಕೆಲಸಕ್ಕೆ ಹೋಗುತ್ತೇನೆ ಎಂದ. ಅವನಿಗೆ ನನಗಿಂತ ಕಸವೇ ವಾಸಿ ಅನಿಸಿತಲ್ಲ ಎಂದು ನನಗೆ ಕಸಿವಿಸಿಯಾಯಿತು. ಬೇರೆ ಡ್ರೈವರನ್ನು ಹುಡುಕಬೇಕು ಅನ್ನುವಷ್ಟರಲ್ಲಿ ಮರುದಿನ ಅವನೇ ವಾಪಾಸು ಬಂದ. ಕಾರ್ಪೆರೇಶನ್ ಕಸದ ವಾಸನೆಗೆ ವಾಂತಿ ಬರುವಂತಾಯಿತು ಸಾರ್ ಅಂದ.

    ಬ್ಯಾಂಕಿನ ಕಾರು ಪಡೆದ ಉನ್ನತ ಅಧಿಕಾರಿಗಳಲ್ಲಿ ಹೆಚ್ಚಿನವರು ತಮಗೆ ಸಿಕ್ಕ ಚಾಲಕನ ಬಗ್ಗೆ ಅಸಂತುಷ್ಟರಾಗಿದ್ದರು. ಯಾರನ್ನು ಕೇಳಿದರೂ ಚಾಲಕನ ಬಗ್ಗೆ ಸಮಯಕ್ಕೆ ಸರಿಯಾಗಿ ಬಾರದಿರುವುದು, ಸಂಜೆ ಮನೆಗೆ ಹೊರಡುವುದು ತಡವಾದರೆ ಗೊಣಗುವುದು, ಹೇಳದೆ ಕೇಳದೆ ರಜೆ ಹಾಕುವುದು, ಚಾಡಿ ಹೇಳುವುದು ಮುಂತಾದ ದೂರುಗಳ ದೊಡ್ಡ ಪಟ್ಟಿಯನ್ನೇ ಕೊಡುತ್ತಿದ್ದರು. ಕೆಲವು ಚಾಲಾಕಿ ಚಾಲಕರು ಅಧಿಕಾರಿಗಳ ಮಡದಿ ಹೇಳುವ ಕೆಲಸಗಳನ್ನೆಲ್ಲ ಸರಿಯಾಗಿ ಮಾಡಿ ಅವರ ಮೆಚ್ಚುಗೆಗೆ ಪಾತ್ರರಾಗಿದ್ದರು. ಬೇರೆ ಅಧಿಕಾರಿಗಳ ಮನೆಯ ಗುಟ್ಟಿನ ವಿಷಯಗಳಿಗೆ ಉಪ್ಪು ಖಾರ ಹಾಕಿ ಮೇಡಂಗೆ ತಿಳಿಸುತ್ತಿದ್ದರು.

    ಅಂಥವರಿಗೆ ಅಧಿಕಾರಿಗಳು ಬೈದರೆ ಮನೆಗೆ ಹೋದ ಮೇಲೆ ಅವರ ಪತ್ನಿ ಗಂಡನನ್ನು ಚೆನ್ನಾಗಿ ವಿಚಾರಿಸಿಕೊಳ್ಳುತ್ತಿದ್ದಳು. ನನ್ನ ಸಹೋದ್ಯೋಗಿಯೊಬ್ಬರು ಅವರ ಚಾಲಕ ಇದ್ದಕ್ಕಿದ್ದ ಹಾಗೆ ಕೈಕೊಟ್ಟು ಹೋದಾಗ ತುಂಬಾ ಬೇಜಾರು ಮಾಡಿಕೊಂಡಿದ್ದರು. ನಾನು ಅವರಿಗೆ ಮಹಾಭಾರತದ ಶಲ್ಯನ ಪ್ರಸಂಗ ಹೇಳಿದೆ. ಅಂಥಾ ಮಹಾರಥಿ ಕರ್ಣನಿಗೇ ಸಾರಥಿ ಶಲ್ಯ ಸರಿಯಾದ ಸಮಯದಲ್ಲಿ ಕೈಕೊಟ್ಟ. ಅದರ ಮುಂದೆ ನಾವು ನೀವು ಯಾವ ಲೆಕ್ಕ? ಅಂದಾಗ ಅವರಿಗೆ ತುಸು ಸಮಾಧಾನವಾಯಿತು. ಇನ್ನೊಬ್ಬರು ತಮ್ಮ ಡ್ರೈವರ್ ಬೇರೆ ಎಲ್ಲಾ ವಿಷಯದಲ್ಲಿ ತುಂಬಾ ಒಳ್ಳೆಯವನು. ಆದರೆ ಕಾರು ಓಡಿಸುವಾಗ ವಿಪರೀತ ಮಾತನಾಡುತ್ತಾನೆ ಮಾರಾಯ್ರೆ ಎಂದು ನನ್ನ ಬಳಿ ದೂರಿದ್ದರು. ಅವರಿಗೆ ನಾನು ಈ ಹನಿಗವನ ಹೇಳಿದ್ದೆ:

    ಬಹಳಷ್ಟು ಚಾಲಕರು

    ಕಾರು ಓಡಿಸುವಾಗ

    ಮಾತಾಡುತ್ತಾರೆ ವಿಪರೀತ

    ಆದರೂ ಅವರು

    ಎಷ್ಟೋ ವಾಸಿ ಆ

    ಪಾರ್ಥ ಸಾರಥಿಗಿಂತ!

    ಬ್ಯಾಂಕಿನ ಕಾರನ್ನು ನಿಯಮಗಳಿಗನುಸಾರವಾಗಿ ಸ್ವಂತ ಕೆಲಸಗಳಿಗೆ ಬಳಸಿಕೊಳ್ಳುವ ಸೌಲಭ್ಯವೂ ಇತ್ತು. ಒಮ್ಮೆ ನನ್ನಾಕೆ ಆ ಸೌಲಭ್ಯ ಉಪಯೋಗಿಸಿಕೊಂಡು ತವರು ಮನೆಗೆ ಹೋಗಿ ಬರೋಣ ಎಂದಳು. ಮಂಗಳೂರಿನಿಂದ ಅವಳ ಊರಿಗೆ 120 ಕಿ.ಮೀ. ನಾನೇ ಡ್ರೈವ್ ಮಾಡುತ್ತೇನೆ ಅಂದಾಗ ‘ಬ್ಯಾಡ್ದೇ ಬ್ಯಾಡ. ನೀವು ಕವನದ ಬಗ್ಗೆ ಜಾನಿಸ್ತಾ ಯಾರಿಗಾರೂ ಗುದ್ದಿರೆ ನಾ ಎಂತ ಮಾಡುದು? ನಾ ಡ್ರೈವರಿಗೆ ಹೇಳಿ ಒಪ್ಸಿದ್ದೆ. ಆದಿತ್ಯವಾರ ಬೆಳಿಗ್ಗೆ ಆರ್ ಗಂಟೆಗೆ ಬತ್ತ. ಅವ್ನಿಗೆ 300 ಕೊಟ್ರೆ ಸಾಕಂಬ್ರು’ ಎಂದಳು. ತವರಿಗೆ ಹೋಗುವ ಕಾರ್ಯಕ್ರಮ ಈಗಾಗಲೇ ನಿರ್ಧಾರವಾಗಿದೆ. ನನ್ನ ಔಪಚಾರಿಕ ಮಂಜೂರಾತಿ ಕೇಳುತ್ತಿದ್ದಾಳೆ ಎಂಬುದು ಅರ್ಥವಾಗಿ ಒಪ್ಪಿಕೊಂಡೆ. ಆದಿತ್ಯವಾರ ಡ್ರೈವರ್ ಹೇಳಿದ ಸಮಯಕ್ಕೆ ಬಂದ. ನಮ್ಮ ಪ್ರಯಾಣ ಆರಂಭವಾಯಿತು.

    50 ಕಿ.ಮೀ ಹೋಗುವಷ್ಟರಲ್ಲಿ ಕಾರಿನ ಚಲನೆಯಲ್ಲಿ ಏನೋ ವ್ಯತ್ಯಾಸ ಕಾಣಿಸಿ ಕನ್ನಡಿಯಲ್ಲಿ ಡ್ರೈವರನ ಮುಖ ನೋಡಿದೆ. ಆತ ತೂಕಡಿಸುತ್ತಾ ಕಾರು ಓಡಿಸುತ್ತಿದ್ದ. ತಕ್ಷಣ ಕಾರು ನಿಲ್ಲಿಸಿ ಮುಖಕ್ಕೆ ನೀರು ಹಾಕಿಕೊ ಅಂದೆ. ಸ್ವಲ್ಪ ದೂರ ಹೋದ ನಂತರ ಚಾಲಕನ ನಿದ್ದೆ ಓಡಿಸಲು ಹೋಟೆಲ್ಲಿನಲ್ಲಿ ಟೀ ಕುಡಿಸಿದೆ. ಆದರೂ ಆತನ ನಿದ್ದೆ ಜೊಂಪು ಕಡಿಮೆಯಾಗಲಿಲ್ಲ. ಯಾಕೆ ಎಂದು ವಿಚಾರಿಸಿದಾಗ ಸತ್ಯ ಸಂಗತಿ ಹೊರ ಬಂತು. ಹಿಂದಿನ ರಾತ್ರಿ ಆತ ಅವನ ಮನೆ ಹತ್ತಿರದ ಯುವಕ ಸಂಘದವರು ಏರ್ಪಡಿಸಿದ್ದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯದಲ್ಲಿ ಭಾಗವಹಿಸಿದ್ದ. ಕೇವಲ ಒಂದು ಗಂಟೆ ನಿದ್ದೆ ಮಾಡಿ ಕೊಟ್ಟ ಮಾತಿಗೆ ತಪ್ಪಬಾರದೆಂದು ಕಾರು ಓಡಿಸಲು ಬಂದಿದ್ದ.

    ಅರ್ಧ ದೂರ ಬಂದಾಗಿತ್ತು. ವಾಪಾಸು ಹೋಗುವುದು ಬೇಡವೆಂದು ಚಾಲಕನಿಗೆ ಪಕ್ಕದ ಸೀಟಿನಲ್ಲಿ ಕೂರಲು ಹೇಳಿ ನಾನೇ ಕಾರು ಬಿಡಲು ಸಿದ್ಧನಾದೆ. ಊರಿಗೆ ಹೋಗಿ ಮಧ್ಯಾಹ್ನ ಊಟ ಮುಗಿಸಿ ವಾಪಾಸು ಹೊರಟಾಗಲೂ ನಮ್ಮ ಚಾಲಕ ನಿದ್ದೆಯ ಮೂಡಿನಲ್ಲೇ ಇದ್ದ. ಹೀಗಾಗಿ ಬರುವಾಗಲೂ ನಾನೇ ಚಾಲಕನಾದೆ. ಈ ಘಟನೆಯಿಂದ ನನಗೆ ಒಂದು ಲಾಭವಾಯಿತು. ನಾನು ಎಷ್ಟು ಸಮರ್ಥ ಡ್ರೈವರ್ ಅನ್ನುವುದು ನನ್ನ ಹೆಂಡತಿಗೆ ಗೊತ್ತಾಗಿ ‘ಅಡ್ಡಿಲ್ಲೆ ಮಾರಾಯ್ರೆ. ನೀವು ಕಾರ್ ಲಾಯ್ಕ್​  ಬಿಡ್ತ್ರಿ’ ಎಂದು ಸರ್ಟಿಫಿಕೇಟ್ ಕೊಟ್ಟಳು.

    ಸಂಸಾರವನ್ನು ಒಂದು ವಾಹನಕ್ಕೆ ಹೋಲಿಸಿದರೆ ಸಾಮಾನ್ಯವಾಗಿ ಗಂಡನೇ ಅದರ ಚಾಲಕನಾಗಿರುತ್ತಾನೆ. ಸ್ಟಿಯರಿಂಗ್ ಅವನ ಕೈಯಲ್ಲೇ ಇರುತ್ತದೆ. ಹಾಗಾದರೆ ಹೆಂಡತಿಗೇನು ಕೆಲಸ ಅನ್ನುತ್ತೀರಾ?

    ಸಂಸಾರವೆಂಬ ವಾಹನದಲ್ಲಿ

    ಗಂಡನ ಕೈಯಲ್ಲಿ ಸ್ಟಿಯರಿಂಗ್

    ವೇಗವರ್ಧಕ

    ಇದ್ದರೆ ಸಾಕಾ?

    ಹೆಂಡತಿಯೂ ಬೇಕು

    ಏಕೆಂದರೆ ಅವಳು ಬ್ರೇಕು!

    ಬ್ಯಾಂಕಿನ ಶಾಖಾ ವ್ಯವಸ್ಥಾಪಕರು ವ್ಯವಹಾರ ಅಭಿವೃದ್ಧಿಗಾಗಿ ಸರ್ಕಾರಿ ಕಚೇರಿಗಳ ಉನ್ನತ ಅಧಿಕಾರಿಗಳನ್ನು ಆಗಾಗ ಭೇಟಿಯಾಗುವುದು ಅಗತ್ಯ. ಆದರೆ ಅವರ ಭೇಟಿಗೆ ಸಮಯ ಸಿಗುವುದು ತುಂಬಾ ಕಷ್ಟ. ಹೇಳಿದ ಸಮಯಕ್ಕೆ ಹೋದರೂ ಗಂಟೆಗಟ್ಟಲೆ ಕಾಯಿಸುತ್ತಿದ್ದರು. ಕೆಲವು ಅಧಿಕಾರಿಗಳು ಕಚೇರಿಯಲ್ಲಿದ್ದರೂ ಫೋನ್ ಮಾಡಿ ಬರುತ್ತೇನೆ ಎಂದಾಗ ತಾನು ಹೊರಗಿದ್ದೇನೆ ಎಂದು ಸುಳ್ಳು ಹೇಳುತ್ತಿದ್ದರು. ಅಧಿಕಾರಿಗಳು ನಿಜವಾಗಿ ಎಲ್ಲಿದ್ದಾರೆ, ಯಾವಾಗ ಕಚೇರಿಗೆ ಬರುತ್ತಾರೆ, ಅವರ ಮೂಡ್ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬೇಕಾದರೆ ಅವರ ಕಾರಿನ ಚಾಲಕನನ್ನು ಬುಟ್ಟಿಗೆ ಹಾಕಿಕೊಳ್ಳಬೇಕು. ಅಧಿಕಾರಿಗಳ ಬಗ್ಗೆ ಅವರ ಆಪ್ತ ಸಹಾಯಕರಿಗೂ ಗೊತ್ತಿಲ್ಲದ ಸಂಗತಿಗಳು ಡ್ರೈವರ್​ಗೆ ತಿಳಿದಿರುತ್ತದೆ.

    ನಾನೀಗ ನಿವೃತ್ತನಾಗಿರುವುದರಿಂದ ನನ್ನ ಕಾರಿಗೆ ನಾನೇ ಚಾಲಕ. ತುಂಬಾ ಟ್ರಾಫಿಕ್ ಅಥವಾ ರ್ಪಾಂಗ್ ಇಲ್ಲದ ಜಾಗಗಳಿಗೆ ಹೋಗಬೇಕಾದಾಗ ಡ್ರೈವರ್ ಸಹಾಯ ಪಡೆಯುತ್ತೇನೆ. ಬೆಂಗಳೂರಿನಲ್ಲಿ ಡ್ರೈವರ್ ಸಿಗುವುದು ಕಷ್ಟ. ಅವರಿಗೆ ಸಂಬಳ, ಕಾಪಿ, ತಿಂಡಿ, ಊಟ ಅಂತ ಖರ್ಚಾಗುವ ಹಣ ಲೆಕ್ಕ ಹಾಕಿದರೆ ಟ್ಯಾಕ್ಸಿ, ಊಬರ್ ಅಥವಾ ಓಲಾದಲ್ಲಿ ಹೋಗುವುದೇ ಲಾಭದಾಯಕ ಅನ್ನಿಸುತ್ತದೆ. ಟ್ಯಾಕ್ಸಿ ಡ್ರೈವರ್​ಗಳಲ್ಲೂ ಕೆಲವರು ತುಂಬಾ ವಾಚಾಳಿಗಳಿರುತ್ತಾರೆ.

    ಅವರ ಕಣ್ಣು ರಸ್ತೆಯ ಮೇಲಿದ್ದರೂ ಕಿವಿ ಹಿಂದಿನ ಸೀಟಿನಲ್ಲಿ ನಾವು ಏನು ಮಾತಾಡುತ್ತೇವೆ ಅನ್ನುವುದನ್ನು ಆಲಿಸುತ್ತಾ ಇರುತ್ತದೆ. ನಾನು ಹೆಂಡತಿಯ ಹತ್ತಿರ ಏನಾದರೂ ಕೇಳಿದರೆ ಅವಳಿಗಿಂತ ಮೊದಲು ಡ್ರೈವರ್ ಉತ್ತರಿಸುತ್ತಾನೆ. ಮಡದಿ ಹೇಳಿದ್ದು ತಪ್ಪು ಎಂದು ತಿದ್ದುಪಡಿ ಸೂಚಿಸುವ ಚಾಲಕರೂ ಇರುತ್ತಾರೆ. ಕೆಲವು ಚಾಲಕರು ದಾರಿಯುದ್ದಕ್ಕೂ ಅವರ ಕಷ್ಟ ಸುಖಗಳನ್ನು ನಮ್ಮ ಜೊತೆ ಹಂಚಿಕೊಳ್ಳುವುದುಂಟು. ಇನ್ನು ಕೆಲವರು ಮೊಬೈಲ್​ನಲ್ಲಿ ಹರಟುತ್ತಾ ದುಡ್ಡು ತೆಗೆದುಕೊಳ್ಳುವಾಗ ಒಳ್ಳೇ ರೇಟಿಂಗ್ ಕೊಡಿ ಸಾರ್ ಅನ್ನುತ್ತಾರೆ. ಚಿಕ್ಕ ಮಕ್ಕಳಿಗೆ ಡುರ್ರ್ ಡುರ್ರ್ ಪೀ ಪೀ ಎಂದು ಡ್ರೈವರ್ ಆಟ ಆಡುವುದೆಂದರೆ ತುಂಬಾ ಖುಷಿ.

    ಆದರೆ ಟ್ಯಾಕ್ಸಿ, ಬಸ್ ಮತ್ತು ಲಾರಿ ಚಾಲಕರ ಕೆಲಸ ಅಷ್ಟು ಸುಲಭವಲ್ಲ. ರಾತ್ರಿ ಡ್ಯೂಟಿ ಮತ್ತು ಅಪಘಾತದ ಸಂಭವ ಹೆಚ್ಚಾಗಿರುವುದರಿಂದ ಚಾಲಕರಿಗೆ ಹೆಣ್ಣು ಸಿಗುವುದು ಕಷ್ಟ. ಮಹಿಳೆಯರು ಚಂಚಲ ಸ್ವಭಾವದವರಾದ್ದರಿಂದ ಸರಿಯಾಗಿ ಡ್ರೈವ್ ಮಾಡುವುದಿಲ್ಲ ಎಂದು ಪುರುಷರು ತಮಾಷೆ ಮಾಡುವುದು ಸಾಮಾನ್ಯ. ಆದರೆ ಅದು ನಿಜವಲ್ಲ. ರಸ್ತೆ ಅಪಘಾತದ ಅಂಕಿ ಅಂಶಗಳು ಪುರುಷ ಚಾಲಕರೇ ಅಪಘಾತ ಮಾಡುವುದು ಹೆಚ್ಚು ಅನ್ನುವುದನ್ನು ದೃಢಪಡಿಸಿವೆ. ರೈಲು ಬಿಡುವುದು ಗಂಡಸರು ಮಾತ್ರ ಅಂದುಕೊಳ್ಳಬೇಡಿ. ನಮ್ಮ ಮೆಟ್ರೋದಲ್ಲಿ ಮಹಿಳೆಯರೂ ರೈಲು ಬಿಡುತ್ತಾರೆ.

    ಚಾಲಕರೇ ಬೇಡದ ರಿಮೋಟ್ ಕಂಟ್ರೋಲ್ ಮೂಲಕ ಓಡುವ ವಾಹನಗಳು ಬರಲಿವೆಯಂತೆ. ಅದೇನು ಮಹಾ? ಈ ವಿಶ್ವವೆಂಬ ಬೃಹತ್ ವಾಹನದ ಚಾಲಕ ನಮಗೆ ಕಾಣಿಸುತ್ತಾನಾ? ಇದನ್ನೂ ಯಾರೋ ಎಲ್ಲಿಂದಲೋ ರಿಮೋಟ್ ಮೂಲಕ ನಡೆಸುತ್ತಿರಬಹುದೆ?

    ಮುಗಿಸುವ ಮುನ್ನ:

    ರವಿ ಶಾಸ್ತ್ರಿ ನಮ್ಮ ಕ್ರಿಕೆಟ್ ತಂಡದ ಕೋಚ್ ಆಗಿ ಪುನರಾಯ್ಕೆಗೊಂಡಾಗ ಬರೆದದ್ದು:

    ಅಂತೂ ಮುಗಿಯಿತು

    ಆಯ್ಕೆಯ ಕಸರತ್ತು

    ಶಾಸ್ತ್ರಿಯೇ ಕೋಚ್ ಆದರು

    ಆದರೇನು ಬಿಡಿ

    ಅವರು ಬರೀ ಕೋಚು

    ಕೊಹ್ಲಿಯೇ ಡ್ರೈವರು! 

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts