More

    ಬಂಗ್ರಕೂಳೂರಲ್ಲೊಂದು ಪಚ್ಚನಾಡಿ!

    ಭರತ್ ಶೆಟ್ಟಿಗಾರ್ ಮಂಗಳೂರು

    ನಗರದ ಬಂಗ್ರಕೂಳೂರು ವಾರ್ಡ್‌ನ ನಾಲ್ಕನೇ ಮೈಲಿಯ ಖಾಲಿ ಜಾಗದಲ್ಲಿ ತ್ಯಾಜ್ಯ ತಂದು ಸುರಿಯುವ ಪ್ರಕ್ರಿಯೆ ವರ್ಷಗಳಿಂದಲೂ ನಿರಂತರವಾಗಿ ಸಾಗಿದ್ದು, ಅನಧಿಕೃತ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗಿದೆ.

    ಕ್ರಿಕೆಟ್ ಮೈದಾನ, ಬಸ್ ನಿಲ್ದಾಣ ಹೀಗೆ ಹಲವು ಪ್ರಸ್ತಾವ ಇದ್ದ ಬಂಗ್ರಕೂಳೂರು ಮೈದಾನಕ್ಕೆ ಮೂರ್ನಾಲ್ಕು ವರ್ಷಗಳಿಂದ ಕಟ್ಟಡ ತ್ಯಾಜ್ಯ, ಕೈಗಾರಿಕಾ ತ್ಯಾಜ್ಯ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಲೋಡ್‌ಗಟ್ಟಲೆ ತಂದು ಸುರಿಯಲಾಗುತ್ತಿದೆ. ಪರಿಣಾಮ ತಾಜ್ಯ ರಾಶಿ ದಿನ ಕಳೆದಂತೆ ಹೆಚ್ಚಾಗುತ್ತಿದೆ. ನೋಡುವವರಿಗೆ ಡಂಪಿಂಗ್ ಯಾರ್ಡ್‌ನಂತೆಯೇ ಕಾಣಿಸುತ್ತಿದೆ. ಪ್ರತಿವರ್ಷ ಬೇಸಿಗೆಯಲ್ಲಿ ಇಲ್ಲಿ ಬೆಂಕಿ ಬೀಳುತ್ತಿದ್ದು, ಇದರಿಂದ ಪಚ್ಚನಾಡಿ ಮಾದರಿಯಲ್ಲೇ ಸ್ಥಳದಲ್ಲಿ ದಟ್ಟ ಹೊಗೆ ಆವರಿಸುತ್ತದೆ. ತ್ಯಾಜ್ಯದಲ್ಲಿರುವ ಗುಜರಿ ವಸ್ತುಗಳನ್ನು ಹೆಕ್ಕಲು ಬರುವವರು ಇಲ್ಲಿ ಬೆಂಕಿಯನ್ನೂ ಹಾಕುತ್ತಾರೆ ಎಂದು ಸ್ಥಳೀಯರು ತಿಳಿಸುತ್ತಾರೆ. ರಾಷ್ಟ್ರೀಯ ಹೆದ್ದಾರಿ 66ರ ಪಕ್ಕದಲ್ಲೇ ಇರುವುದರಿಂದ ವಾಹನಗಳಲ್ಲಿ ಸಂಚರಿಸುವವರೂ ಇದರಿಂದ ಸಮಸ್ಯೆ ಅನುಭವಿಸುವಂತಾಗಿದೆ.

    ಜಾಗ ಪಾಲಿಕೆಯದ್ದಲ್ಲ: ಪಾಲಿಕೆ ವ್ಯಾಪ್ತಿಯಲ್ಲಿದ್ದರೂ, ಜಾಗ ಪಾಲಿಕೆಯದ್ದಲ್ಲ. ಸುಮಾರು 3 ಎಕರೆ ಮಂಗಳೂರು ಸ್ಟಾಕ್ ಎಕ್ಸ್‌ಚೇಂಜ್‌ಗೆ ಸೇರಿದೆ. 2001ರಲ್ಲಿ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ಸ್ಟಾಕ್ ಎಕ್ಸ್‌ಚೇಂಜ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೇರವೇರಿಸಿದ್ದರು. ಆದರೆ ಬಳಿಕ ಯೋಜನೆ ಕಾರ್ಯಗತವಾಗಿಲ್ಲ. ಇನ್ನುಳಿದ 4 ಎಕರೆಯಷ್ಟು ಜಾಗವನ್ನು ಜಿಲ್ಲಾಡಳಿತ ಅರಣ್ಯ ಅಭಿವೃದ್ಧಿ ನಿಗಮಕ್ಕೆ ನೀಡಿದೆ. ಪಡೀಲ್‌ನಲ್ಲಿ ಅರಣ್ಯ ನಿಗಮದ ಜಾಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಕಾಂಪ್ಲೆಕ್ಸ್ ನಿರ್ಮಾಣಕ್ಕೆ ಪ್ರತಿಯಾಗಿ ಈ ಜಾಗ ನೀಡಲಾಗಿತ್ತು.

    ಈ ಜಾಗದಲ್ಲಿ ತ್ಯಾಜ್ಯ ಸುರಿಯುತ್ತಿರುವ ಕುರಿತು ಗಮನ ಹರಿಸುವಂತೆ ಜಾಗಕ್ಕೆ ಸಂಬಂಧಿಸಿದ ಇಲಾಖೆಗಳಿಗೆ ಸೂಚಿಸಲಾಗಿದ್ದರೂ ಮೌನವಹಿಸಿವೆ. ಮಂಗಳೂರು ಮಹಾನಗರ ಪಾಲಿಕೆಯು ಘನತ್ಯಾಜ್ಯ ನಿರ್ವಹಣೆಯಲ್ಲಿ ವಿಫಲವಾಗಿರುವ ಕುರಿತಂತೆ ಈಗಾಗಲೇ ಹೈಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದು, ಇಲ್ಲಿ ಹೀಗೆ ತ್ಯಾಜ್ಯ ಬಂದು ರಾಶಿ ಬೀಳುತ್ತಿರುವುದು ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ.

    ಅನೈತಿಕ ಚಟುವಟಿಕೆ ತಾಣ: ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗಿರುವ ಈ ಪ್ರದೇಶ ಅನೈತಿಕ ಚಟುವಟಿಕೆಗಳ ತಾಣವಾಗಿಯೂ ಬದಲಾಗಿದೆ. ಸ್ಥಳದ ಪಕ್ಕದಲ್ಲಿರುವ ಕಚ್ಚಾ ರಸ್ತೆ ಬಂಗ್ರಕೂಳೂರಿನ ಗುರುಪುರ ನದಿಯನ್ನು ಸಂಪರ್ಕಿಸುತ್ತದೆ. ಹಗಲು ವೇಳೆಯಲ್ಲೂ ಜನರು ಸಂಚರಿಸಲು ಹೆದರುವ ನಿರ್ಜನ ರಸ್ತೆಯಿದು. ಇಲ್ಲಿ ರಾತ್ರಿ ವೇಳೆ ವಾಹನಗಳಲ್ಲಿ ಬಂದು ಕುಡಿಯುವುದು, ಮಂಗಳಮುಖಿಯರಿಂದ ಅನೈತಿಕ ಚಟುವಟಿಕೆ ಮೊದಲಾದವುಗಳು ನಡೆಯುತ್ತಿರುತ್ತದೆ.

    ಮೈದಾನದಲ್ಲಿ ಯಾರಿಗೆ ಸಂಬಂಧಿಸಿ ಎಷ್ಟು ಜಾಗ ಇದೆ ಉಂಟು ಎಂದು ಸರ್ವೇ ಮಾಡಿಸಿ, ಸಮತಟ್ಟುಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಯವರ ಜತೆಗೂ ಈ ಕುರಿತಂತೆ ಮಾತುಕತೆ ನಡೆಸಲಾಗಿದೆ. ಶೀಘ್ರ ಈ ಕುರಿತಂತೆ ಕ್ರಮ ಕೈಗೊಳ್ಳಲಾಗುವುದು.

    ಅಕ್ಷಿ ಶ್ರೀಧರ್, ಪಾಲಿಕೆ ಆಯುಕ್ತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts