More

    ಕಟ್ಟಡ ನಿರ್ಮಾಣ ತ್ಯಾಜ್ಯ ಡಂಪಿಂಗ್: ಪ್ರದೇಶದ ಸೌಂದರ್ಯಕ್ಕೆ ಧಕ್ಕೆ

    ಮಂಗಳೂರು: ನಗರದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿ ತ್ಯಾಜ್ಯ ಸುರಿಯಲು ಸರಿಯಾದ ಜಾಗವಿಲ್ಲದ ಹಿನ್ನೆಲೆಯಲ್ಲಿ ಅಲ್ಲಲ್ಲಿ ರಸ್ತೆ ಬದಿ, ಖಾಲಿ ಜಾಗಗಳಲ್ಲಿ ತಂದು ಸುರಿಯುವುದು ಸಾಮಾನ್ಯವಾಗಿದ್ದು, ಇದೀಗ ದಂಬೆಲ್‌ನಲ್ಲೂ ಕಟ್ಟಡ ತ್ಯಾಜ್ಯ ರಾಶಿ ಬಿದ್ದಿದೆ.

    ಕೂಳೂರು ಭಾಗದಲ್ಲಿ ಹರಿಯುವ ರಾಜಕಾಲುವೆ ಫಲ್ಗುಣಿ ನದಿ ಸೇರುವ ಪ್ರದೇಶವೇ ದಂಬೆಲ್. ಇಲ್ಲಿಂದ ಬಂಗ್ರಕೂಳೂರು ಭಾಗದ ಸಂಪರ್ಕಕ್ಕೆ ಕಿರು ಸೇತುವೆಯಿದ್ದು, ದ್ವಿಚಕ್ರ, ಆಟೋ ಮೊದಲಾದ ಲಘು ವಾಹನಗಳು ಇದರಲ್ಲಿ ಸಂಚರಿಸುತ್ತವೆ. ಪಾಲಿಕೆ ವ್ಯಾಪ್ತಿಯಾದರೂ, ಗ್ರಾಮೀಣ ಪ್ರಕೃತಿ ಸೌಂದರ್ಯ ಹೊಂದಿರುವ ಪ್ರದೇಶವಾಗಿದೆ. ಪ್ರವಾಸಿಗರನ್ನು ಆಕರ್ಷಿಸುವ ಪ್ರದೇಶವಾಗಿ ಅಭಿವೃದ್ಧಿಯಾಗುವ ಎಲ್ಲ ಅವಕಾಶಗಳೂ ಇವೆ. ಆದರೆ ಕಟ್ಟಡ ತ್ಯಾಜ್ಯ ತಂದು ಸುರಿಯುವುದು, ಪ್ಲಾಸ್ಟಿಕ್ ತ್ಯಾಜ್ಯ ನದಿಗೆ ಎಸೆಯುವುದು, ರಾಜಕಾಲುವೆಯಲ್ಲಿ ಹರಿಯುವ ಕೊಳಚೆ ನೀರು ಮೊದಲಾದ ಕಾರಣಗಳಿಂದಾಗಿ ದಂಬೆಲ್ ಇಂದು ಅಷ್ಟಾಗಿ ಜನಜನಿತವಾಗಿಲ್ಲ.

    ದಂಬೆಲ್ ರಾಜಕಾಲುವೆ ಬದಿಯಲ್ಲೇ ಲೋಡ್‌ಗಟ್ಟಲೆ ಕಟ್ಟಡ ನಿರ್ಮಾಣ ತ್ಯಾಜ್ಯ ತಂದು ರಾಶಿ ಹಾಕಲಾಗಿದೆ. ಮಣ್ಣು, ಕಟ್ಟಡ ಕೆಡವಿದಾಗ ಸಿಗುವ ತ್ಯಾಜ್ಯ, ಗಟ್ಟಿಯಾದ ಹಿನ್ನೆಲೆಯಲ್ಲಿ ಉಪಯೋಗಿಸಲು ಸಾಧ್ಯವಾಗದ ಸಿಮೆಂಟ್, ಸಿಮೆಂಟ್ ಚೀಲಗಳು, ಉಪಯೋಗಿಸಿ ಉಳಿದ ಟೈಲ್ಸ್ ತುಂಡುಗಳು ಎಲ್ಲವನ್ನೂ ತಂದು ರಸ್ತೆಗೆ ಹೊಂದಿಕೊಂಡಂತೆ ರಾಶಿಹಾಕಲಾಗಿದೆ. ಹಗಲು ಎಲ್ಲರೂ ನೋಡುವುದರಿಂದ ರಾತ್ರಿತಂದು ಸುರಿದಿರುವ ಸಾಧ್ಯತೆಯಿದೆ. ಬಂಗ್ರಕೂಳೂರು ಭಾಗದಲ್ಲಿ ಫಲ್ಗುಣಿ ನದಿ ಪಾತ್ರಕ್ಕೆ ಇದೇ ರೀತಿ ನಿರ್ಮಾಣ ತ್ಯಾಜ್ಯ, ಮಣ್ಣು ಮೊದಲಾದವುಗಳನ್ನು ತಂದು ಹಾಕಿ ನದಿಯನ್ನು ಒತ್ತುವರಿ ಮಾಡುವ ಪ್ರಯತ್ನಗಳು ನಡೆದಿತ್ತು. ಇಲ್ಲೂ ಅದೇ ರೀತಿ ಒತ್ತುವರಿ ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನುವ ಅಭಿಪ್ರಾಯಗಳೂ ಕೇಳಿ ಬಂದಿವೆ.

    *ರಾಜಕಾಲುವೆಯಿಂದ ನದಿಗೆ ತ್ಯಾಜ್ಯ: ಕೊಟ್ಟಾರ ಚೌಕಿ ಭಾಗದಲ್ಲಿರುವ ರಾಜಕಾಲುವೆ ದಂಬೆಲ್‌ನಲ್ಲಿ ಗಾತ್ರ ಹಿಗ್ಗಿಸಿಕೊಂಡು ಫಲ್ಗುಣಿ ನದಿ ಸೇರುತ್ತದೆ. ರಾಜಕಾಲುವೆಯಲ್ಲಿ ನಗರ ವ್ಯಾಪ್ತಿಯ ಕೊಳಚೆ ನೀರು ಹರಿಯುವುದರಿಂದ ಅದೇ ನೇರವಾಗಿ ನದಿಗೂ ಹೋಗುತ್ತದೆ. ಕೊಳಚೆ ನೀರಿನೊಂದಿಗೆ ಪ್ಲಾಸ್ಟಿಕ್ ಸೇರಿದಂತೆ ವಿವಿಧ ತ್ಯಾಜ್ಯಗಳೂ ಹರಿದು ಬರುವುದರಿಂದ ಎಲ್ಲವೂ ನದಿಗೆ ಒಡಲಿಗೆ ಹೋಗಿ, ನೇರವಾಗಿ ಸಮುದ್ರವನ್ನು ಸೇರುತ್ತದೆ. ಮಳೆಗಾಲದಲ್ಲಿ ತುಂಬಿ ಹರಿಯುವ ರಾಜಕಾಲುವೆಯ ಮೂಲಕ ಏನೆಲ್ಲ ತ್ಯಾಜ್ಯಗಳೂ ತೇಲಿಕೊಂಡು ಬರುತ್ತದೆ ಎನ್ನುವುದನ್ನು ನೋಡಿದರಷ್ಟೇ ತಿಳಿಯಬಹುದಾಗಿದೆ ಎನ್ನುತ್ತಾರೆ ಸ್ಥಳೀಯರು.

    ದಂಬೆಲ್ ಭಾಗದಲ್ಲಿ ಕಟ್ಟಡ ತ್ಯಾಜ್ಯಗಳನ್ನು ತಂದು ರಾಶಿ ಹಾಕಿರುವುದು ಗಮನಕ್ಕೆ ಬಂದಿದೆ. ಈ ಕುರಿತು ವಿಚಾರಿಸಿದ್ದೇನೆ. ರಾತ್ರಿ ತಂದು ಸರಿಯುವುದರಿಂದ ಯಾರು ಹಾಕುತ್ತಿದ್ದಾರೆ ಎಂದ ತಿಳಿಯುತ್ತಿಲ್ಲ. ಬಂಗ್ರಕೂಳೂರು ಭಾಗದಲ್ಲೂ ಅದೇ ಪರಿಸ್ಥಿತಿ ಇತ್ತು. ಬೇಲಿ ಹಾಕಿರುವುದರಿಂದ ಸದ್ಯ ಕಡಿಮೆಯಾಗಿದೆ. ಇನ್ನೊಮ್ಮೆ ಈ ಕುರಿತು ಗಮನ ಹರಿಸಲಾಗುವುದು.
    ಕಿರಣ್ ಕುಮಾರ್ ಕೋಡಿಕಲ್ ಕಾರ್ಪೋರೇಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts