More

    ಬರಿದಾದ ಕೆರೆ ಕಟ್ಟೆ; ಹೂಳೆತ್ತಲು ಕ್ರೀಯಾಯೋಜನೆಗೆ ಸೂಚನೆ

    ಬೆಂಗಳೂರು:
    ನೀರಿಲ್ಲದೆ ಬರಿದಾಗಿರುವ ಕೆರೆ ಕಟ್ಟೆಗಳಲ್ಲಿ ಹೂಳೆತ್ತಲು ವಿಶೇಷವಾಗಿ ಆದ್ಯತೆ ನೀಡಿ ಕ್ರೀಯಾ ಯೋಜನೆ ರೂಪಿಸಬೇಕು ಎಂದು ಜಿಲ್ಲಾ ಪಂಚಾಯಿತಿಗೆ ಸರ್ಕಾರ ಸೂಚಿಸಿದೆ.
    ನರೇಗಾ ಯೋಜನೆಯಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗೆ ಅನುದಾನದ ಕೊರತೆ ಉಂಟಾಗುವುದಿಲ್ಲ. ಕೇಂದ್ರ ಸರ್ಕಾರದ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ಸಿಗಲಿದ್ದು, ಅದಕ್ಕೆ ರಾಜ್ಯ ಸರ್ಕಾರವೂ ಹೆಚ್ಚಿನ ಉತ್ತೇಜನ ನೀಡುತ್ತಿದೆ. ಈ ಅವಕಾಶವನ್ನು ಎಲ್ಲಾ ಜಿಲ್ಲಾ ಪಂಚಾಯಿತಿಗಳು ಆದ್ಯತೆ ಮೇರೆಗೆ ಬಳಸಿಕೊಳ್ಳಬೇಕು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.
    ಕಳೆದ ನಾಲ್ಕೈದು ವರ್ಷಗಳು ಉತ್ತಮ ಮಳೆಯಾಗಿದ್ದರಿಂದ ಕೆರೆ ಕಟ್ಟೆಯಲ್ಲಿ ನೀರಿದ್ದ ಕಾರಣ ಹೂಳೆತ್ತುವ ಕೆಲಸಗಳನ್ನು ಸಮರೋಪಾದಿಯಲ್ಲಿ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಆದರೆ ಈ ಬಾರಿ ಮಳೆ ಇಲ್ಲದೆ ಬರ ಎದುರಾಗಿರುವ ಕಾರಣ ಹೂಳೆತ್ತುವ ಕಾಮಗಾರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮಾಡಲು ಅವಕಾಶವಿದೆ. ಇದನ್ನು ಸದುಪಯೋಗಪಡಿಸಿಕೊಂಡರೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಿದೆ. ಜೊತೆಗೆ ಬರ ನಿಭಾಯಿಸಲು ಅನುಕೂಲವಾಗಲಿದೆ ಎಂದು ಜಿಪಂಗಳಿಗೆ ತಿಳಿಸಲಾಗಿದೆ.
    ಬೇಸಿಗೆಯಲ್ಲಿ ಉದ್ಯೋಗದ ಅವಕಾಶಗಳನ್ನು ಹೆಚ್ಚಿಸಲು ಮಾನವ ಸಂಪನ್ಮೂಲ ದಿನಗಳನ್ನು ಹೆಚ್ಚಿಸುವುದು ಅಗತ್ಯವಿದೆ. ಅದಕ್ಕಾಗಿ ತಾಲೂಕು ಪಂಚಾಯಿತಿ ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೂ ಸಭೆಗಳನ್ನು ಮಾಡಿ ಕ್ರೀಯಾ ಯೋಜನೆಗಳನ್ನು ತರಿಸಿಕೊಳ್ಳಲು ಈಗಿನಿಂದಲೇ ಕಾರ್ಯೋನ್ಮುಖವಾಗಬೇಕು ಎಂದು ಸೂಚಿಸಲಾಗಿದೆ.
    ಕೆರೆ ಕಟ್ಟೆಗಳಲ್ಲಿ ಹೂಳೆತ್ತುವುದರಿಂದ ನೀರು ಸಂಗ್ರಹ ಪ್ರಮಾಣವೂ ಹೆಚ್ಚಿಸಲು ಅನುಕೂಲವಾಗಲಿದೆ. ಆ ಮೂಲಕ ಮುಂದೆ ಅಂತರ್ ಜಲ ವೃದ್ದಿಯಾಗಲು ಸಾಧ್ಯವಾಗುತ್ತದೆ ಎನ್ನುವುದು ಸರ್ಕಾರದ ಉದ್ದೇಶವಾಗಿದೆ. ಸಣ್ಣ ನೀರಾವರಿ ಇಲಾಖೆಗಿಂತ ಹೆಚ್ಚಾಗಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿಯೇ ಅತಿ ಹೆಚ್ಚು ಕೆರೆ ಕಟ್ಟೆಗಳು ಇರುವುದರಿಂದ ಹೂಳೆತ್ತಲು ನರೇಗಾ ಯೋಜನೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts