More

    ರೈತರಿಗೆ ಸಿಹಿಯಾದ ಒಣಮೆಣಸಿನಕಾಯಿ!

    ಮೃತ್ಯುಂಜಯ ಕಲ್ಮಠ ಗದಗ

    ಗದಗ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಹೊಸ ವರ್ಷ 2020ರ ಮೊದಲ ದಿನದಿಂದ ಒಣಮೆಣಸಿನಕಾಯಿ ಉತ್ಪನ್ನಕ್ಕೆ ಆನ್​ಲೈನ್ ಟೆಂಡರ್ ಪದ್ಧತಿ ಆರಂಭಿಸಿದ ನಂತರ ರೈತರಿಗೆ ಬಂಪರ್ ಬೆಲೆ ಸಿಗುತ್ತಿದೆ.

    ಕಳೆದ ಮೂರ್ನಾಲ್ಕು ದಶಕಗಳಿಂದ ನಡೆದುಕೊಂಡು ಬಂದಿದ್ದ ಸವಾಲು ಕೂಗುವ ಪದ್ಧತಿಯನ್ನು ಡಿಸೆಂಬರ್ 2019ಕ್ಕೆ ಕೊನೆಗೊಳಿಸಲಾಯಿತು. 2020ರ ಜ. 1ರಿಂದ ಆನ್​ಲೈನ್ ಮೂಲಕವೇ ಒಣಮೆಣಸಿನಕಾಯಿ ಟೆಂಡರ್ ಮೂಲಕವೇ ಖರೀದಿ ಪ್ರಕ್ರಿಯೆ ನಡೆಯಬೇಕು ಎಂದು ಎಪಿಎಂಸಿ ಅಧಿಕಾರಿಗಳು ಎಲ್ಲ ದಲಾಲರಿಗೆ ನೋಟಿಸ್ ಜಾರಿ ಮಾಡಿದ್ದರಿಂದ ಜ. 1ರಿಂದ ಅಧಿಕೃತವಾಗಿ ಆನ್​ಲೈನ್ ಟೆಂಡರ್ ಆರಂಭವಾಗಿದೆ.

    ಪ್ರತಿ ಬುಧವಾರ ಮತ್ತು ಶನಿವಾರ ಒಣಮೆಣಸಿನಕಾಯಿ ಖರೀದಿ ಪ್ರಕ್ರಿಯೆ ಆನ್​ಲೈನ್ ಮೂಲಕ ನಡೆಸಲು ತೀರ್ವನಿಸಲಾಗಿದೆ. ಜ. 1, ಕಳೆದ ಶನಿವಾರ ಮತ್ತು ಬುಧವಾರ ಆನ್​ಲೈನ್ ಮೂಲಕ ಖರೀದಿ ನಡೆದಿದೆ. ಇಲ್ಲಿಯವರೆಗೆ ಪ್ರತಿ ಕ್ವಿಂಟಾಲ್​ಗೆ ಗರಿಷ್ಠ 18,000 ರೂ.ವರೆಗೆ ಮಾರಾಟವಾಗುತ್ತಿತ್ತು. ಆನ್​ಲೈನ್ ಟೆಂಡರ್ ಖರೀದಿ ಆರಂಭಿಸಿದ ಮೇಲೆ ಜ. 1ರಂದು ಪ್ರತಿ ಕ್ವಿಂಟಾಲ್​ಗೆ ಗರಿಷ್ಠ 22,000 ರೂ. (ಆವಕ 25 ಸಾವಿರ ಚೀಲ), ಜ. 3ರಂದು 23,000 ರೂ. (15 ಸಾವಿರ ಚೀಲ ಆವಕ), ಜ.8ರಂದು 27,099 ರೂ. (7 ಸಾವಿರ ಚೀಲ ಆವಕ) ಮಾರಾಟವಾಗಿದೆ. ನೂತನ ಪದ್ಧತಿ ಅಳವಡಿಕೆಯಿಂದ ರೈತರಿಗೆ ನಾಲ್ಕಾರು ಸಾವಿರ ರೂ. ಹೆಚ್ಚು ಹಣ ಸಿಕ್ಕಂತಾಗಿದೆ. ಹೊಸ ಪದ್ಧತಿ ಆರಂಭವಾದ ನಂತರ ನಡೆದ ಮೂರು ಆನ್​ಲೈನ್ ಟೆಂಡರ್ ಪ್ರಕ್ರಿಯೆಗಳಲ್ಲಿ ಬ್ಯಾಡಗಿಯ 60ರಿಂದ 70 ಹಾಗೂ ಸ್ಥಳೀಯ 20 ವರ್ತಕರು ಸೇರಿ 90 ವರ್ತಕರು ಭಾಗವಹಿಸಿದ್ದರು.

    ಬ್ಯಾಡಗಿ ವರ್ತಕರು ಭಾಗವಹಿಸಲ್ಲ!: ಕಳೆದ ಮೂರು ಸಲ ನಡೆದ ಒಣಮೆಣಸಿನಕಾಯಿ ಆನ್​ಲೈನ್ ಟೆಂಡರ್ ಮಾರಾಟ ಮಾಡುವ ಪ್ರಕ್ರಿಯೆಯಲ್ಲಿ ಬ್ಯಾಡಗಿ ಒಣಮೆಣಸಿನಕಾಯಿ ಖರೀದಿದಾರರು ಭಾಗವಹಿಸಿದ್ದರು. ಆದರೆ, ಮುಂದಿನ ಖರೀದಿ ಪ್ರಕ್ರಿಯೆಯಲ್ಲಿ ಅವರು ಭಾಗವಹಿಸುವುದಿಲ್ಲ ಎಂದು ಎಪಿಎಂಸಿ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ. ಬ್ಯಾಡಗಿ, ಹುಬ್ಬಳ್ಳಿ ಜತೆಗೆ ಸ್ಥಳೀಯ ಖರೀದಿದಾರರು ಮಾತ್ರ ಆನ್​ಲೈನ್ ಟೆಂಡರ್​ನಲ್ಲಿ ಪಾಲ್ಗೊಳ್ಳುವುದರಿಂದ ಸ್ಪರ್ಧೆ ಹೆಚ್ಚಾಗಿ ರೈತರಿಗೆ ಉತ್ತಮ ದರ ಸಿಗುತ್ತಿತ್ತು. ಇದೀಗ ಸ್ಥಳೀಯ ಖರೀದಿದಾರರು ಮಾತ್ರ ಆನ್​ಲೈನ್ ಟೆಂಡರ್​ನಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ದರದಲ್ಲಿ ಕುಸಿತ ಕಾಣುವ ಸಾಧ್ಯತೆಯೂ ಇದೆ ಎಂದು ಸ್ಥಳೀಯ ವರ್ತಕರು ಮಾತನಾಡಿಕೊಳ್ಳುತ್ತಿದ್ದಾರೆ.

    ರಾಜ್ಯದಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆಗೆ ಬ್ಯಾಡಗಿ ಹೆಸರುವಾಸಿ. ಅಲ್ಲಿ ದೊಡ್ಡ ಖರೀದಿದಾರರಿದ್ದು, ಅಲ್ಲಿಯವರು ಗದಗ ಮಾರ್ಕೆಟ್​ಗೆ ಬಂದರೆ ರೈತರಿಗೆ ಅನುಕೂಲವಾಗಲಿದೆ. ಆದರೆ, ಬ್ಯಾಡಗಿ ಮಾರ್ಕೆಟ್​ಗೆ ಸಾಕಷ್ಟು ಉತ್ಪನ್ನ ಬರುವಾಗ ಗದಗಕ್ಕೆ ಹೋಗಿ ಖರೀದಿಸುವ ಜರೂರತ್ತು ಏನಿದೆ? ಗದಗ ಮಾರ್ಕೆಟ್ ಬೆಳೆಸುವುದೇಕೆ ಎಂಬ ಮಾತು ಇತ್ತೀಚೆಗೆ ಏರ್ಪಡಿಸಿದ್ದ ಖರೀದಿದಾರರ ಸಭೆಯಲ್ಲಿ ಕೇಳಿಬಂದಿದೆ. ಮುಂದಿನ ದಿನಗಳಲ್ಲಿ ಗದಗ ಮಾರ್ಕೆಟ್​ಗೆ ಹೋಗುವುದು ಬೇಡ ಎಂದು ಬ್ಯಾಡಗಿ ವರ್ತಕರು ಠರಾವು ಮಾಡಿಕೊಂಡಿದ್ದಾರೆ. ಹೀಗಾದರೆ, ದರ ಕುಸಿತ ಕಾಣಬಹುದು. ಇದರಿಂದ ರೈತರಿಗೆ ತೊಂದರೆ ಆಗಲಿದೆ. ಆದ್ದರಿಂದ ಅಧಿಕಾರಿಗಳು ಬ್ಯಾಡಗಿ ಒಣಮೆಣಸಿನಕಾಯಿ ಖರೀದಿದಾರರ ಮನವೊಲಿಸಿ ಕರೆತರಬೇಕು ಎಂದು ಅನೇಕ ರೈತರು ಒತ್ತಾಯಿಸಿದ್ದಾರೆ. ಆನ್​ಲೈನ್ ಟೆಂಡರ್ ಪದ್ಧತಿಗೆ ಸ್ಥಳೀಯ ಒಣಮೆಣಸಿನಕಾಯಿ ವರ್ತಕರು ಸಹಕಾರ ನೀಡಿ ಸ್ವಾಗತಿಸಿದ್ದಾರೆ. ಗದಗ ಮಾರ್ಕೆಟ್ ಅಭಿವೃದ್ಧಿಗೆ ಎಪಿಎಂಸಿ ಕಾರ್ಯದರ್ಶಿ ಅವರು ಮುಂದಾಗಬೇಕು. ಬ್ಯಾಡಗಿ ಮತ್ತು ಗದಗ ಎರಡೂ ಎಪಿಎಂಸಿಗೆ ಒಬ್ಬರೇ ಕಾರ್ಯದರ್ಶಿ ಇರುವುದರಿಂದ ಖರೀದಿದಾರರ ಮನವೊಲಿಕೆ ಮಾಡಬೇಕು ಎಂದು ಅನೇಕರು ಒತ್ತಾಯಿಸುತ್ತಿದ್ದಾರೆ.

    ಗದಗ ಎಪಿಎಂಸಿಯಲ್ಲಿ ಆನ್​ಲೈನ್ ಟೆಂಡರ್ ಮೂಲಕ ಒಣಮೆಣಸಿನಕಾಯಿ ಮಾರಾಟ ಆರಂಭವಾಗಿದ್ದು ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ. ನೂತನ ಪದ್ಧತಿ ಆರಂಭಗೊಂಡ ನಂತರ ಮೂರು ಸಲ ನಡೆದ ಆನ್​ಲೈನ್ ಟೆಂಡರ್ ಪ್ರಕ್ರಿಯೆಯಲ್ಲಿ ಬ್ಯಾಡಗಿ ವರ್ತಕರು ಪಾಲ್ಗೊಂಡಿದ್ದು, ಇದೀಗ ಮುಂದಿನ ದಿನಗಳಲ್ಲಿ ಪಾಲ್ಗೊಳ್ಳಲು ನಿರಾಕರಿಸುತ್ತಿದ್ದಾರೆ ಎಂಬ ಸಂಗತಿ ತಿಳಿದ ಮೇಲೆ ಶುಕ್ರವಾರ ಗದಗ ಎಪಿಎಂಸಿ ಚುನಾಯಿತ ಪ್ರತಿನಿಧಿಗಳೊಂದಿಗೆ ಬ್ಯಾಡಗಿ ವರ್ತಕರ ಸಂಘದವರನ್ನು ಭೇಟಿ ಮಾಡಲು ತೆರಳಲಾಗಿತ್ತು. ಆದರೆ, ಬ್ಯಾಡಗಿ ವರ್ತಕರ ಸಂಘದ ಪದಾಧಿಕಾರಿಗಳು ಉಪಸ್ಥಿತರಿಲ್ಲದ್ದರಿಂದ ಅಲ್ಲಿನ ಎಪಿಎಂಸಿ ವರ್ತಕರು, ಸದಸ್ಯರನ್ನು ಭೇಟಿ ಆನ್​ಲೈನ್ ಟೆಂಡರ್​ನಲ್ಲಿ ಪಾಲ್ಗೊಳ್ಳುವಂತೆ ಮನವಿ ಮಾಡಿಕೊಳ್ಳಲಾಗಿದೆ.

    | ಸಿ.ಬಿ. ಬಡ್ನಿ ಅಧ್ಯಕ್ಷ, ಎಪಿಎಂಸಿ, ಗದಗ

    ಗದಗ ಎಪಿಎಂಸಿಯಲ್ಲಿ ಒಣಮೆಣಸಿನಕಾಯಿ ದಲಾಲರಿಗೆ ನೀಡಲಾಗಿರುವ ಪ್ರದೇಶವನ್ನು ಸ್ಪೈಸ್ ಮಾರ್ಕೆಟ್ ಎಂದು ಘೋಷಿಸಬೇಕು. ಎಲ್ಲ ದಲಾಲಿ ಅಂಗಡಿಗಳ ಮುಂಭಾಗವನ್ನು ಕಾಂಕ್ರೀಟಿಕರಣ ಮಾಡಬೇಕು. ಬೇರೆ ಕಡೆಯಿಂದ ಬರುವ ಖರೀದಿದಾರರಿಗೆ ತಮ್ಮ ಉತ್ಪನ್ನವನ್ನು ಇಟ್ಟುಕೊಳ್ಳಲು ಶೆಡ್ ಮತ್ತು ಪ್ಲಾಟ್​ಗಳನ್ನು ನೀಡಬೇಕು. ಒಣಮೆಣಸಿನಕಾಯಿಗಷ್ಟೇ ಮೀಸಲಿರುವಂತೆ ಕೋಲ್ಡ್ ಸ್ಟೋರೇಜ್ ನಿರ್ವಿುಸಬೇಕು. ಒಣ ಮೆಣಸಿನಕಾಯಿ ಮಾರ್ಕೆಟ್ ಬಳಿ ರೈತರಿಗೆ ಅನುಕೂಲ ಕಲ್ಪಿಸಲು ರಿಯಾಯಿತಿ ದರದಲ್ಲಿ ಕ್ಯಾಂಟೀನ್ ಆರಂಭಿಸಬೇಕು.

    | ಚಂದ್ರಣ್ಣ ಬಾಳಿಹಳ್ಳಿಮಠ ಅಧ್ಯಕ್ಷ, ಗದಗ ಒಣಮೆಣಸಿನಕಾಯಿ ವರ್ತಕರ ಸಂಘ

    ಜ. 1ರಿಂದ ಗದಗ ಎಪಿಎಂಸಿಯಲ್ಲಿ ಒಣಮೆಣಸಿನಕಾಯಿ ಉತ್ಪನ್ನ ಮಾರಾಟ ಪ್ರಕ್ರಿಯೆ ಆನ್​ಲೈನ್ ಟೆಂಡರ್ ಮೂಲಕ ನಡೆಯುತ್ತಿದ್ದು ಇದನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಸ್ಥಳೀಯ ವರ್ತಕರು ಬ್ಯಾಡಗಿ ವರ್ತಕರನ್ನು ಕರೆತರುವಷ್ಟು ಸಮರ್ಥರು ಇದ್ದಾರೆ. ರೈತರಿಗಾಗಿ ಆ ಕೆಲಸವನ್ನು ಅವರೇ ಮಾಡಿಕೊಳ್ಳಬೇಕು. ಜತೆಗೆ ವರ್ತಕರ ಬೇಡಿಕೆಗಳಾದ ಕೋಲ್ಡ್ ಸ್ಟೋರೇಜ್ ಸ್ಥಾಪನೆ, ಖರೀದಿದಾರರಿಗೆ ಪ್ಲಾಟ್, ಶೆಡ್ ನೀಡಲು ಜಾಗ ಗುರುತಿಸಲಾಗಿದ್ದು, ಹಂತಹಂತವಾಗಿ ಕಾರ್ಯಗತಗೊಳಿಸಲಾಗುವುದು. ಒಟ್ಟಿನಲ್ಲಿ ರೈತರಿಗೆ ಉತ್ತಮ ದರ ಸಿಗಬೇಕು ಎಂಬ ಆಶಯ ಈಡೇರಬೇಕು.

    | ಎಸ್.ಬಿ. ನ್ಯಾಮಗೌಡ ಕೃಷಿ ಉತ್ಪನ್ನ, ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಗದಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts