More

    ಕುಡುಕನಿಗೆ ರಸ್ತೆಯಲ್ಲಿ ಸಿಕ್ತು 10 ಲಕ್ಷ ರೂಪಾಯಿ; ಮುಂದೇನಾಯ್ತು…?

    ಮಂಗಳೂರು: ಕುಡುಕನೊಬ್ಬನಿಗೆ ರಸ್ತೆಯಲ್ಲಿ ಹತ್ತು ಲಕ್ಷ ರೂಪಾಯಿ ಸಿಕ್ಕಿದ್ದು, ಹಣ ಸಿಕ್ಕಿದ ಅರ್ಧಗಂಟೆಯಲ್ಲೇ ಕುಡುಕನಿಂದ ಪೊಲೀಸರು ಹಣ ಕಿತ್ತುಕೊಂಡಿದ್ದಲ್ಲದೇ ಒಂದು ವಾರ ಕಳೆದರೂ ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಈ ಘಟನೆ ಮಂಗಳೂರಿನ ಪಂಪ್​ವೆಲ್​ ಬಳಿ ನಡೆದಿದೆ.

    ನ.27 ರಂದು ಪಂಪ್​ವೆಲ್​ ಬಳಿ ಮದ್ಯ ಸೇವನೆ ಮಾಡಿ ನಡೆದುಕೊಂಡು ಹೋಗುತ್ತಿದ್ದ ಶಿವರಾಜ್ ಎಂಬುವವರಿಗೆ ಅಲ್ಲೇ ಸಮೀಪದ ಬಾರ್​ನ ಬಳಿ ದೊಡ್ಡ ಕಟ್ಟೊಂದು ಸಿಕ್ಕಿದೆ. ಇದೇನಪ್ಪಾ ಎಂದು ತೆರೆದು ನೋಡಿದ ಶಿವರಾಜ್​ಗೆ ಒಂದು ಕ್ಷಣ ಶಾಕ್​ ಆಗಿದೆ. ಯಾಕಂದ್ರೆ ಕಟ್ಟಿನಲ್ಲಿ ಐನೂರು ಮತ್ತು ಎರಡು ಸಾವಿರ ಮುಖಬೆಲೆಯ ಬರೋಬ್ಬರಿ ಹತ್ತು ಲಕ್ಷ ರೂಪಾಯಿ ಹಣವಿತ್ತು.

    ಮದ್ಯವ್ಯಸನಿಯಾಗಿದ್ದ ಶಿವರಾಜ್​ ಆ ಹಣವನ್ನು ವಾರಸುದಾರರಿಗೆ ಹಿಂದಿರುಗಿಸಲು ನೋಡಿದ್ರೆ, ಅದ್ರಲ್ಲಿ ವಾರಸುದಾರರ ಯಾವುದೇ ಮಾಹಿತಿ ಇರಲಿಲ್ಲ. ಹೀಗಾಗಿ ಮೊದಲೇ ಮದ್ಯಪ್ರಿಯನಾದ ಶಿವರಾಜ್​ ಅದೇ ನೋಟಿನ ಕಂತೆಯಲ್ಲಿ ಒಂದು ಸಾವಿರ ರೂಪಾಯಿಯನ್ನು ತೆಗೆದು ಜತೆಗಿದ್ದವನಿಗೂ ಒಂದು ನೋಟು ಕೊಟ್ಟು ಮತ್ತೆ ಬಾರ್​ಗೆ ಹೋಗಿ ಮದ್ಯ ಖರೀದಿಸಿದ್ದಾನೆ.

    ಕುಡುಕನಿಗೆ ಹತ್ತು ಲಕ್ಷ ರೂಪಾಯಿ ಸಿಕ್ಕ ವಿಚಾರ ಗೊತ್ತಾದ ಕೂಡಲೇ ಸ್ಥಳಕ್ಕೆ ಬಂದ ಕಂಕನಾಡಿ ಪೊಲೀಸರು ಹಣದ ಸಮೇತ ಶಿವರಾಜ್​ನನ್ನು ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಲ್ಲದೇ, ಮೂರು ದಿನಗಳ ನಂತರ ಆತನನ್ನು ಬಿಟ್ಟಿದ್ದಾರೆ. ಆದರೆ ಈ ಘಟನೆ ನಡೆದು ಒಂದು ವಾರ ಕಳೆದರೂ ಪೊಲೀಸರು ಈ ಬಗ್ಗೆ ಯಾವುದೇ ಪ್ರಕರಣ ದಾಖಲಿಸಿಲ್ಲ. ಜತೆಗೆ ಹಣದ ವಾರಸುದಾರರೂ ಈ ಬಗ್ಗೆ ದೂರು ದಾಖಲಿಸಿಲ್ಲ.

    ಪೊಲೀಸರನ್ನು ಕೇಳಿದ್ರೆ ಆ ಹಣವನ್ನು ವಾರಸುದಾರರಿಗೆ ಕೊಟ್ಟಾಗಿದೆ ಅಂತಾರೆ. ಆದ್ರೆ ನಾನು ಅಲ್ಲೇ 3 ದಿನಗಳ ಕಾಲ ಇದ್ದೆ. ಯಾರೂ ಹಣ ಕೇಳಿಕೊಂಡು ಬಂದಿಲ್ಲ. ಇವರು ಅದನ್ನು ಯಾರಿಗೂ ಕೊಟ್ಟಿಲ್ಲ. ಕೊಟ್ಟಿದ್ದರೆ ನನಗೆ ಗೊತ್ತಾಗುತ್ತಿತ್ತು ಎಂದು ಮಾಹಿತಿ ನೀಡಿದ್ದಾರೆ ಶಿವರಾಜ್​. ಇದೀಗ ಕುಡುಕನ ಬಳಿಯಿಂದ ಸಿಕ್ಕ ಹಣವನ್ನು ತಾವೇ ಸೈಲೆಂಟಾಗಿ ನುಂಗಿ ಹಾಕಿದ್ದಾರಾ ಪೊಲೀಸರು ಎಂಬ ಅನುಮಾನ ಕಾಡುತ್ತಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts