

ಉತ್ತರಪ್ರದೇಶ: ಮದ್ಯಪಾನ ಮಾಡಿದ ವ್ಯಕ್ತಿಯೊಬ್ಬ ಕೊಡಲಿ ಹಿಡಿದು ಶಾಲೆಯೊಳಗೆ ನುಗ್ಗಿ, ಶಾಲೆಯ ಆಸ್ತಿಪಾಸ್ತಿಗಳನ್ನು ಧ್ವಂಸ ಮಾಡಿರುವ ಘಟನೆ ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿ ವರದಿಯಾಗಿದೆ.
ಸರ್ಕಾರಿ ಪ್ರಾಥಮಿಕ ಶಾಲೆಯ ಆವರಣಕ್ಕೆ ನುಗ್ಗಿದ ವ್ಯಕ್ತಿ, ಕೊಡಲಿ ಹಿಡಿದು ಬಂದದ್ದನ್ನು ಕಂಡ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ. ಈ ಸಂಪೂರ್ಣ ಘಟನೆಯನ್ನು ಸ್ಥಳೀಯರೊಬ್ಬರು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ. ಶಾಲೆಯ ಮೈದಾನದಲ್ಲಿ ಅಳವಡಿಸಲಾಗಿದ್ದ ನೀರಿನ ಪಂಪ್ ಅನ್ನು ಕೊಡಲಿಯಿಂದ ಧ್ವಂಸಗೊಳಿಸಿದ ಕುಡುಕ, ಕೆಲ ಸಮಯ ಸ್ಥಳೀಯರನ್ನು ಭಯಭೀತರನ್ನಾಗಿ ಮಾಡಿದ್ದಾನೆ.
ಈ ಘಟನೆಯಿಂದ ಭಯಭೀತರಾದ ಶಿಕ್ಷಕರು ಮತ್ತು ವಿದ್ಯಾರ್ಥಿಗಳು, ಮೂರು ದಿನಗಳು ಕಳೆದರೂ ಶಾಲೆಗೆ ಹಾಜರಾಗಿಲ್ಲ ಎಂದು ಹೇಳಲಾಗಿದೆ. ಈ ಮಧ್ಯೆ ಜಿಲ್ಲಾ ಶಿಕ್ಷಣಾಧಿಕಾರಿ ಪ್ರದೀಪ್ ಕುಮಾರ್ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಶಿವಪ್ರಸಾದ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸುಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ,(ಏಜೆನ್ಸೀಸ್).