More

    ಬರ ಪರಿಹಾರಕ್ಕೆ 10 ಸಾವಿರ ಕೋಟಿ ರೂ. ಕೊಡಿ ಇಲ್ಲವೇ ಅಧಿಕಾರ ಬಿಡಿ; ವಿಧಾನ ಪರಿಷತ್‌ನಲ್ಲಿ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ


    ರಾಜ್ಯದಲ್ಲಿ ತೀವ್ರ ಬರಗಾಲದಿಂದ ಸಂಕಷ್ಟಕ್ಕೆ ತುರ್ತಾಗಿ ಸ್ಪಂದಿಸಿ ಪರಿಹಾರ ಕಾರ್ಯನಿರ್ವಹಣೆಗೆ 10 ಸಾವಿರ ಕೋಟಿ ರೂ. ಕೊಡಿ ಇಲ್ಲವೇ ಅಧಿಕಾರ ಬಿಟ್ಟು ಬಿಡಿ ಎಂದು ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.
    ಬರಗಾಲದ ಬಗ್ಗೆ ಸೋಮವಾರ ನಿಲುವಳಿ ಸೂಚನೆ ಮಂಡಿಸಿ ವಿಷಯ ಪ್ರಸ್ತಾಪಿಸಿದ ಅವರು, 216 ತಾಲೂಕುಗಳಲ್ಲಿ ತೀವ್ರ ಬರ, 46 ಲಕ್ಷ ಹೆಕ್ಟೇರ್ ಬೆಳೆ ಹಾನಿ, 33 ಸಾವಿರ ಕೋಟಿ ರೂ. ಬೆಳೆ ನಷ್ಟ, 87 ಲಕ್ಷ ಕೃಷಿ ಕುಟುಂಬಗಳು ಸಮಸ್ಯೆಗೀಡಾಗಿವೆ ಎಂದು ಸರ್ಕಾರವೇ ಹೇಳುತ್ತದೆ.
    ಆದರೆ ಯುದ್ಧೋಪಾದಿ ಬರ ಪರಿಹಾರ ಕಾಮಗಾರಿಗೆ ನಯಾ ಪೈಸೆಯೂ ಬಿಡುಗಡೆ ಮಾಡಿಲ್ಲ. ಬೆಳೆ ಹಾನಿ ಅನುಭವಿಸಿದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಕುಡಿಯುವ ನೀರು, ಮೇವು, ಕೈಗೆ ಮತ್ತಿತರ ಕ್ರಮಗಳನ್ನು ನಿರ್ಲಕ್ಷಿಸಿದೆ. ಬಹುತೇಕ ಜಿಲ್ಲಾ ಉಸ್ತುವಾರಿ ಸಚಿವರು ನಿರ್ಲಿಪ್ತರಾಗಿದ್ದಾರೆ ಎಂದು ಟೀಕಿಸಿದರು.
    ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ತೋರಿಸಿ ಕಾಲ ಕಳೆದಿದೆ. ಕೇಂದ್ರ ಸರ್ಕಾರದ ಅನುದಾನ ತರಲು ಪ್ರಯತ್ನಿಸೋಣ. ಮೊದಲಿಗೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಲಿ ಎಂದು ಪ್ರತಿಪಕ್ಷಗಳು ಪದೇ ಪದೆ ಒತ್ತಡ ಹೇರಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರು 325 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ.
    ಅಧಿಕೃತ ದಾಖಲೆಗಳನ್ನು ಪರಿಶೀಲಿಸಿದಾಗ ಕೇಂದ್ರ ಸರ್ಕಾರ ಎನ್‌ಡಿಆರ್‌ಎ್ ಅಡಿ ಬಿಡುಗಡೆ ಅನುದಾನವಿದು ಎಂದು ಗೊತ್ತಾಯಿತು. ರಾಜ್ಯದಿಂದ ಕೊಟ್ಟಿದ್ದೆಷ್ಟು ? ಎಂಬುದನ್ನು ತಿಳಿಸಬೇಕು ಎಂದರು.
    ವಿಕಸಿತ ಭಾರತ ಜಟಾಪಟಿ
    ಕೇಂದ್ರ ಸರ್ಕಾರದ 78 ಯೋಜನೆಗಳ ಬಗ್ಗೆ ಜನರಿಗೆ ಮಾಹಿತಿ ನೀಡುವ ಉದ್ದೇಶದಿಂದ ವಿಕಸಿತ ಭಾರತ ಕಾರ್ಯಕ್ರಮದಡಿ ಪ್ರತಿ ಎರಡು ಗ್ರಾ.ಪಂ.ಗೊಂದರಂತೆ ವಾಹನ ಕಳುಹಿಸಿ ಪ್ರಚಾರ ಮಾಡುವುದಾಗಿತ್ತು. ಈ ಕಾರ್ಯಕ್ರಮಕ್ಕೆ ಕೇಂದ್ರ ಸಚಿವರು ಚಾಲನೆ ನೀಡಿದರೆ, ಸಂಸದರು ಹಾಜರಾಗಿದ್ದರು. ಆದರೆ ಯಾವೊಬ್ಬ ಅಧಿಕಾರಿಯೂ ಹಾಜರಾಗಿದ್ದಿಲ್ಲ.
    ಪಂಚಾಯಿತಿಮಟ್ಟದ ಕಾರ್ಯಕ್ರಮಗಳಿಗೂ ಜಿಲ್ಲಾಧಿಕಾರಿ, ಜಿ.ಪಂ. ಸಿಇಒ ಕೂಡಾ ಹಾಜರಾಗಿಲ್ಲ. ಕಾರಣ ತಿಳಿದುಕೊಳ್ಳಲು ಪ್ರಯತ್ನಿಸಿದಾಗ ಸಿಎಂ ಕಚೇರಿಯಿಂದಲೇ ಹಾಜರಾಗಬೇಡಿ ಎಂಬ ಸೂಚನೆ ನೀಡಿರುವುದು ತಿಳಿಯಿತು ಎಂದು ಕೋಟ ಶ್ರೀನಿವಾಸ ಪೂಜಾರಿ ಗಂಭೀರ ಆರೋಪ ಮಾಡಿದರು.
    ಕಾಂಗ್ರೆಸ್‌ನ ಅನಿಲ್‌ಕುಮಾರ್ ಇದನ್ನು ಸಾಬೀತುಪಡಿಸಬೇಕು. ಯಾವ ಡಿಸಿ ಹಾಗೆ ಹೇಳಿದ್ದೆಂಬುದು ಬಹಿರಂಗಪಡಿಸಬೇಕು, ಶಾಸಕರಿಗೆ ಆಹ್ವಾನಿಸಿದ್ದನ್ನು ತಿಳಿಸಬೇಕು ಎಂದು ಒತ್ತಾಯಿಸಿದರೆ, ಕೇಂದ್ರ ಸರ್ಕಾರದ ಪ್ರಮೋಷನ್ ಕಾರ್ಯಕ್ರಮವೆಂದು ಸಚಿವ ಪ್ರಿಯಾಂಕ್ ಖರ್ಗೆ ಕುಟುಕಿದ್ದು ಮಾತಿನ ಜಟಾಪಟಿಗೆ ಕಾರಣವಾಯಿತು.
    ಬಿಜೆಪಿಯ ಡಿ.ಎಸ್.ಅರುಣ್ ಈ ಕಾರ್ಯಕ್ರಮಕ್ಕೆ ಆಹ್ವಾನ ಇಲ್ಲದಿದ್ದರೂ ನಾನು ಹೋಗಿದ್ದೆ. ಬ್ಯಾಂಕ್ ಅಧಿಕಾರಿ ಬಿಟ್ಟರೆ ಪಿಡಿಒ ಕೂಡ ಬಂದಿಲ್ಲವೆಂದರು. ಸಭಾಪತಿ ಬಸವರಾಜ ಹೊರಟ್ಟಿ ಈ ವಿಷಯದ ಚರ್ಚೆಗೆ ತೆರೆ ಎಳೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts