More

    ಅಕ್ರಮ ಗಣಿಗಾರಿಕೆ ಪತ್ತೆಗೆ ಡ್ರೋನ್..!

    ರಾಮನಗರ : ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚುವ ಸಲುವಾಗಿ ಡ್ರೋನ್ ಮೂಲಕ ಸರ್ವೇ ನಡೆಸಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮುಂದಾಗಿದೆ.
    ಜಿಲ್ಲೆಯ ಗಣಿಗಾರಿಕೆ ರಾಜ್ಯಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ನಡುವೆ ಜಿಲ್ಲೆಯಲ್ಲಿ ಎಲ್ಲೆಡೆ ಅಕ್ರಮ ಗಣಿಗಾರಿಕೆ ನಿಯಂತ್ರಣವಿಲ್ಲದೆ ಸಾಗುತ್ತಿದೆ ಎನ್ನುವ ದೂರುಗಳು ವ್ಯಾಪಕವಾಗಿವೆ. ಈ ಹಿನ್ನೆಲೆಯಲ್ಲಿ ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚಲು ಡ್ರೋನ್ ಸರ್ವೇ ಕಾರ್ಯಕ್ಕೆ ಸಿದ್ಧತೆ ನಡೆಯುತ್ತಿದೆ.

    ಟೆಂಡರ್ ಅಂತಿಮ ಹಂತ: ಜಿಲ್ಲೆಯಲ್ಲಿ ಗಣಿಗಾರಿಕೆಗೆ ಸಂಬಂಧಿಸಿದ ಸಂಪೂರ್ಣ ನಕ್ಷೆಯನ್ನೊಳಗೊಂಡ ಮಾಹಿತಿ ಹಾಗೂ ಈಗಾಗಲೇ ಅನುಮತಿ ನೀಡಿರುವ ಗಣಿಗಾರಿಕೆ ಕೇಂದ್ರಗಳು ತಮ್ಮ ವ್ಯಾಪ್ತಿ ಮೀರಿರುವುದನ್ನು ಪತ್ತೆ ಹಚ್ಚಲು ಡ್ರೋನ್ ಸರ್ವೇ ನಡೆಸಲಾಗುತ್ತದೆ. ಈ ಕಾರ್ಯಕ್ಕೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದ್ದು, 2 ಕಂಪನಿಗಳು ಟೆಂಡರ್‌ನಲ್ಲಿ ಪಾಲ್ಗೊಂಡಿವೆ.

    ಕೆಲವೇ ದಿನಗಳಲ್ಲಿ ಟೆಂಡರ್ ಪೂರ್ಣಗೊಳ್ಳಲಿದೆ. ಇದಾದ ನಂತರ ಡ್ರೋನ್ ಸರ್ವೇ ಆರಂಭಗೊಳ್ಳಲಿದೆ. ಈ ವೇಳೆ ಸರ್ವೇ ನಂಬರ್ ಸಹಿತವಾದ ಮಾಹಿತಿ ಲಭ್ಯವಾಗಲಿದ್ದು, ಅಕ್ರಮಕ್ಕೆ ಬ್ರೇಕ್ ಬೀಳಿಲಿದೆ ಎನ್ನುವುದು ಅಧಿಕಾರಿಗಳ ನಂಬಿಕೆ.

    ಅಕ್ರಮ ಹೇಗೆ: ಜಿಲ್ಲೆಯಲ್ಲಿ ಅಲಂಕಾರಿಕ ಶಿಲೆ, ಕಟ್ಟಡ ಕಲ್ಲು, ಕ್ರಷರ್ ಹೀಗೆ ಮೂರು ವಿಧದ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ. ಆದರೆ ಇಂತಿಷ್ಟೇ ಸರ್ವೇ ನಂಬರ್‌ಗಳಲ್ಲಿಯೇ ಗಣಿಗಾರಿಕೆ ನಡೆಸಬೇಕು ಎನ್ನುವ ಷರತ್ತಿನೊಂದಿಗೆ ಗಣಿಗಾರಿಕೆಗೆ ಅನುಮತಿ ನೀಡಲಾಗುತ್ತದೆ.

    ಆದರೆ ಯಾವುದೋ ಒಂದು ಸರ್ವೇ ನಂಬರ್‌ಗೆ ಅನುಮತಿ ಪಡೆಯುವ ಮಾಲೀಕರು ಮತ್ತೊಂದು ಸರ್ವೇ ನಂಬರ್‌ನಲ್ಲಿ ಗಣಿಗಾರಿಕೆ ನಡೆಸಿ ಸರ್ಕಾರಕ್ಕೆ ಸೇರಬೇಕಾದ ರಾಜಧನ ತಪ್ಪುವಂತೆ ಮಾಡುತ್ತಾರೆ.

    ಸಂಗ್ರಹ ಹೇಗೆ: ಬಹುತೇಕ ಕ್ರಷರ್‌ಗಳು ಮತ್ತು ಗಣಿಗಾರಿಕೆಯಲ್ಲಿ ಸ್ಫೋಟಕಗಳನ್ನು ಬಳಕೆ ಮಾಡಲಾಗುತ್ತದೆ. ಬಳಕೆ ಮಾಡಬೇಕಾದರೆ ಸ್ಥಳೀಯ ಕ್ರಷರ್ ಇಲ್ಲವೇ ಗಣಿಯಲ್ಲಿ ಎಷ್ಟು ಪ್ರಮಾಣದ ಸ್ಪೋಟಕಗಳನ್ನು ಬಳಕೆ ಮಾಡುತ್ತಾರೆ ಎನ್ನುವ ಬಗ್ಗೆ ಸ್ಥಳ ಪರಿಶೀಲನೆ ನಡೆಸಲಾಗುತ್ತದೆ. ನಂತರ ಪರವಾನಗಿ ಪಡೆದ ಸ್ಫೋಟಕ ಸಾಮಗ್ರಿಗಳ ಸರಬರಾಜುದಾರರು ಎಕ್ಸ್‌ಪ್ಲೋಸೀವ್ ಕಾಯ್ದೆಯಡಿ ಸ್ಫೋಟಕ ಸಾಮಗ್ರಿಗಳನ್ನು ಪೂರೈಕೆ ಮಾಡುತ್ತಾರೆ.

    ಜಿಲ್ಲೆಯಲ್ಲಿ ಇದರ ಸ್ಫೋಟಕಗಳನ್ನು ಪೂರೈಕೆ ಮಾಡುವ ಪರವಾನಗಿ ಹೊಂದಿರುವ 3 ಏಜೆನ್ಸಿಗಳಿವೆ ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಮಾಹಿತಿ. ಆದರೆ ಇದರ ಹೊರತಾಗಿಯೂ ಸ್ಫೋಟಕಗಳು ಪತ್ತೆಯಾಗುತ್ತಿರುವುದು ಆತಂಕ ಹೆಚ್ಚಿಸಿದ್ದು, ಈ ಬಗ್ಗೆ ಜಿಲ್ಲಾಡಳಿತ ಹೆಚ್ಚಿನ ಗಮನಹರಿಸಿ ಅನಾಹುತ ತಪ್ಪಿಸಬೇಕಿದೆ.

    ಸ್ಫೋಟಕ ಬಳಕೆಗೆ ತಡೆಬಿದ್ದಂತೆ ಕಾಣುತ್ತಿಲ್ಲ : ಶಿವಮೊಗ್ಗದ ಹುಣಸಗೋಡು ಮತ್ತು ಚಿಕ್ಕಬಳ್ಳಾಪುರದ ಗೌರಿಬಿದನೂರಿನಲ್ಲಿ ಗಣಿಗಾರಿಕೆಗೆ ಬಳಸುವ ಸ್ಫೋಟಕಗಳು ಸಿಡಿದು ಹಲವು ಮಂದಿ ಮೃತಪಟ್ಟ ನಂತರವೂ ಜಿಲ್ಲೆಯಲ್ಲಿ ಅಕ್ರಮ ಸ್ಫೋಟಕಗಳ ಬಳಕೆಗೆ ತಡೆಬಿದ್ದಂತೆ ಕಾಣುತ್ತಿಲ್ಲ.

    ಬಿಡದಿ ಹೋಬಳಿಯ ಉರಗಳ್ಳಿ ಮತ್ತು ಎಂಜಿ ಪಾಳ್ಯ ಸುತ್ತಮುತ್ತ ನಡೆಯುತ್ತಿರುವ ಗಣಿಗಾರಿಕೆಗೆ ಅಕ್ರಮವಾಗಿ ಸ್ಫೋಟಕಗಳನ್ನು ಬಳಕೆ ಮಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.ನೈಟ್ರೈಟ್, ಸ್ಫೋಟಕ್ಕೆ ಬಳಸುವ ವೈರ್‌ಗಳು ಹೀಗೆ ಹಲವಾರು ವಸ್ತುಗಳು ಪತ್ತೆಯಾಗಿದ್ದು, ಈ ಬಗ್ಗೆ ಪ್ರಶ್ನೆ ಮಾಡಿದರೆ ಅಲ್ಲಿದ್ದವರು ಸರಿಯಾದ ಮಾಹಿತಿ ನೀಡದ ದೃಶ್ಯವನ್ನು ವ್ಯಕ್ತಿಯೊಬ್ಬರೂ ಚಿತ್ರೀಕರಿಸಿದ್ದಾರೆ.

    ಜಿಲ್ಲೆಯಲ್ಲಿ ಅಕ್ರಮ ಗಣಿಗಾರಿಕೆ ಪತ್ತೆ ಹಚ್ಚಲು ಡ್ರೋನ್ ಸರ್ವೇ ನಡೆಯಲಿದೆ. ಟೆಂಡರ್ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರವೇ ಸರ್ವೇ ನಡೆಯಲಿದೆ.
    ಸುಮಿತ್ರಾ ಉಪನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ರಾಮನಗರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts