More

    ಸಾವಿರಾರು ಲೀ. ನೀರು ಪೋಲು

    ಭರತ್ ಶೆಟ್ಟಿಗಾರ್ ಮಂಗಳೂರು
    ಜಲಸಿರಿ ಯೋಜನೆಯಲ್ಲಿ ದಿನದ 24 ಗಂಟೆ ನೀರು ಪೂರೈಕೆ ಮಾಡುವುದಾಗಿ ಹೇಳುತ್ತಿರುವ ಮಹಾನಗರ ಪಾಲಿಕೆ, ಇನ್ನೊಂದೆಡೆ ನಗರದ ವಿವಿಧೆಡೆ ಪೈಪ್ ಒಡೆದು ಪೋಲಾಗುತ್ತಿರುವ ನೀರಿನ ಕುರಿತಂತೆ ನಿರ್ಲಕ್ಷೃ ವಹಿಸುತ್ತಿದೆ. ಇದಕ್ಕೆ ಸ್ಪಷ್ಟ ಉದಾಹರಣೆ ನಗರದ ಕರಂಗಲ್ಪಾಡಿ ಬಳಿ ಮುಖ್ಯರಸ್ತೆಯಲ್ಲೇ ಕಾಣಬಹುದಾಗಿದೆ.

    ಕುದ್ಮುಲ್ ರಂಗರಾವ್ ರಸ್ತೆಯ ಅಲೋಶಿಯಸ್ ಹಿರಿಯ ಪಾಥಮಿಕ ಶಾಲೆ ಗೇಟ್ ಮುಂಭಾಗದಲ್ಲಿ ಕಳೆದ ಹಲವು ತಿಂಗಳಿನಿಂದ ನೀರು ಹರಿದು ಹೋಗುತ್ತಿದೆ. ಆದರೆ ಸಂಬಂಧಪಟ್ಟ ಕಾರ್ಪೋರೇಟರ್, ನೀರು ಸರಬರಾಜು ಅಧಿಕಾರಿಗಳ ಗಮನಕ್ಕೆ ಇನ್ನೂ ಬಂದಂತಿಲ್ಲ. ಸಣ್ಣ ಪ್ರಮಾಣದಲ್ಲಿ ನೀರು ಹೊರಬರುತ್ತಿದೆಯಾದರೂ, ಎರಡು ತಿಂಗಳಿನಿಂದ ಸಾವಿರಾರು ಲೀಟರ್‌ನಷ್ಟು ನೀರು ವ್ಯರ್ಥವಾಗಿದೆ. ಆದರೂ ದುರಸ್ತಿಗೆ ಮುಂದಾಗದಿರುವುದರ ಕುರಿತು ಸ್ಥಳೀಯರು, ಪಾದಚಾರಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಕಾಂಕ್ರೀಟ್ ರಸ್ತೆ ಅಡಿಯಲ್ಲಿ ಪೈಪ್ ಒಡೆದು ಅಲ್ಲೇ ಇರುವ ವಿದ್ಯುತ್ ಕಂಬದ ಬುಡದಿಂದ ನೀರು ಹೊರಕ್ಕೆ ಬರುತ್ತಿದೆ. ಹೀಗೆ ಹೊರ ಬಂದ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ಬದಿಯಲ್ಲೇ ಸಂಗ್ರಹಗೊಂಡಿದೆ. ಕಾಂಕ್ರೀಟ್ ರಸ್ತೆಯಾಗಿರುವುದರಿಂದ ನೀರು ಇಂಗುತ್ತಿಲ್ಲ. ಜತೆಗೆ ಮರ, ನೆರಳಿನ ಪ್ರದೇಶವೂ ಆಗಿರುವುರಿಂದ ಬಿಸಿಲಿಗೆ ಆವಿಯಾಗುವುದೂ ಇಲ್ಲ. ಸಂಗ್ರಹಗೊಂಡಲ್ಲಿಂದಲೂ ಮುಂದಕ್ಕೆ ಹರಿದು ಹೋಗಿದ್ದು, ಅಲ್ಲಿ ಮರದ ಎಲೆ, ಮಣ್ಣು ಸೇರಿ ಕೊಳೆತು ಕಪ್ಪು ನೀರು ನಿಂತಿದೆ. ಸೊಳ್ಳೆ ಉತ್ಪತ್ತಿ ತಾಣವಾಗಿಯೂ ಬದಲಾಗಿದೆ.

    ಪೂರ್ಣಗೊಳ್ಳದ ಫುಟ್‌ಪಾತ್ ಕೆಲಸ: ಕುದ್ಮುಲ್ ರಂಗರಾವ್ ರಸ್ತೆಯಲ್ಲಿ ಪಿವಿಎಸ್ ಕಡೆಯಿಂದ ಫುಟ್‌ಪಾತ್ ಕಾಮಗಾರಿ ನಡೆದಿದೆಯಾದರೂ, ಕೋರ್ಟ್ ರಸ್ತೆಯಿಂದ ಸ್ವಲ್ಪ ಮುಂದಕ್ಕೆ ಅರೆಬರೆ ಕೆಲಸ ಮಾತ್ರ ಆಗಿದೆ. ಕಾಂಕ್ರೀಟ್ ಕಾಮಗಾರಿಗೆ ಬಳಸುವ ಕಬ್ಬಿಣದ ರಾಡ್‌ಗಳು ರಸ್ತೆ ಬದಿಯಲ್ಲೇ ತುಕ್ಕುಹಿಡಿಯುತ್ತಿದೆ. ರಸ್ತೆ ಬದಿಗೆ ಇತ್ತೀಚೆಗಷ್ಟೇ ಕಾಂಕ್ರೀಟ್ ಹಾಕಲಾಗಿದ್ದು, ನೀರಿನ ಪೈಪ್ ಕುರಿತ ನಿರ್ಲಕ್ಷೃ ಪರಿಣಾಮ ಮತ್ತೆ ಅಗೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಒಳ ಚರಂಡಿ, ನೀರಿನ ಪೈಪ್‌ಲೈನ್ ದುರಸ್ತಿ ಕಾರಣಕ್ಕಾಗಿ ಈ ರಸ್ತೆಯನ್ನು ಈಗಾಗಲೇ ಹಲವು ಬಾರಿ ಅಗೆಯಲಾಗಿದೆ.

    ಎಚ್ಚರ ತಪ್ಪಿದರೆ ಅಪಘಾತ: ನೀರು ಪೋಲಾಗುತ್ತಿರುವ ಸ್ಥಳ ಅಪಘಾತಕ್ಕೂ ಕಾರಣವಾಗಬಹುದು. ಕಾಂಕ್ರೀಟ್ ರಸ್ತೆಯ ಬದಿಯಲ್ಲೇ ನೀರು ಸಂಗ್ರಹಗೊಂಡಿದ್ದು, ಇದರಿಂದ ಪಾದಚಾರಿಗಳು ವಾಹನ ಸಂಚರಿಸುವ ಭಾಗದಲ್ಲೇ ನಡೆದುಕೊಂಡು ಹೋಗಬೇಕಾಗಿದೆ. ಮುಖ್ಯರಸ್ತೆಯಾಗಿರುವುದರಿಂದ ಇಲ್ಲಿ ವಾಹನ ದಟ್ಟಣೆ ಸಾಮಾನ್ಯವಾಗಿದೆ. ಆದ್ದರಿಂದ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಖಚಿತ.

    ಕುಡಿಯುವ ನೀರು ರಸ್ತೆಯಲ್ಲಿ ವ್ಯರ್ಥವಾಗಿ ಹರಿದು ಹೋಗುತ್ತಿರುವ ವಿಚಾರ ಗಮನಕ್ಕೆ ಬಂದಿದೆ. ನೀರು ಸರಬರಾಜು ವಿಭಾಗದ ಇಂಜಿನಿಯರ್‌ಗಳ ಬಳಿ ದುರಸ್ತಿಗೆ ಕ್ರಮಕೈಗೊಳ್ಳುವಂತೆ ಸೂಚಿಸಲಾಗಿದೆ.
    ದಿವಾಕರ ಪಾಂಡೇಶ್ವರ, ಮೇಯರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts