More

  ಕಣಿವೆಯಲ್ಲಿ ಮತೋತ್ಸಾಹ, ಪರಿವರ್ತನೆಗೆ ನೈಜ ಸಾಕ್ಷಿ

  | ರಾಘವ ಶರ್ಮ ನಿಡ್ಲೆ, ನವದೆಹಲಿ

  ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ಹಿಂಪಡೆದ ನಂತರ ನಡೆದ ಮೊದಲ ಮಹತ್ವದ ಚುನಾವಣೆಯಲ್ಲಿ ಕಾಶ್ಮೀರ ವ್ಯಾಪ್ತಿಯ ಶ್ರೀನಗರ ಮತ್ತು ಬಾರಾಮುಲ್ಲಾ ಲೋಕಸಭೆ ಕ್ಷೇತ್ರಗಳ ಜನರು ಮತದಾನದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದು, ಮುಂಬರುವ ವಿಧಾನಸಭೆ ಚುನಾವಣೆ ಬಗ್ಗೆ ಕುತೂಹಲ ಹೆಚ್ಚಿದೆ.

  ಅತ್ಯಧಿಕ ಮತದಾನ ಪ್ರಮಾಣಕ್ಕೆ ಸಂತಸ ವ್ಯಕ್ತಪಡಿಸಿರುವ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್, ‘ಶೀಘ್ರದಲ್ಲಿ ವಿಧಾನಸಭೆ ಚುನಾವಣೆಗಳನ್ನು ನಡೆಸಲು ಇದು ಪೂರಕವಾಗಿದೆ’ ಎಂದು ತಿಳಿಸಿದ್ದಾರೆ. ಅಂದರೆ, ಲೋಕಸಭೆ ಚುನಾವಣೆಗಳು ಪೂರ್ಣಗೊಂಡ ಕೆಲವೇ ತಿಂಗಳಲ್ಲಿ ಕಣಿವೆಯಲ್ಲಿ ವಿಧಾನಸಭೆ ಚುನಾವಣೆಗಳು ನಡೆಯುವುದು ಬಹುತೇಕ ನಿಶ್ಚಿತವಾದಂತಿದೆ. ಸುಪ್ರೀಂಕೋರ್ಟ್ ಕೂಡ 2024ರ ಸೆಪ್ಟೆಂಬರ್ ಒಳಗಾಗಿ ವಿಧಾನಸಭೆ ಚುನಾವಣೆ ನಡೆಸಬೇಕು ಎಂಬ ಗಡುವು ನೀಡಿರುವುದು ಉಲ್ಲೇಖಾರ್ಹ.

  ಶ್ರೀನಗರ ಮತ್ತು ಬಾರಾಮುಲ್ಲಾ ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಹೆಚ್ಚಿರುವುದು ಜಮ್ಮು-ಕಾಶ್ಮೀರದ ನೈಜ ಬದಲಾವಣೆಗೆ ಸಾಕ್ಷಿ ಎಂದು ವಿಶ್ಲೇಷಿಸಲಾಗುತ್ತಿದೆ. ಬಾರಾಮುಲ್ಲಾ ಲೋಕಸಭೆ ಕ್ಷೇತ್ರದಲ್ಲಂತೂ 1984ರ (61%) ನಂತರ ಮೊದಲ ಬಾರಿಗೆ ಅತಿಹೆಚ್ಚು (56.73%) ಪ್ರಮಾಣದಲ್ಲಿ ಮತದಾನ ನಡೆದಿದೆ. ಶ್ರೀನಗರ ಕ್ಷೇತ್ರ 36.58% ಮತದಾನಕ್ಕೆ ಸಾಕ್ಷಿಯಾಗಿದೆ. ಮಾಜಿ ಸಿಎಂ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಸ್ಪರ್ಧಿಸುತ್ತಿರುವ ಅನಂತ್​ನಾಗ್-ರಜೌರಿ ಲೋಕಸಭೆ ಕ್ಷೇತ್ರಕ್ಕೆ ಮೇ 25ರಂದು ಮತದಾನ ನಡೆಯಲಿದೆ.

  2019ರಲ್ಲಿ ಶ್ರೀನಗರ ಲೋಕಸಭೆಯಲ್ಲಿ ಕೇವಲ ಶೇ.14.4ರಷ್ಟು ಮತದಾನ ದಾಖಲಾಗಿತ್ತು. ಈ ಬಾರಿ ಅದು ಶೇ.38ಕ್ಕೇರಿದೆ. 1989-90ರಲ್ಲಿ ಪ್ರಾರಂಭವಾದ ಭಯೋತ್ಪಾದಕ ಮತ್ತು ಪ್ರತ್ಯೇಕತಾವಾದಿ ಹಿಂಸಾಚಾರಗಳಿಂದಾಗಿ ನಿತ್ಯವೂ ಜನರು ಭಯದ ನೆರಳಲ್ಲೇ ದಿನದೂಡುತ್ತಿದ್ದರು. ಈಗಲೂ ಉಗ್ರಗಾಮಿ ಚಟುವಟಿಕೆ ಕೆಲವೆಡೆ ಸದ್ದು ಮಾಡುತ್ತಿದ್ದರೂ, ಐದು ವರ್ಷಗಳಲ್ಲಿ ಅದು ಇಳಿಮುಖ ಕಂಡಿರುವುದು ವಾಸ್ತವ.

  ಶ್ರೀನಗರ ವ್ಯಾಪ್ತಿಯಲ್ಲಿನ ಬುದ್ಗಾಮ್ ಪುಲ್ವಾಮ, ಶೋಪಿಯಾನ್ ಸೇರಿ ಸುತ್ತಮುತ್ತಲಿನ ಪ್ರದೇಶಗಳು ತೀವ್ರಗಾಮಿ ಚಟುವಟಿಕೆಗಳಿಗೆ ಕುಖ್ಯಾತಿಯಾಗಿದ್ದವು. ಇದು ಮತದಾನದ ಮೇಲೂ ಪರಿಣಾಮ ಬೀರುತ್ತಿತ್ತು. ಉಗ್ರರ ದಾಳಿ, ಬಾಂಬ್ ಸ್ಪೋಟ, ರಾಜಕೀಯ ಕಾರ್ಯಕರ್ತರ ಅಪಹರಣದಂತಹ ದುಷ್ಕೃತ್ಯಗಳಿಂದಾಗಿ ಜನರು ಮುಖ್ಯವಾಗಿ ಲೋಕಸಭೆ ಚುನಾವಣೆಯ ಮತದಾನದಿಂದ ದೂರವುಳಿಯುತ್ತಿದ್ದರು. ಕಲ್ಲುತೂರಾಟಗಳೂ ತಲೆನೋವಾಗಿ ಕಾಡಿದ್ದವು. ಆದರೆ, ಪ್ರವಾಸೋದ್ಯಮ, ಬಂಡವಾಳ ಹೂಡಿಕೆ, ಹೆಚ್ಚಿದ ಭದ್ರತೆಯಿಂದಾಗಿ ಕಣಿವೆ ಬದಲಾವಣೆಗೆ ತೆರೆದುಕೊಂಡಿದೆ. 370 ರದ್ದತಿ ಕಣಿವೆಯಲ್ಲಿ ಹೊಸ ಅಧ್ಯಾಯವೊಂದನ್ನು ತೆರೆದಿದೆ. ಮತದಾನ ಪ್ರಮಾಣ ಹೆಚ್ಚಳವೆಂದ ಮಾತ್ರಕ್ಕೆ ಅದನ್ನು ಭಾರತದ ಮೇಲಿನ ಪ್ರೀತಿ, ಅಭಿಮಾನ ಎಂದೇ ವಿಶ್ಲೇಷಿಸಬೇಕಿಲ್ಲ. ಈ ಹೆಚ್ಚಳಕ್ಕೆ ಎರಡು ಆಯಾಮಗಳಿವೆ ಎಂಬ ಅಭಿಪ್ರಾಯಗಳೂ ಇವೆ. ಮೊದಲನೆಯದಾಗಿ, ವಿಶೇಷ ಸ್ಥಾನಮಾನ ಹಿಂಪಡೆದ ಬಳಿಕ ಜಮ್ಮು-ಕಾಶ್ಮೀರದಲ್ಲಿ ಉಗ್ರರ ಉಪಟಳ ಕಡಿಮೆಯಾಗಿ, ಪ್ರವಾಸೋದ್ಯಮದಲ್ಲೂ ಸುಧಾರಣೆಯಾಗಿದೆ. ಇದು ಸ್ಥಳೀಯರಲ್ಲಿ ಭಯ-ಭೀತಿಯ ವಾತಾವರಣವನ್ನು ತಗ್ಗಿಸಿ, ಮತದಾನದಲ್ಲೂ ನಿರಾತಂಕದಿಂದ ಪಾಲ್ಗೊಳ್ಳುವಂತೆ ಮಾಡಿದೆ. ಎರಡನೆಯದಾಗಿ, ಜಮ್ಮು-ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ಸ್ಥಳೀಯ ರಾಜಕೀಯ ಪಕ್ಷಗಳನ್ನು ಬಲವಾಗಿ ಬೆಂಬಲಿಸುವ ಮತವರ್ಗ ಈಗಲೂ ವಿರೋಧಿಸುತ್ತಿದೆ. ಜಮ್ಮು-ಕಾಶ್ಮೀರದ ಹೃದಯವನ್ನೇ ಕೇಂದ್ರ ಸರ್ಕಾರ ಕಿತ್ತುಕೊಂಡಿದೆ ಎಂಬ ಆಕ್ರೋಶ ಹಲವರಲ್ಲಿದೆ. ಮೇಲಾಗಿ, ಪಿಡಿಪಿ, ನ್ಯಾಷನಲ್ ಕಾನ್ಪರೆನ್ಸ್ ಚುನಾವಣೆ ಪ್ರಚಾರದಲ್ಲಿ 370 ವಿಧಿ ಮರುಸ್ಥಾಪನೆಯನ್ನೇ ರ್ಚಚಿಸಿವೆ. ಹೀಗಾಗಿ, ‘ನಮ್ಮ ಆಕ್ರೋಶದ ಧ್ವನಿಯನ್ನು ದೆಹಲಿಗೆ ತಲುಪಿಸಲು ಮತದಾನವೇ ಸೂಕ್ತ ವೇದಿಕೆ ಎಂದು ಮತಹಾಕಲು ಜನ ಹೊರಬಂದಿದ್ದಾರೆ’ ಎಂಬ ಮಾತುಗಳೂ ಕೇಳಿಬಂದಿವೆ.

  ಕಾಶ್ಮೀರ ವ್ಯಾಪ್ತಿಯ ಬಾರಾಮುಲ್ಲಾ, ಶ್ರೀನಗರ, ಅನಂತ್​ನಾಗ್-ರಜೌರಿ ಸೇರಿ ಮೂರೂ ಲೋಕಸಭೆ ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಹಾಕಿಲ್ಲ. ಬದಲಿಗೆ, ಪಿಡಿಪಿ, ನ್ಯಾಷನಲ್ ಕಾನ್ಪರೆನ್ಸ್​ಗೆ ಸೇರದ ಇತರ ಸ್ಥಳೀಯ ಸಣ್ಣ ಪಕ್ಷಗಳ ಅಭ್ಯರ್ಥಿಗಳನ್ನು ತೆರೆಮರೆಯಲ್ಲಿ ಬೆಂಬಲಿಸಿದೆ. ಅಂದರೆ, ಕಣಿವೆಯ ಸಣ್ಣಪುಟ್ಟ ಪಕ್ಷಗಳ ಮೇಲೆ ವಿಶ್ವಾಸ ಇರಿಸಿ, ಮುನ್ನಡೆಯುವ ಇಚ್ಛಾಶಕ್ತಿಯನ್ನು ಬಿಜೆಪಿ ಪ್ರದರ್ಶಿಸಿದೆ. ಬಿಜೆಪಿ ಬೆಂಬಲ ಪಡೆದುಕೊಂಡಿರುವ ಪಕ್ಷಗಳು ಚುನಾವಣೆ ಪ್ರಚಾರದಲ್ಲಿ ಬಿಜೆಪಿ ಅಥವಾ ಪ್ರಧಾನಿ ನರೇಂದ್ರ ಮೋದಿ ನಾಯಕತ್ವದ ಬಗ್ಗೆ ಎಲ್ಲೂ ಪ್ರಸ್ತಾಪಿಸಿಲ್ಲ. ಬಿಜೆಪಿ ಬಗ್ಗೆ ಹೆಚ್ಚಿನ ಒಲವು ಇಲ್ಲದಿರುವುದೇ ಇದಕ್ಕೆ ಮುಖ್ಯ ಕಾರಣ. ಆದರೆ, ಜಮ್ಮುವಿನಲ್ಲಿ ಹಾಗಿಲ್ಲ. ಜಮ್ಮು ಮತ್ತು ಉಧಮ್ುರ ಲೋಕಸಭೆ ಕ್ಷೇತ್ರಗಳಲ್ಲಿ 2014 ಮತ್ತು 2019ರಲ್ಲಿ ಬಿಜೆಪಿ ಅಭ್ಯರ್ಥಿಗಳೇ ಆಯ್ಕೆಯಾಗಿದ್ದಾರೆ.

  ಕಣಿವೆಯಲ್ಲಿ ಮತೋತ್ಸಾಹ, ಪರಿವರ್ತನೆಗೆ ನೈಜ ಸಾಕ್ಷಿ

  ಕಾಶ್ಮೀರಕ್ಕೆ ಐತಿಹಾಸಿಕ ಸಂದರ್ಭವಿದು. ಬಾರಾಮುಲ್ಲಾ ಲೋಕಸಭಾ ಕ್ಷೇತ್ರ ಕಳೆದ ಲೋಕಸಭಾ ಚುನಾವಣೆಗಳಿಗೆ ಹೋಲಿಸಿದರೆ ಸರಿಸುಮಾರು 20% ಹೆಚ್ಚಿನ ಮತದಾನ ದಾಖಲಿಸಿದೆ. ಕಾಶ್ಮೀರದಲ್ಲಿ ಶಾಂತಿ, ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳಲು ಮೋದಿ ಸರ್ಕಾರದ ಪ್ರಯತ್ನಗಳು ಪ್ರಜಾಪ್ರಭುತ್ವದಲ್ಲಿ ಜನರ ನಂಬಿಕೆಯನ್ನು ಬಲಪಡಿಸಿದೆ. ಆರ್ಟಿಕಲ್ 370 ಹಿಂಪಡೆದ ನಂತರ ಏನು ಬದಲಾಗಿದೆ ಎಂದು ಕೇಳುವವರಿಗೆ ಇದಕ್ಕಿಂತ ಸೂಕ್ತ ಉತ್ತರ ಬೇಕಿಲ್ಲ.

  | ಅಮಿತ್ ಷಾ ಕೇಂದ್ರ ಗೃಹ ಸಚಿವ

  ಕಳೆದ 4-5 ವರ್ಷಗಳಿಂದ ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಿದ್ದು, ಗಣನೀಯ ಏರಿಕೆ ಕಂಡಿರುವ ಪ್ರವಾಸಿಗರ ಸಂಖ್ಯೆ ಹಾಗೂ ಹಾಲಿ ಲೋಕಸಭೆ ಚುನಾವಣೆಯಲ್ಲಿ ಮತದಾರರು ದೊಡ್ಡಮಟ್ಟದಲ್ಲಿ ಉತ್ಸಾಹದಿಂದ ಪಾಲ್ಗೊಂಡಿರುವುದು ಕಣಿವೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯ ಗೋಚರ ಸೂಚಕಗಳಾಗಿವೆ. ಇಂಥ ಅನುಕೂಲಕರ ವಾತಾವರಣದ ಹಳಿತಪ್ಪಿಸುವ ಯತ್ನಗಳನ್ನು ಎದುರಿಸಲು ಸಜ್ಜಾಗಿದ್ದೇವೆ. ಭದ್ರತೆಯಲ್ಲೂ ಗಮನಾರ್ಹ ಸುಧಾರಣೆ ಇಲ್ಲಿನ ಜನತೆಗೆ ಭಯದಿಂದ ಹೊರಬರುವಂತೆ ಮಾಡಿದೆ. ಪ್ರವಾಸಿಗರು, ರಾಜಕೀಯ ಕಾರ್ಯಕರ್ತರು ಮತ್ತು ಸಾಮಾನ್ಯ ನಾಗರಿಕರ ಸಂಪೂರ್ಣ ಸುರಕ್ಷತೆಗಾಗಿ ಕಾನೂನು-ಸುವ್ಯವಸ್ಥೆ ಕಾಪಾಡುವ ಏಜೆನ್ಸಿಗಳ ಸಂಘಟಿತ ಸಮನ್ವಯವನ್ನು ಖಚಿತಪಡಿಸಿಕೊಳ್ಳುವುದಕ್ಕೆ ಒತ್ತು ನೀಡಲಾಗುತ್ತಿದೆ.

  | ಅಟಲ್ ದುಲ್ಲೂ ಮುಖ್ಯ ಕಾರ್ಯದರ್ಶಿ, ಜಮ್ಮು-ಕಾಶ್ಮೀರ

  ತಮಿಳುನಾಡಿನ ಭಾರೀ ವರ್ಷಧಾರೆ: ಪಥನಾಂತಿಟ್ಟ, ಇಡುಕ್ಕಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts