More

    ಕರಾವಳಿಗಿಲ್ಲ ಈ ಬಾರಿ ನೀರಿನ ಅಭಾವ

    ಉಡುಪಿ: ನಗರಸಭೆ ಹಾಗೂ ಅದಕ್ಕೆ ಹೊಂದಿಕೊಂಡಿರುವ ಗ್ರಾಮ ಪಂಚಾಯಿತಿಗಳಿಗೆ ಕುಡಿಯುವ ನೀರು ಪೂರೈಸುತ್ತಿರುವ ಬಜೆ ಅಣೆಕಟ್ಟಿನಲ್ಲಿ ಪ್ರಸಕ್ತ 5.26 ಮೀಟರ್ ನೀರಿನ ಸಂಗ್ರಹವಿದ್ದು, ಈ ವರ್ಷ ನೀರಿನ ಸಮಸ್ಯೆ ಎದುರಾಗದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

    ಕಳೆದ ವರ್ಷ ಇದೇ ಅವಧಿಯಲ್ಲಿ ಬಜೆಯಲ್ಲಿ ನೀರಿನ ಸಂಗ್ರಹ 5.04 ಮೀಟರ್‌ನಷ್ಟಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ನೀರಿನ ಸಂಗ್ರಹ 21 ಸೆಂ.ಮೀ.ನಷ್ಟು ಹೆಚ್ಚಿದೆ. ಶಿರೂರಿನಲ್ಲಿ ಒಳ ಹರಿವು ಈಗಲೂ ಮುಂದುವರಿದಿದ್ದು, ಸದ್ಯಕ್ಕೆ ಶಿರೂರು ಮತ್ತು ಬಜೆ ಅಣೆಕಟ್ಟಿನಲ್ಲಿರುವ ನೀರಿನ ಸಂಗ್ರಹದಿಂದ ಮುಂದಿನ 55ರಿಂದ 60 ದಿನಗಳ ನೀರು ಪೂರೈಕೆ ಮಾಡಬಹುದಾಗಿದೆ.

    3 ವಲಯಗಳಾಗಿ ನೀರು ಪೂರೈಕೆ: ನಗರವನ್ನು 3 ವಲಯಗಳಾಗಿ ವಿಂಗಡಿಸಿ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರತಿ ವಲಯಕ್ಕೆ ತಲಾ 6 ಗಂಟೆ ನೀರು ಪೂರೈಸಲಾಗುತ್ತಿದೆ. ಪ್ರಸ್ತುತ 5.26 ಮೀಟರ್‌ನಲ್ಲಿ 1.26 ಡೆಡ್ ಸ್ಟೋರೇಜ್ ಆಗಿದ್ದು, 4 ಮೀಟರ್ ಮಾತ್ರ ನೀರನ್ನು ಪಂಪ್ ಮಾಡಲು ಸಾಧ್ಯ. ದಿನಕ್ಕೆ 10 ಸೆಂ.ಮೀ.ನಷ್ಟು ನೀರು ಪಂಪಿಂಗ್ ಮಾಡಿದರೂ 40 ದಿನ ನೀರು ಕೊಡಬಹುದು. ದಿನಕ್ಕೆ ಸರಾಸರಿ 6.7 ಸೆಂ.ಮೀ. ನೀರು ಖರ್ಚಾಗುತ್ತಿದೆ. ಆ ರೀತಿ ಲೆಕ್ಕಾಚಾರ ಹಾಕಿದರೆ 55-60 ದಿನಗಳಿಗೆ ಬೇಕಾಗುವಷ್ಟು ನೀರು ಲಭ್ಯವಿದೆ.
    ಜೂನ್ ತಿಂಗಳವರೆಗೆ ಮಳೆ ಬಾರದಿದ್ದರೆ ಬಜೆಯಿಂದ ಶಿರೂರುವರೆಗೆ ಸಾಣೆಕಲ್ಲು, ಪುತ್ತಿಗೆ, ಬ್ರಹ್ಮ ಹೊಂಡ, ಶಿರೂರು ಮಠ, ಭಂಡಾರಿಬೆಟ್ಟು ಸೇರಿದಂತೆ 7-8 ಕಡೆಗಳಲ್ಲಿ ದೊಡ್ಡ ದೊಡ್ಡ ಹೊಂಡಗಳಲ್ಲಿರುವ ನೀರನ್ನು ಬಳಸಿಕೊಳ್ಳಬಹುದು. ಈ ಹೊಂಡಗಳಲ್ಲಿ 10 ದಿನಗಳಿಗೆ ಬೇಕಾಗುವಷ್ಟು ನೀರಿನ ಸಂಗ್ರಹವಿದ್ದು, ಪಂಪಿಂಗ್ ಮಾಡಿ ಡ್ಯಾಂಗೆ ಹರಿಸಲು ಬೇಕಾಗುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

    ಸದ್ಯ ನಗರಕ್ಕೆ ನೀರು ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಿಲ್ಲ. ಮಳೆ ವಿಳಂಬವಾದರೆ ದೊಡ್ಡ ಹೊಂಡಗಳಲ್ಲಿ ಸಂಗ್ರಹವಾಗಿರುವ ನೀರನ್ನು ಪಂಪಿಂಗ್ ಮೂಲಕ ಡ್ಯಾಂಗೆ ಹರಿಸಲು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಕಳೆದ ವರ್ಷದಂತೆ ಈ ಬಾರಿಯೂ ಪ್ರತಿದಿನ ನೀರು ಪೂರೈಕೆ ಮಾಡಲು ಕ್ರಮಕೈಗೊಳ್ಳಲಾಗಿದೆ.
    – ಉದಯ ಶೆಟ್ಟಿ, ಪೌರಾಯುಕ್ತ, ಉಡುಪಿ ನಗರಸಭೆ

    ತುಂಬೆ, ಎಎಂಆರ್ ಡ್ಯಾಂಗಳೂ ಜಲಸಮೃದ್ಧ
    ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಹಾಗೂ ಹತ್ತಿರದ ಕೆಲ ಇತರ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯ ಪ್ರದೇಶಗಳಿಗೆ ಕುಡಿಯುವ ನೀರು ಪೂರೈಸುವ ತುಂಬೆ ಕಿಂಡಿ ಅಣೆಕಟ್ಟು ಮತ್ತು ತುರ್ತು ಸಂದರ್ಭ ಬಳಸುವ ಖಾಸಗಿ ಎಎಂಆರ್ ಅಣೆಕಟ್ಟುಗಳ ನೀರಿನ ಮಟ್ಟ ತೃಪ್ತಿಕರವಾಗಿದ್ದು, ಪಾಲಿಕೆಯ ಆಡಳಿತ ವರ್ಗ ಸದ್ಯ ನಿರಾಳವಾಗಿದೆ. ಘಟ್ಟ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಲ್ಲಿ ಬಿಟ್ಟುಬಿಟ್ಟು ಸುರಿದ ಮಳೆ ಈ ಭಾಗದಲ್ಲಿ ನೀರಿನ ಒರತೆ ಕಾಯ್ದುಕೊಳ್ಳಲು ಪೂರಕ ವಾತಾವರಣ ಸೃಷ್ಟಿಸಿದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
    ತುಂಬೆ ಕಿಂಡಿ ಅಣೆಕಟ್ಟಿನಲ್ಲಿ ಪ್ರಸ್ತುತ 5.77 ಮೀಟರ್ ನೀರು ಇದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 5.67 ಮೀ. ಇತ್ತು. ಎಎಂಆರ್ ಅಣೆಕಟ್ಟಿನಲ್ಲಿ ನೀರು ಇದ್ದು ಸಮಸ್ಯೆ ಇಲ್ಲ. ಸಾಮಾನ್ಯವಾಗಿ ಬೇಸಿಗೆ ಕೊನೆಯಲ್ಲಿ ತುಂಬೆ ಅಣೆಕಟ್ಟು ನೀರಿನ ಮಟ್ಟ ಕುಸಿತ ಸಂದರ್ಭ ಜಿಲ್ಲಾಡಳಿತ ನಿರ್ದೇಶನ ಪ್ರಕಾರ ಎಎಂಆರ್ ಅಣೆಕಟ್ಟು ನೀರನ್ನು ಸಾರ್ವಜನಿಕರ ಬಳಕೆಗೆ ಪೂರೈಸಲಾಗುತ್ತಿದೆ. ಈ ವರ್ಷ ಕುಡಿಯುವ ನೀರಿನ ಸಮಸ್ಯೆಯಾಗದು ಎಂದು ತಿಳಿಸಿದ್ದಾರೆ.
    ಕರಾವಳಿಯ ತಾಪಮಾನ ದಾಖಲೆ ಪ್ರಮಾಣದಲ್ಲಿ ಇದ್ದರೂ, ಗ್ರಾಮೀಣ ಪ್ರದೇಶದಲ್ಲಿ ಈ ತನಕ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಕುಡಿಯುವ ನೀರಿನ ಸಮಸ್ಯೆ ಎದುರಾಗಬಹುದಾದ ಗ್ರಾಮ ಪಂಚಾಯಿತಿಗಳ ಪಟ್ಟಿ ಸಿದ್ಧಪಡಿಸಿ ಕ್ರಿಯಾ ಯೋಜನೆ ರೂಪಿಸುವಂತೆ ಜಿಲ್ಲಾ ಪಂಚಾಯಿತಿ ಸಿಇಒ ಡಾ.ಕುಮಾರ್ ತಾಪಂ ಕಾರ್ಯನಿರ್ವಹಣಾ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts