More

    ಶುದ್ಧ ನೀರಿನ ದರ ದಿಢೀರ್ ಹೆಚ್ಚಳ ; ಭೂಬಾಲನ್ ವರ್ಗವಾದ ಬೆನ್ನಲ್ಲೇ ಶುರುವಾದ ದಂಧೆ

    ತುಮಕೂರು: ಐಎಎಸ್ ಅಧಿಕಾರಿ ಟಿ.ಭೂಬಾಲನ್ ವರ್ಗಾವಣೆಯಾದ ಬೆನ್ನಲ್ಲೇ ನಗರದ ಶುದ್ಧ ನೀರಿನ ಘಟಕಗಳಲ್ಲಿ ನಗರವಾಸಿಗಳಿಂದ ಹಣ ಕೀಳುವ ದಂಧೆ ಆರಂಭವಾಗಿದೆ.

    ನಗರದ ವಿವಿಧ ವಾರ್ಡ್‌ಗಳ 17 ಆರ್‌ಒ ಘಟಕಗಳ ನಿರ್ವಹಣೆ ಹೊತ್ತಿರುವ ಸಂಸ್ಥೆಗಳು ಸ್ಯಾನಿಟೈಸಿಂಗ್ ನೆಪ ಮುಂದಿಟ್ಟುಕೊಂಡು ಪಾಲಿಕೆ ಅನುಮತಿ ಇಲ್ಲದೆ ಜನರಿಗೆ 2ರೂ. ಹೆಚ್ಚಿಸಿ ಲಕ್ಷಾಂತರ ರೂಪಾಯಿ ವಂಚಿಸಲಾಗುತ್ತಿದೆ.

    ಗ್ರಾಹಕರ ಸ್ಪರ್ಶ ತಪ್ಪಿಸಲು ಅಳವಡಿಸಿರುವ ಮೀಟರ್ ಉದ್ದದ ಪೈಪು ಹಾಗೂ ಅಲ್ಲಿ ಕೆಲಸ ಮಾಡುವ ಒಬ್ಬ ಸಿಬ್ಬಂದಿ ಬಳಸುವ ಸ್ಯಾನಿಟೈಸರ್ ನೆಪ ಹೇಳಿಕೊಂಡು ಪ್ರತಿ ಗ್ರಾಹಕನಿಂದ 2ರೂ. ಹೆಚ್ಚು ವಸೂಲಿ ಮಾಡಲಾಗುತ್ತಿದೆ. 2ರೂ. ಅಷ್ಟೇ ಎಂದು ಭಾವಿಸಿ ಜನರು ಪ್ರಶ್ನಿಸುತ್ತಿಲ್ಲ. ಘಟಕಗಳಲ್ಲಿ ಬೋರ್ಡ್‌ಗಳನ್ನು ಕಿತ್ತುಹಾಕಿದ್ದು ಅವರು ಪಡೆದಷ್ಟೇ ದರವಾಗಿದೆ. ಕುಡಿಯುವ ನೀರಿನ ನೆಪದಲ್ಲಿ ಕರೊನಾ ಸಂಕಷ್ಟದಲ್ಲಿರುವ ಜನರಿಂದ ಸುಲಿಗೆಗೆ ನಿಂತಿದೆ.

    ಭೂಬಾಲನ್ ಈ ದಂಧೆ ತಡೆದಿದ್ದರು: ಎಲ್ಲರೂ ನಿರ್ಲಕ್ಷಿೃಸಿ ಜಾಣಮೌನವಾಗಿದ್ದ ನೀರಿನ ಮಾಫಿಯಾಗೆ ಐಎಎಸ್ ಅಧಿಕಾರಿ ಟಿ.ಭೂಬಾಬಲ್ ಕಡಿವಾಣ ಹಾಕಿದ್ದರು. ವಶಕ್ಕೆ ಪಡೆದು ನಿಯಮಗಳನ್ನು ಬಿಗಿಗೊಳಿಸಿ ಜನಸ್ನೇಹಿಯಾಗಿಸಿದ್ದರು. ಅವರು ವರ್ಗಾವಣೆಯಾದ ಕೂಡಲೇ ಬಾಲಬಿಚ್ಚಿರುವ ಆರ್‌ಒ ಘಟಕಗಳ ದುರಾಸೆಯ ಜನರು ಜನರಿಂದ ಹಾಡಹಗಲೇ ಸುಲಿಗೆಗೆ ನಿಂತಿದ್ದಾರೆ. ಪಾಲಿಕೆ ಅಧಿಕಾರಿಗಳಿಗೆ ಈ ಬಗ್ಗೆ ದೂರು ನೀಡಲಾಗಿದ್ದು ಕ್ರಮದ ಭರವಸೆಯಲ್ಲಿ ನಗರವಾಸಿಗಳಿದ್ದಾರೆ.

    ಕಡಿಮೆ ಸಂಬಳಕ್ಕೆ ಸಿಬ್ಬಂದಿ ಕೆಲಸ?: ನೀರಿನ ಘಟಕದಲ್ಲಿ ಹೆಚ್ಚುವರಿಯಾಗಿ ಪಡೆಯುವ ರೂಪಾಯಿ ಬಗ್ಗೆ ಪ್ರಶ್ನಿಸುವ ಗ್ರಾಹಕರಿಗೆ ಅಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿ ಕಷ್ಟದ ಕಥೆಯನ್ನೇ ಹೇಳಲಾರಂಭಿಸುತ್ತಾರೆ. ಗುತ್ತಿಗೆದಾರರು ಕೇವಲ 6 ಸಾವಿರ ಸಂಬಳ ನೀಡುತ್ತಿದ್ದು, ಜೀವನ ನಿರ್ವಹಣೆಗೆ ಒಂದೆರೆಡು ರೂಪಾಯಿ ಪಡೆದರೆ ತಪ್ಪೇನು ನಿಮಗೆ ಹೊರೆಯಾದರೆ ಕೊಡಬೇಡಿ, ಉಳಿದವರು ಕೊಡುತ್ತಾರೆ, ನೀವು ಹೋಗಿ ಎಂದು ಏರುಧ್ವನಿಯಲ್ಲಿ ಮಾತನಾಡಿ ಗಲಾಟೆಯನ್ನೇ ಸೃಷ್ಟಿಮಾಡಿಬಿಡುತ್ತಾರೆ.

    ಇದು 1, 2ರೂ. ವ್ಯಥೆಯಲ್ಲ…: ನೀರು ತೆಗೆದುಕೊಂಡು ಹೋಗುವ ಜನರಿಂದ ಹೆಚ್ಚುವರಿಯಾಗಿ ವಸೂಲಿ ಮಾಡುತ್ತಿರುವ 1 ಅಥವಾ 2ರೂ. ಹೆಚ್ಚಿಸಿರುವುದು ಸುಲಭಕ್ಕೆ ಹೊರೆಯಾಗಿ ಕಾಣಿಸದಿದ್ದರೂ ಇಡೀ ನಗರಕ್ಕೆ ವ್ಯಾಪಿಸಿದಾಗ ಇದರ ಕರಾಳತೆ ಅನಾವರಣವಾಗಲಿದೆ. ನಗರದಲ್ಲಿ 25 ಘಟಕಗಳಿದ್ದು, ಒಂದು ಘಟಕದಲ್ಲಿ ಪ್ರತಿದಿನ ಕನಿಷ್ಠ 250 ಜನರು ನೀರು ತೆಗೆದುಕೊಂಡು ಹೋಗುತ್ತಿದ್ದಾರೆ. 2ರೂ. ಒಬ್ಬರಿಂದ ಹೆಚ್ಚಾಗಿ ಪಡೆದರೆ 500ರೂ. ಆಗಲಿದೆ. 25 ಘಟಕಗಳಿಂದ 12500ರೂ. ದಿನಕ್ಕೆ ಸಂಗ್ರಹವಾಗಲಿದೆ. ಮಾಸಿಕ 3.75ಲಕ್ಷ ರೂ. ಸುಲಿಗೆ ಮಾಡಲಾಗುತ್ತಿದೆ. ಪಾಲಿಕೆ ಅಧಿಕಾರಿಗಳು ಜಾಣ ಮೌನವಹಿಸಿರುವುದು ಅನುಮಾನಕ್ಕೆ ಕಾರಣವಾಗಿದೆ.

    ಯಾವುದೇ ಘಟಕದಲ್ಲಿ ನೀರಿನ ದರ ಹೆಚ್ಚಿಸಲು ಅವಕಾಶವಿಲ್ಲ, ಟೆಂಡರ್ ಪಡೆದಿರುವ ಸಂಸ್ಥೆಗಳು ಕಡ್ಡಾಯವಾಗಿ ಬೋರ್ಡ್ ಅಳವಡಿಸಬೇಕು, ದರ ಹೆಚ್ಚಿಸಿರುವುದು ಕಂಡುಬಂದರೆ ಕೂಡಲೇ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು.
    ಕಿರಣ್ ಕಿರಿಯ ಇಂಜಿನಿಯರ್,
    ಆರ್‌ಒ ಘಟಕ ಉಸ್ತುವಾರಿ

    ನಮ್ಮ ವ್ಯಾಪ್ತಿಯಲ್ಲಿರುವ ಯಾವುದೇ ಶುದ್ಧ ನೀರಿನ ಘಟಕದಲ್ಲಿ ದರ ಹೆಚ್ಚಿಸುವ ನಿರ್ಧಾರ ತೆಗೆದುಕೊಂಡಿಲ್ಲ. ಜನರಿಂದ ಹೆಚ್ಚು ಹಣ ಪಡೆದಿರುವುದು ದೃಢವಾದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು.
    ರೇಣುಕಾ ಆಯುಕ್ತೆ, ತುಮಕೂರು ಪಾಲಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts