More

    ತೆರೆದ ಚರಂಡಿಗೆ ಸಿಗದ ಮುಕ್ತಿ

    ಗುರುಪುರ: ಕಳೆದ ಕೆಲವು ವರ್ಷಗಳಿಂದ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಗುರುಪುರ ಕೈಕಂಬದ ಪೊಂಪೈ ಚರ್ಚ್ ದ್ವಾರದ ಎದುರಿನ ಹೆದ್ದಾರಿ ಪಕ್ಕದ 100 ಅಡಿ ಉದ್ದದ ತೆರೆದ ಚರಂಡಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ.
    ಇದು ಗಂಜಿಮಠ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಪ್ರದೇಶ. ಇಲ್ಲಿ ಹೆದ್ದಾರಿ ಪಕ್ಕದಲ್ಲೇ ಹೋಟೆಲ್‌ಗಳಿವೆ. ಇದಕ್ಕೆ ಹೊಂದಿಕೊಂಡು ಉದ್ದಕ್ಕೆ ಗ್ಯಾರೇಜ್, ಅಂಗಡಿ, ಶೋರೂಂ, ಮನೆಗಳಿವೆ.

    ಹೋಟೆಲ್‌ನ ಒಳಗಡೆ ಅಥವಾ ಹತ್ತಿರದ ಕಚೇರಿಗಳಲ್ಲಿ ಕುಳಿತರೆ, ಇಲ್ಲಿಂದ ದುರ್ವಾಸನೆ ಮೂಗಿಗೆ ಬಡಿಯುತ್ತದೆ. ದಾರಿಹೋಕರು ಮೂಗಿಗೆ ಕೈ ಹಿಡಿದುಕೊಂಡೇ ಮುಂದೆ ಸಾಗುವ ಪರಿಸ್ಥಿತಿ. ಸುಮಾರು ಐದು ವರ್ಷಗಳಿಂದ ಇಲ್ಲಿ ತೆರೆದ ಚರಂಡಿಯ ಸ್ಥಿತಿ ಬದಲಾಗಿಲ್ಲ. ಈ ಬಗ್ಗೆ ಹಲವು ಬಾರಿ ಗಂಜಿಮಠ ಪಂಚಾಯಿತಿ ಆಡಳಿತ ಹಾಗೂ ವ್ಯಾಪ್ತಿ ಪ್ರದೇಶದ ಸದಸ್ಯರಿಗೆ ಸಾರ್ವಜನಿಕರು ದೂರು ನೀಡಿದ್ದುಂಟು. ಎರಡು ವರ್ಷದ ಹಿಂದೆ ‘ವಿಜಯವಾಣಿ’ ವರದಿ ಕೂಡ ಪ್ರಕಟಿಸಿತ್ತು.

    ಆದರೆ ಪಂಚಾಯಿತಿ ಆಡಳಿತ ಮಾತ್ರ ಇತ್ತ ಗಮನ ಹರಿಸಿಲ್ಲ. ಬೆಳಗ್ಗೆ ಮತ್ತು ಸಾಯಂಕಾಲ ಚರಂಡಿ ನೀರು ತುಂಬಿ ರಸ್ತೆ ಮೇಲೆ ಹರಿಯುತ್ತದೆ. ಕತ್ತಲಾಗುತ್ತಲೇ ಸೊಳ್ಳೆ ಕಾಟ ಹೆಚ್ಚುತ್ತದೆ. 100 ಅಡಿ ಉದ್ದಕ್ಕೆ ಹೆದ್ದಾರಿ ಬದಿಯ ಚರಂಡಿ ಕೊಳಚೆ ನೀರು, ಪ್ಲಾಸ್ಟಿಕ್ ತ್ಯಾಜ್ಯವಸ್ತು, ಮಣ್ಣಿಂದ ತುಂಬಿ ಹೋಗಿದ್ದು, ರಸ್ತೆಯಲ್ಲಿ ಚರಂಡಿ ಇದೆಯೋ ಅಥವಾ ಚರಂಡಿಯಲ್ಲಿ ರಸ್ತೆ ಇದೆಯೋ ಎಂಬ ಅನುಮಾನ ಕಾಡುವಂತಾಗಿದೆ.

    ಕೈಕಂಬ ಹೆದ್ದಾರಿ ಪಕ್ಕದ ಪ್ರದೇಶ ಗಂಜಿಮಠ ಪಂಚಾಯಿತಿ ವ್ಯಾಪ್ತಿಗೆ ಸೇರಿದ್ದರೂ, ಚರಂಡಿ ದುರಸ್ತಿ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಕೆಲಸ. ಪ್ರಾಧಿಕಾರ ಕಳೆದ 10 ವರ್ಷಗಳಿಂದ ಹೆದ್ದಾರಿ ವಿಸ್ತರಣೆ ಬಗ್ಗೆ ಪ್ರಸ್ತಾವಿಸುತ್ತ ಬಂದಿದ್ದರೂ, ಈವರೆಗೂ ಕೆಲಸ ಮಾಡಿಲ್ಲ. ಹಾಗಾಗಿ ತೆರೆದ ಚರಂಡಿ ಸಮಸ್ಯೆ ಉಲ್ಭಣಗೊಂಡಿದೆ. ಪಂಚಾಯಿತಿಯಲ್ಲಿ ಹೊಸದಾಗಿ ಅಧಿಕಾರ ನಡೆಸಲಿರುವ ಸದಸ್ಯ ಮಂಡಳಿ ಈ ವಿಷಯವನ್ನು ಮತ್ತೊಂದು ಬಾರಿ ಹೆದ್ದಾರಿ ಪ್ರಾಧಿಕಾರದ ಗಮನಕ್ಕೆ ತರಲಿದೆ.
    – ಝಾಕಿರ್ ಆರ್.ಎಸ್., ಗಂಜಿಮಠ ಗ್ರಾಪಂ ನೂತನ ಸದಸ್ಯ ಹಾಗೂ ನಿಕಟಪೂರ್ವ ಉಪಾಧ್ಯಕ್ಷ

    ಜನನಿಬಿಡ ಪ್ರದೇಶ ಮತ್ತು ಹೆದ್ದಾರಿ ಬದಿ ಈ ರೀತಿಯ ತೆರೆದ ಚರಂಡಿ ಬೇರೆಲ್ಲೂ ಇಲ್ಲ. ಚರಂಡಿ ತುಂಬಿ, ಕೊಚ್ಚೆ ನೀರು ರಸ್ತೆಯ ಮೇಲೆಯೇ ಹರಿಯುತ್ತಿದೆ. ಇದರಿಂದ ರೋಗ-ರುಜಿನ ಹರಡುತ್ತದೆ ಎಂಬ ಸಾಮಾನ್ಯ ಜ್ಞಾನ ಪಂಚಾಯಿತಿ ಆಡಳಿತ ಅಥವಾ ವ್ಯಾಪ್ತಿ ಸದಸ್ಯರಿಗೆ ಇರಬೇಕಲ್ಲವೆ?
    – ಕಿಟ್ಟಣ್ಣ ರೈ, ರೈತ ಸಂಘ ಹಸಿರುಸೇನೆಯ ಮುಂದಾಳು

    ಕೈಕಂಬದ ಈ ತೆರೆದ ಚರಂಡಿ ಮತ್ತು ದಟ್ಟ-ದುರ್ವಾಸನೆ ಹೋಟೆಲ್ ಮತ್ತು ಗ್ಯಾರೇಜ್‌ಗೆ ಹೋಗುವವರಿಗೆ ಸಾಮಾನ್ಯವಾಗಿದೆ. ಮೂಗಿನ ಮೇಲಿಂದ ಕೈ ತೆಗೆದರೆ ವಾಕರಿಕೆ ಬರುವಷ್ಟು ದುರ್ವಾಸನೆ. ಅಭಿವೃದ್ಧಿ ಹೊಂದುತ್ತಿರುವ ಗುರುಪುರ ಕೈಕಂಬಕ್ಕೆ ಇದು ಭೂಷಣವಲ್ಲ.
    – ಬಾಬು ಸಾಲ್ಯಾನ್, ಕರ್ನಾಟಕ ಪ್ರಾಂತ ರೈತ ಸಂಘದ ಗುರುಪುರ-ಕೈಕಂಬ ವಲಯಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts