More

    ಮಾರ್ಚ್ 30ರವರೆಗೆ ನೀರು ಹರಿಸಿ

    ನರಗುಂದ: ಹಿಂಗಾರು ಹಂಗಾಮಿನ ವಿವಿಧ ಬೆಳೆಗಳಿಗೆ ಪೂರೈಸಲಾಗುತ್ತಿರುವ ಕಾಲುವೆ ನೀರನ್ನು ಫೆ. 15ರಂದು ಸ್ಥಗಿತಗೊಳಿಸುವ ಬದಲಿಗೆ ಮಾರ್ಚ್ 30ರವರೆಗೆ ವಿಸ್ತರಿಸಬೇಕು. ಕಡಲೆ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆದು ತಾಲೂಕಿನ ರೈತರಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ವಿಠ್ಠಲ ತಿಮ್ಮರಡ್ಡಿ ಹೇಳಿದರು.

    ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 6ನೇ ತಾಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನಿರ್ವಿುತಿ ಕೇಂದ್ರದಿಂದ ತಾಲೂಕಿನ ಬನಹಟ್ಟಿ, ಮೂಗನೂರ, ಕುರ್ಲಗೇರಿ, ಸಿದ್ದಾಪೂರ ಗ್ರಾಮಗಳಲ್ಲಿ ನಿರ್ವಿುಸಿರುವ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಯಲ್ಲಿವೆ. ಈ ಎಲ್ಲ ಘಟಕಗಳನ್ನು ತಕ್ಷಣ ದುರಸ್ತಿ ಮಾಡಿಸಬೇಕು. ನವಿಲು ತೀರ್ಥದಿಂದ ತಾಲೂಕಿನ ವಿವಿಧ ಕಾಲುವೆಗಳ ಮೂಲಕ ಈಗಾಗಲೆ, ಸಾಕಷ್ಟು ಪ್ರಮಾಣದ ನೀರು ಹರಿಸಲಾಗುತ್ತಿದೆ. ಎಲ್ಲ ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಎಲ್ಲ ಕುಡಿಯುವ ನೀರಿನ ಕೆರೆಗಳನ್ನು ಸಂಪೂರ್ಣವಾಗಿ ತುಂಬಿಸಿಕೊಳ್ಳಬೇಕು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಬಿಡುಗಡೆಗೊಂಡಿರುವ ಯಾವುದೆ ಅನುದಾನ ಸರ್ಕಾರಕ್ಕೆ ಮರಳಿ ಹೋಗಬಾರದು. ನಿಗದಿತ ಕಾಲಮಿತಿಯೊಳಗೆ ಕಾಮಗಾರಿ ಆರಂಭಿಸಿ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ತಿಳಿಸಿದರು.

    ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಬಿ.ಎಸ್. ಪೊಲೀಸಪಾಟೀಲ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಒಟ್ಟು 34 ಶುದ್ಧ ಕುಡಿಯುವ ನೀರಿನ ಘಟಕಗಳಿವೆ. ಈ ಪೈಕಿ 29 ಘಟಕಗಳನ್ನು ನಿರ್ವಿುತಿ ಕೇಂದ್ರದವರು, 4 ಘಟಕಗಳನ್ನು ಹೈಟೆಕ್ ಕಂಪನಿಯವರು ಹಾಗೂ ಒಂದು ಘಟಕವನ್ನು ಕೆ.ಎಸ್. ಮನಿ ಎಂಬುವವರು ನಿರ್ವಹಿಸುತ್ತಿದ್ದಾರೆ. 20 ಲೀಟರ್ ನೀರಿಗೆ ಈ ಮೊದಲು 2 ರೂ. ಪಾವತಿಸಬೇಕಾಗಿತ್ತು. ಆದರೀಗ 5 ರೂ. ಆಗಿದ್ದರಿಂದ ಸಾರ್ವಜನಿಕರು ಘಟಕದ ನೀರು ಬಳಸುವುದನ್ನೇ ಬಿಟ್ಟಿದ್ದಾರೆ. ಹೀಗಾಗಿ ಕೆಲ ಘಟಕಗಳು ಕಾರ್ಯ ನಿರ್ವಹಿಸದೆ ನಿರುಪಯುಕ್ತವಾಗಿವೆ. ದುರಸ್ತಿಯಲ್ಲಿರುವ ಎಲ್ಲ ಘಟಕಗಳನ್ನು ಶೀಘ್ರವೇ ದುರಸ್ತಿ ಮಾಡಿಸಲಾಗುವುದು ಎಂದರು.

    ನೀರಾವರಿ ಇಲಾಖೆ ಸಹಾಯಕ ಇಂಜಿನಿಯರ್ ಕೆ. ಸುಧಾಕರ್ ಮಾತನಾಡಿ, ಕಾಲುವೆ ಮೂಲಕ ಮಾರ್ಚ್ 30ರವರೆಗೆ ನೀರು ಹರಿಸುವ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಪತ್ರ ಬರೆಯಲಾಗುವುದು ಎಂದು ತಿಳಿಸಿದರು.

    ಸದಸ್ಯ ಪ್ರಭುಲಿಂಗಪ್ಪ ಎಲಿಗಾರ ಮಾತನಾಡಿ, ತಾಲೂಕಿನ ಬಹುತೇಕ ಅಂಗನವಾಡಿ ಕೇಂದ್ರಗಳಲ್ಲಿ ಪೌಷ್ಟಿಕ ಆಹಾರ, ಮೊಟ್ಟೆ ವಿತರಣೆ ಸರಿಯಾಗಿ ನಡೆಯುತ್ತಿಲ್ಲ. ಸಂಬಂಧಪಟ್ಟ ಕೇಂದ್ರಕ್ಕೆ ಭೇಟಿ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಡಿಪಿಒ ರೂಪಾ ಗಂಧದ, 2017-18ನೇ ಸಾಲಿನ ಒಂದೂವರೆ ಕೋಟಿ ರೂ. ಬಾಕಿ ಬಿಲ್ ಸರ್ಕಾರದಿಂದ ಬರಬೇಕಿದೆ. ಆದರೂ, ತಾಲೂಕಿನ ಎಲ್ಲ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಸಂಬಳ, ಮೊಟ್ಟೆ ಬಿಲ್ ಪಾವತಿಸಲಾಗಿದೆ. ನಿರೀಕ್ಷಿತ ಅನುದಾನ ದೊರೆತರೆ ಎಲ್ಲವೂ ಸುಗಮವಾಗಿ ನಡೆಯುತ್ತದೆ ಎಂದು ತಿಳಿಸಿದರು.

    ತೋಟಗಾರಿಕೆ, ಸಮಾಜ ಕಲ್ಯಾಣ, ಆರೋಗ್ಯ, ಜಿಪಂ, ಅಕ್ಷರ ದಾಸೋಹ, ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಪಂ ಇಒ ಚಂದ್ರಶೇಖರ ಕುರ್ತಕೋಟಿ, ಜಿಪಂ ಸದಸ್ಯೆ ರೇಣುಕಾ ಅವರಾದಿ, ತಾಪಂ ಉಪಾಧ್ಯಕ್ಷೆ ದೀಪಾ ನಾಗನೂರ, ಸದಸ್ಯರಾದ ಪ್ರಕಾಶಗೌಡ ತಿರಕನಗೌಡ್ರ, ಗಿರೀಶ ನೀಲರಡ್ಡಿ, ಸಂಜೀವ ಚವ್ಹಾಣ, ಸತೀಶ ನಾಗನೂರ, ವೆಂಕಟೇಶ ಸಣ್ಣಬಿದರಿ, ಸುಜಾತಾ ಕಾಳೆ, ರಾಜೇಶ್ವರಿ ಹಿರೇಮಠ, ಪಿಡಿಒಗಳು ಉಪಸ್ಥಿತರಿದ್ದರು.

    ಅವಧಿ ಮೀರಿದ ಕ್ರಿಮಿನಾಶಕ-ಬೀಜ ಮಾರಾಟ

    ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಬಿ. ಶಿರಿಯಪ್ಪಗೌಡ್ರ ಮಾತನಾಡಿ, ನರಗುಂದ ಮತ್ತು ಕೊಣ್ಣೂರಿನ ರೈತ ಸಂಪರ್ಕ ಕೇಂದ್ರಗಳಲ್ಲಿ ಯಾವುದೆ, ಕ್ರಿಮಿನಾಶಕ ಔಷಧ ದೊರೆಯುತ್ತಿಲ್ಲ. ಖಾಸಗಿ ಔಷಧ ಮತ್ತು ಬೀಜ ಮಾರಾಟಗಾರರು ಹೆಚ್ಚಿನ ಬೆಲೆಗೆ ಅವಧಿ ಮೀರಿದ ಕ್ರಿಮಿನಾಶಕ ಮತ್ತು ಬೀಜ ಮಾರಾಟ ಮಾಡುತ್ತಿದ್ದಾರೆ. ಈ ಅಂಗಡಿಗಳಿಗೆ ಮೇಲೆ ದಾಳಿ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಾಲೂಕಿನ ರೈತರಿಗೆ ಬೆಳೆ ಹಾನಿ ಪರಿಹಾರ ದೊರೆಯದ ಕಾರಣ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಸಹಾಯಕ ಕೃಷಿ ನಿರ್ದೇಶಕಿ ಮೈತ್ರಿ ವಿ. ಮಾತನಾಡಿ, ರೈತ ಸಂಪರ್ಕ ಕೇಂದ್ರಗಳಲ್ಲಿ ಸದ್ಯಕ್ಕೆ ಕೆಲವೊಂದು ಕ್ರಿಮಿನಾಶಕ ಔಷಧಗಳಿಲ್ಲ. ಅವುಗಳನ್ನು ತರಿಸುತ್ತೇವೆ. ರೈತರಿಗೆ ಬೆಳೆ ಹಾನಿ ಪರಿಹಾರ ನೀಡುವ ಸಲುವಾಗಿ ಕಂಪ್ಯೂಟರ್​ನಲ್ಲಿ ದಾಖಲೆಗಳ ನೋಂದಣಿ ಪ್ರಕ್ರಿಯೆ ನಡೆದಿದೆ. ಪೂರ್ಣಗೊಂಡ ನಂತರ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣ ಜಮೆ ಆಗಲಿದೆ ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts