ಬೆಂಗಳೂರು: ದೇಶದ ಕೆಲವು ರಾಜ್ಯಗಳು ಕೆಮ್ಮು, ನೆಗಡಿ, ವಿಷಮಶೀತ ಜ್ವರ ಉಪಟಳದಿಂದ ಬಾಧಿತವಾಗಿರುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲು ಸೋಮವಾರ ಆರೋಗ್ಯ ಇಲಾಖೆ ಅಧಿಕಾರಿಗಳು ಹಾಗೂ ತಜ್ಞರ ಸಭೆ ಕರೆದಿರುವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಅಂತಾರಾಷ್ಟ್ರೀಯ ಮಹಿಳಾ ದಿನದ ನಿಮಿತ್ತ ವಿಧಾನಸೌಧ ಮುಂಭಾಗದಲ್ಲಿ ಮಹಿಳೆಯರ ಆರೋಗ್ಯಕ್ಕಾಗಿ ಸೈಕಲ್ ಜಾಥಾಕ್ಕೆ ಭಾನುವಾರ ಚಾಲನೆ ನೀಡಿದ ನಂತರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಹೊಸ ವೈರಾಣು ಎಚ್3ಎನ್2 ಪ್ರಬೇಧ ಪತ್ತೆ ಹಾಗೂ ಅನುಸರಿಸಬೇಕಾದ ಕ್ರಮಗಳ ಕುರಿತು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಪ್ರಾಥಮಿಕ ವರದಿಗಳ ಪ್ರಕಾರ ಈ ವೈರಾಣುವಿನಿಂದ ದೀರ್ಘಾವಧಿಯ ಕೆಮ್ಮು ಇರುತ್ತದೆ. ರಾಜ್ಯದಲ್ಲಿ ಅಂತಹ ಪ್ರಕರಣಗಳು ಸದ್ಯಕ್ಕೆ ಕಂಡು ಬಂದಿಲ್ಲ. ಆದರೂ ನಾಳಿನ ಸಭೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸಾ ದರ ನಿಗದಿ ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿ ಸೂಕ್ತ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಡಾ.ಕೆ.ಸುಧಾಕರ್ ತಿಳಿಸಿದರು.
ಸ್ವಾಸ್ಥ್ಯಕ್ಕೆ ಆದ್ಯತೆ
ಮಹಿಳೆಯರ ಸ್ವಾಸ್ಥ್ಯ ಚೆನ್ನಾಗಿದ್ದರೆ, ಕುಟುಂಬ, ಸಮುದಾಯ, ರಾಜ್ಯ ಹಾಗೂ ದೇಶ ಸದೃಢವಾಗಿರುತ್ತದೆ. ಆರ್ಥಿಕ ಚೈತನ್ಯವೂ ಹೆಚ್ಚಲಿದೆ. ಮಹಿಳೆಯರ ಆರೋಗ್ಯದ ಪ್ರಾಮುಖ್ಯತೆ ಸಂದೇಶ ಸಾರಲೆಂದು ಸೈಕಲ್ ಜಾಥಾ ಹಮ್ಮಿಕೊಳ್ಳಲಾಗಿದೆ.
ಆರೋಗ್ಯ ಸೌಧದವರೆಗೂ ನಡೆಯಲಿರುವ ಜಾಥಾದಲ್ಲಿ ವಿದ್ಯಾರ್ಥಿನಿಯರು, ವೃತ್ತಿಪರರು ಸೇರಿ 100ಕ್ಕೂ ಹೆಚ್ಚು ಜನರು ಪಾಲ್ಗೊಂಡಿದ್ದಾರೆ ಎಂದು ಡಾ.ಕೆ.ಸುಧಾಕರ್ ಹೇಳಿದರು.