More

    ಭಾರತದ ರಾಷ್ಟ್ರಪತಿಯವರಿಂದ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಸ್ವೀಕರಿಸಿದ ಡಾ. ಸೀತಾರಾಮ್ ಜಿಂದಾಲ್

    ನವದೆಹಲಿ: ಸಮಾಜಸೇವೆ ಮತ್ತು ಆರೋಗ್ಯ ಸೇವಾಕ್ಷೇತ್ರದ ದಾರ್ಶನಿಕ ಹರಿಕಾರ ಎಂದೇ ಖ್ಯಾತಿ ಹೊಂದಿರುವ ಡಾ. ಸೀತಾರಾಮ್ ಜಿಂದಾಲ್ ಅವರಿಗೆ ಸೋಮವಾರ (ಏಪ್ರಿಲ್​ 22) ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ಭಾರತದ ರಾಷ್ಟ್ರಪತಿಗಳು ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಪ್ರಧಾನಮಂತ್ರಿ ಮತ್ತು ಗೌರವಾನ್ವಿತ ಗಣ್ಯರ ಉಪಸ್ಥಿತಿ ಇದ್ದ ಸಮಾರಂಭದಲ್ಲಿ ಡಾ. ಜಿಂದಾಲ್ ಅವರು ಸಮಾಜಕ್ಕೆ ನೀಡಿರುವ ಅಸಾಧಾರಣ ಕೊಡುಗೆಗಳಿಗೆ ಗೌರವ ಸಂದಿತು.

    1932ರ ಸೆಪ್ಟೆಂಬರ್ 12ರಂದು ಹರಿಯಾಣದ ನಲ್ವಾ ಎಂಬ ಗ್ರಾಮದಲ್ಲಿ ಜನಿಸಿದ ಡಾ. ಸೀತಾರಾಮ್ ಜಿಂದಾಲ್ ಅವರ ಬದುಕಿನ ಪ್ರಯಾಣವು ತುಂಬಾ ಸ್ಫೂರ್ತಿದಾಯಕವಾಗಿದೆ. ಜಿಂದಾಲ್ ಅಲ್ಯೂಮಿನಿಯಂ ಲಿಮಿಟೆಡ್ (ಜೆಎಎಲ್)ನ ಸ್ಥಾಪಕ ಅಧ್ಯಕ್ಷರಾಗಿರುವ ಅವರ ಉದ್ಯಮಶೀಲತೆಯ ಚಾಣಾಕ್ಷತೆಯು ಅವರ ಕಂಪನಿ ಭಾರತದ ಅತಿದೊಡ್ಡ ಅಲ್ಯೂಮಿನಿಯಂ ಹೊರತೆಗೆಯುವ ಸಂಸ್ಥೆ ಎಂಬ ಹೆಗ್ಗಳಿಕೆ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಆದರೆ, ಅವರು ವ್ಯವಹಾರಗಳನ್ನು ಮೀರಿದ ದೂರದೃಷ್ಟಿ ಹೊಂದಿದ್ದಾರೆ. ಅವರು ಎಸ್. ಜಿಂದಾಲ್ ಚಾರಿಟೇಬಲ್ ಫೌಂಡೇಶನ್, ಹಲವಾರು ಟ್ರಸ್ಟ್‌ಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ಕಾಲೇಜುಗಳನ್ನು ಸ್ಥಾಪನೆ ಮಾಡಿ ಜನಸೇವೆ ಮಾಡಿದ್ದಾರೆ, ಇವೆಲ್ಲವೂ ಅವರ ಜನಸೇವೆಯ ಕೆಲಸಗಳಿಗೆ ಸಾಕ್ಷಿಯಾಗಿ ನಿಂತಿವೆ.

    ಡಾ. ಜಿಂದಾಲ್ ಅವರು ಮಾಜಿ ಪ್ರಧಾನ ಮಂತ್ರಿಗಳಾದ ಶ್ರೀ ಅಟಲ್ ಬಿಹಾರಿ ವಾಜಪೇಯಿ, ಶ್ರೀ ಚಂದ್ರಶೇಖರ್, ಶ್ರೀ ಐ.ಕೆ. ಗುಜ್ರಾಲ್, ಶ್ರೀ ದೇವ್ ಲಾಲ್ಜಿ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಶ್ರೀರಾಮಕೃಷ್ಣ ಹೆಗಡೆ ಮತ್ತು ಅನೇಕ ಗಣ್ಯರಿಂದ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ. ಈ ಎಲ್ಲಾ ಗಣ್ಯರು ಡಾ. ಜಿಂದಾಲ್ ಅವರ ಮಾರ್ಗದರ್ಶನದಲ್ಲಿ ನಡೆಯುವ ಜೆಎನ್ಐ ಸಂಸ್ಥೆಯಲ್ಲಿ ರೋಗಿಗಳಾಗಿ ಬಂದು ವೈಯಕ್ತಿಕ ಅನುಭವ ಪಡೆದು ಜಿಂದಾಲ್ ಅವರ ಕೊಡುಗೆಯನ್ನು ಶ್ಲಾಘಿಸಿದ್ದಾರೆ.

    ಜೆಎಎಲ್ ನಿಂದ ಧನಸಹಾಯ ಪಡೆದು ನಡೆಸಲ್ಪಡುತ್ತಿರುವ ಎಸ್. ಜಿಂದಾಲ್ ಚಾರಿಟೇಬಲ್ ಫೌಂಡೇಶನ್ ಡಾ. ಜಿಂದಾಲ್ ಅವರ ಸಮಾಜಸೇವೆ ಕುರಿತಾದ ಬದ್ಧತೆಗೆ ಸಾಕ್ಷಿಯಾಗಿದೆ. ಪ್ರತಿಷ್ಠಾನವು ಅವರ ದತ್ತಿ ಉಪಕ್ರಮಗಳಿಗೆ ಹಣಕಾಸಿನ ಆಧಾರ ಒದಗಿಸುತ್ತಿದ್ದು, ಯಾವುದೇ ಬಾಹ್ಯ ಬೆಂಬಲವನ್ನು ಪಡೆಯದೆ ವಿವಿಧ ಟ್ರಸ್ಟ್‌ಗಳು, ಆಸ್ಪತ್ರೆಗಳು, ಶಾಲೆಗಳು ಮತ್ತು ಕಾಲೇಜುಗಳಿಗೆ ನೆರವು ನೀಡುತ್ತಿದೆ. ವಿದ್ಯಾರ್ಥಿವೇತನದ ಮೂಲಕ ಸಾವಿರಾರು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಬೆಂಬಲ ನೀಡಿದ್ದಾರೆ. ಜೊತೆಗೆ ಹಿಂದುಳಿದ ವರ್ಗದ ಮಂದಿಗೆ ಸೇವೆ ಸಲ್ಲಿಸಲು ಬದ್ಧವಾಗಿರುವ ಹಲವಾರು ಎನ್‌ಜಿಓಗಳಿಗೆ ನೆರವು ನೀಡಿದ್ದಾರೆ. ಡಾ. ಜಿಂದಾಲ್‌ರ ಕೆಲಸಗಳೇ ಅವರ ಸಮಾಜ ಸೇವೆಯ ಬದ್ಧತೆಗೆ ಸಾಕ್ಷಿಯಾಗಿವೆ.

    ಪ್ರಿವೆಂಟಿವ್ ಕೇರ್ (ರೋಗ ತಡೆಗಟ್ಟುವ ಚಿಕಿತ್ಸೆ) ಕುರಿತು ನಂಬಿಕೆ ಹೊಂದಿರುವ ಡಾ. ಜಿಂದಾಲ್ ಅವರು ನ್ಯಾಚುರೋಪಥಿ ಪದ್ಧತಿಯು ಅಲೋಪಥಿ ಆಸ್ಪತ್ರೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ ಎಂದು ಭಾವಿಸಿದ್ದಾರೆ ಮತ್ತು ಈ ಪದ್ಧತಿಯು ಜಾಗತಿಕವಾಗಿ ಲಕ್ಷಾಂತರ ಜನರ ಜೀವನವನ್ನು ಪರಿವರ್ತಿಸುತ್ತದೆ ಎಂಬ ನಂಬಿಕೆ ಹೊಂದಿದ್ದಾರೆ. ಡಾ. ಜಿಂದಾಲ್ ಅವರ ಕೊಡುಗೆಗಳು ಆರೋಗ್ಯ ಸೇವೆ ಮತ್ತು ಸಮಾಜ ಸೇವೆಯನ್ನು ಮೀರಿ ವಿಸ್ತರಿಸಿವೆ. ಸರ್ಕಾರವು ಕಾರ್ಪೋರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟೀಸ್ (ಸಿಎಸ್‌ಆರ್‌) ಯೋಜನೆಯನ್ನು ಜಾರಿಗೊಳಿಸುವಲ್ಲಿ ಅವರು ಮಹತ್ವದ ಪಾತ್ರ ವಹಿಸಿದ್ದಾರೆ. ಕಳೆದ 15 ವರ್ಷಗಳಲ್ಲಿನ ಅವರ ಶ್ರಮದಾಯಕ ಪ್ರಯತ್ನ ಮತ್ತು ಶೇಕಡಾವಾರು ಹೆಚ್ಚಿಸಲು ನಡೆಯುತ್ತಿರುವ ಹೋರಾಟವು ಸಮಾಜದ ಸುಧಾರಣೆಯ ಮೇಲಿನ ಅವರ ಒಲವನ್ನು ತೋರಿಸುತ್ತದೆ.

    ಸಂಕ್ಷಿಪ್ತವಾಗಿ ಹೇಳುವುದಾದರೆ, ಡಾ. ಸೀತಾರಾಮ್ ಜಿಂದಾಲ್ ಅವರ ಆರೋಗ್ಯ ಸೇವೆ, ಸಮಾಜ ಸೇವೆ ಮತ್ತು ಸಾಮಾಜಿಕ ಸುಧಾರಣೆಗಳ ಮೇಲಿನ ಅಪ್ರತಿಮ ಕೊಡುಗೆಗಳು ಶಾಶ್ವತ ಪರಿಣಾಮವನ್ನು ಬೀರಿವೆ. ಅದರಿಂದಾಗಿಯೇ ಅವರು ಭಾರತದ ಇತಿಹಾಸದಲ್ಲಿ ವಿಶಿಷ್ಟ ವ್ಯಕ್ತಿಯಾಗಿ ಕಾಣಿಸಿಕೊಳ್ಳುತ್ತಾರೆ. ಅವರು ಯಾವತ್ತೂ ಹೆಸರು, ಕೀರ್ತಿ, ಸ್ಥಾನಮಾನ ಮತ್ತು ಸಂಪತ್ತಿಗೆ ಆಸೆ ಪಟ್ಟವರಲ್ಲ. ಬದಲಿಗೆ ಅವರು ಸರಳ ಜೀವನವನ್ನು ನಂಬುತ್ತಾರೆ. ದುಂದುಗಾರಿಕೆಯ ಮೇಲೆ ಅವರಿಗೆ ಒಲವಿಲ್ಲ.

    ಡಾ. ಜಿಂದಾಲ್ ಅವರು ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸಿರುವುದು ಅವರ ಜೀವಮಾನದ ಸಾಧನೆಗಳಿಗೆ ಸಿಕ್ಕ ಸೂಕ್ತವಾದ ಗೌರವವಾಗಿದೆ. ದಾರ್ಶನಿಕ ನಾಯಕ, ಸಮಾಜ ಸೇವಕ ಮತ್ತು ಸುಧಾರಕರಾಗಿರುವ ಅವರ ಎತ್ತರವನ್ನು ಇದು ಸೂಚಿಸುತ್ತದೆ. ಜಾಗತಿಕವಾಗಿ ಲಕ್ಷಾಂತರ ಜನರನ್ನು ಪ್ರೇರೇಪಿಸುತ್ತಿರುವುದರ ಜೊತೆಗೆ, ಡಾ. ಜಿಂದಾಲ್ ಅವರು ಪ್ರಕೃತಿ ಚಿಕಿತ್ಸೆಯು ಅಲೋಪತಿ ಆಸ್ಪತ್ರೆಗಳ ಮೇಲಿನ ಹೊರೆಯನ್ನು ಕಡಿಮೆ ಮಾಡುತ್ತದೆ, ಜನ ಜೀವನವನ್ನು ಪರಿವರ್ತಿಸುತ್ತದೆ ಮತ್ತು ಆರೋಗ್ಯಕರ, ಹೆಚ್ಚು ಸಹಾನುಭೂತಿಯ ಜಗತ್ತನ್ನು ರೂಪಿಸುತ್ತದೆ ಎಂಬ ನಂಬಿಕೆಯನ್ನು ಗಟ್ಟಿಗೊಳಿಸುತ್ತಾ ಸಾಗುತ್ತಿದ್ದಾರೆ.

    ವಿಜಯ ಭಾರತ ಪ್ರಧಾನಿ ಮೋದಿ ಸಂಕಲ್ಪ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts