More

  ವಿಜಯ ಭಾರತ ಪ್ರಧಾನಿ ಮೋದಿ ಸಂಕಲ್ಪ

  ಕಾಂಗ್ರೆಸ್ ಅಪಪ್ರಚಾರಕ್ಕೆ ಕಿವಿಗೊಡಬೇಡಿ | 10 ವರ್ಷದ ಟ್ರ್ಯಾಕ್​ ರೆಕಾರ್ಡ್ ನೋಡಿ

  ಲೋಕಸಭೆ ಚುನಾವಣೆ ಕಣದಲ್ಲಿ ಪ್ರಚಾರ ಕಹಳೆ ಮೊಳಗಿಸಿರುವ ಪ್ರಧಾನಿ ನರೇಂದ್ರ ಮೋದಿ ಕನ್ನಡದ ನಂ. 1 ದಿನಪತ್ರಿಕೆ ವಿಜಯವಾಣಿಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಆ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ಎರಡು ಬಾರಿ ಪ್ರಧಾನಿಯೊಬ್ಬರ ಸಂದರ್ಶನ ನಡೆಸಿದ ಖ್ಯಾತಿ ವಿಜಯವಾಣಿ ಮುಡಿಗೇರಿದೆ. ಬಿಡುವಿಲ್ಲದ ಪ್ರಚಾರದ ನಡುವೆಯೂ ಲೋಕಸಭೆ ಚುನಾವಣೆ ಕಣದ ಎಕ್ಸ್​ಕ್ಲುಸೀವ್ ಮಾಹಿತಿ ಹಂಚಿಕೊಂಡಿರುವ ಮೋದಿ ವಿಪಕ್ಷಗಳ ಹಳೆಯ ಟೇಪ್​ರೆಕಾರ್ಡರ್ ಕೇಳುವುದನ್ನು ಬಿಟ್ಟು ನಮ್ಮ 10 ವರ್ಷದ ಟ್ರಾ್ಯಕ್ ರೆಕಾರ್ಡ್ ನೋಡಿ ಮತ ಹಾಕುವಂತೆ ಜನತೆಗೆ ಕರೆ ನೀಡಿದ್ದಾರೆ. ವಿಆರ್​ಎಲ್ ಸಮೂಹ ಸಂಸ್ಥೆಗಳ ಎಂಡಿ ಡಾ. ಆನಂದ ಸಂಕೇಶ್ವರ, ವಿಜಯವಾಣಿ ಪ್ರಧಾನ ಸಂಪಾದಕ ಕೆ.ಎನ್. ಚನ್ನೇಗೌಡ, ಡಿಜಿಟಲ್ ಸಂಪಾದಕ ಸಿದ್ದು ಕಾಳೋಜಿ ಜತೆ ಮೋದಿ ಮನಬಿಚ್ಚಿ ಮಾತನಾಡಿದ್ದಾರೆ.

  ವಿಜಯವಾಣಿ -ಮೋದಿ ವಿಜಯ್ ಹೋ..!
  ವಿಜಯವಾಣಿ ಪತ್ರಿಕೆಗೆ ಮೋದಿ ನೀಡಿದ ಎರಡನೇ ಸಂದರ್ಶನ ಇದಾಗಿದೆ. ವಿಜಯವಾಣಿ ಪತ್ರಿಕೆಯನ್ನು ಖುಷಿಯಿಂದ ಕೈಗೆತ್ತಿಕೊಂಡ ಮೋದಿ, ವಿಜಯ ನಿಮ್ಮ ಪತ್ರಿಕೆ ಶೀರ್ಷಿಕೆಯಲ್ಲೂ ಇದೆ. ನಮಗೂ ಲೋಕಸಭೆ ಚುನಾವಣೆಯಲ್ಲಿ ವಿಜಯದ ಹಂಬಲವಿದೆ. ದೋನೋ ಕಾ ವಿಜಯ್ ಹೋ ಎಂದು ಸಂಭ್ರಮಿಸಿದರು.

  ಆನಂದ ಸಂಕೇಶ್ವರ್​ಗೆ ಆತ್ಮೀಯ ಅಪ್ಪುಗೆ

  ಸಂದರ್ಶನ ಮುಗಿಯುತ್ತಿದ್ದಂತೆ ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹಾಗೂ ವಿಆರ್​ಎಲ್ ಎಂಡಿ. ಡಾ. ಆನಂದ ಸಂಕೇಶ್ವರ ಅವರೊಂದಿಗಿನ ಬಾಂಧವ್ಯವನ್ನು ಮೋದಿ ಮೆಲುಕು ಹಾಕಿದರು. ಆನಂದ ಸಂಕೇಶ್ವರ ಅವರನ್ನು ಮಿತ್ರ ಎಂದು ಸಂಬೋಧಿಸಿದ ಪ್ರಧಾನಿ, ವಿಜಯ ಸಂಕೇಶ್ವರ ಹೇಗಿದ್ದಾರೆಂದು ಕೇಳಿ ತಿಳಿದುಕೊಂಡರು. ರಾಷ್ಟ್ರೀಯತೆ ಭಾವನೆ ಬೆಳೆಸುವಲ್ಲಿ ಹಾಗೂ ಭಾರತೀಯ ಸಂಸ್ಕೃತಿ ಹಾಗು ಕಲೆ ರಕ್ಷಣೆ ಕುರಿತು ಸಂಕೇಶ್ವರ ಕುಟುಂಬದ ಬದ್ಧತೆಯನ್ನು ಮೋದಿ ಕೊಂಡಾಡಿದ್ದು ವಿಶೇಷವಾಗಿತ್ತು.

  ವಿಜಯ ಭಾರತ ಪ್ರಧಾನಿ ಮೋದಿ ಸಂಕಲ್ಪ

  ಕನ್ನಡದಲ್ಲೇ ಮೋದಿ ಭಾಷಣ: ಮೋದಿ ಭಾರತೀಯ ಸನಾತನ ಧರ್ಮ ಹಾಗೂ ಪರಂಪರೆಯ ರಕ್ಷಣೆ, ಪೋಷಣೆಗೆ ಕಟಿಬದ್ಧರಾಗಿರುವುದು ತಿಳಿದಿರುವ ವಿಷಯ. ಮೋದಿ ಎಷ್ಟು ಧಾರ್ವಿುಕ ವ್ಯಕ್ತಿ ಆಗಿದ್ದಾರೆಯೋ ಅಷ್ಟೇ ತಂತ್ರಜ್ಞಾನ ಸ್ನೇಹಿ ಕೂಡ ಆಗಿದ್ದಾರೆ ಎಂಬುದು ಈ ಸಂದರ್ಶನದಲ್ಲಿ ಮತ್ತೆ ಸಾಬೀತಾಯಿತು. ಡಿಜಿಟಲ್ ಕ್ರಾಂತಿ, ವೀಕ್ಷಕರ ಬಗ್ಗೆ ಮಾತನಾಡಿದ ಮೋದಿ, ವಿಜಯ ವಾಣಿಯ ಡಿಜಿಟಲ್ ವೀಕ್ಷಕರು ಹಾಗೂ ಫಾಲೋವರ್ಸ್ ಬಗ್ಗೆ ಕೇಳಿ ತಿಳಿದುಕೊಂಡರು. ಎಐ ನೆರವಿನೊಂದಿಗೆ ಸಾಮಾಜಿಕ ತಾಣ ಎಕ್ಸ್​ನಲ್ಲಿರುವ ನಮೋ ಕನ್ನಡ ಹ್ಯಾಂಡಲ್ ಮೂಲಕ ತಮ್ಮ ಭಾಷಣವನ್ನು ವಿವಿಧ ಪ್ರಾದೇಶಿಕ ಭಾಷೆಗಳಲ್ಲಿ ಬಿತ್ತರಿಸಲಾಗುತ್ತಿದೆ. ಕನ್ನಡದಲ್ಲಿ ಭಾಷಣ ಕೇಳಲು ನಮೋ ಕನ್ನಡ ಬಳಸಿ ಎಂದು ಕರೆ ನೀಡಿದರು.

  ವಿಜಯ ಭಾರತ ಪ್ರಧಾನಿ ಮೋದಿ ಸಂಕಲ್ಪ

  ದೇವೇಗೌಡರ ಗರ್ಜನೆಗೆ ಜೈಕಾರ

  ವಿಜಯ ಭಾರತ ಪ್ರಧಾನಿ ಮೋದಿ ಸಂಕಲ್ಪ ಮೈಸೂರು, ಚಿಕ್ಕಬಳ್ಳಾಪುರದಲ್ಲಿ ಇತ್ತೀಚೆಗೆ ನಡೆದಂತಹ ಬೃಹತ್ ಚುನಾವಣಾ ಸಮಾವೇಶ, ಜನಬೆಂಬಲದ ಬಗ್ಗೆ ಮಾತು ಹೊರಳುತ್ತಿದ್ದಂತೆಯೇ ಆಕ್ಟೀವ್ ಆದ ಮೋದಿ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಎನರ್ಜಿಯನ್ನು ಹಾಡಿ ಹೊಗಳಿದರು. ನಾನು ಸಂಸತ್​ನಲ್ಲಿ ದೇವೇಗೌಡರ ಅನೇಕ ಭಾಷಣ ಕೇಳಿದ್ದೇನೆ. ಆದರೆ, ಇಷ್ಟೊಂದು ಗಟ್ಟಿದನಿಯಲ್ಲಿ ಕರಾರುವಕ್ಕಾಗಿ ಉತ್ಸಾಹಭರಿತ ಹಾಗೂ ಹರಿತವಾದ ಭಾಷಣವನ್ನು ಈಗಲೇ ಕೇಳುತ್ತಿರುವುದು. 91ರ ಇಳಿ ವಯಸ್ಸಿನಲ್ಲೂ ಅವರ ಉತ್ಸಾಹ, ಬದ್ಧತೆ ಮೆಚ್ಚಲೇಬೇಕು, ದೇವೇಗೌಡರ ಉತ್ಸಾಹ ನನಗೂ ಸ್ಪೂರ್ತಿ ಎಂದರು. ಮೈತ್ರಿ ಇಲ್ಲದ ಸಂದರ್ಭದಲ್ಲೂ ದೇವೇಗೌಡರಿಂದ ಒಳ್ಳೆಯ ಅನುಭವ ಪಡೆದು ಕೊಂಡಿದ್ದೇನೆ. ಗೌಡರು ತಳಮಟ್ಟದಿಂದ ಹೋರಾಡಿ ಮೇಲೆ ಬಂದವರು. ರೈತರ ಬಗೆಗಿನ ಅವರ ಕಾಳಜಿಯನ್ನು ಗೌರವಿಸುತ್ತೇನೆ. ದೇಶದ ಹಿರಿಯ ನಾಯಕರೊಬ್ಬರ ಆಶೀರ್ವಾದ, ಮಾರ್ಗದರ್ಶನ ನಮ್ಮ ಮೈತ್ರಿಗೆ, ಕರ್ನಾಟಕಕ್ಕೆ ಖಂಡಿತಾ ಒಳ್ಳೆಯದು. ಕಾಂಗ್ರೆಸ್​ನ ದುರಾಡಳಿತಕ್ಕೆ ಕೊನೆ ಹಾಡಲು ಇಡೀ ಸಮಾಜ ಒಗ್ಗೂಡಬೇಕಿದೆ. ಅದಕ್ಕಾಗಿಯೇ, ಬಿಜೆಪಿ-ಜೆಡಿಎಸ್ ಒಂದಾಗಿವೆ ಎಂದು ಮೋದಿ ಸ್ಪಷ್ಟನೆ ನೀಡಿದರು.

  ಕರುನಾಡ ಸಮೀಕ್ಷೆ ಬಗ್ಗೆ ಗಂಭೀರ !: ಉತ್ತಮ ವಾಗ್ಮಿ ಹಾಗೂ ಭಾಷಣಕಾರರೂ ಆಗಿರುವ ಮೋದಿ ದಣಿವರಿಯದ ನಾಯಕ. ತಮ್ಮ ಎಡಬಿಡದ ಚುನಾವಣಾ ಪ್ರಚಾರದ ನಡುವೆಯೂ ವಿಜಯವಾಣಿ ಸಂದರ್ಶನಕ್ಕೆ ಬಿಡುವು ಮಾಡಿಕೊಂಡ ಅವರು ಎಲ್ಲಾ ಪ್ರಶ್ನೆಗಳಿಗೆ ತಮ್ಮದೇ ಶೈಲಿಯಲ್ಲಿ ಉತ್ತರಿಸಿದರು. ಮೋದಿ ಮತ್ತೊಂದು ಗುಣ ಅಂದರೆ ತಾಳ್ಮೆ. ಅವರು ಎದುರಿಗಿನವರು ಏನು ಹೇಳುತ್ತಾರೆ ಎಂಬುದನ್ನು ಸಮಾಧಾನದಿಂದ ಕೇಳಿಸಿಕೊಳ್ಳುತ್ತಾರೆ. ಕರ್ನಾಟಕದ ಲೋಕಸಭಾ ಚುನಾವಣೆ ಕುರಿತು ಹೊರಳಿದಾಗ ಮೋದಿ ಅಲರ್ಟ್ ಆದರು. ವಿಜಯವಾಣಿಯ ಕ್ಷೇತ್ರವಾರು ಸಮೀಕ್ಷೆ ಮತ್ತು ವಿಶ್ಲೇಷಣೆಯನ್ನು ಕುತೂಹಲದಿಂದ ಗಂಭೀರವಾಗಿ ಆಲಿಸಿದರು. ನಿಮಗಿರುವ ಮಾಹಿತಿಯಷ್ಟೇ ಗೆಲುವಿನ ಹುಮ್ಮಸ್ಸು ನಮ್ಮಲ್ಲೂ ಇದೆ. ಈ ಬಾರಿಯೂ ಒಳ್ಳೆಯ ಫಲಿತಾಂಶ ಕರ್ನಾಟಕದಲ್ಲಿಯೂ ಸಿಗಲಿದೆ ಎಂದರು.

  ವಿಜಯ ಭಾರತ ಪ್ರಧಾನಿ ಮೋದಿ ಸಂಕಲ್ಪ

  ನಕಾರಾತ್ಮಕತೆಗೆ ಸೋಲು: ಕೀಳುಮಟ್ಟದ ನೆಗೆಟೀವ್ ಕ್ಯಾಂಪೇನ್ ಮಾಡಿ ಪ್ರತಿಪಕ್ಷಗಳು ಸೋಲು ಕಂಡಿರುವ ಅನೇಕ ಉದಾಹರಣೆಗಳು ನಮ್ಮ ಮುಂದಿವೆ.ಕಾಂಗ್ರೆಸ್ ಸೇರಿ ವಿಪಕ್ಷಗಳ ಅಪಪ್ರಚಾರವನ್ನು ಜನತೆ ತಿರಸ್ಕರಿಸಿ ತಕ್ಕ ಪಾಠ ಕಲಿಸಲಿದ್ದಾರೆ. ನಾವು ಯಾರೂ ವೈರಿಗಳಲ್ಲ. ಪ್ರತಿಸ್ಪರ್ಧಿಗಳು ಮಾತ್ರ. ಈ ರೀತಿಯ ನಕಾರಾತ್ಮಕತೆಯನ್ನು ಜನ ತಿರಸ್ಕರಿಸುತ್ತಾರೆ.

  ವಿಕಸಿತ ಭಾರತದಲ್ಲಿ ಪ್ರತಿ ಪ್ರಜೆಗೂ ಘನತೆಯ ಬದುಕು

  ಭ್ರಷ್ಟಾಚಾರದ ವಿರುದ್ಧ ಹೋರಾಟ, ಬಡತನ ನಿವಾರಣೆಯ ದಿಟ್ಟ ಕ್ರಮಗಳು, ಅಭಿವೃದ್ಧಿ ಯೋಜನೆಗಳು ಜನರನ್ನು ಪರಿಣಾಮಕಾರಿಯಾಗಿ ತಲುಪಿದ ಬಗೆ, ನುಡಿದಂತೆ ನಡೆದಿದ್ದರಿಂದ ಗಳಿಸಿರುವ ಜನರ ಪ್ರೀತಿ, ಕಳೆದ ಹತ್ತು ವರ್ಷಗಳಲ್ಲಿ ವೃದ್ಧಿಸಿರುವ ಭಾರತದ ವರ್ಚಸ್ಸು, ಪ್ರತಿಪಕ್ಷ ಇಂಡಿ ಒಕ್ಕೂಟದ ವೈಫಲ್ಯ ಹೀಗೆ ಎಲ್ಲ ಪ್ರಮುಖ ವಿಷಯಗಳ ಬಗ್ಗೆ ವಿಸõತವಾಗಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಜಯವಾಣಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಹತ್ತುಹಲವು ಮಹತ್ವದ ಸಂಗತಿಗಳನ್ನು ಪ್ರಸ್ತಾಪಿಸಿದರು. ಎನ್​ಡಿಎ ಮೂರನೇ ಅವಧಿಯಲ್ಲಿ ಮಹತ್ವದ ಕೆಲಸಗಳು ಆಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಂದರ್ಶನದ ಪೂರ್ಣ ವಿವರ ಇಲ್ಲಿದೆ.

  . ದೇಶಾದ್ಯಂತ ಅಬ್ಬರದ ಪ್ರಚಾರ ನಡೆಸಿದ್ದೀರಿ. ಮತದಾರರ ನಾಡಿಮಿಡಿತ ಹೇಗಿದೆ?

  ಮೋದಿ: ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ವಿಕಸಿತ ಭಾರತ ನಮ್ಮ ಸಂಕಲ್ಪ. ದೇಶದ ಪ್ರಗತಿಗಾಗಿ ಜನತೆ ಈ ಬಾರಿಯೂ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟವನ್ನು ಬೆಂಬಲಿಸಲಿದ್ದಾರೆ.

  . ದಕ್ಷಿಣ ಭಾರತದಲ್ಲಿ ಕರ್ನಾಟಕ ಹೊರತುಪಡಿಸಿದರೆ ಇತರ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚು ಬಲ ಇಲ್ಲ. ಈ ಬಾರಿ ಪರಿಸ್ಥಿತಿ ಹೇಗಿದೆ?

  ಮೋದಿ: ಈ ಬಾರಿ ದಕ್ಷಿಣದ ರಾಜ್ಯಗಳಲ್ಲಿ ಎಲ್ಲರೂ ಅಚ್ಚರಿ ಪಡುವಷ್ಟು ಲೋಕಸಭಾ ಸ್ಥಾನ ಗೆಲ್ಲಲಿದ್ದೇವೆ. ಫಲಿತಾಂಶ ಬಿಜೆಪಿ-ಎನ್​ಡಿಎ ಪರವಾಗಿ ಹೊರಬೀಳಲಿದೆ. ತಮಿಳುನಾಡು ಆಂಧ್ರಪ್ರದೇಶ, ಕೇರಳ ಹಾಗೂ ತೆಲಂಗಾಣದಲ್ಲಿ ಈ ಸಲ ನಿರೀಕ್ಷೆಗೂ ಮೀರಿದ ಸಾಧನೆ ಮಾಡಲಿದ್ದೇವೆ.

  . ಬಿಜೆಪಿ ಸಂಖ್ಯೆ ಕಡಿಮೆ ಆಗುತ್ತೆ ಅಂತ ಜೆಡಿಎಸ್ ಜತೆ ಮೈತ್ರಿ ಮಾಡಿಕೊಂಡಿದ್ದೇ?

  ಮೋದಿ: ಕಮಲ ಮತ್ತು ಕರ್ನಾಟಕದ ಮಧ್ಯೆ ವಿಶೇಷ ಬಾಂಧವ್ಯವಿದೆ. ಕಮಲ ಕರ್ನಾಟಕಕ್ಕಾಗಿ ಕೆಲಸ ಮಾಡಲು ಬಯಸುತ್ತದೆ. ಲೋಕಸಭೆ ಚುನಾವಣೆಗಳಲ್ಲಿ ಸತತವಾಗಿ ಬಿಜೆಪಿಯ ಅಧಿಕ ಸಂಖ್ಯೆಯ ಸಂಸದರನ್ನು ಇಲ್ಲಿಂದ ಕಳುಹಿಸಲಾಗುತ್ತಿದೆ. ಕಳೆದ ಬಾರಿ ರಾಜ್ಯದ ಜನತೆ ಹೊಸ ದಾಖಲೆ ಬರೆದಿದ್ದರು. ರಾಷ್ಟ್ರೀಯ ಹಿತಾಸಕ್ತಿ ಮತ್ತು ಜನ ಹಿತಾಸಕ್ತಿಗಳಿಗೆ ಆದ್ಯತೆ ನೀಡುವುದರಿಂದಲೇ ಕರ್ನಾಟಕದ ಜನರು ಬಿಜೆಪಿಯನ್ನು ಬಹುವಾಗಿ ಪ್ರೀತಿಸುತ್ತಾ ಬಂದಿದ್ದಾರೆ. ಜೆಡಿಎಸ್ ಮೈತ್ರಿ ರಾಜ್ಯದ ಮಟ್ಟಿಗೆ ಉತ್ತಮ ಬೆಳವಣಿಗೆ ಎಂದು ನಾನು ಭಾವಿಸುತ್ತೇನೆ.

  . ಎನ್​ಡಿಎ ಸರ್ಕಾರದ ಹಲವಾರು ಸಾಧನೆಗಳ ಹೊರತಾಗಿಯೂ, ಯಾವುದಾದರೂ ಕಾರ್ಯಕ್ರಮಗಳು ಅಥವಾ ಯೋಜನೆಗಳನ್ನು ಇಷ್ಟೊತ್ತಿಗೆ ಪೂರ್ಣಗೊಳಿಸಿರಬೇಕಿತ್ತು ಅಥವಾ ಅನುಷ್ಠಾನಕ್ಕೆ ತಂದಿರಬೇಕಿತ್ತು ಎಂದು ನಿಮಗೆ ವೈಯಕ್ತಿಕವಾಗಿ ಅನ್ನಿಸಿದೆಯೇ?

  ಮೋದಿ: ಎಷ್ಟೇ ದೊಡ್ಡ ಸಾಧನೆಗಳನ್ನು ಮಾಡಿದ್ದರೂ ಪ್ರಸ್ತುತ ಸಾಧನೆಗಳ ಬಗ್ಗೆ ತೃಪ್ತಿಪಟ್ಟುಕೊಂಡು ಸುಮ್ಮನಿರುವಂತಹ ವ್ಯಕ್ತಿ ನಾನಲ್ಲ. ಜಗತ್ತಿನ ರಾಷ್ಟ್ರಗಳ ಪೈಕಿ 11ನೇ ಸ್ಥಾನದಲ್ಲಿದ್ದ ಭಾರತದ ಆರ್ಥಿಕತೆಯನ್ನು 10 ವರ್ಷಗಳಲ್ಲಿ 5ನೇ ಸ್ಥಾನಕ್ಕೆ ಕೊಂಡೊಯ್ದಿದ್ದೇವೆ. ಆದರೆ, ಆದಷ್ಟು ಬೇಗ ಭಾರತ ಹೇಗೆ ವಿಶ್ವದ ಮೂರನೇ ಆರ್ಥಿಕತೆ ಆಗಬಲ್ಲದು ಎಂಬುದರ ಬಗ್ಗೆ ನಾನು ಸದಾ ಯೋಚಿಸುತ್ತಿರುತ್ತೇನೆ. ಬಡತನದ ವಿರುದ್ಧದ ಹೋರಾಟವನ್ನು ಗೆಲ್ಲಲು ನಾವು 25 ಕೋಟಿ ಜನರಿಗೆ ಸಹಾಯ ಮಾಡಿದ್ದೇವೆ. ಆದರೆ, ಭಾರತದಲ್ಲಿನ ತೀರಾ ಕಡುಬಡತನವನ್ನು ಹೇಗೆ ಕೊನೆಗೊಳಿಸಬಹುದು ಎಂಬುದರ ಕುರಿತಂತೆ ಗಮನಹರಿಸಿ, ಕಾರ್ಯಪ್ರವೃತ್ತನಾಗಿದ್ದೇನೆ.

  ಯಾವುದೇ ಸೌಲಭ್ಯ, ಸೌಕರ್ಯಗಳಿಲ್ಲದ ಬಡವರಿಗೆ ಬ್ಯಾಂಕ್ ಖಾತೆ, ಎಲ್​ಪಿಜಿ ಗ್ಯಾಸ್ ಸಂಪರ್ಕ, ನಲ್ಲಿ ನೀರು, ಆರೋಗ್ಯ ವಿಮೆ, ಮನೆಗಳು, ಶೌಚಗೃಹಗಳ ನಿರ್ವಣ- ಹೀಗೆ ಹಲವು ಅವಶ್ಯಕ ಸೌಕರ್ಯ ಕಲ್ಪಿಸಿ ಅವರ ಜೀವನಮಟ್ಟವನ್ನು ಉತ್ತಮಪಡಿಸಿದ್ದೇವೆ. ಆದರೆ, ಬಡವರು ಚಿಂತೆಗಳಿಂದ ಸಂಪೂರ್ಣ ಮುಕ್ತರಾಗಿ, ಸಾಧ್ಯತೆಗಳಿಂದ ಯುಕ್ತರಾಗಿ ಬದುಕು ಸಾಗಿಸುವಂತಾಗಬೇಕು ಎಂಬುದರತ್ತ ಗಮನಹರಿಸಿದ್ದೇನೆ. ವಿಕಸಿತ ಭಾರತದಲ್ಲಿ ದೇಶದ ಪ್ರತಿಯೊಬ್ಬ ನಾಗರಿಕನೂ ಘನತೆ ಮತ್ತು ಸಂತೋಷದ ಜೀವನವನ್ನು ನಡೆಸುವಂತಾಗಬೇಕು ಎಂಬುದು ನನ್ನ ಗುರಿ. ಅದನ್ನು ಸಾಧಿಸುವವರೆಗೆ, ನೀವು ನನ್ನನ್ನು ಎಂದಿಗೂ ತೃಪ್ತನಾಗಿ ಕಾಣುವುದಿಲ್ಲ. ಅದಕ್ಕಾಗಿಯೇ ನಾನು ಹೇಳಿದ್ದು, 10 ವರ್ಷದಲ್ಲಿ ನೀವು ನೋಡಿದ್ದು ಟ್ರೇಲರ್ ಮಾತ್ರ. ಇನ್ನೂ ಬಹಳಷ್ಟು ಕೆಲಸಗಳನ್ನು ಮಾಡುವುದಿದೆ.

  ವಿಜಯ ಭಾರತ ಪ್ರಧಾನಿ ಮೋದಿ ಸಂಕಲ್ಪ

  . ಶ್ರೀರಾಮ ಮಂದಿರ ನಿರ್ವಣದ ಕನಸನ್ನು ನನಸು ಮಾಡಿದ್ದೀರಿ. ಈ ಮೈಲಿಗಲ್ಲು ದಾಖಲಿಸುವಾಗ ನೀವು ಎದುರಿಸಿರುವ ಸವಾಲುಗಳೇನು ಎಂಬುದನ್ನು ಹಂಚಿಕೊಳ್ಳಬಹುದೇ?

  ಮೋದಿ: ಪ್ರಭು ಶ್ರೀರಾಮನ ಮಂದಿರವು ಸಾಕಾರಗೊಂಡಿದೆ. ಕಳೆದ ಐದು ಶತಮಾನಗಳಲ್ಲಿ ಶ್ರೀರಾಮನ ಭಕ್ತರು ಮಾಡಿದ ತ್ಯಾಗದಿಂದ ಇದು ಸಾಧ್ಯವಾಗಿದೆ. ವೈಯಕ್ತಿಕವಾಗಿ ಚಿಕ್ಕ ಚಿಕ್ಕ ವಿಷಯಗಳಲ್ಲೂ ಎಷ್ಟೋ ಸವಾಲುಗಳಿರುತ್ತವೆ. ಆದರೆ ಇದು ರಾಷ್ಟ್ರೀಯ ಕೆಲಸ. ಸಂಸ್ಕೃತಿ-ಸಭ್ಯತೆಗೆ ಸಂಬಂಧಿಸಿದ ಕಾರ್ಯ. ಹಾಗಾಗಿ ಇದರಲ್ಲಿ ಅಡಚಣೆ-ಸವಾಲು ಇದ್ದೇ ಇರುತ್ತವೆ. ಅಲ್ಲಗಳೆಯಲು ಯತ್ನಿಸಿದವರೂ, ವಿಳಂಬ ಮಾಡಲು ಯತ್ನಿಸಿದವರೂ ಮತ್ತು ದಿಕ್ಕು ತಪ್ಪಿಸುವವರೂ ಇದ್ದರು. ಶ್ರೀರಾಮ ಕಾಲ್ಪನಿಕ ಎಂದು ಹೇಳಿದವರೂ ಇದ್ದರು. ಒಂದು ಸಮಾಜವಾಗಿ ನಮ್ಮ ತಾಳ್ಮೆ ಮತ್ತು ಪ್ರಬುದ್ಧತೆ, ಕೋಟ್ಯಂತರ ಜನರ ನಂಬಿಕೆ, ಶ್ರದ್ಧೆ, ಸಂವಿಧಾನ ಮತ್ತು ಸಂಬಂಧಪಟ್ಟ ಸಂಸ್ಥೆಗಳಲ್ಲಿ ಇರಿಸಿದ ವಿಶ್ವಾಸದಿಂದ ಕೊನೆಗೂ ಶ್ರೀರಾಮ ಅಯೋಧ್ಯೆಗೆ ಮರಳಿದ್ದಾನೆ. ಈಗ ಭೂತಕಾಲದ ಬಗ್ಗೆ ಹೆಚ್ಚು ಗಮನ ಹರಿಸುವುದಕ್ಕಿಂತ, ಸಕಾರಾತ್ಮಕತೆಯಿಂದ ಸಾಗಲು ಇದು ಒಳ್ಳೆಯ ಸಮಯ ಎಂದೆನಿಸುತ್ತದೆ. ಭಾರತದ ಭವಿಷ್ಯಕ್ಕೆ ರಾಮಮಂದಿರವೆಂದರೆ ಏನು ಎಂಬುದರತ್ತ ಹೆಚ್ಚು ಗಮನ ಹರಿಸಬೇಕಿದೆ. ರಾಮನ ಪ್ರಾಣಪ್ರತಿಷ್ಠೆ ಬರೀ ಒಂದು ಮೈಲಿಗಲ್ಲಲ್ಲ. ಭಾರತದ ಆತ್ಮದೊಂದಿಗಿನ ಆಳವಾದ ಸಂಪರ್ಕ. ಇದು ಬಹಳ ದೀರ್ಘ ಸಮಯದ ನಂತರ ಪುನರುಜ್ಜೀವನಗೊಂಡಿದೆ. ಪ್ರಭು ಶ್ರೀರಾಮನ ಆಗಮನವು ಮುಂದಿನ 1,000 ವರ್ಷಗಳ ಶಾಂತಿ, ಸಮೃದ್ಧಿ ಮತ್ತು ಪ್ರಗತಿಗೆ ಅಡಿಪಾಯ ಹಾಕಿದೆ ಎಂದು ನಾನು ದೃಢವಾಗಿ ನಂಬುತ್ತೇನೆ. ನಾನು ಮೊದಲೇ ಹೇಳಿದಂತೆ, ರಾಮನಿಂದ ರಾಷ್ಟ್ರಕ್ಕೆ ಮತ್ತು ದೇವದಿಂದ ದೇಶಕ್ಕೆ ನಮ್ಮ ಪ್ರಜ್ಞೆಯನ್ನು ವಿಸ್ತರಿಸಲು ನಾವು ಈಗ ಈ ಸಾಂಸ್ಕೃತಿಕ ಮೈಲಿಗಲ್ಲಿನಿಂದ ಸಕಾರಾತ್ಮಕ ಶಕ್ತಿಯನ್ನು ವಿಸ್ತರಿಸಬೇಕು. ಶ್ರೀರಾಮನ ಮೌಲ್ಯಗಳಿಂದ ಪ್ರೇರಿತರಾಗಲು ಮತ್ತು ನಮ್ಮ ರಾಷ್ಟ್ರದ ಕಲ್ಯಾಣಕ್ಕಾಗಿ ನಮ್ಮನ್ನು ಅರ್ಪಿಸಿಕೊಳ್ಳಲು, ಒಗ್ಗಟ್ಟಿನಿಂದ ಇರಲು, ಸಮಾಜದ ಅತ್ಯಂತ ದುರ್ಬಲ ಮತ್ತು ಹಿಂದುಳಿದ ವರ್ಗಗಳಿಗೆ ಸೇವೆ ಸಲ್ಲಿಸಲು ಗಮನಹರಿಸಬೇಕಾದ ಸಮಯ ಇದು.

  . ಪ್ರಾದೇಶಿಕ ಪಕ್ಷಗಳು ಬಲವಾಗಿರುವ ಬಿಹಾರ, ಮಹಾರಾಷ್ಟ್ರ, ಜಾರ್ಖಂಡ್, ಪಶ್ಚಿಮ ಬಂಗಾಳ ನಿರ್ಣಾಯಕ. ಈ ರಾಜ್ಯಗಳಲ್ಲಿ ಚುನಾವಣಾ ವಾತಾವರಣ ಎನ್​ಡಿಎ ಪರವಾಗಿದೆಯೇ?

  ಮೋದಿ: ದೇಶಾದ್ಯಂತ ಎನ್​ಡಿಎ ಪರ ಅಲೆ ಇದೆ. ಮಹಾರಾಷ್ಟ್ರ, ಬಿಹಾರ, ಪಶ್ಚಿಮ ಬಂಗಾಳ, ಜಾರ್ಖಂಡ್​ನಲ್ಲಿ ಅಲ್ಲಿನ ಪ್ರಾದೇಶಿಕ ಪಕ್ಷಗಳೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಂಡಿದ್ದು, ಎನ್​ಡಿಎ ಮೈತ್ರಿಕೂಟ ಬಲಿಷ್ಠವಾಗಿದೆ. ನಾವು ಈ ಹಿಂದಿಗಿಂತ ಹೆಚ್ಚು ಸ್ಥಾನ ಗೆಲ್ಲಲಿದ್ದೇವೆ. ಉತ್ತರ ಹಾಗೂ ಪಶ್ಚಿಮ ಭಾರತದ ರಾಜ್ಯಗಳಲ್ಲೂ ನಾವು ಅತ್ಯಧಿಕ ಲೋಕಸಭಾ ಸ್ಥಾನಗಳನ್ನು ಗೆಲ್ಲಲಿದ್ದೇವೆ.

  . ಚುನಾವಣಾ ಬಾಂಡ್ ಯೋಜನೆ ರದ್ದು ಮಾಡಿದ ಸುಪ್ರೀಂಕೋರ್ಟ್, ಅದನ್ನು ಅಸಾಂವಿಧಾನಿಕ ಎಂದು ಘೋಷಿಸಿತು. ಇದಕ್ಕೆ ನಿಮ್ಮ ಪ್ರತಿಕ್ರಿಯೆಯೇನು? ಕೇಂದ್ರ ಸರ್ಕಾರದ ಮೇಲೆ ಇದು ಪರಿಣಾಮ ಬೀರಿಲ್ಲವೇ?

  ಮೋದಿ: ನಮ್ಮ ಆರ್ಥಿಕತೆ ಮತ್ತು ಚುನಾವಣೆ ಮೇಲೆ ಕಪು್ಪ ಹಣ ಬೀರುತ್ತಿರುವ ದುಷ್ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡೇ ಕಳೆದ 10 ವರ್ಷಗಳಲ್ಲಿ ನಾವು ಕಪ್ಪುಹಣದ ವಿರುದ್ಧ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದ್ದೇವೆ. ನೋಟು ಅಮಾನ್ಯೀಕರಣ, ಅಧಿಕ ಮುಖಬೆಲೆಯ ನೋಟುಗಳ ರದ್ದತಿ, ರಾಜಕೀಯ ಪಕ್ಷಗಳಿಗೆ ನಗದು ದೇಣಿಗೆಯ ಮಿತಿ ಕಡಿತ ಸೇರಿ ಹಲವು ಕ್ರಮಗಳು ಕಣ್ಣ ಮುಂದೆಯೇ ಇವೆ. ಈ ಹಿನ್ನೆಲೆ ಇಟ್ಟುಕೊಂಡೇ ಚುನಾವಣಾ ಬಾಂಡ್ ಯೋಜನೆ ಪ್ರಕಟಿಸಲಾಯಿತು. ಕಪು್ಪಹಣದ ಪಿಡುಗು ತಪ್ಪಿಸಲೆಂದೇ ಚುನಾ ವಣಾ ಬಾಂಡ್ ಜಾರಿಗೆ ಬಂತು. ಯಾವುದೇ ಭಯವಿಲ್ಲದೆ ದಾನಿಗಳು ಪಕ್ಷಗಳಿಗೆ ದೇಣಿಗೆ ನೀಡಲು ಸಾಧ್ಯವಾಯಿತು ಮತ್ತು ಮುಖ್ಯವಾಗಿ ರಾಜಕೀಯ ವ್ಯವಸ್ಥೆಗೆ ಶುದ್ಧ ಹಣ ಹರಿದುಬಂತು. ಚುನಾವಣಾ ಬಾಂಡ್ ವಿಷಯದಲ್ಲಿ ಭಾರಿ ಗದ್ದಲ ಎಬ್ಬಿಸುತ್ತಿರುವವರು, ದೇಶದ ವಿಪಕ್ಷಗಳಿಗೇ ಬಾಂಡ್ ಮೂಲಕ ದೊಡ್ಡ ಪ್ರಮಾಣದಲ್ಲಿ ದೇಣಿಗೆ ಹರಿದುಬಂದಿರು ವುದನ್ನು ಮತ್ತು ಬಿಜೆಪಿಗೆ ಸಣ್ಣ ಪ್ರಮಾಣದಷ್ಟು ದೇಣಿಗೆಯಷ್ಟೇ ಬಂದಿದೆ ಎನ್ನುವುದನ್ನು ಗಮನಿಸುವುದು ಒಳಿತು.

  . ನೀವು ಆಗಾಗ ‘ವಿಜನ್ 2047’ರ ಬಗ್ಗೆ ರ್ಚಚಿಸುತ್ತೀರಿ, ದೇಶದ ಅಭಿವೃದ್ಧಿಗಾಗಿ ದೀರ್ಘಾವಧಿಯ ದೃಷ್ಟಿಕೋನವನ್ನು ಒತ್ತಿ ಹೇಳುತ್ತೀರಿ. ಆದಾಗ್ಯೂ, ಈ ದೃಷ್ಟಿಕೋನವನ್ನು ಕಾರ್ಯಗತ ಗೊಳಿಸಲು ನಿಮ್ಮ ಪಕ್ಷದ ಸರ್ಕಾರವು 2047ರವರೆಗೆ ಅಧಿಕಾರದಲ್ಲಿ ಮುಂದುವರೆಯುತ್ತದೆಯೇ?

  ಮೋದಿ: 2047ರಲ್ಲಿ ಯಾರ ಸರ್ಕಾರ ಇರುತ್ತೆ ಅನ್ನೋದನ್ನು ಜನರೇ ತೀರ್ಮಾನ ಮಾಡ್ತಾರೆ, ಮಾಡಲಿ. ಆದರೆ, ಜನರ ಸಹಭಾಗಿತ್ವದೊಂದಿಗೆ, ನಾವು 2047ಕ್ಕಾಗಿ ವಿಜನ್ ರೂಪಿಸಿದ್ದೇವೆ. ಈ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ಅಡಿಪಾಯ ಹಾಕಲು, ನಾವು ಮುಂದಿನ 5 ವರ್ಷಗಳವರೆಗೆ ಸ್ಪಷ್ಟ ಮಾರ್ಗಸೂಚಿಯನ್ನು ನೀಡಿದ್ದೇವೆ. ಮುಂದಿನ ಸರ್ಕಾರದ ಮೊದಲ 100 ದಿನಗಳ ಕೆಲಸಗಳನ್ನು ಪ್ರಾರಂಭಿಸಲು ಈಗಾಗಲೇ ಕ್ರಿಯಾಯೋಜನೆಯನ್ನು ಸಿದ್ಧಪಡಿಸಿದ್ದೇವೆ. ಕಳೆದ ಕೆಲವು ವರ್ಷಗಳಲ್ಲಿ ನಮ್ಮ ಎಲ್ಲ ಕೆಲಸಗಳು ವಿಕಸಿತ ಭಾರತವನ್ನು ರೂಪಿಸುವ ದಿಕ್ಕಿನತ್ತ ಮುನ್ನಡೆಯುತ್ತಿವೆ, ಬ್ಯಾಂಕಿಂಗ್ ಸೌಲಭ್ಯಗಳಿಲ್ಲದ 50 ಕೋಟಿಗೂ ಹೆಚ್ಚು ಜನರಿಗೆ ಜನಧನ್ ಖಾತೆ ಮೂಲಕ ಬ್ಯಾಂಕಿಂಗ್ ವಲಯಕ್ಕೆ ತಂದಿದ್ದು, 12 ಕೋಟಿ ಶೌಚಗೃಹಗಳ ನಿರ್ವಣ, 4 ಕೋಟಿಗೂ ಹೆಚ್ಚು ಮನೆಗಳನ್ನು ನಿರ್ವಿುಸುವುದರ ಮೂಲಕ ಬಡವರಿಗೆ ಸೂರು ಒದಗಿಸಿದ್ದು, ಹೀಗೆ ಹಲವು ಕೆಲಸಗಳಾಗಿವೆ. ನಾವು ಭಾರತದ ಇತಿಹಾಸದಲ್ಲಿ ಅತಿ ದೊಡ್ಡ ಮೂಲಸೌಕರ್ಯ ನಿರ್ಮಾಣ ಅಭಿಯಾನವನ್ನು ಮುನ್ನಡೆಸಿದ್ದೇವೆ. ಅಷ್ಟೇ ಅಲ್ಲ, ಉತ್ಪಾದನಾ ಕ್ರಾಂತಿಯನ್ನು ಮುನ್ನಡೆಸುತ್ತಿದ್ದೇವೆ. ಭಾರತದಿಂದ ರಫ್ತು ಹೆಚ್ಚುತ್ತಿದೆ. ಕಳೆದ ದಶಕದಲ್ಲಿ ನಮ್ಮ ರಕ್ಷಣಾ ರಫ್ತು 20 ಪಟ್ಟು ಹೆಚ್ಚಾಗಿದೆ, ಭಾರತವೀಗ ವಿಶ್ವದ 2ನೇ ಅತಿ ದೊಡ್ಡ ಮೊಬೈಲ್ ತಯಾರಕ ಮತ್ತು 3ನೇ ಅತಿದೊಡ್ಡ ಸ್ಟಾರ್ಟಪ್ ಇಕೋಸಿಸ್ಟಮ್್ನು ಹೊಂದಿದೆೆ. 2047ರ ವೇಳೆಗೆ ವಿಕಸಿತ ಭಾರತದ ಗುರಿ ಸಾಧಿಸಲು ಈ ಬಹುವಲಯ ಪ್ರಯತ್ನಗಳು ನಡೆಯುತ್ತಿವೆ.

  . ಇತ್ತೀಚೆಗೆ ಪರಿಚಯಿಸಲಾದ ‘ಮೋದಿ ಕಿ ಗ್ಯಾರಂಟಿ’ ಕರ್ನಾಟಕದಲ್ಲಿ ಕಾಂಗ್ರೆಸ್​ನ ಗ್ಯಾರಂಟಿ ಯೋಜನೆಗಳನ್ನು ಪ್ರತಿಧ್ವನಿಸುತ್ತದೆ, ಆದರೆ ಉಚಿತ ವಿದ್ಯುತ್ ಮತ್ತು ಹಣದಂತಹ ಗ್ಯಾರಂಟಿಗಳನ್ನು ಒದಗಿಸುವುದರ ಸಂಭಾವ್ಯ ಅಪಾಯಗಳನ್ನು ನೀವು ಒಪ್ಪಿಕೊಳ್ಳುತ್ತೀರಾ? ಇದು ರಾಜ್ಯ ಅಥವಾ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದೇ ಮತ್ತು ಉತ್ತಮ ಆಡಳಿತದ ಮೇಲೆ ಅವಲಂಬನೆಯನ್ನು ಉತ್ತೇಜಿಸಬಹುದೇ?

  ಮೋದಿ: ನಾವು ನೀಡಿದ ದೊಡ್ಡ ಭರವಸೆಗಳು ಯಾವುವು? ಜಮ್ಮು, ಕಾಶ್ಮೀರ ಮತ್ತು ಲಡಾಖ್​ನಲ್ಲಿ 370ನೇ ವಿಧಿಯ ನಿಯಮವನ್ನು ಕೊನೆಗೊಳಿಸುವುದಾಗಿ ಭರವಸೆ ನೀಡಿದ್ದೆವು. ಇಂದು, ಅದನ್ನು ಸಾಕಾರಗೊಳಿಸಲಾಗಿದೆ. ಇದು ಮೋದಿ ಕಿ ಗ್ಯಾರಂಟಿ. ನಾವು ಶಾಂತಿಯುತವಾಗಿ ಮತ್ತು ಸಾಂವಿಧಾನಿಕವಾಗಿ ರಾಮಮಂದಿರ ವಿಷಯದಲ್ಲಿ ಪರಿಹಾರಕ್ಕಾಗಿ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು. ರಾಮ ಮಂದಿರ ನಿರ್ಮಾಣ ಪೂರ್ಣಗೊಂಡಿದೆ. ಇದು ಮೋದಿ ಕಿ ಗ್ಯಾರಂಟಿ.

  ಹಾಗಾಗಿ, ಮೋದಿ ಕಿ ಗ್ಯಾರಂಟಿ ಎಂದರೆ ಜನರು ಗುರುತಿಸುತ್ತಾರೆ ಮತ್ತು ಬೆಂಬಲಿಸುತ್ತಾರೆ. ಏಕೆಂದರೆ ಅದು ನಂಬಿಕೆ ಮತ್ತು ಟ್ರಾ್ಯಕ್ ರೆಕಾರ್ಡ್ ಮೇಲೆ ಆಧಾರಿತವಾಗಿದೆ ಎಂಬುದು ಅವರಿಗೆ ತಿಳಿದಿದೆ. ಹಾಗಾಗಿಯೇ, 70 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ಜನರು ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಬರುತ್ತಾರೆ ಎಂದು ನಾನು ಹೇಳಿದಾಗ, ಅದು ಖಂಡಿತ ನೆರವೇರುತ್ತದೆ ಎಂಬ ವಿಶ್ವಾಸ ಜನರಲ್ಲಿದೆ. 80 ಕೋಟಿ ಜನರಿಗೆ ಇನ್ನೂ 5 ವರ್ಷಗಳವರೆಗೆ ಉಚಿತ ಆಹಾರಧಾನ್ಯ ಸಿಗುತ್ತದೆ ಎಂದು ನಾನು ಹೇಳಿದಾಗ, ಅದು ಈಡೇರುತ್ತದೆ ಎಂಬುದು ಜನರಿಗೆ ಖಚಿತವಾಗಿದೆ. ಮೋದಿ ಕಿ ಗ್ಯಾರಂಟಿಯ ಈ ವಿಶ್ವಾಸಾರ್ಹತೆಯು ಹೇಗಾದರೂ ಮಾಡಿ ಅಧಿಕಾರಕ್ಕೆ ಬರಲು ಯತ್ನಿಸುವವರಿಗೆ ಮತ್ತು ಭರವಸೆಗಳನ್ನು ಹೇಗೆ ಪೂರೈಸಬೇಕು ಎಂಬುದು ತಿಳಿದಿರದ್ದರೂ ಭರವಸೆಗಳನ್ನು ನೀಡುವವರಿಗಿಂತ ಬಹಳ ಭಿನ್ನವಾಗಿದೆ. ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ಜನರ ಅನುಭವದಿಂದ ಇದು ಸ್ಪಷ್ಟವಾಗಿದೆ- ಕಾಂಗ್ರೆಸ್​ನ ಭರವಸೆಗಳಲ್ಲಿ ಅರ್ಥವಿಲ್ಲ. ಅವರು ಉಚಿತ ವಿದ್ಯುತ್ ನೀಡುವ ಬಗ್ಗೆ ದೊಡ್ಡ ಭರವಸೆ ನೀಡಿದರು, ಆದರೆ ವಿದ್ಯುತ್ ಕಡಿತವನ್ನು (ಪವರ್ ಕಟ್) ನೀಡಿದರು.

  ಕಾಂಗ್ರೆಸ್ ರೈತರಿಗೆ ಭರವಸೆಗಳನ್ನೇನೋ ನೀಡಿತು. ಆದರೆ, ಕರ್ನಾಟಕ ಸರ್ಕಾರವು ಪಿಎಂ ಕಿಸಾನ್ ಜೊತೆಗೆ 55 ಲಕ್ಷಕ್ಕೂ ಹೆಚ್ಚು ರೈತರಿಗೆ ನೀಡುತ್ತಿದ್ದ ಹೆಚ್ಚುವರಿ ಹಣವನ್ನು ಕಡಿತಗೊಳಿಸಿತು. ಯುವಕರಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿ, ವಿದ್ಯಾರ್ಥಿವೇತನದಲ್ಲಿ ಕಡಿತ ಮಾಡಿದರು! ಟೆಕ್ ಹಬ್ ಆದ ಬೆಂಗಳೂರನ್ನು ಟ್ಯಾಂಕರ್ ಹಬ್ ಆಗಿ ಬದಲಾಯಿಸಿದ್ದಾರೆ. ಭರವಸೆಗಳನ್ನು ಹೇಗೆ ಈಡೇರಿಸಲಾಗುವುದು ಎಂದು ಹೇಳಲು ಚುನಾವಣೆಗೂ ಮುನ್ನ ನಿರಾಕರಿಸಿದ ಅವರು, ಅಧಿಕಾರಕ್ಕೆ ಬಂದ ನಂತರ ಏನನ್ನು ಮಾಡುವುದಕ್ಕೂ ತಮ್ಮ ಬಳಿ ಹಣವಿಲ್ಲ ಎಂದು ಹೇಳುತ್ತಾರೆ.

  . ದಕ್ಷಿಣದಲ್ಲಿ ಐಎನ್​ಡಿಐಎ ಮೈತ್ರಿಕೂಟ ಬಲಿಷ್ಠವಾಗಿದೆ, ಇದು ಹೇಗೆ ಸಾಧ್ಯ?

  ಮೋದಿ:ಇಂಡಿ ಮೈತ್ರಿಕೂಟದಲ್ಲಿ ನಾಯಕನೂ ಇಲ್ಲ, ವಿಷನ್ ಮೊದಲೇ ಇಲ್ಲ. ನಾನು 2014ರಲ್ಲಿ ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿತವಾದಾಗ ನನಗೂ ಅನುಭವ ಇರಲಿಲ್ಲ. ಗುಜರಾತ್ ಮುಖ್ಯಮಂತ್ರಿಯಾಗಿ 13 ವರ್ಷ ಉತ್ತಮ ಸಾಧನೆ ಮಾಡಿದರೂ ಮೋದಿಗೆ ಸಂಸದನಾಗಿ ಕೆಲಸ ಮಾಡಿದ ಪಾರ್ಲಿಮೆಂಟ್ ಅನುಭವ ಇರಲಿಲ್ಲ. ಒಂದು ರಾಜ್ಯದ ಆಡಳಿತ ನಡೆಸಿ ಮಾತ್ರ ಗೊತ್ತಿರುವವನು ದೇಶವನ್ನು ಹೇಗೆ ನಡೆಸಬಲ್ಲ? ವಿದೇಶಾಂಗ ನೀತಿ, ಆರ್ಥಿಕತೆಯನ್ನು ಹೇಗೆ ನಿಭಾಯಿಸಬಲ್ಲ ಎಂಬ ಅನೇಕ ಪ್ರಶ್ನೆ, ಸಂದೇಹಗಳು ಇದ್ದವು. ಲೋಕ ತಂತ್ರದಲ್ಲಿ ಇದು ಸಹಜ ಕೂಡ. ಆದರೂ ದೇಶದ ಜನತೆ ರಾಷ್ಟ್ರವನ್ನು ಮುನ್ನಡೆಸುವ ಒಂದು ಅವಕಾಶ ಮಾಡಿಕೊಟ್ಟರು. ನಾನು ಅವರ ವಿಶ್ವಾಸಕ್ಕೆ ಚ್ಯುತಿ ಬಾರದಂತೆ ನಡೆದುಕೊಂಡಿದ್ದೇನೆ. ಹೀಗಾಗಿ ಜನ ನನ್ನ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದಾರೆ. ಆದರೆ, ಇಂಡಿ ಮೈತ್ರಿಕೂಟದಲ್ಲಿ ಆಂತರಿಕ ಗುದ್ದಾಟ ಹಾಗೂ ವೈರುಧ್ಯಗಳು ಹೆಚ್ಚಿವೆ. ಕೇರಳದಲ್ಲಿ ಇಂಡಿ ಮೈತ್ರಿಕೂಟದ ಪಿಣರಾಯಿ ವಿಜಯನ್ ಅವರೇ ಅಮೇಥಿಯಿಂದ ವಯನಾಡಿಗೆ ಓಡಿ ಹೋಗಿರುವ ರಾಹುಲ್ ಗಾಂಧಿ ಸೋಲಿಸಲು ಅಣಿಯಾಗಿದ್ದಾರೆ. ಕೇರಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಇಂಡಿ ಮೈತ್ರಿಕೂಟದ ಪಕ್ಷಗಳಲ್ಲಿ ಹೊಂದಾಣಿಕೆ ಇಲ್ಲ. ಮೈತ್ರಿಕೂಟದ ಪಕ್ಷಗಳೇ ಒಬ್ಬರೊಬ್ಬರನ್ನು ಸೋಲಿಸಲಿವೆ. ಹೀಗಾಗಿ ಎನ್​ಡಿಎಗೆ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುವ ಅವಕಾಶಗಳಿವೆ.

  . ‘ಪ್ರತಿ ಲೋಕಸಭೆ ಕ್ಷೇತ್ರದಲ್ಲೂ ಮೋದಿ ಅಭ್ಯರ್ಥಿಯಾಗಿರುವಂತೆ ತೋರುತ್ತಿದೆ’ ಎಂಬುದು ಕೆಲವರ ವಾದ. ಬಿಜೆಪಿಯು ಚುನಾವಣೆಯಲ್ಲಿ ನಿಮ್ಮ ಜನಪ್ರಿಯತೆಯ ಮೇಲೆ ಹೆಚ್ಚು ಅವಲಂಬಿತವಾಗಿದೆ, ಇದು ಸ್ಥಳೀಯ ಸಮಸ್ಯೆಗಳು ಮತ್ತು ವೈಯಕ್ತಿಕ ಸಂಸದರ ಸಾಧನೆಗಳನ್ನು ಗೌಣವಾಗಿಸುತ್ತದೆಯೇ? ಪಕ್ಷ ಮತ್ತು ಅಭ್ಯರ್ಥಿಗಳು ನಿಮ್ಮನ್ನು ಅತಿಯಾಗಿ ಅವಲಂಬಿಸಿದ್ದಾರೆ ಎಂದು ನಿಮಗೆ ಅನಿಸುವುದಿಲ್ಲವೇ?

  ಮೋದಿ: ನರೇಂದ್ರ ಮೋದಿ ಇರುವುದು ಬಿಜೆಪಿಯಿಂದ. ಬಿಜೆಪಿ ಇಲ್ಲದೆ ಮೋದಿ ಇಲ್ಲ. ನಮ್ಮದು ಕೇಡರ್ ಆಧಾರಿತ ಪಕ್ಷ, ನನ್ನಂತಹ ಸಾಮಾನ್ಯ ಕಾರ್ಯಕರ್ತರಿಗೂ ಬೆಳೆಯಲು ಅವಕಾಶವಿದೆ. ನಾನು ಪನ್ನಾ ಪ್ರಮುಖನಾಗಿರಲಿ ಅಥವಾ ಪ್ರಧಾನಿಯಾಗಿರಲಿ, ನಾನು ಪಂಚಾಯತ್​ನಲ್ಲಿರಲಿ ಅಥವಾ ಸಂಸತ್ತಿನಲ್ಲಿರಲಿ, ಪಕ್ಷದ ನಿರ್ದೇಶನ ನನ್ನ ನಿರ್ದೇಶನವಾಗಿದೆ. ಪ್ರತಿ ಕ್ಷೇತ್ರದಲ್ಲೂ ಮತದಾರರ ಮುಂದೆ ಸರಳ ಮತ್ತು ಸ್ಪಷ್ಟವಾದ ಆಯ್ಕೆ ಇದೆ. ಎನ್​ಡಿಎ ಅಭ್ಯರ್ಥಿಗೆ ಮತ ಹಾಕಿದರೆ ಮೋದಿ ಕಿ ಗ್ಯಾರಂಟಿಗೆ ಮತ ಹಾಕುತ್ತಿದ್ದೇವೆ ಎಂಬ ಭಾವನೆ ಜನರಲ್ಲಿರುತ್ತದೆ. ಜನರ ಸಮಸ್ಯೆಗಳು ಮತ್ತು ಆಕಾಂಕ್ಷೆಗಳ ವಿಷಯದಲ್ಲಿ ಸ್ಥಳೀಯ ಅಂಶಗಳು ಮುಖ್ಯವಾಗುತ್ತವೆ. ಅದಕ್ಕಾಗಿಯೇ, ನೀವು ನಮ್ಮ ಪ್ರಣಾಳಿಕೆಯನ್ನು ನೋಡಿದರೆ, ನಾವು ಹೇಳಿರುವ ಎಲ್ಲವನ್ನೂ ಸ್ಥಳೀಯ ಆಕಾಂಕ್ಷೆಗಳ ಮೇಲೆ ಕೇಂದ್ರೀಕರಿಸಿರುವುದನ್ನು ಸ್ಪಷ್ಟವಾಗಿ ಕಂಡುಕೊಳ್ಳಬಹುದು. ಉದಾಹರಣೆಗೆ, ನಾವು ‘ಸ್ಥಳೀಯ ಭಾಷೆಗಳನ್ನು ಉತ್ತೇಜಿಸುತ್ತೇವೆ’ ಎಂದು ಹೇಳಿದಾಗ ಅದು ಕನ್ನಡದ ಸಬಲೀಕರಣವಾಗಿದೆ. ಪರಂಪರೆ ಮತ್ತು ಪ್ರವಾಸೋದ್ಯಮವನ್ನು ಬಲಪಡಿಸುತ್ತೇವೆ ಎಂದಾಗ ಕರ್ನಾಟಕದ ಹಂಪಿ-ಬಾದಾಮಿಯಂತಹ ಸ್ಥಳಗಳ ಜನರಿಗೆ ಹೆಚ್ಚಿನ ಅವಕಾಶಗಳು ಸಿಗುತ್ತವೆ. ನಮ್ಮ ದೃಷ್ಟಿ ಪ್ರತಿಯೊಂದು ಪ್ರದೇಶಕ್ಕೆ ಸೇರಿದ ಪ್ರತಿಯೊಬ್ಬರಿಗೂ ಆಗಿದೆ. ಕರ್ನಾಟಕ ಮತ್ತು ಇತರ ಪ್ರದೇಶಗಳ ಜನರು ಸ್ಥಳೀಯ ಆಕಾಂಕ್ಷೆಗಳು ಮತ್ತು ರಾಷ್ಟ್ರೀಯ ಪ್ರಗತಿಯನ್ನು ಪರಸ್ಪರ ಪೂರಕವಾಗಿ ನೋಡುತ್ತಾರೆ. ಕರ್ನಾಟಕದ ಅಭಿವೃದ್ಧಿಯಿಂದಲೇ ಭಾರತದ ಅಭಿವೃದ್ಧಿ ಎಂಬ ನಮ್ಮ ದೃಷ್ಟಿಯನ್ನು ಅವರು ಅರ್ಥ ಮಾಡಿಕೊಳ್ಳುತ್ತಾರೆ.

  . ದಕ್ಷಿಣ ಭಾರತದಲ್ಲಿ ಹೆಚ್ಚು ಸೀಟುಗಳನ್ನು ಗೆಲ್ಲಲು ನೀವು ಭಾರಿ ಪ್ರಯತ್ನಪಡುತ್ತಿದ್ದೀರಿ. ಬಿಜೆಪಿಗೆ ದಕ್ಷಿಣಭಾರತ ಮತ ಹಾಕಲಿದೆ ಎಂದು ನಿಮಗನಿಸುತ್ತದೆಯೇ?

  ಮೋದಿ: ನಿಮ್ಮಲ್ಲಿ ಒಂದು ಸರಳ ಪ್ರಶ್ನೆ ಕೇಳುತ್ತೇನೆ. 2019ರ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಿಂದ ಅತಿ ಹೆಚ್ಚು ಸಂಸದರು ಯಾವ ಪಕ್ಷದಿಂದ ಆಯ್ಕೆಯಾದರು? ಉತ್ತರ ಬಿಜೆಪಿ ಎಂಬುದು ನಿಮಗೆ ಗೊತ್ತಿದೆ. 2019ರಲ್ಲಿ ಕರ್ನಾಟಕದಲ್ಲಿ ಹೆಚ್ಚು ಸೀಟು ಪಡೆದ ಪಕ್ಷ ಯಾವುದು? ನಾವು ಕರ್ನಾಟಕದಲ್ಲಿ ಹಲವು ಚುನಾವಣೆಗಳನ್ನು ಗೆದ್ದಿದ್ದೇವೆ ಮತ್ತು ಉತ್ತಮ ಸರ್ಕಾರವನ್ನೂ ನೀಡಿದ್ದೇವೆ. ದೇಶಾದ್ಯಂತ ಪಕ್ಷ ಬಲವಾಗಿದೆ. ದಕ್ಷಿಣದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಸೀಟುಗಳನ್ನು ಗೆಲ್ಲಲಿದ್ದೇವೆ.

  ವಿಜಯ ಭಾರತ ಪ್ರಧಾನಿ ಮೋದಿ ಸಂಕಲ್ಪ

  . ಜಗಜ್ಯೋತಿ ಬಸವೇಶ್ವರರ ಬಗ್ಗೆ ನೀವು ಸದಾ ಮೆಚ್ಚುಗೆಯ ಮಾತುಗಳನ್ನು ಆಡುತ್ತಿರುತ್ತೀರಿ. ಬಸವಣ್ಣನವರ ಬಗ್ಗೆ ನಿಮಗೆ ಇಷ್ಟವಾಗುವ ಸಂಗತಿ ಏನು?

  ಮೋದಿ: ರಾಜ ಮಹಾರಾಜರು, ರಾಣಿಯರು, ಸಂತರು, ವೀರ ಮಹಿಳೆಯರು, ಸ್ವಾತಂತ್ರ್ಯ ಹೋರಾಟಗಾರರು ಸೇರಿದಂತೆ ಮಹಾನ್ ಸಾಧಕರನ್ನು ಕಂಡ ಅದ್ಭುತ ನಾಡು ಈ ಕರ್ನಾಟಕ. ದೇಶದ ಪ್ರತಿ ಪ್ರದೇಶದಲ್ಲೂ ಕಾಲಕಾಲಕ್ಕೆ ಮಹಾನ್ ಚೇತನಗಳು ಹುಟ್ಟಿ, ಸಮಾಜದ ಅಂಕುಡೊಂಕುಗಳನ್ನು ಸರಿಪಡಿಸಿ, ನಮ್ಮೆಲ್ಲರಿಗೆ ಸನ್ಮಾರ್ಗ ತೋರಿಸುತ್ತ ಬಂದಿರುವುದು ವಿಶೇಷವೇ ಸರಿ. ಅಂಥವರಲ್ಲಿ ಬಸವಣ್ಣ ಅಗ್ರಗಣ್ಯರು. ಅವರ ಅನೇಕ ಚಿಂತನೆ, ಆದರ್ಶಗಳು ಸಮಯಕ್ಕಿಂತ ಬಹಳ ಮುಂದಿದ್ದವು. 13ನೇ ಶತಮಾನದಲ್ಲಿ ಸಿದ್ಧವಾದ ಮ್ಯಾಗ್ನಾಕಾರ್ಟಾ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿತು ಎಂದು ಹೇಳಲಾಗುತ್ತದೆ. ಅದು ಮಹತ್ವದ ಮೈಲಿಗಲ್ಲು ಕೂಡ ಹೌದು. ಆದರೆ, ಅನುಭವ ಮಂಟಪ ಎಂಬ ಪ್ರಜಾಸತ್ತಾತ್ಮಕ ವೇದಿಕೆಯನ್ನು ಬಸವೇಶ್ವರರು 12ನೇ ಶತಮಾನದಲ್ಲಿಯೇ (ಮ್ಯಾಗ್ನಾಕಾರ್ಟಾಕ್ಕಿಂತ ಮುನ್ನ) ಸ್ಥಾಪಿಸಿದ್ದರು. ಇದನ್ನು 2015ರಲ್ಲಿ ಲಂಡನ್​ಗೆ ಭೇಟಿ ನೀಡಿ, ಬಸವೇಶ್ವರರ ಪ್ರತಿಮೆ ಅನಾವರಣಗೊಳಿಸಿದ್ದ ವೇಳೆ ಅಂದಿನ ಬ್ರಿಟನ್ ಪ್ರಧಾನಿಯವರಿಗೂ ತಿಳಿಸಿದ್ದೆ. ಭಾರತದಲ್ಲಿ ನಡೆದ, ಜಾಗತಿಕ ನಾಯಕರು ಪಾಲ್ಗೊಂಡಿದ್ದ, ಜಿ-20 ಸಮಾವೇಶದ ಸ್ಥಳಕ್ಕೂ ಭಾರತ ಮಂಟಪ ಎಂದು ನಾಮಕರಣ ಮಾಡಿ, ಇಡೀ ಪ್ರಪಂಚದ ಮುಂದೆ ಗುರು ಬಸವೇಶ್ವರರಿಗೆ ಗೌರವ ಸಲ್ಲಿಸಿದ್ದೆವು. ಈ ಮೂಲಕ ಅವರ ಮಹತ್ವವನ್ನು ನಾವು ಎತ್ತಿ ತೋರಿಸಿದ್ದೇವೆ. ಇದಲ್ಲದೆ, ಮಹಿಳಾ ಸಬಲೀಕರಣ, ಸಾಮಾಜಿಕ ಸಮಾನತೆ ಕುರಿತು ಅವರ ಚಿಂತನೆಗಳು ನಮ್ಮ ಆಡಳಿತಕ್ಕೂ ಸ್ಪೂರ್ತಿಯಾಗಿವೆ.

  . ಕರ್ನಾಟಕಕ್ಕೆ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ನಿರ್ಲಕ್ಷ್ಯ ಧೋರಣೆ ತಾಳಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ. ನಿಮ್ಮ ಉತ್ತರವೇನು?

  – ಕರ್ನಾಟಕದಲ್ಲಿ ಮಕ್ಕಳಿಗೂ ಕೂಡ ರಾಷ್ಟ್ರಕವಿ ಕುವೆಂಪು ಅವರ ಬಗ್ಗೆ ಗೊತ್ತಿರುತ್ತದೆ. ಕುವೆಂಪು ಅವರ ‘ಜಯಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ’ ಎಂಬ ನಾಡಗೀತೆಯ ಆಶಯವನ್ನೇ ನಾವೂ ಅನುಸರಿಸುತ್ತಿದ್ದೇವೆ. ರಾಷ್ಟ್ರೀಯ ಪ್ರಗತಿಯ ಜತೆಜತೆಗೇ ಪ್ರಾದೇಶಿಕ ಅಭಿವೃದ್ಧಿಯ ವಿಜನ್ ನಮ್ಮದು. ಕೆಲ ಸಂಗತಿಗಳನ್ನು ನಾನು ಸ್ಪಷ್ಟಪಡಿಸುತ್ತೇನೆ. ಕಳೆದ 10 ವರ್ಷಗಳಲ್ಲಿ ಕರ್ನಾಟಕಕ್ಕೆ ಕೇಂದ್ರ ನೀಡುವ ಅನುದಾನ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. 2004ರಿಂದ 2014ರವರೆಗಿನ ಕಾಂಗ್ರೆಸ್ ಅವಧಿಗೆ ಹೋಲಿಸಿದರೆ 2014ರಿಂದ 2024ರವರೆಗಿನ ಅವಧಿಯಲ್ಲಿ ಕರ್ನಾಟಕಕ್ಕೆ ತೆರಿಗೆ ವಿಕೇಂದ್ರೀಕರಣದಲ್ಲಿ ಶೇ. 273ರಷ್ಟು ಏರಿಕೆಯಾಗಿದೆ. ತೆರಿಗೆ ವಿಕೇಂದ್ರೀಕರಣ ಹೊರತುಪಡಿಸಿ ರಾಜ್ಯಕ್ಕೆ ನೀಡಲಾದ ಅನುದಾನ ಹಂಚಿಕೆಯಲ್ಲಿ 244% ಹೆಚ್ಚಿಗೆಯಾಗಿದೆ. ಅಂದರೆ, ಕರ್ನಾಟಕಕ್ಕೆ ಕಾಂಗ್ರೆಸ್​ಗಿಂತ ಬಿಜೆಪಿ ಸರ್ಕಾರ ಹೆಚ್ಚಿನ ಅನುದಾನ ಖಾತರಿಪಡಿಸಿದೆ ಎಂದಾಯಿತು. ಹಾಗೆಯೇ, ಕರ್ನಾಟಕದಲ್ಲಿ ಕೈಗೊಳ್ಳಲಾದ ಕೆಲಸದ ಮೇಲೂ ಗಮನಹರಿಸೋಣ. 4,900 ಕಿ.ಮೀ.ಗೂ ಹೆಚ್ಚು ಉದ್ದದ ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ವಿುಸಲಾಗಿದೆ. ದಕ್ಷಿಣ ಭಾರತದ ಮೊದಲ ಕೈಗಾರಿಕಾ ಕಾರಿಡಾರ್ ರಾಜ್ಯದಲ್ಲಿದೆ. ಮೈಸೂರು- ಬೆಂಗಳೂರು ನಡುವಿನ ಹೆದ್ದಾರಿ ಈ ಪ್ರದೇಶದ ಅಭಿವೃದ್ಧಿಗೆ ಹೊಸ ವೇಗ ನೀಡಿದೆ. ಕಲಬುರಗಿ- ರಾಯಚೂರು ನಡುವೆ ಉತ್ತರ ಕರ್ನಾಟಕದ ಮೊದಲ ಆರು ಲೇನ್​ಗಳ ಗ್ರೀನ್​ಫೀಲ್ಡ್ ಹೆದ್ದಾರಿ ನಿರ್ವಿುಸಲು ಸುಮಾರು 5,500 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ರಾಜ್ಯದಲ್ಲಿ 7 ವಂದೇ ಭಾರತ್ ರೈಲುಗಳು ಓಡುತ್ತಿವೆ. ರಾಜ್ಯಕ್ಕೆ ರೈಲ್ವೆ ಹಂಚಿಕೆಯಲ್ಲಿ ಶೇ. 800ರಷ್ಟು ಹೆಚ್ಚಳವಾಗಿದೆ. ಈ ವರ್ಷ ಕರ್ನಾಟಕದಲ್ಲಿ ರೈಲ್ವೆ ಅಭಿವೃದ್ಧಿಗೆಂದು ಮೀಸಲಿಟ್ಟ ಹಣದ ಪ್ರಮಾಣ (ರೂ. 7500 ಕೋಟಿ) 2009ರಿಂದ 2014ರವರೆಗೆ ಮೀಸಲಿಟ್ಟ ಪ್ರಮಾಣಕ್ಕಿಂತ (ರೂ. 835 ಕೋಟಿ) 9 ಪಟ್ಟು ಹೆಚ್ಚು. ಬೆಂಗಳೂರು ಮೆಟ್ರೋ ವಿಸ್ತರಣೆಗೆ ರೂ. 21,800 ಕೋಟಿ ಹಣ ಕೇಂದ್ರದಿಂದ ಹೂಡಿಕೆಯಾಗಿದೆ. ರಾಜ್ಯದ 7 ನಗರಗಳಿಗೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ರೂ. 3,500 ಕೋಟಿ ಅನುಮೋದಿಸಲಾಗಿದೆ. 5 ವಿಮಾನ ನಿಲ್ದಾಣಗಳನ್ನು ಕಾರ್ಯಗತಗೊಳಿಸಲಾಗಿದೆ. ಧಾರವಾಡದಲ್ಲಿ ಐಐಟಿ ಉದ್ಘಾಟನೆಯಾಗಿದೆ. ಪಿಎಂ ಮಿತ್ರ ಮೆಗಾ ಟೆಕ್ಸ್​ಟೈಲ್ಸ್ ಪಾರ್ಕ್​ಗೆ ಯೋಜನೆ ರೂಪಿಸಲಾಗಿದೆ. ಮತ್ತು ಏಷ್ಯಾದ ಅತಿ ದೊಡ್ಡ ಹೆಲಿಕಾಪ್ಟರ್ ಕಾರ್ಖಾನೆಯನ್ನು ತುಮಕೂರಿನಲ್ಲಿ ನಿರ್ವಿುಸಲಾಗುತ್ತಿದೆ. ಕೇಂದ್ರದ ಯೋಜನೆಗಳ ನೇರ ಪ್ರಯೋಜನಗಳನ್ನು ಪಡೆಯುವ ಕೋಟಿಗಟ್ಟಲೆ ಫಲಾನುಭವಿಗಳ ಬಗ್ಗೆ ಹೇಳಿದರೆ ಬಹುಶಃ ನಿಮ್ಮ ಪತ್ರಿಕೆಯಲ್ಲಿ ಸ್ಥಳ ಸಾಕಾಗದು ಅನಿಸುತ್ತದೆ. ಹಾಗಾಗಿ, ಕಾಂಗ್ರೆಸ್ ಮಾಡುತ್ತಿರುವ ಆರೋಪಗಳಿಗೆ ನೈಜ ಕಾರಣಗಳನ್ನು ಅರ್ಥ ಮಾಡಿಕೊಳ್ಳಬೇಕು. ಅವರು ತಮ್ಮ ಪಕ್ಷದ ರಾಷ್ಟ್ರವ್ಯಾಪಿ ಚುನಾವಣಾ ನಿರ್ವಹಣೆಗೆ ಕರ್ನಾಟಕವನ್ನು ಎಟಿಎಂ ಮಾಡಿಕೊಂಡಿದ್ದಾರೆ.

  ವಿಜಯ ಭಾರತ ಪ್ರಧಾನಿ ಮೋದಿ ಸಂಕಲ್ಪ

  . ಬಿಜೆಪಿಯ ಭ್ರಷ್ಟಾಚಾರ ವಿರೋಧಿ ಪ್ರಯತ್ನಗಳು ಕೇವಲ ವಿರೋಧ ಪಕ್ಷಗಳನ್ನು ಗುರಿಯಾಗಿಸಿಕೊಂಡಿವೆ ಎಂಬ ಆರೋಪಗಳಿವೆ. ಕೆಲವು ಬಿಜೆಪಿ ನಾಯಕರು ಮತ್ತು ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡ ನಾಯಕರು ಭ್ರಷ್ಟಾಚಾರದ ಗುರುತರ ಆಪಾದನೆಗಳನ್ನು ಹೊಂದಿದ್ದಾರೆ. ಬಿಜೆಪಿಗೆ ಬಂದ ಮೇಲೆ ಇವರ ಮೇಲಿನ ಭ್ರಷ್ಟಾಚಾರದ ಆರೋಪಗಳು ಗೌಣವಾಗುತ್ತವೆ ಎಂಬ ಟೀಕೆಗಳಿವೆ. ಇದಕ್ಕೆ ಏನು ಹೇಳುತ್ತೀರಿ?

  ಮೋದಿ: ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿ ಎಎಪಿ ವಿರುದ್ಧ ಕಾಂಗ್ರೆಸ್ ಸರಣಿ ಪತ್ರಿಕಾಗೋಷ್ಠಿಗಳನ್ನು ನಡೆಸುತ್ತಿತ್ತು. ಆದರೆ ಈ ಹಗರಣದಲ್ಲಿ ತನಿಖಾ ಸಂಸ್ಥೆ ಕಾನೂನು ಮತ್ತು ನ್ಯಾಯಾಲಯಗಳ ಪ್ರಕಾರ ಕ್ರಮ ಕೈಗೊಂಡಾಗ ಅವರು ಈಗ ಬೇರೆ ರಾಗ ತೆಗೆದಿದ್ದಾರೆ. ಅದೇ ರೀತಿ, ಕೆಲವು ದಿನಗಳ ಹಿಂದೆ, ಕಾಂಗ್ರೆಸ್​ನ ಪ್ರಮುಖ ರಾಜವಂಶದ ನಾಯಕರೊಬ್ಬರು ಕಾಂಗ್ರೆಸ್ ಮುಖ್ಯಮಂತ್ರಿ ಭ್ರಷ್ಟ ಸರ್ಕಾರವನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಿದರು. ಆದರೆ ಈಗಾಗಲೇ ನಡೆಯುತ್ತಿರುವ ತನಿಖೆಗಳು ಏನಾದರೂ ಕ್ರಮಕ್ಕೆ ಕಾರಣವಾದರೆ, ಅದೇ ಕಾಂಗ್ರೆಸ್ ನಾಯಕರು ವಿಭಿನ್ನ ರಾಗ ಹಾಡುತ್ತಾರೆ. ತನಿಖಾ ಸಂಸ್ಥೆಗಳು ಯಾವುದೇ ತಾರತಮ್ಯವಿಲ್ಲದೆ ಕಾನೂನಿನ ಪ್ರಕಾರ ಎಲ್ಲ ಪ್ರಕರಣಗಳ ತನಿಖೆ ನಡೆಸುತ್ತಿವೆ. ರಾಜಕೀಯ ಸಂಬಂಧದಿಂದಾಗಿ ಯಾವುದೇ ಆರೋಪಿಗಳ ವಿರುದ್ಧದ ಒಂದೇ ಒಂದು ಪ್ರಕರಣವನ್ನು ಮುಚ್ಚಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಜಾರಿ ನಿರ್ದೇಶನಾಲಯ (ಇ.ಡಿ.) ಅಡಿಯಲ್ಲಿರುವ ಎಲ್ಲ ಪ್ರಕರಣಗಳ ಪೈಕಿ ಕೇವಲ ಶೇಕಡ 3ರಷ್ಟು ಪ್ರಕರಣಗಳು ರಾಜಕಾರಣಿಗಳ ವಿರುದ್ಧ ಮತ್ತು ಶೇಕಡ 97 ಪ್ರಕರಣಗಳು ರಾಜಕೀಯೇತರ ವ್ಯಕ್ತಿಗಳ ವಿರುದ್ಧ ಇವೆ ಎಂದು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಇ.ಡಿ. ತನ್ನ ಕೆಲಸವನ್ನು ಸ್ವತಂತ್ರವಾಗಿ ಮಾಡಲು ಅವಕಾಶ ನೀಡಬೇಕು. 2014ರ ಮೊದಲು, ಇ.ಡಿ. ಕೇವಲ 5000 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿತ್ತು. ಆದರೆ ನಮ್ಮ ಸರ್ಕಾರದ ಅವಧಿಯಲ್ಲಿ 1.2 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ.

  2014ರ ಮೊದಲು, ಇ.ಡಿ. ದೇಶಾದ್ಯಂತ 34 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದರೆ, ಕಳೆದ ಹತ್ತು ವರ್ಷಗಳಲ್ಲಿ ಅದು 2200 ಕೋಟಿ ರೂ. ನಗದು ವಶಪಡಿಸಿಕೊಂಡಿದೆ. ಯಾವುದೇ ಭ್ರಷ್ಟರನ್ನು ಬಿಡುವುದಿಲ್ಲ ಎಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ; ಇದು ಮೋದಿ ಕಿ ಗ್ಯಾರಂಟಿ.

  . ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿರುವುದರಿಂದ ಕರ್ನಾಟಕದ ಮಟ್ಟಿಗೆ ಬಿಜೆಪಿ ಹಿನ್ನಡೆಯ ಹಾದಿಯಲ್ಲಿದೆ ಎಂದು ನಿಮಗೆ ಅನಿಸುವುದಿಲ್ಲವೇ?

  ಮೋದಿ: ಕಳೆದ ಎರಡು ಲೋಕಸಭಾ ಚುನಾವಣೆಗಳ ಇತಿಹಾಸವನ್ನು ಒಮ್ಮೆ ನೋಡೋಣ. 2014ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿತ್ತು. ರಾಜ್ಯದಲ್ಲಿ ಬಿಜೆಪಿ ಹೆಚ್ಚು ಲೋಕಸಭೆ ಸೀಟುಗಳನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಹಲವರು ಹೇಳಿದ್ದರು. ಆದರೆ, ಕರ್ನಾಟಕದ ಜನರು ನಮಗೆ ಆಶೀರ್ವಾದ ಮಾಡಿದರು. ನಂತರ, ಅವರ ನಂಬಿಕೆಯನ್ನು ಸಾಕಷ್ಟು ಅಭಿವೃದ್ಧಿ ಕಾರ್ಯ ಮತ್ತು ಪ್ರಗತಿಯ ಮೂಲಕ ಉಳಿಸಿಕೊಂಡೆವು. 2019ರಲ್ಲೂ ರಾಜ್ಯದಲ್ಲಿ ಬಿಜೆಪಿಯೇತರ ಸರ್ಕಾರವಿತ್ತು. ಆಗಲೂ, 2014ನ್ನು ಮೀರಿಸುವ ಜನಾದೇಶ ನಮ್ಮ ಪಕ್ಷಕ್ಕೆ ಬಂತು. 2024ರಲ್ಲೂ ಕಾಂಗ್ರೆಸ್ ಸರ್ಕಾರವಿದೆ. ದೇಶದ ಭವಿಷ್ಯದ ದೂರದೃಷ್ಟಿ ಹಾಗೂ ಕಲ್ಯಾಣ ಕಾರ್ಯಕ್ರಮಗಳ ಪಟ್ಟಿಯನ್ನು ಜನರ ಮುಂದಿಟ್ಟಿದ್ದೇವೆ. ಹೀಗಾಗಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿರುವುದು ನಮ್ಮ ಪಕ್ಷಕ್ಕೆ ಯಾವುದೇ ಹಾನಿ ಮಾಡುವುದಿಲ್ಲ. ಕರ್ನಾಟಕ ‘ಮೋದಿ ಗ್ಯಾರಂಟಿ’ಯಲ್ಲಿ ನಂಬಿಕೆ ಇಟ್ಟಿದೆ. ಇದಲ್ಲದೆ, ಕರ್ನಾಟಕದ ಜನರು ಕಾಂಗ್ರೆಸ್ ಬಗ್ಗೆ ಹತಾಶರಾಗಿದ್ದಾರೆ. ಕಾಂಗ್ರೆಸ್ ಎಂತಹ ಭಯಾನಕ ವಾತಾವರಣ ಸೃಷ್ಟಿಸಿದೆ ಎನ್ನುವುದಕ್ಕೆ ಹುಬ್ಬಳ್ಳಿಯ ಕಾಲೇಜಿನ ಹೆಣ್ಣುಮಗಳ ಪ್ರಕರಣವೇ ಸಾಕ್ಷಿ. ಕಾಂಗ್ರೆಸ್ಸಿನ ತುಷ್ಟೀಕರಣ ರಾಜಕೀಯದಿಂದ ಸಮಾಜವಿರೋಧಿಗಳು ಸಾಮಾನ್ಯರ ಮೇಲೆ ದಾಳಿ ಮಾಡುತ್ತಿರುವ ಸುದ್ದಿಗಳು ಬರುತ್ತಲೇ ಇವೆ. ರಾಜ್ಯದಲ್ಲಿ ಭ್ರಷ್ಟಾಚಾರ, ದುರಾಡಳಿತ ಉತ್ತುಂಗಕ್ಕೇರಿದೆ. ದ್ರೋಹ ಬಗೆದಿರುವ ಕಾಂಗ್ರೆಸ್​ಗೆ ತಕ್ಕ ಶಾಸ್ತಿ ಮಾಡುವ ಮನಸ್ಥಿತಿಯಲ್ಲಿ ಜನರಿದ್ದಾರೆ.

  . ಕರ್ನಾಟಕದ ಜನರಿಗೆ ನಿಮ್ಮ ಸಂದೇಶವೇನು? ರಾಜ್ಯದ ಬಗ್ಗೆ ನಿಮ್ಮ ವಿಜನ್ ಏನು?

  ಮೋದಿ: ಪ್ರಗತಿಯ ಜತೆಗೆ ನಮ್ಮ ಸಂಸ್ಕೃತಿಗೆ ಹೊಸ ಚೈತನ್ಯ ನೀಡುವಲ್ಲಿ ಒಂದು ಸರ್ಕಾರವಾಗಿ ನಾವು ಕೆಲಸ ಮಾಡುತ್ತಿದ್ದೇವೆ. ಇದು ಕರ್ನಾಟಕದ ಪ್ರಕೃತಿ, ಸಂಸ್ಕೃತಿ, ಸಂಪ್ರದಾಯ, ತಂತ್ರಜ್ಞಾನ, ಆಧುನಿಕತೆ, ಆಧ್ಯಾತ್ಮದ ಆತ್ಮದೊಂದಿಗೆ ಹೊಂದಿಕೆಯಾಗುತ್ತದೆ. ಬಾದಾಮಿಯ ಐತಿಹಾಸಿಕ ಅದ್ಭುತಗಳಾಗಲಿ ಅಥವಾ ಬೆಂಗಳೂರಿನ ಸಾಫ್ಟ್​ವೇರ್ ಕೇಂದ್ರವಾಗಿರಲಿ, ವಿಶ್ವಕ್ಕೆ ಕರ್ನಾಟಕದ ಕೊಡುಗೆ ದೊಡ್ಡದಿದೆ. ಕಳೆದ 10 ವರ್ಷಗಳಲ್ಲಿ ನಮ್ಮ ಆಡಳಿತ ನೀತಿಗಳ ಪರಿಣಾಮದಿಂದಲೇ ರಾಜ್ಯದಲ್ಲಿ ಹೂಡಿಕೆ, ಮೂಲಸೌಕರ್ಯ ಹೆಚ್ಚಾಗಿ ಅಭಿವೃದ್ಧಿಯೂ ವೇಗದಲ್ಲಿ ಸಾಗುತ್ತಿದೆ. ಕೇಂದ್ರದಲ್ಲಿ ಸ್ಥಿರ, ಬಲಿಷ್ಠ ಸರ್ಕಾರವಿರುವುದರಿಂದ ಇದು ಸಾಧ್ಯವಾಗಿದೆ. ಸ್ಪಷ್ಟ ಬಹುಮತ ಇರುವ ಸುಭದ್ರ ಸರ್ಕಾರ ಅಧಿಕಾರಕ್ಕೆ ಬಂದರೆ ಆ ಸರ್ಕಾರ ತನ್ನ ಅಸ್ತಿತ್ವದ ಬಗ್ಗೆ ಚಿಂತೆ ಮಾಡದೇ ಜನಕಲ್ಯಾಣ ಕ್ಕಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ. ಇದಲ್ಲದೆ, ಇದು ಬಡವರು, ನಿರ್ಲಕ್ಷ್ಯ್ಕೊಳಗಾದವರ ರಕ್ಷಣೆಗಾಗಿ ಇರುವ ಸರ್ಕಾರ. ಬೆಳವಣಿಗೆಯ ಪ್ರಯೋಜನಗಳು ರಾಜ್ಯದ ಅನೇಕ ಪ್ರದೇಶಗಳಿಗೆ ಇನ್ನೂ ಸಂಪೂರ್ಣವಾಗಿ ತಲುಪಿಲ್ಲ ಎನ್ನುವುದು ನಮಗೆ ತಿಳಿದಿದೆ. ಅಂತಹ ಪ್ರದೇಶಗಳಿಗಾಗಿ ನಾವು ಅನೇಕ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ ಮತ್ತು ಆ ಪ್ರದೇಶಗಳನ್ನೂ ಪ್ರಗತಿಯ ಹಾದಿಯಲ್ಲಿ ಕೊಂಡೊಯ್ಯಲಿದ್ದೇವೆ. ಕರ್ನಾಟಕದ ಜನರ ಆಶೀರ್ವಾದ ಜನ ಕಲ್ಯಾಣಕ್ಕಾಗಿ ಇನ್ನೂ ಹೆಚ್ಚಿನ ಯೋಜನೆಗಳನ್ನು ಹೊರತರಲು ಮತ್ತು ಅಸ್ತಿತ್ವದಲ್ಲಿರುವ ಯೋಜನೆಗಳನ್ನು ಬಲಪಡಿಸಲು ನಮಗೆ ಸಹಾಯ ಮಾಡುತ್ತದೆ. ವಿಕಸಿತ ಭಾರತಕ್ಕಾಗಿ ‘ನಮ್ಮ ವಿಕಸಿತ ಕರ್ನಾಟಕ’ದ ವಿಜನ್​ನ್ನು ಜನ ಬೆಂಬಲಿಸುತ್ತಾರೆ ಎಂಬ ನಂಬಿಕೆ ನನ್ನದು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts