More

    ನೀರಿನ ಮೇಲೆ ಯೋಗಾಸನ ಮಾಡಿ ತೋರಿಸಿದ ಜಲಕನ್ಯೆ ಖ್ಯಾತಿಯ ಡಾ. ಎಂ.ಸವಿತಾ ರಾಣಿ

    ಬೆಂಗಳೂರು: ಛಲ ಹಾಗೂ ನಿರಂತ ಪ್ರಯತ್ನ ಇದ್ದರೆ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ನಗರದ ರಾಮಯ್ಯ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿಯ ಟ್ರೇನಿ ಆ್ಯಂಡ್ ಪ್ಲೇಸ್‌ಮೆಂಟ್ ಮುಖ್ಯಸ್ಥರಾದ ಡಾ. ಎಂ. ಸವಿತಾ ರಾಣಿ ಉದಾಹರಣೆ ಆಗಿದ್ದಾರೆ. ಇವರು ನೀರಿನ ಮೇಲೆ ಯೋಗ ಮಾಡುವ ಮೂಲಕ ವರ್ಲ್ಡ್​ ಬುಕ್ ಆಫ್​ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ್ದಾರೆ.

    ಸಾಮಾನ್ಯವಾಗಿ ಯೋಗ ಮಾಡಲು ಸಮತಟ್ಟಾದ ಸ್ಥಳ ಹಾಗೂ ಯೋಗದ ಮ್ಯಾಟ್, ಇತ್ಯಾದಿ ಪರಿಕರಣಗಳನ್ನು ಕೇಳುತ್ತಾರೆ. ಆದರೆ ಇವರು ಅದ್ಯಾವುದನ್ನು ಬಳಸದೆಯೇ ನೀರಿನ ಮೇಲೆ ಯೋಗ ಮಾಡುವ ಮೂಲಕ ಎಲ್ಲರನ್ನು ಬೆರಗುಗೊಳಿಸಿದ್ದಾರೆ. ಇವರು ನೀರಿನಲ್ಲಿ ವಜ್ರಾಸನ, ಚಕ್ರಾಸನ, ವೃಕ್ಷಾಸನ ಸೇರಿ 35ಕ್ಕೂ ಹೆಚ್ಚು ಆಸನಗಳನ್ನು ಮಾಡುತ್ತಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂದರ್ಭದಲ್ಲಿ ನೀರಿನಲ್ಲಿ ತೇಲುತ್ತಾ ಯೋಗ ಮಾಡುತ್ತಲೇ ರಾಷ್ಟ್ರಧ್ವಜ ಎತ್ತಿ ಹಿಡಿದು ಗೌರವ ಸಲ್ಲಿಸಿದ್ದರು. ಕುಂಭ ಮೇಳದಲ್ಲಿ ಜಲಯೋಗ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.

    ಹತ್ತು ವರ್ಷಗಳ ಕಠಿಣ ಅಭ್ಯಾಸ:
    ಕಳೆದ 10 ವರ್ಷಗಳಿಂದ ಕಠಿಣ ಯೋಗಾಭ್ಯಾಸ ಮಾಡುತ್ತಿರುವ ಡಾ. ಎಂ. ಸವಿತಾ ರಾಣಿ, ಬಾಲ್ಯದಲ್ಲಿ ತಾಯಿಯಿಂದ ಯೋಗಾಸನ ಕಲಿತವರು. ನೀರು ಎಂದರೆ ತುಂಬಾ ಇಷ್ಟ ಪಡುವ ಇವರಿಗೆ ಒಮ್ಮೆ ನೀರಿನಲ್ಲಿ ಏಕೆ ಯೋಗ ಮಾಡಬಾರದು ಎಂಬ ಪ್ರಶ್ನೆ ಮೂಡಿತು. ಆ ನಂತರ ಅವರು ನೀರಿನಲ್ಲಿ ಯೋಗ ಮಾಡುವ ಪ್ರಯತ್ನದಲ್ಲಿ ತೊಡಗಿಸಿಕೊಂಡರು. ಆರಂಭದಲ್ಲಿ ಹಲವು ಬಾರಿ ನೀರಿನಲ್ಲಿ ಮುಳುಗಿ ಎದ್ದಿದ್ದ ಇವರು ತಮ್ಮ ಪ್ರಯತ್ನ ಬಿಡಲಿಲ್ಲ. ಯಾವುದೇ ಗುರುವಿನ ಮಾಗದರ್ಶನ ಪಡೆಯದೆ ಸ್ವಪ್ರಯತ್ನದಿಂದಲೇ ನೀರಿನ ಮೇಲೆ ಯೋಗಾಸನ ಮಾಡುವುದನ್ನು ಕರಗತಮಾಡಿಕೊಂಡಿದ್ದಾರೆ.

    ಧ್ಯಾನ, ಪ್ರಾಣಾಯಾಮ, ಈಜು ಮುಖ್ಯ:
    ನೀರಿನಲ್ಲಿ ಉಸಿರು ಬಿಗಿ ಹಿಡಿದು ಕುಳಿತುಕೊಳ್ಳುವುದು ಸುಲಭವಲ್ಲ. ಅದರಲ್ಲೂ ನಾನಾ ಭಂಗಿಯಲ್ಲಿ ದೇಹವನ್ನು ದಂಡಿಸಬೇಕು ಎಂದರೆ ನಿಜಕ್ಕೂ ಅದು ಸವಾಲೇ ಸರಿ. ನೀರಿನಲ್ಲಿ ಯೋಗ ಎಂದರೆ ನೆಲದ ಮೇಲೆ ಮಾಡುವ ರೀತಿಯಲ್ಲೇ ಮಾಡುವ ಯೋಗದ ಕೆಲವು ಆಸನಗಳನ್ನು ಒಳಗೊಂಡಿದೆ. ಈ ಕುರಿತು ಅವರೇ ಹೇಳುವಂತೆ, ನೀರಿನ ಮೇಲೆ ಯೋಗ ಮಾಡಲು ಧ್ಯಾನ, ಪ್ರಾಣಾಯಾಮ ಮತ್ತು ಈಜು ಕಲಿತಿರುವುದು ಬಹಳ ಮುಖ್ಯ. ತಕ್ಷಣಕ್ಕೆ ಇದು ಸಿದ್ಧಿಸುವುದಿಲ್ಲ. ನಿರಂತರ ಪ್ರಯತ್ನದೊಂದಿಗೆ ತಾಳ್ಮೆ ಬಹಳ ಮುಖ್ಯ ಎನ್ನುತ್ತಾರೆ ಸವಿತಾ ರಾಣಿ.

    ಜಲಕನ್ಯೆ ಎಂಬ ಖ್ಯಾತಿ:
    ಜಲ ಕ್ರೀಡೆಯಂತೆ ಇಲ್ಲಿ ಉಸಿರಿನ ಮೇಲಿನ ನಿಯಂತ್ರಣವೇ ಬಹಳ ಮುಖ್ಯ. ಇದು ಸುಲಭದ ವಿಧಾನ ಅಲ್ಲ. ಎಲ್ಲರಿಂದಲೂ ಸಾಧ್ಯವೂ ಇಲ್ಲ. ತರಬೇತಿ, ತಾಳ್ಮೆ ಹಾಗೂ ಆಸಕ್ತಿ ಮತ್ತು ನಿರಂತರ ಪ್ರಯತ್ನ ಮುಖ್ಯ. ಯಾರೂ ಸಹ ತರಬೇತುದಾರರಿಲ್ಲದೆ ನೀರಿನಲ್ಲಿ ಯೋಗ ಮಾಡುವ ಸಾಹಸಕ್ಕೆ ಹೋಗಬೇಡಿ ಎಂದು ಸಲಹೆ ನೀಡುವ ಸವಿತಾ ರಾಣಿ ತಮ್ಮ ಈ ಸಾಧನೆಗಾಗಿ ಜಲಕನ್ಯೆ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts