More

    ಹೋರಾಟ ಜೀವನ ಪರ್ಯಂತ ಪ್ರಯಾಣ- ಮಾನವ ಹಕ್ಕು ಹೋರಾಟಗಾರ ಡಾ.ರವೀಂದ್ರನಾಥ ಶ್ಯಾನುಭಾಗ್ ಅಭಿಪ್ರಾಯ

    ಮಂಗಳೂರು: ಹೋರಾಟ ಪ್ರಾರಂಭಿಸುವುದು ಅಷ್ಟೊಂದು ಸುಲಭದ ಮಾತಲ್ಲ. ಜನ ಬಲ, ಹಣದ ಬಲ ಇದ್ದರೂ ಇಲ್ಲಿ ಅಪಾಯದ ಸಾಧ್ಯತೆ ಹೆಚ್ಚು. ಆದರೆ ನನ್ನ ವಿಷಯದಲ್ಲಿ ಹಾಗಲ್ಲ. ಪ್ರಾರಂಭಿಸಿದ ಹೋರಾಟವನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಕಳೆದ 5 ವರ್ಷಗಳಿಂದ ಈ ಹೋರಾಟ ನಿಲ್ಲಿಸಬೇಕೆಂಬ ಯೋಚನೆ ಇದ್ದರೂ ನಿಲ್ಲಿಸಲಾಗುತ್ತಿಲ್ಲ. ಇದು ಜೀವನದ ಬಹುದೊಡ್ಡ ಪ್ರಯಾಣ ಎಂದು ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶ್ಯಾನುಭಾಗ್ ಹೇಳಿದರು.

    ಶಕ್ತಿನಗರದ ವಿಶ್ವ ಕೊಂಕಣಿ ಕೇಂದ್ರದಲ್ಲಿ ಬುಧವಾರ ಮಾನವ ಹಕ್ಕು ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು. ಹಲವಾರು ಕಷ್ಟ, ತೊಂದರೆಗಳ ನಡುವೆಯೂ ಕಳೆದ 32 ವರ್ಷಗಳಲ್ಲಿ ಸುಮಾರು 41 ಸಾವಿರ ಕೇಸುಗಳನ್ನು ಗೆದ್ದು ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಿಕೊಡಲಾಗಿದೆ. ಈ ಸಮಾಜದಲ್ಲಿ ತಮ್ಮ ಹಕ್ಕು, ನ್ಯಾಯಕ್ಕಾಗಿ ಎಷ್ಟೋ ಬಾರಿ ಜನ ಹಣವನ್ನೂ ಖರ್ಚು ಮಾಡಬೇಕಾಗುತ್ತದೆ, ಆದರೆ ನಮ್ಮಲ್ಲಿ ಬಂದರೆ ಹಾಗಲ್ಲ. ಜನರಿಗೆ ನ್ಯಾಯ ಒದಗಿಸುವುದೇ ನಮ್ಮ ಗುರಿ ಹಾಗೂ ಉದ್ದೇಶ ಎಂದರು.

    * ಪರ್ಯಾಯ ನ್ಯಾಯಾಂಗ: ಅನ್ಯಾಯಕ್ಕೊಳಗಾದ ಬಡವರಿಗೆ ನ್ಯಾಯ ಒದಗಿಸುವುದು ನಮ್ಮ ಮುಖ್ಯ ಗುರಿ. 30ಕ್ಕೂ ಹೆಚ್ಚು ವರ್ಷಗಳಿಂದ ಬಾಕಿ ಇದ್ದ ಅದೆಷ್ಟೋ ಪ್ರಕರಣಗಳನ್ನು ನಾವು 1ರಿಂದ 3 ತಿಂಗಳ ಅವಧಿಯಲ್ಲಿ ಗೆದ್ದು ಕೊಟ್ಟು ನ್ಯಾಯ ಒದಗಿಸಿದ್ದೇವೆ. ಸುಮಾರು 41 ಸಾವಿರ ಕೇಸುಗಳಲ್ಲಿ 900 ಪ್ರಕರಣಗಳಷ್ಟೇ ನ್ಯಾಯಾಲಯದ ಮೆಟ್ಟಿಲೇರಿದೆ ಬಿಟ್ಟರೆ ಉಳಿದೆಲ್ಲವನ್ನೂ ಮಾತುಕತೆ ಮೂಲಕ ಪರಿಹರಿಸಿಕೊಡಲಾಗಿದೆ. ನಾವು ಇದನ್ನು ಪರ್ಯಾಯ ನ್ಯಾಯಾಂಗ ಎಂದೂ ಕರೆಯಬಹುದು ಎಂದರು.

    ವಿಶ್ವ ಕೊಂಕಣಿ ಕೇಂದ್ರದ ಕಾರ್ಯದರ್ಶಿ ಗಿರಿಧರ್ ಕಾಮತ್, ಮುಖ್ಯ ಕಾರ್ಯನಿರ್ವಣಾಧಿಕಾರಿ ಗುರುದತ್ ಬಂಟ್ವಾಳ್ಕರ್ ಇದ್ದರು. ಅಧ್ಯಕ್ಷ ನಂದಗೋಪಾಲ ಶೆಣೈ ಸ್ವಾಗತಿಸಿದರು. ಸುಚಿತ್ರಾ ಎಸ್. ಶೆಣೈ ಕಾರ್ಯಕ್ರಮ ನಿರೂಪಿಸಿದರು.

    24 ತಾಸಿನಲ್ಲಿ ಆರು ಪ್ರಕರಣ ಇತ್ಯರ್ಥ

    ನನ್ನ ಅನುಮತಿ ಇಲ್ಲದೆ 2017ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿತ್ತು. ಎಂಡೋಸಲ್ಫಾನ್ ಸಂತ್ರಸ್ತರ ಕೇಸು, ಚಿಕ್ಕಮಗಳೂರಿನಲ್ಲಿ ಅಂಗನವಾಡಿ ಕಾರ್ಯಕರ್ತರ ಎಲ್‌ಐಸಿ ಪ್ರಕರಣದ ಬಗ್ಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿ ನಾನು ಪ್ರಶಸ್ತಿ ನಿರಾಕರಿಸಿದೆ. ಪ್ರಶಸ್ತಿ ಅದರ ಬದಲು ಈ ಕೆಲಸಗಳನ್ನು ಮಾಡಿಕೊಡಿ ಎಂದು ಸರ್ಕಾರಕ್ಕೆ ಆಗ್ರಹಿಸಿದ್ದರಿಂದ 24 ಗಂಟೆಗಳ ಒಳಗಾಗಿ ಆರು ಪ್ರಕರಣ ಇತ್ಯರ್ಥವಾಗಿತ್ತು ಎಂದು ಡಾ.ಶ್ಯಾನುಭಾಗ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts