More

    ಕಸಾಪ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವೆ

    ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ ಮುಂದಿನ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ನಾಡೋಜ ಡಾ. ಮಹೇಶ ಜೋಶಿ ಹೇಳಿದರು.

    ಅನೇಕ ಜಿಲ್ಲೆ, ತಾಲೂಕುಗಳಿಗೆ ಭೇಟಿ ನೀಡಿ ಹಲವು ಸಭೆ ಸಮಾರಂಭಗಳಲ್ಲಿ ಪಾಲ್ಗೊಂಡಿದ್ದೇನೆ. ಈ ಕುರಿತು ಸಾಹಿತ್ಯಾಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಸಾಪ ಕೂಡ ಜನಸಾಮಾನ್ಯ ಪರಿಷತ್ ಆಗಬೇಕೆಂಬ ದೃಷ್ಟಿಯಿಂದ ಸ್ಪರ್ಧಿಸುವ ನಿರ್ಧಾರ ಮಾಡಿದ್ದೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಕಸಾಪ ಯಾವುದೊ ಗುಂಪು, ಪ್ರದೇಶಕ್ಕೆ ಸೀಮಿತವಾಗದಂತೆ ಪ್ರತಿಯೊಬ್ಬ ಕನ್ನಡಿಗನೂ ಸದಸ್ಯನಾಗಿ ಜನ ಸಾಮಾನ್ಯರ ಪರಿಷತ್ ಆಗಬೇಕು ಎಂಬ ಗುರಿ ಹೊಂದಲಾಗಿದೆ. ಈ ನಿಟ್ಟಿನಲ್ಲಿ ಯಾವ ಕೆಲಸ ಮಾಡುತ್ತೇನೆಂಬ ಬಗ್ಗೆ ಪ್ರಣಾಳಿಕೆಯಲ್ಲಿ ಹೇಳಲಾಗಿದೆ ಎಂದರು.

    ಕಸಾಪ ಸರ್ಕಾರದ ಸಂಸ್ಥೆಯಲ್ಲ ಸ್ವಾಯತ್ತ ಸಂಸ್ಥೆ. ಅವಶ್ಯಕತೆ, ಅನಿವಾರ್ಯತೆ ಬಂದರೆ ಓರ್ವ ಕನ್ನಡಿಗನಿಂದ ಒಂದು ರೂ. ಅಥವಾ 10 ರೂ. ಸಂಗ್ರಹಿಸಿ ಸಮ್ಮೇಳನ ಮಾಡಲಾಗುವುದು. ಸರ್ಕಾರ ನೀರಿನಂತೆ. ಕಸಾಪ ಎನ್ನುವುದು ದೋಣಿ. ದೋಣಿ ನೀರಿನ ಮೇಲೆ ಹೋದರೂ ನೀರನ್ನು ಒಳಗೆ ಬಿಟ್ಟುಕೊಳ್ಳದು ಎಂದರು.

    ಚಿಕ್ಕಮಗಳೂರಿನಲ್ಲಿ ಸಮ್ಮೇಳನ ನಡೆಸುವೆ: ಚಿಕ್ಕಮಗಳೂರಿನ ಬಗ್ಗೆ ವಿಶೇಷ ಅಭಿಮಾನ ಮತ್ತು ಗೌರವವಿದೆ. ಇಲ್ಲಿ ಅಖಿಲ ಭಾರತೀಯ ಸಮ್ಮೇಳನವಾಗಿ 39 ವರ್ಷವಾಗಿದೆ. ನಾನು ಅಧ್ಯಕ್ಷನಾದರೆ ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ಇಲ್ಲೇ ನಡೆಸುವುದಾಗಿ ಡಾ. ಮಹೇಶ ಜೋಶಿ ಹೇಳಿದರು. ಮತದಾರರನ್ನು ಸೆಳೆಯಲು ಈ ಘೊಷಣೆಯಲ್ಲ. ಅರ್ಹತೆ, ಯೋಗ್ಯತೆ, ಸೌಲಭ್ಯಗಳೆಲ್ಲವನ್ನೂ ಜಿಲ್ಲೆ ಹೊಂದಿದೆ ಎಂಬ ಹೆಮ್ಮೆಯಿಂದ ಹೇಳುತ್ತಿದ್ದೇನೆ ಎಂದರು.

    ಆನ್​ಲೈನ್ ಸದಸ್ಯತ್ವ: ಕಸಾಪ ಸದಸ್ಯತ್ವ ಪಡೆಯವ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಸದಸ್ಯನಾಗಬೇಕೆಂದರೆ ಹರಸಾಹಸಪಡುವ ಸ್ಥಿತಿ ಇದೆ. ಅಲೆದಾಟಗಳನ್ನು ತಪ್ಪಿಸಿ ಆಧುನಿಕ ತಂತ್ರಜ್ಞಾನ ಬಳಸಿ ಆನ್​ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡುವುದಕ್ಕೆ ಆದ್ಯತೆ ನೀಡಲಾಗುವುದು ಎಂದು ಡಾ. ಮಹೇಶ ಜೋಶಿ ತಿಳಿಸಿದರು.

    ಕಸಾಪ 3.20 ಲಕ್ಷ ಮತದಾರರನ್ನು ಹೊಂದಿದ್ದು ಅದನ್ನು ಪರಿಷ್ಕರಣೆ ಮಾಡಿದಾಗ ಅನೇಕ ಮೃತರ ಹೆಸರು ಮತ್ತು ಬಹಳಷ್ಟು ಮತದಾರರ ಅಪೂರ್ಣ ವಿಳಾಸವಿದೆ. ಇವೆಲ್ಲ ಕಾರಣದಿಂದ 30 ರಿಂದ 40 ಸಾವಿರ ಮತದಾರರನ್ನು ಪಟ್ಟಿಯಿಂದ ಕೈ ಬಿಡಬೇಕಾಗುವ ಸಾಧ್ಯತೆ ಇದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts