More

    ನಾವೇನನ್ನು ತಿನ್ನುತ್ತಿದ್ದೇವೆ? ಅವೆಷ್ಟು ಸರಿ? ಅಷ್ಟಕ್ಕೂ ರೋಗಗಳು ಏಕೆ ಬರುತ್ತವೆ?; ಎಲ್ಲವನ್ನೂ ಇಲ್ಲಿ ವಿವರಿಸಿದ್ದಾರೆ ಡಾ.ಖಾದರ್​

    ನಾವೇನು ತಿನ್ನುತ್ತಿದ್ದೇವೆ?

    2012ರಲ್ಲಿ ಕರ್ನಾಟಕ ರಾಜ್ಯ ಬೀಜರಕ್ಷಕರ ರಾಜ್ಯ ಸಮ್ಮೇಳನದಲ್ಲಿ ಡಾ. ಖಾದರ್ ಅವರು ವಿಚಾರಗಳನ್ನು ಮಂಡಿಸಿದ್ದು ಹೀಗೆ;
    “ನನ್ನ ಸಣ್ಣ ಪರಿಚಯದಿಂದ ಮಾತು ಪ್ರಾರಂಭಿಸುತ್ತೇನೆ. ನಾನು ರಾಸಾಯನಿಕ ಪ್ರಚೋದಕ ಪದಾರ್ಥಗಳ (ಸ್ಪೆರಾಯಿಡ್ಸ್) ಮೇಲೆ ಬೆಂಗಳೂರಿನ ಇಂಡಿಯನ್ ಇನ್​​ಸ್ಟಿಟ್ಯೂಟ್​ ಆಫ್ ಸೈನ್ಸಸ್​​ನಲ್ಲಿ ಪಿಹೆಚ್.ಡಿ. ಮಾಡಿ ಅಮೆರಿಕದ ಡುಪಾಂಟ್ ಎನ್ನುವ ಒಂದು ದೊಡ್ಡ ಬಹುರಾಷ್ಟ್ರೀಯ ಕಂಪನಿಯಲ್ಲಿ ವಿಜ್ಞಾನಿಯಾಗಿ ಕೆಲಸ ಮಾಡುತ್ತಿದ್ದೆ.

    ಅಮೆರಿಕದಲ್ಲಿ ಹತ್ತು ವರ್ಷಗಳ ಕಾಲ ಜೀವನ ಸಾಗಿಸಿದೆ. ಅಲ್ಲಿ ಕೆಲಸ ಮಾಡುತ್ತ ನನಗೆ ಈ ಬಹುರಾಷ್ಟ್ರೀಯ ಕಂಪನಿಗಳ ಹುನ್ನಾರ ಗೋಚರ ಆಗತೊಡಗಿತು. ಇಡೀ ಪ್ರಪಂಚದಲ್ಲಿ ನಮ್ಮ ಭೂಮಿಯ ಫಲವತ್ತತೆ ಕುಸಿದು ಬಿದ್ದು ಹೋಗುತ್ತಿದೆ. ಇನ್ನು 30-40 ವರ್ಷಗಳಲ್ಲಿ ರೈತರು ಆಹಾರ ಬೆಳೆಯಲು ಆಗದಂತಹ ಪರಿಸ್ಥಿತಿ ಉಂಟಾಗಬಹುದು ಅನ್ನುವ ವಿಚಾರ ನನ್ನ ಮನಸ್ಸಿಗೆ ಗೋಚರ ಆಗತೊಡಗಿದಂತೆ ಭಯಭೀತನಾದೆ. ಈ ಕೆಲಸಗಳನ್ನು ಮಾಡುವುದಕ್ಕಿಂತ ನನ್ನ ದೇಶಕ್ಕೆ ವಾಪಸ್​ ಹೋಗಿ ನಮ್ಮ ಭೂಮಿಯ ಫಲವತ್ತತೆ ಕಾಪಾಡುವ ದಿಕ್ಕಲ್ಲಿ ಏನಾದರೂ ಕೆಲಸ ಮಾಡಬೇಕು ಎಂದು 1997ರಲ್ಲಿ ರಾಜೀನಾಮೆ ಕೊಟ್ಟು ಭಾರತಕ್ಕೆ ವಾಪಸ್​ ಬಂದೆ.

    ಈಗ 14 ವರ್ಷದಿಂದ ಕಾಡು ಕೃಷಿ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ರೈತರಿಗೆ, ಶಾಲಾ ಕಾಲೇಜುಗಳ ಮಕ್ಕಳಿಗೆ, ನಮ್ಮ ಆಹಾರ, ಆರೋಗ್ಯ, ವ್ಯವಸಾಯ ಪದ್ಧತಿಗಳ ಬಗ್ಗೆ ತಿಳಿಸಿ ಹೇಳುತ್ತ ಇದ್ದೇನೆ. ತಪ್ಪು ಆಹಾರ ಪದ್ಧತಿಗಳನ್ನು ತಿದ್ದುಕೊಳ್ಳುವಲ್ಲಿ ಜನರಿಗೆ ಸಹಾಯ ಮಾಡುತ್ತಿದ್ದೇನೆ.

    ಆಹಾರವೇ ಮುಳುವಾದಾಗ…

    ವೈವಿಧ್ಯಮಯವಾದ ವ್ಯವಸಾಯ ಪದ್ಧತಿಗಳನ್ನು ಈಗಲೂ ಈ ಭೂಮಿಯ ಮೇಲೆ ಮಾಡುತ್ತಿರುವಂಥ ಒಂದೇ ದೇಶ ಭಾರತ. ನಮ್ಮ ಈ ಅದ್ಭುತ ಪದ್ಧತಿಗಳನ್ನು ನಾವು ಕಡೆಗಣಿಸಿ, ನಮ್ಮ ಹಸುಗಳು ಕೀಳು, ನಮ್ಮ ವ್ಯವಸಾಯ ಕೀಳು ಎಂಬ ಕೆಟ್ಟ ವಿಚಾರಗಳನ್ನು ತಲೆಯಲ್ಲಿ ಹಾಕಿಕೊಂಡು 4-5 ವಾಣಿಜ್ಯ ಬೆಳೆಗಳ ಬೆನ್ನು ಹಿಡಿದುಕೊಂಡು ಸರಿಯಾಗಿ ಮೋಸ ಹೋಗಿದ್ದೇವೆ. ಹಸಿರು ಕ್ರಾಂತಿ ಅಂತ ಹೇಳಿಕೊಂಡು ಕುಳ್ಳನೆ ತಳಿ ಗೋಧಿ, ಅಕ್ಕಿ ಬೆಳೆದು, ಅದರಲ್ಲೂ ಪೋಷಕಾಂಶ ಇರುವ ಹೊಟ್ಟು ತೆಗೆದು, ಪಾಲಿಷ್​ ಮಾಡಿ, ಅದಕ್ಕೆ ಮೇಣ ಹಚ್ಚಿ ಅದೇ ಆಹಾರ ಎಂದು ತಿಳಿದುಕೊಂಡು ತಿನ್ನಲು ಶುರು ಮಾಡಿದ ಮೇಲೆ ಏನಾಯಿತು? ಮಧುಮೇಹ ರೋಗ ವ್ಯಾಪಕವಾಯಿತು. ಅನ್ನ ತಿಂದ 45 ನಿಮಿಷದಲ್ಲಿ ರಕ್ತಕ್ಕೆ ಸಕ್ಕರೆ ಸೇರುತ್ತದೆ. 2020ನೇ ವರ್ಷಕ್ಕೆ ಭಾರತದ ಅರ್ಧಕರ್ಧ ಜನರಿಗೆ ಮಧುಮೇಹ ಇರುತ್ತದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯವರು ಹೆಮ್ಮೆಯಿಂದ ಹೇಳುತ್ತಿದ್ದಾರೆ. ಔಷಧ ಕಂಪನಿಗಳಂತೂ ಈ ವಿಚಾರ
    ಕೇಳಿ ಖುಷಿಯಲ್ಲಿವೆ.

    ವಿಪರ್ಯಾಸ ಏನೆಂದರೆ ನಮ್ಮ ಹಳ್ಳಿಗಳಲ್ಲಿ ನ್ಯಾಯಬೆಲೆ ಅಂಗಡಿಗಳಲ್ಲಿ ಕೊಡುತ್ತಿರುವ ಅಕ್ಕಿ 4-5 ವರ್ಷ ಗೋದಾಮುಗಳಲ್ಲಿ ಬಿದ್ದು, ಅದನ್ನು ತಿಂದಾಗ ಅದಕ್ಕೆ ಲೇಪನ ಮಾಡಿರೋ ಔಷಧದಿಂದ ಬರುವ ಕಾಯಿಲೆ ಒಂದು ಕಡೆಯಾದರೆ, ಆ ಅಕ್ಕಿ ತಿಂದು ಬರುವ ಕಾಯಿಲೆ ಮತ್ತೊಂದು ಕಡೆ. ನಾನು ಎಷ್ಟೋ ಹಳ್ಳಿಗಳಿಗೆ ಹೋಗುತ್ತಿರುತ್ತೇನೆ. ಹಳ್ಳಿಗಳಲ್ಲಿ ಎಲ್ಲ ಕಡೆ ಹೆಣ್ಣುಮಕ್ಕಳಿಗೆ ವಿಪರೀತ ರಕ್ತಹೀನತೆ, ಕ್ಯಾಲ್ಸಿಯಂ ಕೊರತೆ ಕಂಡು ಬರುತ್ತಿದೆ. ಹೆಂಗಸರ ಋತುಸ್ರಾವ ಸರಿಯಾಗಿಲ್ಲ. ಗರ್ಭಕೋಶದಲ್ಲಿ ಗಡ್ಡೆಗಳು, ರಕ್ತಹೀನತೆ, ಯಾಕೆ ಅಂದರೆ ಸೊಪ್ಪು ತಿನ್ನುವುದನ್ನು ಬಿಟ್ಟಿದ್ದಾರೆ.

    ಮುಂಚೆ ಎಲ್ಲ ಸೊಪ್ಪಿನ ಬೀಜಗಳನ್ನು ಯಾರೂ ಹಾಕಿ ಬೆಳೆಯುತ್ತಿರಲಿಲ್ಲ. ಬೇಲಿಯಲ್ಲಿ, ಹೊಲದಲ್ಲಿ ಬೆರಕೆ ಸೊಪ್ಪು ಕೊಯ್ತಾ ಇದ್ದರು. ಇವತ್ತು ಯಾರೂ ಬೆರಕೆ ಸೊಪ್ಪು ಕೊಯ್ತಾ ಇಲ್ಲ. ಈಗ ಎಷ್ಟರಮಟ್ಟಿಗೆ ಆಗಿದೆ ಎಂದರೆ ನಗರದಲ್ಲಿ 20-25 ವರ್ಷದ ಹುಡುಗರನ್ನು ವೀರ್ಯ ಪರೀಕ್ಷೆ ಮಾಡಿದರೆ ವೀರ್ಯದಲ್ಲಿ ಕನಿಷ್ಠ 100 ವೀರ್ಯಾಣು ಇರಬೇಕಾದಲ್ಲಿ 20 ಕೂಡ ಇರುವುದಿಲ್ಲ. ದುರ್ಬಲತೆ ! ಯಾವ ಜೀವಿಗಾದರೂ ಪ್ರಕೃತಿಯಲ್ಲಿ ತನ್ನ ಮುಂದಿನ ಪೀಳಿಗೆಯನ್ನು ಉತ್ಪನ್ನ ಮಾಡುವ ಸಾಮರ್ಥ್ಯವನ್ನೇ ಕಳೆದುಕೊಳ್ಳುತ್ತಿದ್ದೇವೆ ಅಂದರೆ..! ಇದಕ್ಕೆ ಕಾರಣ ನಾವು ತಿನ್ನುತ್ತಿರುವ ಆಹಾರ ಪದಾರ್ಥಗಳು.

    ರಸಗೊಬ್ಬರ ಹಾಕಿ ಬೆಳೆಸುತ್ತಿರುವಂಥ ಯಾವುದೇ ಆಹಾರದಲ್ಲಿ ಪೋಷಕಾಂಶಗಳು ಕಮ್ಮಿ ಆಗುತ್ತಿವೆ. ನೀರು ಕಟ್ಟಿ ರಾಸಾಯನಿಕ ಪದ್ಧತಿಯಲ್ಲಿ ಬೆಳೆಸುವ ಕುಳ್ಳನೆ ತಳಿ ಭತ್ತ ತಿಂದರೆ ನಿಮಗೆ ಮಧುಮೇಹ ಬರುತ್ತದೆ. ನೀರು ಕಟ್ಟದೇ ಒಣ ಭೂಮಿಯಲ್ಲಿ ಸಾವಯವದಲ್ಲಿ ಬೆಳೆಸುವ ನಾಟಿ ತಳಿ ಸಿರಿಧಾನ್ಯಗಳನ್ನು ತಿಂದರೆ ಮಧುಮೇಹ ಬರುವುದಿಲ್ಲ. ಇಷ್ಟೇ ವ್ಯತ್ಯಾಸ.

    ನಾವು ರೈತರಾಗಿ ಇದ್ದುಕೊಂಡು ನಾವು ತಿನ್ನುವ ಆಹಾರವನ್ನು ನಮ್ಮ ಹೊಲದಲ್ಲಿ ನಮ್ಮ ಕೈಯಿಂದ ಬೆಳಸಿಕೊಂಡು ತಿನ್ನುವುದನ್ನು ಬಿಟ್ಟು, ಹೊರಗಡೆಯಿಂದ ಕೊಂಡು ತರುತ್ತಿರುವುದು ದೊಡ್ಡ ದುರಂತ. ಹಿಂದೆ ಎಲ್ಲ ಯಾರಾದರೂ ಬಜಾರಿನಿಂದ ತರಕಾರಿ ತಂದರೆ ನೋಡಯ್ಯ ನಾಚಿಕೆ ಇಲ್ಲ, ಬದನೆಕಾಯಿ, ಟೊಮಾಟೋನಾ ಅಂಗಡಿಯಿಂದ ತರ್ತಾನೆ ಅಂತ ಬಯ್ಯೋರು. ಈಗ ಯಾರೂ ಒಂದೂ ತರಕಾರಿ ಹಿತ್ತಲಲ್ಲಿ ಬೆಳಸಿಕೊಂಡು ತಿನ್ನುವುದಿಲ್ಲ. ನಮ್ಮ ಹಸು ಕರೆದ ಹಾಲನ್ನು ನಾವು ಉಪಯೋಗ ಮಾಡುವ ಬದಲು ಡೈರಿಯಲ್ಲಿ ಹಾಕಿ ಸಂಸ್ಕರಣೆ ಮಾಡಿದ ಹಾಲನ್ನು ತಂದು ಕುಡಿಯುತ್ತೇವೆ. ಇದರಿಂದ ಏನಾಗಿದೆ? ನಮ್ಮ ನಗರಗಳಲ್ಲಂತೂ ಇವತ್ತು ಹೆಣ್ಣು ಮಕ್ಕಳಿಗೆ 10 ವರ್ಷಕ್ಕೆ ಮುಟ್ಟಾಗಲು ಶುರುವಾಗಿದೆ (ಹಸುವಿಗೆ ಹಾಲು ಹೆಚ್ಚಾಗಲು ಹಾರ್ಮೋನ್ ಇಂಜೆಕ್ಷನ್ ಚುಚ್ಚುತ್ತಾರೆ).

    ಕುಲಾಂತರಿ ಸೋಯಾಬೀನು

    ನಾವೇನನ್ನು ತಿನ್ನುತ್ತಿದ್ದೇವೆ? ಅವೆಷ್ಟು ಸರಿ? ಅಷ್ಟಕ್ಕೂ ರೋಗಗಳು ಏಕೆ ಬರುತ್ತವೆ?; ಎಲ್ಲವನ್ನೂ ಇಲ್ಲಿ ವಿವರಿಸಿದ್ದಾರೆ ಡಾ.ಖಾದರ್​ಅಮೆರಿಕದಲ್ಲಿ ಕುಲಾಂತರಿ ಸೋಯಾಬೀನು ತುಂಬಾ ಬೆಳೆಯುತ್ತಾರೆ. ಸೋಯಾಬೀನು ಹೊಲದಲ್ಲಿ ಹಾಕಿದಾಗ ಕಳೆ ಸಾಯಲಿ ಎಂದು ಕಳೆನಾಶಕ ಹೊಡೆಯುತ್ತಾರೆ. ಈ ಕಳೆನಾಶಕ ಹೊಡೆದಾಗ ಸೋಯಾಬೀನು ಸಾಯುತ್ತಿತ್ತು. ಈ ಕಳೆನಾಶಕವನ್ನು ತಡೆದುಕೊಂಡು ಬೆಳೆಯುವಂಥ ಒಂದು ಗುಣವನ್ನು ಸೋಯಾಬೀನ್ ಗಿಡಕ್ಕೆ ಸೇರಿಸಿಬಿಟ್ಟರೆ ಸಮೃದ್ಧವಾಗಿ ಬೆಳೆಯಬಹುದು ಎಂದು ಯೋಚಿಸಿದರು.

    ಅಮೆರಿಕ ವಿಯಟ್ನಾಂ ಮೇಲೆ ಯುದ್ಧ ಮಾಡುತ್ತಿದ್ದಾಗ ವಿಯಟ್ನಾಂ ಯೋಧರು ಕಾಡಲ್ಲಿ ಬಚ್ಚಿಟ್ಟುಕೊಂಡು ಯುದ್ಧ ಮಾಡುತ್ತಾ ಅಮೆರಿಕ ಯೋಧರಿಗೆ ಮಣ್ಣು ಮುಕ್ಕಿಸುತ್ತಿದ್ದರು. ಆಗ ಅಮೆರಿಕ ಏಜೆಂಟ್ ಆರೆಂಜ್ ಎನ್ನುವ ಒಂದು ರಾಸಾಯನಿಕ ಪದಾರ್ಥವನ್ನು ವಿಮಾನದಿಂದ ಕಾಡಿನ ಮೇಲೆ ಸಿಂಪಡಣೆ ಮಾಡಿ ಕಾಡಿನ ಹಸುರನ್ನೆಲ್ಲಾ ನಾಶಮಾಡಿ ಬೋಳು ಮಾಡಿತು. ಆ ಏಜೆಂಟ್ ಆರೆಂಜ್​ನಂಥ ಕಳೆನಾಶಕವನ್ನು ಛಿದ್ರಿಸುವ ಗುಣವನ್ನು ಹೊಂದಿರುವ ಜೆನ್ಯು (gene) ವನ್ನು ಕುಲಾಂತರಿ ಪ್ರಯೋಗಗಳಿಂದ ಸೋಯಾಬೀನಿನ ಬೀಜದಲ್ಲಿ ಹಚ್ಚಿಬಿಟ್ಟಿದ್ದಾರೆ. ಇಂತಹ ಕಳೆನಾಶಕವನ್ನು ಹೊಡೆದಾಗ ಸೋಯಾಬೀನು ಮಾತ್ರ ಬೆಳೆಯುತ್ತೆ, ಬೇರೆ ಗಿಡಗಳು ಸಾಯುತ್ತವೆ. ಅಂಥ ಪದಾರ್ಥ ಈ ಸೋಯಾಬೀನ್!

    ಇಂಥ ಕುಲಾಂತರಿ ಸೋಯಾಬೀನನ್ನು ನಮ್ಮ ದೇಶಕ್ಕೆ ತಂದು, ಇಡೀ ದೇಶದಲ್ಲಿ ಬೆಳೆಯುವಂತೆ ಮಾಡಬೇಕು ಎಂದು ಅಮೆರಿಕದ ಕಂಪನಿ ಹುನ್ನಾರ ನಡೆಸುತ್ತಿದೆ. ಯಾವ ರೀತಿ ಮರಳು ಮಾಡಿದೆಯೆಂದರೆ ನಿಮಗೆ ಪ್ರೊಟೀನ್ ಕೊರತೆ ಇದೆ. ರೊಟ್ಟಿ, ಚಪಾತಿ ಹಿಟ್ಟಿನಲ್ಲಿ ಸ್ವಲ್ಪ ಸೋಯಾಬೀನ್ ಹಿಟ್ಟು ಹಾಕಿಕೊಳ್ಳಿ ನಿಮಗೆ ಪ್ರೋಟಿನ್ ಸಿಗುತ್ತದೆ ಎಂದು ಪ್ರಚಾರ ಮಾಡುತ್ತಿದ್ದಾರೆ. ಸೋಯಾಬೀನ್ ಅನ್ನುವುದು ಒಂದು ದ್ವಿದಳ ಧಾನ್ಯ, ನಮ್ಮಲ್ಲಿ ಹತ್ತು ಹಲವಾರು ದ್ವಿದಳ ಧಾನ್ಯಗಳಿವೆ. ಬೇಕಾದಷ್ಟು ತಿನ್ನುತ್ತಿದ್ದೇವೆ. ನಮಗೆ ಪ್ರೊಟೀನಿನ ಯಾವ ಕೊರತೆಯೂ ಇಲ್ಲ.

    ನಿಜಕ್ಕೂ ಸೋಯಾಬೀನು ಹಾಗೂ ಮೆಕ್ಕೆ ಜೋಳವನ್ನು ಅಸಹಜವಾಗಿ ಮಾಂಸವನ್ನು ಉತ್ಪಾದಿಸಲು ಬೆಳೆಯುತ್ತಿದ್ದಾರೆ. ಕುಲಾಂತರಿ ಬೆಳೆಗಳನ್ನು ಪ್ರಕೃತಿಯಲ್ಲಿ ಸಹಜವಾಗಿರುವ ಬೆಳೆಗಳಿಗೆ ಹೋಲಿಕೆ ಇರುವಂಥ ರೀತಿಯಲ್ಲಿ ನಾವು ಸೃಷ್ಟಿ ಮಾಡುತ್ತಿದ್ದೇವೆ. ಆದ್ದರಿಂದಲೇ ಇದರಿಂದ ಯಾವ ರೀತಿಯಲ್ಲೂ ತೊಂದರೆ ಆಗುವುದಿಲ್ಲ. ಯಾರಾದರೂ ಇದರ ಬಗ್ಗೆ ತಪ್ಪು ಮಾಹಿತಿ ಹರಡಿದ್ದೇ ಅದರೆ ಅವರನ್ನು ಜೈಲಿಗೆ ಕಳಿಸಬೇಕು. ದಂಡ ಹಾಕಬೇಕು ಎಂದು ಹೇಳುವ ‘ಬಿಆರ್​ಎಐ’ ಕಾಯ್ದೆ ತರಲು ಹೊರಟಿದ್ದಾರೆ. ಸಂವಿಧಾನದ ಹಕ್ಕನ್ನು ಮೀರಿ ಇಂಥ ಕಾಯ್ದೆಗೆ ಅವಕಾಶ ಕೊಡುವ ಪ್ರಯತ್ನ ಯಾಕೆ ಮಾಡುತ್ತಿದ್ದಾರೆ ಅಂದರೆ, ಕುಲಾಂತರಿಯನ್ನು ನಮ್ಮ ಆಹಾರದಲ್ಲಿ ಸೇರಿಸುವುದಕ್ಕೆ. ಇಂಥ ಆಹಾರವನ್ನು ತಿನ್ನುವುದರಿಂದ ನಮ್ಮ ಹೆಣ್ಣು ಮಕ್ಕಳಿಗೆ ಮುಟ್ಟು ಸರಿಯಾಗಿ ಆಗುವುದಿಲ್ಲ. ಗರ್ಭಕೋಶದ ಅಂಡಾಶಯದಲ್ಲಿ ಸಿಸ್ಟ್ (ಗುಳ್ಳೆ)ಗಳು ಬರುತ್ತವೆ. ಇದನ್ನು ಪಾಲಿಸಿಸ್ಟಿಕ್​ ಓವರಿ ಎನ್ನುತ್ತಾರೆ.

    ಅಮೆರಿಕದಲ್ಲಿ ಹತ್ತಕ್ಕೆ ಎಂಟು ಹೆಣ್ಣು ಮಕ್ಕಳಿಗೆ ಪಾಲಿಸಿಸ್ಟಿಕ್ ಓವರಿ ಸಮಸ್ಯೆ ಇದೆ. ತಿಂಗಳಿಗೆ ಸರಿಯಾಗಿ ಮುಟ್ಟಾಗುವುದಿಲ್ಲ. 3 ತಿಂಗಳು 2 ತಿಂಗಳು, ಇಲ್ಲ 15 ದಿವಸಕ್ಕೆ ಮುಟ್ಟಾಗುವುದು. ಗರ್ಭ ಕಟ್ಟುವುದಿಲ್ಲ. ನಮ್ಮ ನಗರಗಳಲ್ಲಿ ಈಗ ಈ ಸಮಸ್ಯೆ ವಿಪರೀತವಾಗುತ್ತಿದೆ. ಅಮೆರಿಕದಲ್ಲಂತೂ ಅಲ್ಲಿನ ಜನರಿಗೆ ಯಾವುದನ್ನೂ ಸಹಜವಾಗಿ ಮಾಡಲು ಆಗುವುದಿಲ್ಲ. ಕಕ್ಕಸ್ಸು ಮಾಡಬೇಕಾದರೂ ಮಾತ್ರೆ ತಗೋಬೇಕು. ಮೂತ್ರ ಮಾಡಬೇಕಾದರೂ ಮಾತ್ರೆ ತಗೋಬೇಕು, ನಿದ್ದೆ ಮಾಡಬೇಕು ಅಂದರೂ ಮಾತ್ರೆ, ಮೈಥುನಕ್ಕೂ ಮಾತ್ರೆ. ಒಟ್ಟಿನಲ್ಲಿ ಅಲ್ಲಿನವರಿಗೆ ಯಾವುದನ್ನೂ ಸಹಜವಾಗಿ ಮಾಡಲು ಆಗುತ್ತಿಲ್ಲ. ನಾವೂ ಕ್ರಮೇಣ ಆ ಸ್ಥಿತಿಯತ್ತ ನಡೆಯುತ್ತಿದ್ದೇವೆ. ಇದೆಲ್ಲಾ ಆಗುತ್ತಿರುವುದು ನಾವು ತಿನ್ನುತ್ತಿರುವ ಆಹಾರದಿಂದ.

    ಪಾಶ್ಚಾತ್ಯ ಅನುಕರಣೆ 

    ಕಳೆದ 15-20 ವರ್ಷಗಳಿಂದ ಈ ಪಾಶ್ಚಾತ್ಯ ಆಹಾರ ಪದ್ಧತಿಗಳನ್ನು ನಮ್ಮ ನಗರಗಳಲ್ಲಿ ಅನುಕರಣೆ ಮಾಡುತ್ತಿರುವುದು ದೊಡ್ಡ ದುರಂತ. ಫಿಜ್ಜ, ಪೆಪ್ಸಿ, ನೂಡಲ್ಸ್, ಕಾರ್ನ್ ಫ್ಲೇಕ್ಸ್​, ಕುರ್​ಕುರೆ, ಮಣ್ಣುಮಸಿ! ನೂಡಲ್ಸ್ ಎರಡೇ ನಿಮಿಷದಲ್ಲಿ ರೆಡಿ, ಮಕ್ಕಳೇ ಮಾಡಿಕೊಳ್ಳಬಹುದು ಎನ್ನುವ ಜಾಹೀರಾತು. ಏನಿದೆ ಆ ನೂಡಲ್ಸ್‍ನಲ್ಲಿ? ಮೈದಾಹಿಟ್ಟಿನ ಜೊತೆ ಬ್ಲೀಚಿಂಗ್ ಪೌಡರ್ (Alloxon) ಥರದ ಒಂದು ರಾಸಾಯನಿಕ ಪದಾರ್ಥ ಇರುತ್ತದೆ. ಅದನ್ನು ತಿಂದರೆ ನಿಮ್ಮ ಮೇದೋಜೀರಕಾಂಗ (ಪ್ರಾಂಕ್ರಿಯಾಸ್)ದಲ್ಲಿ ಇರುವ ಬೀಟಾ ಜೀವಕೋಶಗಳು ಇನ್ಸುಲಿನ್ ಉತ್ಪಾದನೆ ಮಾಡುವ ಶಕ್ತಿಯನ್ನು ಕಳೆದುಕೊಂಡು ಬಿಡುತ್ತವೆ. ಅದು ಮಧುಮೇಹಕ್ಕೆ ರಹದಾರಿ ಕೊಟ್ಟಂತೆ. ನಿಮ್ಮ ಮಕ್ಕಳಿಗೆ ಮಧುಮೇಹ ಬರಬೇಕು ಎಂದರೆ ಅವರಿಗೆ ನೂಡಲ್ಸ್ ಕೊಡಿ ಅಷ್ಟೇ.

    ಕೆಲ ಸಮಯದಿಂದ 20-25 ವರ್ಷದ ಮಧುಮೇಹ ರೋಗಿಗಳು ನನ್ನ ಹತ್ತಿರ ಬರಲು ಶುರು ಮಾಡಿದ್ದಾರೆ. ಕೇವಲ ಸಿಟಿಗಳಿಂದ ಮಾತ್ರವಲ್ಲ, ಹಳ್ಳಿಗಳಿಂದಲೂ. ಇದಕ್ಕೂ ನಮ್ಮ ವ್ಯವಸಾಯಕ್ಕೂ ಸಂಬಂಧ ಏನು? ಯಾಕೆ ಹಳ್ಳಿಗಳಲ್ಲಿ ಇಂತಹ ರೋಗಗಳು ಹುಡ್ಕೊಂಡು ಬರ್ತಾ ಇವೆ? ನಮ್ಮ ಹೆಣ್ಣು ಮಕ್ಕಳಿಗೆ ಯಾಕಿಷ್ಟು ರಕ್ತಹೀನತೆ? ಅದಕ್ಕೆ ಕಾರಣ ನಾವು ನಮ್ಮ ಹೊಲ-ಗದ್ದೆಗಳಲ್ಲಿ ನಮಗೆ ಬೇಕಾಗಿರುವ ಪದಾರ್ಥಗಳನ್ನು ಬೆಳೆದುಕೊಳ್ಳದೆ ಯಾರಿಗೋ ಬೇಕಾಗಿರುವಂಥವನ್ನು
    ಬೆಳೆಯುತ್ತಿರುವುದು.

    ಮಂಡ್ಯದ ರೈತರೆಲ್ಲಾ ಕಬ್ಬು ಬೆಳೆದು ಹೆಂಡ ಮಾಡುವವರಿಗೆ ಮಾರಾಟ ಮಾಡಿ ತಮಗೆ ಬೇಕಾದ ಪದಾರ್ಥಗಳನ್ನೆಲ್ಲಾ ಕೊಂಡು ತಂದು ತಿನ್ನುತ್ತಿದ್ದಾರೆ. ರೋಗಕ್ಕೆ ಒಳಗಾಗುತ್ತಾ ಆಸ್ಪತ್ರೆಯಲ್ಲೋ ಚಾಕು ಕತ್ತಿ ಇಟ್ಟುಕೊಂಡು ತಯಾರಾಗಿರ್ತಾರೆ. ಒಂದೊಂದು ಆಪರೇಷನ್‍ಗೆ ನಲವತ್ತು ಸಾವಿರ ರೂಪಾಯಿ. ಯಾರಿಗೆ ಲಾಭ? ಯಾರಿಗೆ ನಷ್ಟ?

    ಮಡಿಕೇರಿ ಕಡೆ ಹೋದರೆ ಬೇಸರವಾಗುತ್ತದೆ. ಅವರು ಕಾಫಿ ಬಿಟ್ಟು ಬೇರೆ ಏನೂ ಬೆಳೆಯೋದೇ ಇಲ್ಲ. ಎಲ್ಲಾ ಕಳೆದುಕೊಂಡು ಬಿಟ್ಟಿದ್ದಾರೆ. ದುಡ್ಡು ಮಾತ್ರ ಜಾಸ್ತಿ ಬರುತ್ತೆ ಅವರಿಗೆ. ಯಾರಿಗೆ ನೋಡಿದರೂ ಡಯಾಬಿಟೀಸ್. ಅದು ಬಂದ ಮೇಲೆ ಎಲ್ಲಿಂದಲೋ ರಾಗಿ ತಂದು ತಿನ್ನಲು ಶುರು ಮಾಡುತ್ತಾರೆ. ಮೊದಲಿನಿಂದ ತಾವೇ ರಾಗಿ ಬೆಳೆದುಕೊಂಡು ತಿನ್ನಬಹುದಿತ್ತಲ್ಲ!

    ರಾಗಿ ತಿಂದಾಗ ನಮ್ಮ ರಕ್ತಕ್ಕೆ ಸಕ್ಕರೆ ಸೇರಲು ಒಂದೂವರೆ ಗಂಟೆ ಕಾಲ ಬೇಕು. ಪಂಚರತ್ನ ಸಿರಿಧಾನ್ಯಗಳಾದ ನವಣೆ, ಊದಲು, ಆರ್ಕ, ಸಾಮೆ, ಕೊರ್ಲೆ ತಿಂದಾಗ 5-6 ಗಂಟೆಗಳ ಕಾಲ ಬೇಕು. ಜೋಳ ತಿಂದಾಗ ಒಂದೂವರೆ ಗಂಟೆ ಕಾಲ ಬೇಕು. ಅದೇ ಅಕ್ಕಿ ತಿಂದಾಗ 30ರಿಂದ 40 ನಿಮಿಷ ಸಾಕು, ಆದ್ದರಿಂದಲೇ ಬರೀ ಅನ್ನ ತಿನ್ನದೆ ಇವೆಲ್ಲಾ ಪದಾರ್ಥಗಳನ್ನು ತಿನ್ನುವುದು ಅತ್ಯವಶ್ಯಕ. ಇವೆಲ್ಲ ಅದ್ಭುತ ಪದಾರ್ಥಗಳು, ಇವುಗಳನ್ನು ಹೇಗೆ ಉಳಿಸಿಕೊಳ್ಳುವುದು?

    ಬೀಜ ಬ್ಯಾಂಕಲ್ಲಿ ಬೀಗ ಹಾಕಿ ಇಟ್ಟುಕೊಂಡರೆ ಉಳಿಯುವುದಿಲ್ಲ. ಯಾರೋ ಬಂದು ಕೋಟಿ ಕೊಟ್ಟು ಕೊಳ್ಳೆ ಹೊಡೆಯಬಹುದು. ಯಾವುದೇ ಪರಂಪರಾಗತ ಪದಾರ್ಥ ಉಳಿಯುವುದು ಅದು ನಮ್ಮ ಬದುಕಿನಲ್ಲಿ ಸೇರಿದಾಗ ಮಾತ್ರ, ಅದನ್ನು ನಾವು ನಿಯಮಿತವಾಗಿ ಉಪಯೋಗ ಮಾಡಿದಾಗ ಮಾತ್ರ ಜೀವಂತವಾಗಿರುತ್ತದೆ. ನಾನು ಹತ್ತು ಹಲವಾರು ಥರದ ರಾಗಿ ಕಾಳು ತಿನ್ನುತ್ತಿದ್ದರೆ ಅದನ್ನು ಬೆಳೆಸುತ್ತಿದ್ದರೆ ಅದು ಉಳಿಯುತ್ತೆ. ಇಲ್ಲದಿದ್ದರೆ ಅದೂ ಹೇಗೆ ಉಳಿಯುತ್ತೆ?

    30 ವರ್ಷದ ಹಿಂದೆ ನಮ್ಮ ಸಾಮಾನ್ಯ ಆಹಾರವಾಗಿದ್ದ ಆರ್ಕ, ಸಾಮೆ, ನವಣೆ, ಸಜ್ಜೆ ಇದನ್ನೆಲ್ಲಾ ಬಹುತೇಕ ಜನ ಮರತೇಬಿಟ್ಟಿದ್ದಾರೆ. “ಆರ್ಕ ಅಂದರೆ ಹೆಂಗಿರುತ್ತೆ ಸ್ವಾಮಿ, ಅದನ್ನು ತಿಂದು ಏನು ಮಾಡಬೇಕು?” ಎಂದು ಕೇಳುತ್ತಾರೆ. ಅವರಿಗೆ ಬೇಕಾಗಿರುವುದು ಈ ಬಿಳಿ ಅನ್ನ. ಆ ಬಣ್ಣ ಹಾಕಿ ಮಾಡಿದ ಬಾತು. ಮೊನ್ನೆ ಯಾರೋ ಹೇಳುತ್ತಿದ್ದರು. “ಈ ಬಾತು, ಆ ಬಾತು ತಿಂದು ನಾವೆಲ್ಲ ಬಾತು ಹೋಗಿಬಿಟ್ಟಿದ್ದಿವಿ” ಅಂತ. ಯಾವುದೇ ಪರಂಪರಾಗತ ಪದಾರ್ಥ ಉಳಿಯುವುದು ಅದು ನಮ್ಮ ಬದುಕಿನಲ್ಲಿ ಸೇರಿದಾಗ ಮಾತ್ರ. ಅದನ್ನು ನಾವು ನಿಯಮಿತವಾಗಿ ಉಪಯೋಗ ಮಾಡಿದಾಗ ಮಾತ್ರ ಜೀವಂತವಾಗಿರುತ್ತೆ. ಇದೆಲ್ಲಾ ನನಗೂ ತಮಾಷೆ ಅಂತ ಅನ್ನಿಸುತ್ತೆ. ಕೆಟ್ಟ ವ್ಯವಸಾಯ ಪದ್ಧತಿಯಿಂದ ಕೆಟ್ಟ ಆಹಾರ ಪದ್ಧತಿ, ಕೆಟ್ಟ ಆಹಾರ ಪದ್ಧತಿಯಿಂದ ಹದಗೆಟ್ಟ ಆರೋಗ್ಯ.

    ಒಟ್ಟಿನಲ್ಲಿ ನಾವು ವೈವಿಧ್ಯಮಯ ಆಹಾರ ಪದ್ಧತಿಯನ್ನು ಒಂದೇ ಒಂದು ಆಹಾರಕ್ಕೆ ತಂದು ನಿಲ್ಲಿಸಿಬಿಟ್ಟಿದ್ದೇವೆ. ವಿಚಿತ್ರ ಅಂದರೆ ಉತ್ತರ ಭಾರತದಲ್ಲಿ ಗೋದಿ ಹಿಟ್ಟು, ಮೈದಾಹಿಟ್ಟು ಉಪಯೋಗ ಮಾಡ್ತಾ ಇದ್ದಾರೆ. ಅದರಿಂದ ಬಿಪಿ. ಮಂಡಿನೋವು, ಹೃದಯದ ಕಾಯಿಲೆಗೆ ತುತ್ತಾಗುತ್ತಾ ಇದ್ದಾರೆ. ಎದೆನೋವು ಅಂದ ತಕ್ಷಣ ಹೃದಯಕ್ಕೆ ಕತ್ತಿ ಹಾಕಲು ಆಸ್ಪತ್ರೆಯಲ್ಲಿ ಕಾದುಕೊಂಡಿರುತ್ತಾರೆ. ಕಾಲ ಕೆಳಗಡೆಯಿಂದ ಆಂಜಿಯೋಗ್ರಾಮ್ ಮಾಡ್ತೀವಿ, ಕಂಪ್ಯೂಟರಲ್ಲಿ ತೋರಿಸ್ತೀವಿ, ತಕ್ಷಣ ಆಪರೇಷನ್ ಮಾಡಬೇಕು, 2 ಲಕ್ಷ ತಗೊಂಡು ಬನ್ನಿ ಅಂತಾರೆ, ಎಷ್ಟು ಸಾಧ್ಯವೋ ಅಷ್ಟು ಸುಲೀತಾರೆ. ನಾವು ಬಿಟ್ಟಿರೋ ಆಹಾರ ಪದ್ಧತಿಯಿಂದ ಈ ಮಟ್ಟಕ್ಕೆ ತಲುಪಿದ್ದೀವಿ ಅನ್ನುವುದು ನಮಗೆ ಅರ್ಥ ಆಗಬೇಕು.

    ಸರಿಯಾಗಿ ನೀವು ಸಿರಿಧಾನ್ಯಗಳು, ಬೆರೆಕೆ ಸೊಪ್ಪು ತಿನ್ನುತ್ತಿದ್ದರೆ ರಕ್ತಹೀನತೆಯೂ ಬರುವುದಿಲ್ಲ, ಮಧುಮೇಹವೂ ಬರುವುದಿಲ್ಲ. ಕಕ್ಕಸ್ಸು ಸರಿಯಾಗಿ ಮಾಡುತ್ತೀರಿ. ಕಕ್ಕಸ್ಸು ಮಾಡಲು ಇವತ್ತು ಜನ ಸರ್ಕಸ್ಸು ಮಾಡ್ತಾ ಇದ್ದಾರೆ. ಬೆಳಗ್ಗೆ ಎದ್ದು ಬಿಸಿ ನೀರು ಕುಡಿದು ಈ ಕಡೆಯಿಂದ ಆ ಕಡೆಗೆ ಓಡಾಡಿ, ಸಿಗರೇಟು ಸೇದಿ, ಟೀ ಕುಡಿದು, ಕಾಫಿ ಕುಡಿದು ಏನೆಲ್ಲಾ ಮಾಡುತ್ತಿದ್ದಾರೆ. ನಮ್ಮ ಇಂಥ ದುಸ್ಥಿತಿ ನೋಡಿ ನಾವೇ ನಗಬೇಕಾಗಿದೆ.

    ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾಗ ಒಬ್ಬನೇ ಕಾಡಿನಲ್ಲಿ ಪ್ರಯಾಣ ಮಾಡುವ ಸಮಯದಲ್ಲಿ ಇದನ್ನೆಲ್ಲಾ ಯೋಚಿಸುತ್ತಿದ್ದೆ. ನಾನು ಕಾಯಿಲೆಯಿಂದ ಬಳಲಬಾರದು. ನಾನು ಪ್ರತಿದಿನ ಮಾತ್ರೆ ನುಂಗಬಾರದು, ನನಗೆ ಹುಟ್ಟೋ ಮಗುವಿಗೆ ಪಾಲಿಸಿಸ್ಟಿಕ್ ಓವರಿ ಇರಬಾರದು, ನನ್ನ ಮಗಳಿಗೆ ರಸಪುರಿ ಮಾವಿನ ಹಣ್ಣಿನ ಸವಿ, ಸಬ್ಬಸ್ಸಿಗೆ ಸೊಪ್ಪಿನ ಘಮ ಗೊತ್ತಾಗದೇ ಹೋಗಬಾರದು, ಅವಳು ಆರ್ಕ ನೋಡದಂಗೆ ಆಗಬಾರದು. ನನ್ನ ಆಹಾರವನ್ನು ನಾನು ಬೆಳೆಸಿಕೊಂಡು ತಿನ್ನಬೇಕು. ಇಂಥ ನನ್ನ ಆಸೆಗಳನ್ನು ದುಡ್ಡಿನ ಆಮಿಷ ತಡೆಯಲು ಸಾಧ್ಯವಾಗಲಿಲ್ಲ. ರಾಜಿನಾಮೆ ಕೊಟ್ಟು ಬಂದುಬಿಟ್ಟೆ.

    ಆರ್ಕ ಅಂದೆನಲ್ಲಾ, ಆದಿ ಬೀಜ ಅದು, ಹೆಸರೇ ಸೂರ್ಯಂದು, ಸೂರ್ಯನ ಬಿಸಿಲಲ್ಲಿ ನೀರಿಲ್ಲದಿದ್ದರೂ ಬೆಳೆಯುತ್ತೆ. ಆರ್ಕ ತಿನ್ನುತ್ತಿದ್ದರೆ ನಿಮಗೆ ಯಾವ ಥರದ ರೋಗವೂ ಬರುವುದಿಲ್ಲ. ರಕ್ತದ ಕ್ಯಾನ್ಸರ್ ಗುಣಪಡಿಸಲು ಸಹಾಯವಾಗುತ್ತೆ. ಅದರ ಸುತ್ತಲೂ ಇರುವ ಹೊಟ್ಟು ಅದ್ಭುತವಾದ ಪದಾರ್ಥ.

    ಕೆಂಪು ಕತ್ತಿ ಅವರೆ ಬೀಜದ ಮೇಲೆ ಗುಲಾಬಿ ಸಿಪ್ಪೆ ಇದೆಯಲ್ಲಾ, ಇದು ಮೂಲವ್ಯಾಧಿ ಮಾತ್ರವಲ್ಲ, ಗುದದ್ವಾರದ ಕ್ಯಾನ್ಸರನ್ನು ವಾಸಿ ಮಾಡುತ್ತೆ. ಇದನ್ನು ಯಾರು ತಿನ್ನುತ್ತಿದ್ದಾರೆ ಇವತ್ತು ? ನೆಲೆಗಡಲೆ ಬೀಜದ ಸುತ್ತಲೂ ಇರುವ ಗುಲಾಬಿ ಬಣ್ಣದ ಸಿಪ್ಪೆಯಲ್ಲಿ ಈ ಪ್ರಪಂಚದಲ್ಲಿ ಮಾನವನಿಗೆ ಗೊತ್ತಿರುವ ಅತಿ ಹೆಚ್ಚಿನ ಔಷಧ ಅಂಶ ರೆಸ್ವೆರಟ್ರಾಲ್ (Resveratrol) ಇದೆ. ಎಲ್ಲದಕ್ಕೂ ಸಿದ್ಧೌಷಧ. ಅದನ್ನು ನಾವು ಹುರಿದು ಉಫ್ ಅಂತ ಸಿಪ್ಪೆ ಊದಿಬಿಟ್ಟು ಒಳಗಡೆಯ ಬೆಳ್ಳಗಿನ ಬೀಜ ತಿಂತೀವಿ. ಅಂಥ ಒಳ್ಳೆಯ ಪದಾರ್ಥ ನಮಗೆ ಅಲಕ್ಷ್ಯ.

    ನಮ್ಮ ಮನಸ್ಸಿಗೆ ಏನು ಬಂದು ಬಿಟ್ಟಿದೆಯೆಂದರೆ, ಕಡ್ಲೆಕಾಯಿ ಎಣ್ಣೆ ಒಳ್ಳೆಯದಲ್ಲ. ಆಲಿವ್ ಆಯಿಲ್ ಒಳ್ಳೆಯದು. ರಾಗಿ ಮುದ್ದೆ, ಸಿರಿಧಾನ್ಯಗಳು ಒಳ್ಳೆಯದಲ್ಲ. ಫೀಜ, ಚೀಸು ಒಳ್ಳೇದು ಅಂತ. ಈ ಚೀಸು ಎಲ್ಲಿಂದ ಬಂತು? ಹಾರ್ಮೋನು ಚುರ್ಚುಮದ್ದುಗಳನ್ನು ಜರ್ಸಿ ಹಸುಗಳಿಗೆ ಚುಚ್ಚಿ ಚುಚ್ಚಿ ಹೆಚ್ಚು ಹಾಲು ಕೊಡುವಂತೆ ಮಾಡಿ ಅದರಿಂದ ಕೊಬ್ಬು ತೆಗೆದದ್ದು ಈ ಚೀಸು. ನಿಮ್ಮ ರಕ್ತದಲ್ಲಿ ಹೆಚ್ಚಿಗೆ ಆಗಿರೋ ಸಕ್ಕರೆಯನ್ನು ರಕ್ತದಿಂದ ಗ್ಲೈಕೋಜಿನ್ ಮೂಲಕ ಕೊಬ್ಬನ್ನಾಗಿ ಪರಿವರ್ತನೆ ಮಾಡಿ ಸ್ಟಾಪ್ ಗ್ಯಾಪ್ ಆಗಿ ಮಾಡುವಂತಹ ಒಂದು ಪದಾರ್ಥ. ಅದನ್ನು ನಾವು ನೇರವಾಗಿ ತಿನ್ನುತ್ತಿದ್ದೇವೆ!

    ಇದನ್ನೆಲ್ಲಾ ಮಾಧ್ಯಮಗಳು ಅತ್ಯುತ್ತಮ ಆಹಾರ ಅನ್ನುವಂತೆ ತೋರಿಸುತ್ತವೆ. ‘ಕಾಂಪ್ಲಾನ್ ಕೊಡಿ ನಿಮ್ಮ ಮಗು ಎರಡು ಪಟ್ಟು ಬೆಳೆದು ಬಿಡ್ತಾನೆ’ ಎಂದು ಒಬ್ಬ ಮನುಷ್ಯ ಬಿಳಿಕೋಟು ಸ್ಟೆತೋಸ್ಕೋಪ್ ಹಾಕಿಕೊಂಡು ಬಂದು ಹೇಳ್ತಾನೆ. ಬುದ್ಧಿಗೆ ಬೀಗ ಹಾಕ್ಕೊಂಡು ಕೂತಿರುವ ನಾವು ಖುಷಿಯಿಂದ ಮಕ್ಕಳಿಗೆ ಕಾಂಪ್ಲಾನ್ ತಂದು ಕುಡಿಸ್ತೀವಿ, ಅದು ಕುಡಿದು ನಮ್ಮ ಮಕ್ಕಳು ಎರಡು ಪಟ್ಟು ಬೆಳೆಯುವ ಮಾತಿರಲಿ, ಕಕ್ಕಸ್ಸು ಮಾಡಲು ಒದ್ದಾಡುತ್ತಿರುತ್ತಾರೆ. ಅಷ್ಟೇ ಆಗುವುದು!

    ಬೆಳಗ್ಗೆ ಎದ್ದಾಗಿನಿಂದ ನಮ್ಮ ಮಕ್ಕಳಿಗೆ ಚಾಕೋಲೆಟ್ ತಿನ್ನಿಸಲು ಪ್ರಾರಂಭಿಸುತ್ತೇವೆ. ಏನಿದೆ ಆ ಚಾಕೊಲೆಟ್​ನಲ್ಲಿ? (4% ಜಿರಲೆ, 2-3% ಇಲಿ ಪಿಚಿಕೆ ಇರುತ್ತದೆ) ಮೈದಾಹಿಟ್ಟು, ಸಕ್ಕರೆ, ಮೊಟ್ಟೆ, ಡಾಲ್ಡ. ಈ ಡಾಲ್ಡ ಎಂದರೆ ಏನು? ಎಲ್ಲಿಂದ ಬಂತು ? ಅಮೆರಿಕ, ಯುರೋಪ್‍ಗಳಲ್ಲಿ ದನಗಳನ್ನು, ಹಂದಿಗಳನ್ನು ತಿಂದು ಉಳಿಕೆ ಮಾಂಸ ಬಿಸಾಡುತ್ತಾರೆ. ಅದನ್ನೆಲ್ಲಾ ಗುಡ್ಡೆ ಹಾಕಿ ಅದಕ್ಕೊಂದು ಕರೆಂಟು ಚುಚ್ಚುತ್ತಾರೆ. ಅದು ಕುದ್ದು ಕುದ್ದು ಕೊಬ್ಬೆಲ್ಲ ಮೇಲಕ್ಕೆ ಬರುತ್ತದೆ ಅದನ್ನು ಸಂಗ್ರಹ ಮಾಡಿ ಡಬ್ಬದಲ್ಲಿ ತುಂಬುತ್ತಾರೆ. ಅದೇ ಡಾಲ್ಡ! ಟನ್​ಗಟ್ಟಲೆ ಡಾಲ್ಡವನ್ನು ಇಡೀ ಪ್ರಪಂಚಕ್ಕೆ ಕಳುಹಿಸುತ್ತಾರೆ.

    ಇನ್ನೊಂದು ಕಡೆ ನಮ್ಮ ಮಂಡ್ಯದಂಥ ಪ್ರದೇಶಗಳಲ್ಲಿ ರೈತರು ಕಬ್ಬು ಬೆಳೆದು ಹೆಂಡದ ಕಾರ್ಖಾನೆಗಳಿಗೆ ಕೊಡುತ್ತಾರೆ. ಅವರು ಅದರಲ್ಲಿ ಹೆಂಡಕ್ಕೆ ಬೇಕಾದ್ದು ತಕ್ಕೊಂಡು ಸಕ್ಕರೆ ಬಿಡುತ್ತಾರೆ. ಟನ್‍ಗಟ್ಟಲೆ ಸಕ್ಕರೆ! ಏನು ಮಾಡಬೇಕೋ ಗೊತ್ತಿಲ್ಲ. ಆ ಡಾಲ್ಡ, ಈ ಸಕ್ಕರೆ ಎರಡನ್ನೂ ಸೇರಿಸಿ ಬೇಕರಿ ಪದಾರ್ಥಗಳು, ಬಿಸ್ಕತ್, ಕೇಕು, ಚಾಕಲೇಟ್ ರಾಶಿ ರಾಶಿ ತಯಾರು ಮಾಡಿ ಎಲ್ಲ ಕಡೆಗೆ ಕಳುಹಿಸುತ್ತಾರೆ.

    ನೀವಿವತ್ತು ಯಾವುದೇ ಊರಿಗೆ ಹೋಗಿ, ಈ ಕೊನೆಯಿಂದ ಆ ಕೊನೆಯವರೆಗೆ ಬೇಕರಿಗಳು ಇರುತ್ತವೆಯೇ ಹೊರತು ಒಂದು ಸೊಪ್ಪಿನಂಗಡಿ ಕಾಣಿಸುವುದಿಲ್ಲ! ಇಲ್ಲೆಲ್ಲಾ ದೊಡ್ಡ ಹುನ್ನಾರ ಇದೆ ಅನ್ನುವುದನ್ನು ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕು. ನಾನು ನಿಮ್ಮ ಮನಸಲ್ಲಿ, ನಿಮ್ಮ ಮನೆಯಲ್ಲಿ ನಿಮ್ಮ ಒಳಗಡೆ ಇದು ಹೇಗೆ ನಡೆಯುತ್ತದೆ ಎನ್ನುವುದನ್ನು ಹೇಳುತ್ತಿದ್ದೇನೆ. ಆ ವಿಷಯಗಳು ಹೇಗೆ ನಮ್ಮ ಬದುಕನ್ನು ಆಕ್ರಮಣ ಮಾಡಿವೆ ಎನ್ನುವುದು ಅರ್ಥವಾಗುತ್ತದೆ.

    ಬಿಡುಗಡೆಗೆ ಏನು ಮಾಡಬೇಕು?

    ನಾವೇನನ್ನು ತಿನ್ನುತ್ತಿದ್ದೇವೆ? ಅವೆಷ್ಟು ಸರಿ? ಅಷ್ಟಕ್ಕೂ ರೋಗಗಳು ಏಕೆ ಬರುತ್ತವೆ?; ಎಲ್ಲವನ್ನೂ ಇಲ್ಲಿ ವಿವರಿಸಿದ್ದಾರೆ ಡಾ.ಖಾದರ್​ಈ ಬಿಳಿ ಸಕ್ಕರೆ, ಬಿಳಿ ಅನ್ನ. ಈ ಬಿಳಿಗಳನ್ನೆಲ್ಲ ತಿನ್ನುವುದನ್ನು ಬಿಡಬೇಕು. ಕಪ್ಪು ಬೆಲ್ಲ ಎಂಥ ಅದ್ಭುತವಾದ ಪದಾರ್ಥ ಗೊತ್ತಾ? ಮುವತ್ತು ವರ್ಷದ ಹಿಂದೆ ಬಳಸುತ್ತಿರಲಿಲ್ಲವಾ? ನೀವು ನಿಮ್ಮ ಮಕ್ಕಳಿಗೆ ಕೊಡುತ್ತಿದ್ದ ಎಳ್ಳುಂಡೆ ನೆನಪು ಮಾಡಿಕೊಳ್ಳಿ. ಕಪ್ಪು ಬೆಲ್ಲ, ಕಪ್ಪು ಎಳ್ಳು ಹಾಕಿ ಮಾಡುತ್ತಿದ್ದದ್ದು. ಎಳ್ಳು ಅತಿ ಅದ್ಭುತವಾದ ಪದಾರ್ಥ ಬುದ್ಧಿಶಕ್ತಿಗೆ ತುಂಬಾ ಒಳ್ಳೆಯದು. ಎಳ್ಳು, ಹುಚ್ಚೆಳ್ಳು ಇದೆಲ್ಲ ಮೆದುಳನ್ನು ಬೆಳಸುತ್ತವೆ. ಕಪ್ಪುಬೆಲ್ಲ ಕೆಂಪುರಕ್ತ ಕಣಗಳನ್ನು ವೃದ್ಧಿ ಮಾಡಿ, ರಕ್ತಹೀನತೆಯನ್ನು ನಿವಾರಿಸುತ್ತದೆ. ಈ ಕೆಲಸ ಸೊಪ್ಪು ತಿನ್ನುವುದರಿಂದಲೂ ನಡೆಯುತ್ತದೆ.

    ಅದೇ ಥರ ಇದ್ದಿಲಲ್ಲಿ ಹಲ್ಲುಜ್ಜಿಕೊಳ್ಳುತ್ತಿದ್ದನ್ನು ನೆನಪು ಮಾಡಿಕೊಳ್ಳಿ. ಈಗೆಲ್ಲಾ ಬೆಳಗ್ಗೆ ಎದ್ದು ಟೂತ್‍ಪೇಸ್ಟ್ ಹಚ್ಚಿಕೊಂಡು ಪ್ಲಾಸ್ಟಿಕ್ ಬ್ರಷ್​ನಲ್ಲಿ ಪುಸ್ ಅಂತ ಹೊಡಿತೀವಿ. ಏನಿದೆ ಅದರಲ್ಲಿ? ಬಾಯಿಗೆ ನಿಜವಾಗಿ ಶುದ್ಧೀಕರಣ ಮಾಡುವುದು ಇದ್ದಿಲು (ಆಕ್ಟಿವೇಟೆಡ್ ಚಾರ್​ಕೋಲ್) ಸೂಕ್ಷ್ಮ ಕ್ರಿಮಿಗಳನ್ನು ಎಳೆಯೋದಕ್ಕೆ ಇದು ಬಹಳ ಸಹಾಯ ಮಾಡುತ್ತದೆ. ಎಲ್ಲಾದರೂ ವ್ರಣ ವಾಸನೆ ಬರುತ್ತಿದ್ದರೆ ಇದ್ದಿಲು ಹಾಕಿದರೆ 3 ನಿಮಿಷಕ್ಕೆ ವಾಸನೆ ನಿಂತುಹೋಗುತ್ತದೆ. ಇಡೀ ಪ್ರಪಂಚದಲ್ಲಿ ಇದ್ದಿಲಿನಿಂದ ಹಲ್ಲುಜ್ಜಿಕೊಳ್ಳುವ ವಿಧಾನ ಗೊತ್ತಿದ್ದಿದ್ದು ನಮ್ಮ ದೇಶದಲ್ಲಿ ಮಾತ್ರ ಅಂತ ಅದ್ಭುತವಾದ ವೈಜ್ಞಾನಿಕ ಪದ್ದತಿಯನ್ನು ಬಿಟ್ಟು ಪ್ಲಾಸ್ಟಿಕ್ಕ್ ಬ್ರಷ್​ ತಗೊಂಡು ತಿಕ್ಕಿಕೊಳ್ತೇವೆ.

    ಹಲ್ಲು ಸಡಿಲವಾದ ಮೇಲೆ ಹಲ್ಲಿನ ಡಾಕ್ಟರ್ ಹತ್ತಿರ ಹೋಗ್ತಿವಿ. ಅವರು ಬನ್ನಿ ಬನ್ನಿ ನಾವು ಕ್ಯಾಪ್ ಹಾಕ್ತೀವಿ, ಫಿಕ್ಸ್ ಮಾಡ್ತೀವಿ ಅಂತ ಕರೀತಾರೆ. ಹಳ್ಳಿಗಳಲ್ಲಿ ಇವತ್ತು ಜನರಿಗೆ ಹಲ್ಲಿನ ಸಮಸ್ಯೆ ವಿಪರೀತವಾಗಿದೆ ಅನ್ನುವುದು ಆಶ್ಚರ್ಯ. ಬೀಡಿ, ಸಿಗರೇಟು ಸೇದಿ, ಗುಟ್ಕ ತಿಂದು ಬ್ರಷ್​ನಿಂದ ಹಲ್ಲು ತಿಕ್ಕಿಕೊಳ್ಳುತ್ತಾ ಇದ್ದರೆ ಹೇಗೆ ಹಲ್ಲು ಸರಿ ಇರುತ್ತೆ!?

    ಒಳ್ಳೇ ಪದ್ದತಿಗಳು, ಒಳ್ಳೇ ಪದಾರ್ಥಗಳು ಸಿಗುವಂತಹ ಕಡೆಯಲ್ಲೂ ಅದನ್ನೆಲ್ಲಾ ಬಿಡುತ್ತಿರುವುದು ನಿಜಕ್ಕೂ ದುರಂತ. ಮೀನು ತಿನ್ನಿ ಬುದ್ಧಿ ಜಾಸ್ತಿ ಆಗುತ್ತೆ ಅಂತಾರೆ. ಈಗ ಮೀನು ತಿಂದರೆ ನಮಗೆ ಸಿಗುವುದು ಸ್ವಲ್ಪ ಪಾದರಸ ಮತ್ತು ಸ್ವಲ್ಪ ಸೀಸ ಅಷ್ಟೇ. ಬುದ್ಧಿ ಜಾಸ್ತಿ ಆಗುವುದಿಲ್ಲ, ಬುದ್ಧಿಮಾಂದ್ಯ ಆಗುತ್ತದೆ.

    ಮೊಟ್ಟೆ ತಿಂದರೆ ಒಳ್ಳೆಯದು ಅಂತ ಪ್ರಚಾರ ಮಾಡ್ತಾರೆ. ನಾವು ತಿಂತಾ ಇರೋ ಮೊಟ್ಟೆಯಲ್ಲಿ ಪ್ರಾಣವೇ ಇರಲ್ಲ. ಆ ಮೊಟ್ಟೆಯನ್ನು ತಾನು ಹೇಗೆ ಇಡ್ತಾ ಇದ್ದೀನಿ ಅನ್ನುವುದು ಹಕ್ಕಿಗೆ (ಕೋಳಿ) ಗೊತ್ತಿರುವುದಿಲ್ಲ. ಕೋಳಿಗಳಿಗೆ ರಾಸಾಯನಿಕ ಪ್ರಚೋದಕಗಳನ್ನು ಚುಚ್ಚುತ್ತಾರೆ. ಕೋಳಿಗಳು ನಿರ್ಜೀವ ಮೊಟ್ಟೆಗಳನ್ನು ಇಡುತ್ತಿವೆ. ಅದರಲ್ಲಿ ಸಿಗುವುದು ಬರೀ ಕೊಲೆಸ್ಟ್ರಾಲ್.

    ಇಂದು ಈ ಭೂಮಿ ಮೇಲೆ ಯಾವ ಸಹಜ ಪದಾರ್ಥವೂ ಉಳಿದಿಲ್ಲ. ಸೋಯಾಬೀನಿಗೆ ಬಳಸುವ ಕಳೆನಾಶಕ ದಕ್ಷಿಣ ಧ್ರುವದಲ್ಲಿ ಇರುವ ಪೆಂಗ್ವಿನ್ ಹಕ್ಕಿಯ ರಕ್ತದಲ್ಲಿ ಸೇರಿಹೋಗಿದೆ. ನಮ್ಮ ಹೊಲ-ಭೂಮಿಗಳಲ್ಲಿ ಇದನ್ನು ಎಷ್ಟರಮಟ್ಟಿಗೆ ಬಳಸಿದ್ದೇವೆ ಎಂದರೆ ಅದು ಹರಿದು ಹರಿದು ದಕ್ಷಿಣ ಧ್ರುವಕ್ಕೆ ಹೋಗಿ ಸೇರಿ ಬಿಟ್ಟಿದೆ.

    ನಮ್ಮ ಕೊಕ್ಕರೆಬೆಳ್ಳೂರಿಗೆ ಸೈಬೀರಿಯಾದಿಂದ ದೊಡ್ಡ ದೊಡ್ಡ ಕೊಕ್ಕರೆಗಳು ವಲಸೆ ಬರುತ್ತವೆ. ಅವುಗಳ ರಕ್ತದಲ್ಲಿ ಹಕ್ಕಿ ಜ್ವರದ ವೈರಸ್ ಸೇರಿಕೊಂಡಿರುವುದು ರಕ್ತಪರೀಕ್ಷೆಯಿಂದ ಕಂಡು ಬಂತು. ಹಿಂದೆ ಬನ್ನೂರಿನ ಹತ್ತಿರ ಇರುವ ಕೋಳಿಫಾರಂ ಕೋಳಿ ರಕ್ತದಲ್ಲೂ ಕಂಡುಬಂದ ವೈರಸ್ ಇದು.

    ಅಸಹಜ ಪದಾರ್ಥಗಳು ಇಡೀ ಭೂಮಿಯನ್ನು ಆವರಿಸಿವೆ. ನಾನು ಮನೆಯಲ್ಲೇ ಊಟ ಮಾಡ್ತಾ ಇದ್ದೀನಿ. ನನಗ್ಯಾಕೆ ತೊಂದರೆ ಬಂತು? ಅಂತ ನೀವು ಅಂದುಕೊಳ್ಳುತ್ತೀರಿ. ಯಾಕೆ ಅಂದರೆ ಇದಕ್ಕೆ ಸೊಪ್ಪು, ತರಕಾರಿ, ಹಣ್ಣು-ಹಂಪಲುಗಳನ್ನು ರೋಗ ಬಂದ ಮೇಲೆ ತಿನ್ನುವ ಬದಲು ಮೊದಲೇ ತಿನ್ನಬಹುದಿತ್ತಲ್ಲ, ನಾಟಿ ತಳಿಗಳನ್ನು ದೇವರು ಒಂದು ಕಾರಣಕ್ಕಾಗಿ ಮಾಡಿರುತ್ತಾನೆ. ಒಂದೊಂದು ಪೋಷಕಾಂಶ ಅಥವಾ ಒಂದು ಗುಂಪಿನ ಪೋಷಕಾಂಶಗಳನ್ನು ಒಂದೊಂದು ಪದಾರ್ಥಗಳಲ್ಲಿ ಸೇರಿಸಿರ್ತಾನೆ. ನಾವು ಬೆಳಗ್ಗೆಯಿಂದ ರಾತ್ರಿವರೆಗೆ ಬರೀ ಅನ್ನ ತಿನ್ನುತ್ತಿದ್ದರೆ ಸಹಜವಾಗಿ ರೋಗ ಬರದೆ ಏನಾಗುತ್ತದೆ?

    ತಮಾಷೆ ಅಂದರೆ, ನನ್ನ ಹತ್ತಿರ ಡಯಾಬಿಟೀಸ್ ರೋಗಿಗಳು ಬರ್ತಾರೆ ‘ನೀವು ಅನ್ನ ತಿನ್ನಬೇಡಿ, ನಾನು ವಾಸಿ ಮಾಡ್ತೀನಿ’ ಅಂತ ಹೇಳುತ್ತೇನೆ. ಸಾವಿರಾರು ಜನರಿಗೆ ವಾಸಿಯೂ ಮಾಡಿದ್ದೇನೆ. ವಾಸಿ ಆದ ಮೇಲೆ 6 ತಿಂಗಳು ಬಿಟ್ಟು ಒಂದು ದಿನ ಬರುತ್ತಾರೆ. ನಾನು ಇನ್ಮೇಲೆ ಮಾಮೂಲಿ ನಾರ್ಮಲ್ ಊಟ ಮಾಡಬಹುದಲ್ವಾ ಡಾಕ್ಟ್ರೆ? ಅಂತಾರೆ! ಅಂದರೆ ಇಷ್ಟು ದಿನ ಅಬ್‍ನಾರ್ಮಲ್ ಊಟ ಮಾಡ್ತಾ ಇದ್ರಿ, ನನ್ನ ಹತ್ರ ಬಂದ ಮೇಲೆ ಅದನ್ನ ಬಿಡಿಸಿ ನಾರ್ಮಲ್ ಊಟ ಮಾಡಸ್ತಾ ಇದ್ದೀನಿ. ದಯವಿಟ್ಟು ನಿಮ್ಮ ಇಡೀ ಜೀವನ ಈ ನಾರ್ಮಲ್ ಊಟ ಮಾಡಿಕೊಂಡು ಆರೋಗ್ಯವಾಗಿ, ಸಂತೋಷವಾಗಿರಿ’ ಅಂತೀನಿ. ‘ಹಾಗಾದ್ರೆ ನೀವೇನ್ ತಿಂತಿರಾ ಡಾಕ್ಟರೇ’ ಅಂತಾರೆ. ನಾನ್ ಹೇಳ್ತಿನಿ, ‘ಮೈಸೂರಿನ ಹೆಗ್ಗಡದೇವನ ಕೋಟೆಯ ಹತ್ತಿರ ಬಿದರಹಳ್ಳಿ ಅಂತ ಗ್ರಾಮ ಇದೆ. ಅಲ್ಲಿ ಒಣಭೂಮಿಯಲ್ಲಿ ರಾಗಿ, ನವಣೆ, ಸಾಮೆ, ಆರ್ಕ, ಸಜ್ಜೆ, ಜೋಳ, ಎಲ್ಲಾ ನಾನೇ ಬೆಳೆದುಕೊಂಡು ಇಡ್ಲಿ ಮಾಡ್ಕೊಂಡು ತಿಂತಾ ಇದ್ದೀನಿ’ ಅಂತ.

    ಸಕಾರಾತ್ಮಕ ಪಂಚರತ್ನ ಸಿರಿಧಾನ್ಯಗಳಲ್ಲಿರುವ ನಾರಿನಂಶವೇ ಗ್ಲೂಕೋಸನ್ನು ಸಮತೋಲನವಾಗಿ ರಕ್ತಕ್ಕೆ ಸೇರಿಸುವ ಮುಖಾಂತರ ಆರೋಗ್ಯದ ಬುನಾದಿಯನ್ನು ಹಾಕಿಕೊಡುತ್ತದೆ. ಹೇಳುತ್ತಾ ಹೋದರೆ ಒಂದೊಂದು ಪದಾರ್ಥದಲ್ಲಿ ಒಂದೊಂದು ಅದ್ಭುತ ಇದೆ. ನಮ್ಮ ಆರೋಗ್ಯ, ನಮ್ಮ ಮುಂದಿನ ಪೀಳಿಗೆಗಳ ಆರೋಗ್ಯ, ನಮ್ಮ ಭೂಮಿ-ತಾಯಿಯ ಆರೋಗ್ಯದ ದೃಷ್ಟಿಯಿಂದಲಾದರೂ ನಾವು ಈ ನಾಟಿ ತಳಿಗಳನ್ನು ಬೆಳೆಸಬೇಕು. ಈ ಥರ ಬೇರೆ ಬೇರೆ ತಳಿಗಳನ್ನು ಸಹಜವಾಗಿ ಬೆಳಸಿಕೊಂಡಾಗ ನಮ್ಮ ಭೂಮಿಯ ಫಲವತ್ತತೆಯೂ ಅದ್ಭುತವಾಗಿರುತ್ತದೆ. ನಾವು ಬೆಳಗ್ಗೆಯಿಂದ ರಾತ್ರಿವರೆಗೆ ಬರೀ ಅನ್ನ ತಿನ್ನುತ್ತಿದ್ದರೆ ಸಹಜವಾಗಿ ರೋಗ ಬರದೆ ಏನಾಗುತ್ತದೆ? ನಮ್ಮಲ್ಲಿ ಒಂದನ್ನೇ ಊಟ ಮಾಡುವ ಅನಿವಾರ್ಯತೆ ಖಂಡಿತಾ ಇಲ್ಲ. ತಿನ್ನಬೇಕಾದರೆ ಸಾವಿರಾರು ಬೆಳೆ ಇದೆ ನಮಗೆ.

    ನನ್ನ ಜಮೀನಿನ ಮಣ್ಣು ಅದ್ಭುತವಾದ ಕಸ್ತೂರಿ ಪರಿಮಳ ಬರುತ್ತೆ. ಕನಸಿನಲ್ಲೂ ನಾನು ಈ ಪರಿಮಳ ಅನುಭವಿಸುತ್ತಿರುತ್ತೇನೆ. ಧಾನ್ಯಗಳು, ಕಾಳುಗಳು, ಸೊಪ್ಪು, ತರಕಾರಿ, ಹಣ್ಣುಗಳು ಈ ಥರ 38 ಬೆಳೆಗಳನ್ನು ನಾನು ನನ್ನ ಹೊಲದಲ್ಲಿ ಬೆಳಸಿಕೊಂಡು ತಿನ್ನುತ್ತಿರುತ್ತೇನೆ. ಅದರಲ್ಲಿ ಸಿಗುವ ಆನಂದ ಬೇರೆಲ್ಲೂ ಸಿಗಲು ಸಾಧ್ಯವೇ ಇಲ್ಲ. ಎಲ್ಲ ರೈತರಿಗೂ ಈ ಆನಂದ ಸಿಗಲೇಬೇಕು. ನಾನು ನನ್ನ ಭೂಮಿಯಲ್ಲಿ ಕಬ್ಬು ಬೆಳೆಸುವ ಹಾಗೆ ಮಾಡಿದ್ದೇನೆ. ಇದನ್ನು ಎಲ್ಲರೂ ಮಾಡಬಹುದು.

    1995ರ ವರೆಗೆ ನನಗೆ ವ್ಯವಸಾಯ ಅಂದರೆ, ಭೂಮಿ ಅಂದರೆ ಗೊತ್ತಿರಲಿಲ್ಲ. ಆ ನಂತರದಲ್ಲಿ ಎಷ್ಟೆಲ್ಲ ಗೊತ್ತು ಮಾಡಿಕೊಂಡಿದ್ದೇನೆ. ತುಂಬಾ ಜನರ ಹತ್ತಿರ ಹೋಗಿ ಕಲಿತುಕೊಂಡಿದ್ದೇನೆ. ಅಲ್ಲೆಲ್ಲೊ ಅಮೆರಿಕದ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಗೊತ್ತಾಗಿದೆ ಅಂದರೆ, ನಿಮಗೆ ಯಾಕೆ ಗೊತ್ತಾಗುವುದಿಲ್ಲ? ಅತಿ ಅದ್ಭುತವಾದ ಜನ, ಅತಿ ಅದ್ಭುತವಾದ ಜಲ, ಅತಿ ಅದ್ಭುತವಾದ ಭೂಮಿ ನಮ್ಮದು. ಅದನ್ನು ಕಳೆದುಕೊಳ್ಳುವುದು ಬೇಡ.

    ‘ನಿಮ್ಮ ಆದಾಯ ಎಷ್ಟು?’ ಎಂದು ಕೇಳುತ್ತಾರೆ ನನ್ನನ್ನು, ನಾನು ತಿನ್ನುವ ಪದಾರ್ಥಗಳಿಂದ ನನಗೆ ಆರೋಗ್ಯ ಕೆಡ್ತಾ ಇಲ್ಲ. ಆ ಡಾಕ್ಟ್ರುಗಳಿಗೆ ನಾನು ನಯಾಪೈಸೆ ದುಡ್ಡು ಕೊಡ್ತಾ ಇಲ್ಲ. ಅದೇ ನನಗೆ ದೊಡ್ಡ ಆದಾಯ. ಇದು ಎಲ್ಲರಿಗೂ ಸಾಧ್ಯ. ಹೊರಗಡೆ ಹೋರಾಟ ಮಾಡುವ ಜೊತೆಜೊತೆಗೆ ಈ ಒಳಗಡೆ ಹೋರಾಟ ನಡೆಸುತ್ತಾ ಒಳಗಡೆಯಿಂದ ನಮ್ಮನ್ನು ನಾವು ಬಿಡಿಸಿಕೊಂಡಾಗ ಇದು ಸಾಧ್ಯ. ಒಂದೊಂದೇ ಚಟಗಳಿಂದ ಬಿಡಿಸಿಕೊಂಡು ಬನ್ನಿ ಆರೋಗ್ಯ ಸಂಪಾದಿಸಿಕೊಳ್ಳಿ, ಸ್ವಾಭಿಮಾನ, ಸ್ವಾವಲಂಬನೆಯ ಬದುಕು ನಿಮ್ಮದಾಗಲಿ.
    ನಮಸ್ಕಾರ”.

    | ಡಾ. ಖಾದರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts