More

    ಡಾ. ಪ್ರಭಾಕರ ಕೋರೆಗೆ ಗೌರವ ಡಾಕ್ಟರೇಟ್

    ಬೆಳಗಾವಿ: ಶಿಕ್ಷಣ, ಆರೋಗ್ಯ, ವೈದ್ಯಕೀಯ ಕ್ಷೇತ್ರಗಳಲ್ಲಿನ ಸಾಧನೆಗಾಗಿ ರಾಜ್ಯಸಭಾ ಸದಸ್ಯ, ಕೆಎಲ್​ಇ ಸಂಸ್ಥೆ ಕಾರ್ಯಾಧ್ಯಕ್ಷ ಹಾಗೂ ಕೆಎಲ್​ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆಂಡ್ ರಿಸರ್ಚ್​ನ ಕುಲಾಧಿಪತಿ ಡಾ.ಪ್ರಭಾಕರ ಕೋರೆ ಅವರಿಗೆ ಅಮೆರಿಕದ ಪ್ರತಿಷ್ಠಿತ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸುತ್ತಿದೆ ಎಂದು ವಿವಿ ಉಪ ಕುಲಪತಿ ಡಾ.ವಿವೇಕ ಸಾವೋಜಿ ತಿಳಿಸಿದರು.

    ಕೆಎಲ್​ಇ ಸಂಸ್ಥೆಯ ಪ್ರಧಾನ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶದ ಎಲ್ಲ ಭಾಗದಲ್ಲಿ ಶಿಕ್ಷಣ, ವೈದ್ಯಕೀಯ ಸೇವೆ ಹಾಗೂ ಸಂಶೋಧನೆಗಳ ಮೂಲಕ ಸಮಾಜದ ಉನ್ನತಿಗಾಗಿ ಸಲ್ಲಿಸಿದ ಅನುಪಮ ಸೇವೆ ಗುರುತಿಸಿ ಡಾ.ಪ್ರಭಾಕರ ಕೋರೆ ಅವರಿಗೆ ಈ ಗೌರವ ದೊರೆಯುತ್ತಿರುವುದು ಕೆಎಲ್​ಇ ಸಂಸ್ಥೆಗೂ ಹೆಮ್ಮೆಯ ವಿಷಯ ಎಂದರು.

    2020ರ ಮೇ 20ರಂದು ಫಿಲಡೆಲ್ಪಿಯಾದ ಥಾಮಸ್ ಜೆಫರಸನ್ ವಿಶ್ವವಿದ್ಯಾಲಯದಲ್ಲಿ ನಡೆಯುವ ಘಟಿಕೋತ್ಸವ ಸಮಾರಂಭದಲ್ಲಿ ಕೋರೆ ಅವರಿಗೆ ‘ಡಾಕ್ಟರ್ ಆಫ್ ಸೈನ್ಸ್’ ಪದವಿ ಪ್ರದಾನ ಮಾಡಲಿದ್ದಾರೆ. ಅದೇ ಸಮಾರಂಭದಲ್ಲಿ ಕೆಎಲ್​ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆಂಡ್ ರಿಸರ್ಚ್ ಮತ್ತು ಥಾಮಸ್ ವಿವಿ ನಡುವೆ ಶೈಕ್ಷಣಿಕ ಹಾಗೂ ಸಂಶೋಧನೆ ಸಹಯೋಗ ನಿರ್ವಹಿಸಲು ಥಾಮಸ್ ವಿವಿಯಲ್ಲಿ ಇಂಡಿಯಾ ಸೆಂಟರ್ ಫಾರ್ ಸ್ಟಡೀಸ್​ಗೆ ಚಾಲನೆ ದೊರೆಯಲಿದೆ. ಇದಕ್ಕಾಗಿ ಸಂಯುಕ್ತ ಅಮೆರಿಕದ ಭಾರತೀಯ ರಾಯಭಾರಿಯನ್ನೂ ಆಹ್ವಾನಿಸಲಾಗಿದೆ ಎಂದರು.

    ಡಾ. ಶಿವಪ್ರಸಾದ ಎಸ್.ಗೌಡರ ಮಾತನಾಡಿ, ಕೆಎಲ್​ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆಂಡ್ ರಿಸರ್ಚ್ ವತಿಯಿಂದ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಖ್ಯಾತ ವಿವಿ ಹಾಗೂ ಸಂಸ್ಥೆಗಳೊಂದಿಗೆ ಹಲವಾರು ಸಹಯೋಗ ಸ್ಥಾಪಿಸಲಾಗಿದೆ. ಥಾಮಸ್ ವಿವಿಯೊಂದಿಗೆ ದೀರ್ಘಕಾಲದಿಂದ ತಾಯಿ ಮತ್ತು ನವಜಾತ ಶಿಶು ಆರೋಗ್ಯ ಕ್ಷೇತ್ರದಲ್ಲಿ ವಿಶ್ವದರ್ಜೆಯ ಸಂಶೋಧನೆ ನಡೆಸಲಾಗುತ್ತಿದೆ. ಭಾರತ ಸರ್ಕಾರವು ಈ ಸಂಶೋಧನೆಗೆ ಮಾನ್ಯತೆ ನೀಡಿದೆ ಎಂದರು.

    ಥಾಮಸ್ ವಿವಿ ಸಹಯೋಗದಲ್ಲಿ ಕೆಎಲ್​ಇ ಅಕಾಡೆಮಿ ಆಫ್ ಹೈಯರ್ ಎಜುಕೇಷನ್ ಆಂಡ್ ರಿಸರ್ಚ್ ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿದೆ. ಮೂತ್ರಶಾಸ್ತ್ರ, ನರವಿಜ್ಞಾನ, ವಿಕಿರಣಶಾಸ್ತ್ರ, ಮನೋವೈದ್ಯಶಾಸ್ತ್ರ, ಸಾರ್ವಜನಿಕ ಆರೋಗ್ಯ, ಭೌತಿಕ ಚಿಕಿತ್ಸೆ, ಶುಶ್ರೂಷಾ ವಿಜ್ಞಾನ, ಸಮಗ್ರ ಆರೋಗ್ಯ ಮುಂತಾದ ಕ್ಷೇತ್ರಗಳಲ್ಲಿ ಸಂಶೋಧನೆ ಮುಂದುವರಿಸಿದೆ ಎಂದರು.

    ಕೆಎಲ್​ಇ ಸಂಸ್ಥೆಯ ಕಾರ್ಯದರ್ಶಿ ಡಾ. ಬಿ.ಜಿ. ದೇಸಾಯಿ, ಕೆಎಲ್​ಇ ಡಾ.ಪ್ರಭಾಕರ ಕೋರೆ ಆಸ್ಪತ್ರೆಯ ನಿರ್ದೇಶಕ ಡಾ. ಆರ್.ಬಿ. ನೇರಲಿ, ಕೆಎಲ್​ಇ ಬಿ.ಎಂ.ಕಂಕಣವಾಡಿ ಆಯುರ್ವೆದಿಕ್ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಬಿ.ಶ್ರೀನಿವಾಸ ಪ್ರಸಾದ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts