More

    ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜ್ ಶೀಘ್ರ

    ಹಾವೇರಿ: ಕೆಎಲ್​ಇ ಸಂಸ್ಥೆಯು ಈಗಾಗಲೇ ಬೆಳಗಾವಿ ಆಸ್ಪತ್ರೆಯಲ್ಲಿ 2,400 ಬೆಡ್ ಸೌಲಭ್ಯವುಳ್ಳ ಆಸ್ಪತ್ರೆ ನಿರ್ವಿುಸಿದೆ. ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜ್, ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ನಿರ್ಮಾಣ ಕಾಮಗಾರಿಯನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಕೆಎಲ್​ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ. ಪ್ರಭಾಕರ ಕೋರೆ ತಿಳಿಸಿದರು.

    ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಬ್ಬಳ್ಳಿಯಲ್ಲಿ ಮೂರುಸಾವಿರ ಮಠದವರು ಕಾಲೇಜ್ ಹಾಗೂ ಆಸ್ಪತ್ರೆ ನಿರ್ವಣಕ್ಕೆ 25 ಎಕರೆ ಜಮೀನು ಕೊಟ್ಟಿದ್ದಾರೆ. 600 ಕೋಟಿ ರೂ.ಗಳ ವೆಚ್ಚದಲ್ಲಿ 2 ವರ್ಷಗಳ ಅವಧಿಯಲ್ಲಿ ಸುಸಜ್ಜಿತ ಆಸ್ಪತ್ರೆ ಹಾಗೂ ಕಾಲೇಜ್ ನಿರ್ವಣಗೊಳ್ಳಲಿದ್ದು, ಈ ಭಾಗದವರಿಗೆ ಅನುಕೂಲವಾಗಲಿದೆ ಎಂದರು.

    ಬೆಂಗಳೂರಿನಲ್ಲಿ ಅತ್ಯಾಧುನಿಕ 600 ಹಾಸಿಗೆಗಳ ಆಸ್ಟರ್ ಕೆಎಲ್​ಇ ಆಸ್ಪತ್ರೆ, ನವಿಮುಂಬೈಯಲ್ಲಿ ಕೆಎಲ್​ಇ ಸಿಬಿಎಸ್​ಸಿ ಸ್ಕೂಲ್, ಪುಣೆಯಲ್ಲಿ 250 ಹಾಸಿಗೆಗಳ ಆಸ್ಪತ್ರೆ, ಬೆಳಗಾವಿಯಲ್ಲಿ 300 ಹಾಸಿಗೆಗಳ ಸುಸಜ್ಜಿತ ಕ್ಯಾನ್ಸರ್ ಆಸ್ಪತ್ರೆ, ಹೋಮಿಯೋಪಥಿಕ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಗಳನ್ನು ನಿರ್ವಿುಸಲು ಕ್ರಮಕೈಗೊಳ್ಳಲಾಗಿದೆ ಎಂದರು.

    ಕೆಎಲ್​ಇ ಸಂಸ್ಥೆಯ ಆಸ್ಪತ್ರೆಗಳಲ್ಲಿ ಎಲ್ಲ ಅತ್ಯಾಧುನಿಕ ಸೌಲಭ್ಯಗಳು, ನುರಿತ ವೈದ್ಯರಿದ್ದಾರೆ. ಹೃದಯ, ಕಿಡ್ನಿ, ಮೆದುಳು, ಚರ್ಮದ ಟ್ರಾನ್ಸ್​ಲೆಂಟ್ ಸಹ ಮಾಡಲಾಗುತ್ತಿದೆ. ನಮ್ಮ ಜನರಲ್ಲಿ ಮೂಢನಂಬಿಕೆ ಹೆಚ್ಚಿರುವ ಪರಿಣಾಮ ಯಾರೂ ದೇಹದ ಅಂಗಾಗಗಳನ್ನು ದಾನವಾಗಿ ನೀಡುತ್ತಿಲ್ಲ. ಇದರ ಬಗೆಗೆ ಹೆಚ್ಚಿನ ಜಾಗೃತಿ ಮೂಡಬೇಕಿದೆ ಎಂದರು.

    ಬೆಳಗಾವಿ ಆಸ್ಪತ್ರೆಯಲ್ಲಿ 1,400 ಬೆಡ್​ಗಳಲ್ಲಿ ಸಾಮಾನ್ಯ ರೋಗಗಳಿಗೆ ಉಚಿತ ಚಿಕಿತ್ಸಾ ಸೌಲಭ್ಯ ಕಲ್ಪಿಸಲಾಗಿದೆ. ಇದರ ಪ್ರಯೋಜನವನ್ನು ಎಲ್ಲರೂ ಸದುಪಯೋಗ ಪಡಿಸಿಕೊಳ್ಳಬೇಕು. ಈ ಭಾಗದ ಜನರಿಗೂ ಅದನ್ನು ತಲುಪಿಸುವ ನಿಟ್ಟಿನಲ್ಲಿ ಮಾಹಿತಿ ಕೇಂದ್ರ ತೆರೆಯಲಾಗಿದೆ. ಪ್ರತಿದಿನವೂ ಒಬ್ಬೊಬ್ಬ ನುರಿತ ವೈದ್ಯರು ಇಲ್ಲಿ ಲಭ್ಯರಿರುತ್ತಾರೆ. ಹೆಚ್ಚಿನ ಚಿಕಿತ್ಸೆ ಅವಶ್ಯವಿರುವರನ್ನು ಬೆಳಗಾವಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ ಎಂದರು.

    ಸಂಸದ ಶಿವಕುಮಾರ ಉದಾಸಿ ಮಾತನಾಡಿ, ಕೆಎಲ್​ಇ ಸಂಸ್ಥೆಯ ಆಸ್ಪತ್ರೆಗಳಲ್ಲಿ ಅತ್ಯಾಧುನಿಕ ಸೌಲಭ್ಯಗಳಿದ್ದು, ಅವುಗಳ ಪ್ರಯೋಜನ ನಮ್ಮ ಜನರಿಗೂ ಸಿಗಬೇಕು. ಇಲ್ಲಿನ ಜನರು ದೂರದೂರುಗಳಿಗೆ ಚಿಕಿತ್ಸೆ ತೆರಳುತ್ತಿರುವುದನ್ನು ನಾವು ಪ್ರತಿದಿನ ಗಮನಿಸುತ್ತಿದ್ದೇವೆ. ಅದರ ಬದಲು ಇಲ್ಲಿಯೇ ಸೌಲಭ್ಯ ಪಡೆದುಕೊಳ್ಳಲಿ ಎಂಬ ಆಶಯ ಸಂಸ್ಥೆಯದ್ದಾಗಿದೆ. ಕ್ಯಾನ್ಸರ್ ಕಾಯಿಲೆ ಈಗ ಗುಣಪಡಿಸಬಹುದು. ಅದಕ್ಕೆ ಮುಂಜಾಗ್ರತಾ ಕ್ರಮಗಳು ಅವಶ್ಯವಾಗಿವೆ. ಯಾರೂ ಎದೆಗುಂದದೇ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts