More

    ಕೊಡಚಾದ್ರಿ ರೋಪ್‌ವೇಗೆ ಡಿಪಿಆರ್

    ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಿಂದ ಐತಿಹಾಸಿಕ ತಾಣ ಕೊಡಚಾದ್ರಿ ಬೆಟ್ಟಕ್ಕೆ ರೋಪ್‌ವೇ ಮೂಲಕ ಸಂಪರ್ಕ ಕಲ್ಪಿಸುವ ಮಹತ್ವಾಕಾಂಕ್ಷಿ ಯೋಜನೆಯ ಮೊದಲ ಹಂತದ ವಿಸ್ತೃತ ಯೋಜನಾ ವರದಿ (ಡಿಪಿಆರ್) ಕಾರ್ಯಕ್ಕೆ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಮಂಗಳವಾರ ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಚಾಲನೆ ನೀಡಿದರು.

    ಪಶ್ಚಿಮ ಘಟ್ಟಗಳ ಪ್ರಾಕೃತಿಕ ಸೌಂದರ್ಯಕ್ಕೆ ಧಕ್ಕೆಯಾಗದಂತೆ ಇರುವ ಪ್ರಕೃತಿ ಸೌಂದರ್ಯವನ್ನು ಅಭಿವೃದ್ಧಿಪಡಿಸಬಹುದಾದ ವಿಧಾನಗಳ ಕುರಿತು ಪ್ರವಾಸೋದ್ಯಮ ಇಲಾಖೆ ರೋಪ್‌ವೇ ಯೋಜನೆ ಬಗ್ಗೆ ಸಮೀಕ್ಷೆ ನಡೆಸಿ ಜತೆಗೆ ಪರಿಸರವನ್ನೂ ಉಳಿಸಿಕೊಂಡು ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಸುಕುಮಾರ ಶೆಟ್ಟಿ ಹೇಳಿದರು.

    ವಿಶ್ವವಿಖ್ಯಾತ ಕೊಡಚಾದ್ರಿ ಬೆಟ್ಟದಿಂದ ಕೊಲ್ಲೂರಿಗೆ ರೋಪ್‌ವೇ ಸಂಪರ್ಕ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ಈ ಹಿಂದೆಯೇ ಕನಸು ಕಂಡಿದ್ದೆ. ಅದಕ್ಕೀಗ ಸಂಸದ ಬಿ.ವೈ ರಾಘವೇಂದ್ರ ಜೀವ ನೀಡುತ್ತಿದ್ದಾರೆ. ಇದಕ್ಕೆ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಅವರ ಸಂಪೂರ್ಣ ಸಹಕಾರವಿದ್ದು, ಹರಿದ್ವಾರ, ಗುಜರಾತ್ ಮುಂತಾದ ಕಡೆಗಳಲ್ಲಿ ರೋಪ್‌ವೇ ನಿರ್ಮಾಣ ಮಾಡಿದ ಟಿಪಿಐಎಲ್ ಸಂಸ್ಥೆಯಿಂದ ಕೊಲ್ಲೂರಿನ ದಳಿ, ಸಲಗೇರಿ ಹಾಗೂ ಹಳ್ಳಿಬೇರು ಪ್ರದೇಶದಿಂದ ಡಿಪಿಆರ್ ಮಾಡಲಾಗುತ್ತದೆ. ರೋಪ್‌ವೇ ಆಗುವುದರಿಂದ ಸ್ಥಳೀಯ ಜೀಪ್ ಚಾಲಕರು ಮಾಲೀಕರು ಆತಂಕ ಪಡಬೇಕಾಗಿಲ್ಲ. ರೋಪ್‌ವೇ ಸ್ಥಳದ ತನಕ ಹೋಗಲು ಜೀಪ್‌ಗಳ ಅವಶ್ಯಕತೆ ಇರುತ್ತದೆ. ಪ್ರವಾಸೋದ್ಯಮ ಅಭಿವೃದ್ಧಿಗೊಂಡಂತೆ ಅವಕಾಶಗಳು ಸೃಷ್ಟಿಯಾಗುತ್ತವೆ ಎಂದರು.

    ಜಿಪಂ ಸದಸ್ಯ ಶಂಕರ ಪೂಜಾರಿ, ಕೇಂದ್ರ ಸರ್ಕಾರದ ಇಂಜಿನಿಯರಿಂಗ್ ಪ್ರಾಜೆಕ್ಟ್ ಇಂಡಿಯಾ ಲಿಮಿಟೆಡ್ ಸಂಸ್ಥೆಯ ಇಂಜಿನಿಯರ್‌ರಾದ ರಾಜೇಶ ಪ್ರಸಾದ್, ಎಸ್. ಬಿ. ಆರ್ ಪಾಟೀಲ್, ಉದ್ಯಮಿ ವೆಂಕಟೇಶ್ ಕಿಣಿ, ಸ್ಥಳೀಯ ಪ್ರಮುಖರಾದ ಡಾ. ಅತುಲ್ ಕುಮಾರ್ ಶೆಟ್ಟಿ, ಬೈಂದೂರು ಬಿಜೆಪಿ ಮಂಡಲದ ಪದಾಧಿಕಾರಿಗಳು, ಶ್ರೀ ಮೂಕಾಂಬಿಕಾ ದೇವಸ್ಥಾನದ ಅರ್ಚಕ ವೃಂದದವರು ಉಪಸ್ಥಿತರಿದ್ದರು. ಬೈಂದೂರು ಮಂಡಲ ಬಿಜೆಪಿ ಅಧ್ಯಕ್ಷ ನೆಲ್ಯಾಡಿ ದೀಪಕ್ ಕುಮಾರ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು.

    ಯುರೋಪಿಯನ್ ಮಾದರಿಯಲ್ಲಿ ಈ ಯೋಜನೆ ರೂಪುಗೊಳ್ಳಲಿದೆ. ಇದರಿಂದ ಕೊಲ್ಲೂರಿಗೆ ಬರುವ ಯಾತ್ರಾರ್ಥಿಗಳು, ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಲಿದೆ. ಈ ಭಾಗದ ಅಭಿವೃದ್ಧಿಗೂ ಪೂರಕವಾಗಲಿದ್ದು, 6-8 ಕಿ.ಮೀ ಉದ್ದ ಇರುವ ಈ ರೋಪ್‌ವೇ ಭಾರತದಲ್ಲಿಯೇ ಅತೀ ಉದ್ದವಾದ ರೋಪ್‌ವೇ ಎನಿಸಿಕೊಳ್ಳಲಿದೆ.
    ಬಿ. ಎಂ. ಸುಕುಮಾರ ಶೆಟ್ಟಿಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts