More

    ತ್ಯಾಜ್ಯದ ಚರಂಡಿಗಿಲ್ಲ ಸ್ವಚ್ಛತಾ ಭಾಗ್ಯ

    ದೋರನಹಳ್ಳಿ: ಗ್ರಾಮದಲ್ಲಿ ಸಂಜೆಯಾಗುತ್ತಲೇ ಸೊಳ್ಳೆಗಳ ಹಿಂಡು ಎಲ್ಲರ ನಿದ್ದೆಗೆಡಿಸುವಂತೆ ಮಾಡುತ್ತಿದ್ದು, ಸ್ವಚ್ಛತೆ ಎಂಬುದು ಸಂಪೂರ್ಣ ಮರೀಚಿಕೆಯಾಗಿದೆ.

    ಗ್ರಾಮದ ೧೧ ವಾರ್ಡ್​ಳಿಗಿರುವ ೩೫ ಸದಸ್ಯರಿಗೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಅಧಿಕಾರ ಬೇಕು. ಆದರೆ ಅಭಿವೃದ್ಧಿ ಬೇಡ ಎಂಬ ನಿಲುವು ತಾಳಿದಂತಿದೆ. ಬಹುತೇಕ ವಾರ್ಡ್​ಗಳಲ್ಲಿ ಚರಂಡಿ ಸಮಸ್ಯೆ ದಿನೇದಿನೆ ಹೆಚ್ಚಾಗುತ್ತಿದ್ದರೂ ಕ್ರಮ ಕೈಗೊಳ್ಳದ ಜಾಣಕುರುಡುತನ ಪ್ರದರ್ಶಿಸುತ್ತಿದ್ದಾರೆ.

    ಕೆಲ ಚರಂಡಿಗಳು ತ್ಯಾಜ್ಯ ವಸ್ತುಗಳಿಂದ ತುಂಬಿ ಬ್ಲಾಕ್ ಆಗಿವೆ. ಇನ್ನೂ ಕೆಲವನ್ನು ಕೆಲವರು ದುರುದ್ದೇಶದಿಂದ ಕಲ್ಲು, ಮಣ್ಣು ಹಾಕಿ ಮುಚ್ಚಿದ್ದರಿಂದ ನೀರು ಸರಾಗವಾಗಿ ಹರಿಯದೆ ರಸ್ತೆ ಮೇಲೆ ಕೊಳಚೆ ನೀರು ಹರಿದು ಕಸದ ರಾಶಿ ಬಿದ್ದಿದ್ದು, ದುರ್ವಾಸನೆ, ಮೂಗು ಮುಚ್ಚಿಕೊಂಡೇ ಓಡಾಡುವಂಥ ಪರಿಸ್ಥಿತಿ ಜನತೆ ಹೇಳತೀರದ ಕಷ್ಟ ಅನುಭವಿಸುತ್ತಿದ್ದಾರೆ.

    ರಸ್ತೆಯಲ್ಲಿ ಕಾಲಿಡಲು ಸಹ ಗರ್ಭಿಣಿಯರು, ಮಕ್ಕಳು, ವೃದ್ಧರು ಭಯ ಬೀಳುವಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿಗೆ ಹಲವಾರು ಬಾರಿ ಮನವಿ ಮಾಡಿದರೂ ಸಿಬ್ಬಂದಿ ಸ್ಪಂದಿಸುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.

    ಚರಂಡಿ ಸಮಸ್ಯೆ ಗ್ರಾಮದ ಎಲ್ಲ ವಾರ್ಡ್​ಗಳಲ್ಲಿದೆ. ಆದರೆ ಸ್ಪಂದಿಸಬೇಕಿದ್ದ ಚುನಾಯಿತ ಪ್ರತಿನಿಧಿಗಳು ಮಾತ್ರ ನಿರ್ಲಕ್ಷಿಸಿ ಕಣ್ಣಿದ್ದೂ ಕುರುಡಾಗಿ, ಬಾಯಿದ್ದು ಮೂಕರಂತಾಗಿರುವುದು ವಿಷಾದನೀಯ.

    ಮನೆ ಕಟ್ಟಿದ ಚಿಪ್ಪುಗಲ್ಲು ಚರಂಡಿಗೆ: ಗ್ರಾಮದಲ್ಲಿ ರಸ್ತೆ ಅಕ್ಕಪಕ್ಕದ ಜನರು ಮನೆ ಕಟ್ಟಲು ಬಳಸಿ ಉಳಿದ ಚಿಪ್ಪುಗಲ್ಲು, ಸಿಮೆಂಟ್ ಖಾಲಿ ಚೀಲ, ತ್ಯಾಜ್ಯ ಜಲ್ಲಿಕಲ್ಲು ಸೇರಿ ಹಲವು ಅನುಪಯುಕ್ತ ವಸ್ತುಗಳನ್ನು ಚರಂಡಿಗೆ ಬಿಸಾಡುತ್ತಾರೆ. ಅವರ ವಿರುದ್ಧ ಗ್ರಾಪಂ ಯಾವುದೇ ಶಿಸ್ತು ಕ್ರಮ ಕೈಗೊಳ್ಳದ್ದರಿಂದ ಇಂಥ ಅಸಡ್ಡೆಗಳಿಗೆ ದಾರಿ ಮಾಡಿಕೊಡುತ್ತಿದೆ.

    ಈಗಾಗಲೇ ಗ್ರಾಮದ ಕೆಲ ರಸ್ತೆಗಳಲ್ಲಿ ಚರಂಡಿ ನೀರು ಹರಿದು ಬರುತ್ತಿರುವುದು ಗಮನಕ್ಕೆ ಬಂದಿದೆ. ಸಮಸ್ಯೆ ಪರಿಹರಿಸುವ ಕುರಿತು ಗ್ರಾಪಂ ಪಿಡಿಒಗೆ ಸೂಚಿಸಲಾಗುವುದು. ಚರಂಡಿಗೆ ಕಟ್ಟಡದ ಕಲ್ಲುಗಳನ್ನು ಹಾಕುವವರಿಗೆ ನೋಟಿಸ್ ನೀಡಲಾಗುವುದು.
    | ಚಂದ್ರಕಲಾ ದೊರೆ ಗ್ರಾಪಂ ಅಧ್ಯಕ್ಷೆ ದೋರನಹಳ್ಳಿ

    ಚರಂಡಿ ಸ್ವಚ್ಛತೆ ಮಾಡಿಸಿ ಎಂದು ಕೇಳಿಕೊಂಡರೆ, ನೀವು ಹೇಳಿದಾಕ್ಷಣ ಆಗುವುದಿಲ್ಲ. ಅವಸರ ಇದ್ದರೆ ನೀವೇ ಸ್ವಚ್ಛಗೊಳಿಸಿಕೊಳ್ಳಿ ಎಂದು ಸಿಬ್ಬಂದಿ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ನಮ್ಮ ಸಮಸ್ಯೆ ಯಾರ ಬಳಿ ಹೇಳಬೇಕು ಎಂಬುದು ಗೊತ್ತಾಗುತ್ತಿಲ್ಲ.
    | ತಿಪ್ರೋಜಿ ಸುಗಂಧಿ ದೋರನಹಳ್ಳಿ ಗ್ರಾಮಸ್ಥ

    ಮಹಿಳೆಯರು ರಸ್ತೆಯಲ್ಲಿ ತಿರುಗಾಡುವುದೇ ದುಸ್ತರವಾಗಿದೆ. ಎಲ್ಲೆಂದರಲ್ಲಿ ಚರಂಡಿ ನೀರು ರಸ್ತೆಗೆ ಹರಿದು ಗದ್ದೆಯಂತಾಗಿವೆ. ಮತ ಕೇಳಲು ಬಂದ ಚುನಾಯಿತ ಸದಸ್ಯರು ಈಗ ಇತ್ತ ಕಡೆ ಸುಳಿಯುತ್ತಿಲ್ಲ. ಅವರ ಮನೆಗೆ ಹೋಗಿ ಧರಣಿ ಕೂಡುವುದು ಬಾಕಿಯಿದೆ.
    | ಜ್ಯೋತಿ ಬಿ.ಗಂಗನಾಳ ಗೃಹಿಣಿ ದೋರನಹಳ್ಳಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts