More

    ದೈಹಿಕ ಅಸಮರ್ಥರ ಮನೆ ಬಾಗಿಲಿಗೆ ಬ್ಯಾಂಕ್ ಸೇವೆ

    ಪ್ರಕಾಶ್ ಮಂಜೇಶ್ವರ ಮಂಗಳೂರು
    ಅಂಗವಿಕಲರು, ಹಿರಿಯ ನಾಗರಿಕರು ಮತ್ತು ತೀವ್ರ ಸ್ವರೂಪದ ಕಾಯಿಲೆ ಇರುವವರು ಈಗ ಮನೆಗೆ ಬ್ಯಾಂಕ್ ಸಿಬ್ಬಂದಿಯನ್ನು ಕರೆಸಿಕೊಂಡು ಪ್ರಮುಖ ಬ್ಯಾಂಕ್ ಸೇವೆಗಳನ್ನು ಪಡೆಯಬಹುದು.

    ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನಿರ್ದೇಶನದಂತೆ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಈ ಸೇವೆಯನ್ನು ಆರಂಭಿಸಿವೆ. ಹೆಚ್ಚಿನ ಜನರಿಗೆ ಈ ಬಗ್ಗೆ ಅರಿವಿಲ್ಲದಿರುವ ಕಾರಣ ಹೊಸ ಸೇವೆಯನ್ನು ಬಳಸುವವರ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ.

    ಯಾವ್ಯಾವ ಸೇವೆ?: ನಗದು ಸೀಕಾರ, ನಗದು ವರ್ಗಾವಣೆ, ಚೆಕ್ ಸ್ವೀಕಾರ, ಡಿಮಾಂಡ್ ಡ್ರಾಫ್ಟ್ ಕಳುಹಿಸುವುದು, ಲೈಫ್ ಸರ್ಟಿಫಿಕೆಟ್, ಕೆವೈಸಿ ದಾಖಲೆ ನವೀಕರಣ, ಫಾರ್ಮ್ 15 ಸ್ವೀಕಾರ ಸಹಿತ ಪ್ರಮುಖ ಒಂಬತ್ತು ಸೇವೆಗಳನ್ನು ಬ್ಯಾಂಕ್ ಒದಗಿಸುತ್ತಿವೆ.

    ಕೆಲವು ಬ್ಯಾಂಕ್‌ಗಳು ನಿಗದಿಪಡಿಸಿದ ಸೇವೆಗಳ ಜತೆ ಕೆಲವು ಹೆಚ್ಚುವರಿ ಸೇವೆಗಳನ್ನೂ ನೀಡುತ್ತವೆ. ನಿರ್ದಿಷ್ಟ ಬ್ಯಾಂಕ್‌ನ 5 ಕಿ.ಮೀ. ವ್ಯಾಪ್ತಿಯಲ್ಲಿ ಈ ಸೇವೆ ಪಡೆಯಲು ಅವಕಾಶವಿದೆ. ಪ್ರಸ್ತಾವಿತ ಸೇವೆಗಳನ್ನು ಅರ್ಜಿದಾರ ವಿನಂತಿ ಕಳುಹಿಸಿದ ಎರಡು ಕೆಲಸದ ದಿನಗಳ ಒಳಗೆ ಬ್ಯಾಂಕ್‌ಗಳು ಒದಗಿಸಬೇಕು.

    ಅನೇಕ ಬ್ಯಾಂಕ್ ಶಾಖೆಗಳು ಬಹುಮಹಡಿ ಕಟ್ಟಡಗಳಲ್ಲಿ ಇದ್ದು, ಆರ್‌ಬಿಐ ಹೊಸ ಆದೇಶದಿಂದ ದೈಹಿಕವಾಗಿ ಅಶಕ್ತರಿರುವ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ.
    ರಾಜ್ಯದಲ್ಲಿ 2001ರ ಜನಗಣತಿ ಪ್ರಕಾರ 9,40,643 ಅಂಗವೈಕಲ್ಯ ಹೊಂದಿದ ವ್ಯಕ್ತಿಗಳು ಇದ್ದಾರೆ. ಇವರಲ್ಲಿ 6,61,139 ಅಂಗವಿಕಲರು ಗ್ರಾಮಾಂತರ ಪ್ರದೇಶದಲ್ಲಿ ಹಾಗೂ 2,79,904 ಜನರು ನಗರ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.

    ಏನು ಮಾಡಬೇಕು?: ಗೂಗಲ್ ಪ್ಲೇ ಸ್ಟೋರ್‌ನಿಂದ ಡೋರ್ ಸ್ಟೆಪ್ ಬ್ಯಾಂಕಿಂಗ್(ಡಿಎಸ್‌ಬಿ) ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ತಮ್ಮ ಬ್ಯಾಂಕ್ ಹೆಸರು ಆಯ್ಕೆ ಮಾಡಿಕೊಂಡು, ಐಎಫ್‌ಎಸ್‌ಸಿ ಕೋಡ್ ಹಾಗೂ ತಮ್ಮ ಮೊಬೈಲ್ ನಂಬರ್ ದಾಖಲಿಸಬೇಕು. ಬಳಿಕ ಯಾವ ರೀತಿಯ ಸೇವೆ ಅಗತ್ಯವಿದೆ ಎನ್ನುವ ಕುರಿತು ರಿಕ್ವೆಸ್ಟ್ ಕಳುಹಿಸಬೇಕು.

    ಅಂಗವಿಕಲರು ಮನೆ ಬಾಗಿಲಿನಲ್ಲಿ ಬ್ಯಾಂಕ್ ಸೇವೆ ಪಡೆಯುವ ಒಂದು ಸುವರ್ಣ ಅವಕಾಶ ಲಭ್ಯವಾಗಿದೆ. ಅರ್ಹ ಫಲಾನುಭವಿಗಳು ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.
    ಶಿವು ರಾಥೋಡ್, ಮುಖಂಡ, ಕರ್ನಾಟಕ ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಅಂಗವಿಕಲ ನೌಕರರ ಸಂಘ

    ದಕ್ಷಿಣ ಕನ್ನಡದ ಎಲ್ಲ ರಾಷ್ಟ್ರೀಕೃತ ಬ್ಯಾಂಕ್‌ಗಳು ಡೋರ್ ಸ್ಟೆಪ್ ಬ್ಯಾಂಕಿಂಗ್ ಸೇವೆ ಒದಗಿಸಲು ಆರಂಭಿಸಿವೆ. ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ಬ್ಯಾಂಕ್ ವ್ಯವಸ್ಥಾಪಕರನ್ನು ದೂರವಾಣಿ ಮೂಲಕ ಕೂಡ ಸಂಪರ್ಕಿಸಬಹುದು.
    ಪ್ರವೀಣ್ ಎಂ.ಪಿ, ಲೀಡ್ ಬ್ಯಾಂಕ್ ಮ್ಯಾನೇಜರ್, ದ.ಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts