More

    ಸಮುದಾಯ ಒಡೆಯುವ ಕೆಲಸ ಯಾರಿಂದಲೂ ಆಗದಿರಲಿ

    ನಾಪೋಕ್ಲು: ಯಾವ ಧರ್ಮವೂ ಹಿಂಸೆ ಬೋಧಿಸುವುದಿಲ್ಲ. ಬದಲಾಗಿ ಸಕಲ ಜೀವಾತ್ಮಗಳಿಗೂ ಒಳಿತಾಗಬೇಕು ಎಂಬುದು ಎಲ್ಲ ಧರ್ಮಗಳ ಮೂಲ. ಹಾಗಾಗಿ ಎಲ್ಲರೂ ಒಳ್ಳೆಯವರಾಗಿ ಉತ್ತಮ ಪ್ರಪಂಚ ಕಟ್ಟಬೇಕು ಎಂದು ಅರಮೆರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.

    ಸಮೀಪದ ಚೆರಿಯಪರಂಬು ದರ್ಗಾದಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಬ್ದುಲ್ ರಾಹ್ಮಾನ್ ವಲಿಯುಲ್ಲಾಹಿ ಅವರ ಉರುಸ್ ಸಮಾರಂಭ ಪ್ರಯುಕ್ತ ಶನಿವಾರದ ಸಂಜೆ ಆಯೋಜಿಸಿದ್ದ ಸರ್ವಧರ್ಮ ಸಮ್ಮೇಳನದಲ್ಲಿ ಮಾತನಾಡಿದರು.

    ಜೀವನವನ್ನು ಸಂತೋಷದಿಂದ ಅನುಭವಿಸುವುದು ಹೇಗೆ, ಆ ಸಂತೋಷದಲ್ಲಿ ನನ್ನೊಳಗೆ ನನ್ನನ್ನು ಹುಡುಕಿಕೊಳ್ಳುವುದು ಹೇಗೆ ಎಂಬುದನ್ನು ನಮಗೆ ಎಲ್ಲ ಧರ್ಮಗಳು ಹೇಳಿಕೊಡಬೇಕು. ವೈಯಕ್ತಿಕ ದ್ವೇಷ ಮತ್ತು ಅಪೇಕ್ಷೆಗಾಗಿ ಸಮುದಾಯವನ್ನು ಒಡೆಯುವ ಕೆಲಸ ಮಾಡಬಾರದು. ಸದಾ ಒಳ್ಳೆಯ ಆಲೋಚನೆ ಹಾಗೂ ಚಿಂತನೆ ಮಾಡಬೇಕು ಎಂದರು.

    ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕೆಲಸವಾಗಬೇಕು. ಜತೆಗೆ ಮಹನೀಯರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದ ಅವರು, ಧರ್ಮ ಒಂದು ಬೆಳಕು. ಆ ಬೆಳಕಿನಲ್ಲಿ ನಾವು ನಮ್ಮ ಬದುಕನ್ನು ಕಟ್ಟಿಕೊಳ್ಳಬೇಕೇ ವಿನಃ ಧರ್ಮವನ್ನು ಬೆಂಕಿಯನ್ನಾಗಿ ಮಾಡಬಾರದು ಎಂದರು.

    ಸ್ಥಳೀಯ ಮೇರಿ ಮಾತೆ ದೇವಾಲಯದ ಧರ್ಮಗುರು ಜ್ಞಾನಪ್ರಕಾಶ್ ಮಾತನಾಡಿ, ಮಹನೀಯರ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಸುಂದರ ಸಮಾಜ ನಿರ್ಮಾಣ ಸಾಧ್ಯ. ಮನುಷ್ಯತ್ವವನ್ನು ಕಳೆದುಕೊಂಡಾಗ ಸಮಾಜ ಹಾಳಾಗುತ್ತದೆ ಎಂದರು.

    ಕಾಫಿ ಬೆಳೆಗಾರ ಕುಡಿಯೋಣ ರಮೇಶ್ ಮಾತನಾಡಿ, ಎಲ್ಲ ಧರ್ಮಗಳು ಉತ್ತಮವಾದುದನ್ನೇ ಬೋಧಿಸುತ್ತವೆ. ನಮ್ಮ ತಪ್ಪುಗಳನ್ನು ತಿದ್ದಿಕೊಂಡಾಗ ಬದುಕು ಸಾರ್ಥಕವಾಗುತ್ತದೆ ಎಂದರು.


    ಗ್ರಾಮ ಪಂಚಾಯಿತಿ ಸದಸ್ಯ ಬಿ.ಎಂ.ಪ್ರತಿಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿರಾಜುದ್ದೀನ್ ಸಕಾಫಿ, ಅರಮೆರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ, ಲಕ್ಷ್ಮಿ ವೆಂಕಟೇಶ್ವರ ದೇವಾಲಯ ಅಧ್ಯಕ್ಷ ಟಿ.ಎಸ್.ಮಂಜಯ್ಯ, ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಮಾಜಿ ಜಿಲ್ಲಾಧ್ಯಕ್ಷ ಪಿ.ಎ.ಅನೀಫ್ ಅವರನ್ನು ಸನ್ಮಾನಿಸಲಾಯಿತು.


    ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಯತ್ ಆಡಳಿತ ಮಂಡಳಿ ಅಧ್ಯಕ್ಷ ಪರವಂಡ ಜುಬೇರ್ ವಹಿಸಿದ್ದರು. ಚೆರಿಯಪರಂಬು ಮಸೀದಿಯ ಖತೀಬರಾದ ಹಂಝ ರಹ್ಮಾನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts