More

    ಮೌಢ್ಯಗಳನ್ನು ನಂಬದಿರುವುದೇ ಲೇಸು

    ಮುದ್ದೇಬಿಹಾಳ: ಮೂಢನಂಬಿಕೆಗಳು ಗ್ರಾಮೀಣ ಮಹಿಳೆಯರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಇದನ್ನು ತಪ್ಪಿಸಿ ಆರೋಗ್ಯಕರ ಜೀವನ ನಡೆಸಲು ಅವುಗಳಿಗೆ ಮಾರು ಹೋಗದಿರುವುದೇ ಮಾರ್ಗ ಎಂದು ಇಳಕಲ್ಲ ಎಸ್‌ವಿಎಂ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಡಾ. ಅಕ್ಷತಾ ಪೂಜಾರಿ ಹೇಳಿದರು.

    ತಾಲೂಕಿನ ಗುಡಿಹಾಳ ಗ್ರಾಮದಲ್ಲಿ ನಡೆಯುತ್ತಿರುವ ಗ್ರಾಮದೇವತೆ ಜಾತ್ರೆಯ ಅಂಗವಾಗಿ ದಿ. ಸಿದ್ದಮ್ಮ ಬಿರಾದಾರ ಗ್ರಂಥಾಲಯ ಬಳಗದಿಂದ ಏರ್ಪಡಿಸಿದ್ದ ವಿವಿಧ ಕಾರ್ಯಕ್ರಮಗಳಲ್ಲಿ ಮಹಿಳಾ ಸ್ವಾಸ್ಥೃ ಜಾಗೃತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

    ಮಹಿಳೆಯರು ದೈಹಿಕ ಮತ್ತು ಮಾನಸಿಕ ಆರೋಗ್ಯ ರಕ್ಷಣೆಗಾಗಿ ಪಾಲಿಸಬೇಕಾದ ಅಂಶಗಳ ಕುರಿತು ಅರಿವು ಮೂಡಿಸಿದ ಅವರು, ಸ್ವಚ್ಛತೆಗೆ ಆದ್ಯತೆ ಕೊಡುವುದರ ಜತೆಗೆ ಆರೋಗ್ಯಕರ ಆಹಾರ ಪದ್ಧತಿ ಪಾಲಿಸುವುದು ಹೆಚ್ಚು ಉಪಯುಕ್ತ ಎಂದು ತಿಳಿವಳಿಕೆ ಮೂಡಿಸಿ ಮಹಿಳೆಯರೊಂದಿಗೆ ಆಪ್ತ ಸಮಾಲೋಚನೆ ನಡೆಸಿದರು.

    ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ಬೇಸಾಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಈರನಗೌಡ ಬಿರಾದಾರ ಮಾತನಾಡಿ, ರೈತರು ಕೃಷಿಯಲ್ಲಿ ಬಳಸಬಹುದಾದ ವೈಜ್ಞಾನಿಕ ಮಾದರಿಯ ಅರಿವು ಮೂಡಿಸಿದರು. ಕೃಷಿಯಲ್ಲಿ ನವೀನ ತಾಂತ್ರಿಕತೆಯ ಬಳಕೆ, ಇಸ್ರೇಲ್ ಮಾದರಿಯ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡಲ್ಲಿ ರೈತರು ಪ್ರಗತಿ ಸಾಧಿಸಲು ಸಾಧ್ಯವಿದೆ. ಕೃಷಿಯ ಜತೆಗೆ ಕೃಷಿ ಸಂಬಂಧಿತ ಚಟುವಟಿಕೆ ನಡೆಸುವುದು ಹೆಚ್ಚು ಲಾಭದಾಯಕ ಎಂದರು.

    ಬ್ಯಾಂಕಿಂಗ್, ಹಣಕಾಸು ನಿರ್ವಹಣೆ, ಖಾತೆ ತೆರೆಯುವ ಪದ್ಧತಿ, ವಿಮಾ ಯೋಜನೆ, ಕೃಷಿ ಮತ್ತು ಶೈಕ್ಷಣಿಕ ಸಾಲ ಮುಂತಾದವುಗಳ ಕುರಿತು ಬ್ಯಾಂಕ್ ಉದ್ಯೋಗಿ ಶಿವಶಂಕರ ಮುದಗಲ್ ಮಾಹಿತಿ ನೀಡಿದರು.

    ಮಕ್ಕಳು, ಮಹಿಳೆಯರು, ರೈತರು ಸೇರಿ ಹಲವರಿಗೆ ವಿವಿಧ ಚಟುವಟಿಕೆ, ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಜೈಕಿಸಾನ್ ತಂಡದವರು ಜನಪದ ಕಾರ್ಯಕ್ರಮ ನಡೆಸಿಕೊಟ್ಟರು. ಪುಸ್ತಕ ಜೋಳಿಗೆ ಹೆಸರಿನಲ್ಲಿ ಬಾಕ್ಸ್ ನಿರ್ಮಿಸಿ ಅದರೊಳಗೆ ಸಾರ್ವಜನಿಕರು ತಮ್ಮ ಮನೆಯಲ್ಲಿರುವ ಹಳೆಯ ಪುಸ್ತಕಗಳನ್ನು ಹಾಕಲು ಅವಕಾಶ ನೀಡಲಾಗಿತ್ತು.

    ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗಾಗಿ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಿ ಹೆಚ್ಚು ಅಂಕ ಪಡೆದ ಮೂರು ತಂಡಗಳಿಗೆ ಬಹುಮಾನ ವಿತರಿಸಲಾಯಿತು.
    ಜೀರಲಭಾವಿ ಆನಂದ ಮಠದ ಆನಂದಯ್ಯ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ಗುಡಿಹಾಳ ಸಂಸ್ಥಾನ ಹಿರೇಮಠದ ಶ್ರೀಶೈಲ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಗ್ರಂಥಾಲಯ ಬಳಗದ ಸದಸ್ಯರಾದ ಶಿವಶಂಕರ ಮುದಗಲ್, ಶರಣಗೌಡ ನರಸಲಗಿ, ಸುಭಾಷ ಮಾಡಗಿ, ಸವಿತಾ ಪಾಟೀಲ, ಸವಿತಾ ಮುದಗಲ್, ಜಯಶ್ರೀ ಮುದಗಲ್, ಭೀಮಾಶಂಕರ ದೊಡಮನಿ, ಶಿವಾನಂದ ಮಾದರಿ, ಅಪ್ಪು ಮಾಡಗಿ, ಭೀಮನಗೌಡ ದೇವನಹಳ್ಳಿ, ಶಿವಾನಂದ ಕೊಣ್ಣೂರ, ಶಾಂತಗೌಡ ಬಿರಾದಾರ, ಪರಶುರಾಮ ಚಲವಾದಿ, ಇಬ್ರಾಹಿಂ ಶೇಖ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts