More

    ದಾನಿಗಳು ಸದಾ ಸ್ಮರಣೀಯ: ಹೆಬ್ಬಾಳು ಮಠದ ಸ್ವಾಮೀಜಿ ಅಭಿಮತ

    ದಾವಣಗೆರೆ: ಕಾಯಕದಿಂದ ಬಂದ ಹಣದಲ್ಲಿ ಸ್ವಲ್ಪ ಭಾಗವನ್ನು ಉದಾತ್ತವಾಗಿ ದಾನಧರ್ಮಗಳನ್ನು ಮಾಡುತ್ತಾ ಸತ್ಕಾರ್ಯಗಳಲ್ಲಿ ತೊಡಗಿಕೊಳ್ಳುವಂತವರು ಭೂಮಿ ಇರುವವರೆಗೆ ಸ್ಮರಣೆಯಲ್ಲಿರುತ್ತಾರೆ ಎಂದು ಹೆಬ್ಬಾಳ್ ರುದ್ರೇಶ್ವರ ವಿರಕ್ತ ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ ತಿಳಿಸಿದರು.

    ಚನ್ನಗಿರಿ ಪಟ್ಟಣದ ಹಾಲಸ್ವಾಮಿ ವಿರಕ್ತ ಮಠದಲ್ಲಿ ಶನಿವಾರ ಆಯೋಜಿಸಿದ್ದ ಶ್ರಾವಣ ಮಾಸದ ಒಂದು ತಿಂಗಳ ಕಾಲ ಜಗದ್ಗುರು ಜಯದೇವ ಲೀಲೆ ವಚನಾಮೃತ ಭೋದನೆ ಹಾಗೂ ಮಠದ ಹಿರಿಯ ಶ್ರೀಗಳ ಸಂಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.

    ಒಳ್ಳೆಯದನ್ನು ಜನರು ಮರೆಯುವುದಿಲ್ಲ. ಜೀವಂತವಾಗಿ ಇದ್ದ ಕಾಲದಲ್ಲಿ ಜನರ ಸೇವೆಯನ್ನು ಮಾಡುತ್ತಾ ದುಡಿದ ಹಣದಲ್ಲಿ ಕೈಲಾದ ಸಹಾಯ ದಾನಗಳನ್ನು ಮಾಡಬೇಕು ಎಂದರು.

    ವರ್ಷದಲ್ಲಿ ಒಂದು ತಿಂಗಳು ಮಾತ್ರ ಶ್ರಾವಣ ಬರುತ್ತದೆ. ಆ ಮಾಸದಲ್ಲಿ ಮಠಗಳಲ್ಲಿ ನಡೆಯುವ ಕಾರ್ಯಗಳಲ್ಲಿ ಭಕ್ತರು ಭಾಗಿಯಾಗಬೇಕು. ಶ್ರವಣ ಎಂದರೆ ಕಿವಿ. ದೇವರು ಅದನ್ನು ನೀಡಿರುವುದು ಒಳ್ಳೆಯ ಮಾತು, ಹಿತನುಡಿಗಳನ್ನು ಕೇಳಿಸಿಕೊಳ್ಳಲು ಎಂದು ಹೇಳಿದರು.

    ಸಮಾರಂಭ ಉದ್ಘಾಟಿಸಿದ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ನರಹತ್ಯೆಯಂತಹ ಕ್ರೂರತನದ ಘಟನೆಗಳು ನಡೆಯುತ್ತಿದ್ದು ಕಳವಳಕಾರಿ ಆಗಿದೆ ಎಂದರು.

    ಇವುಗಳಿಗೆ ಕಡಿವಾಣ ಹಾಕಲು ಮಠ, ಮಂದಿರ, ಗುರು-ಹಿರಿಯರ ಮಾರ್ಗದರ್ಶನ, ಸಾಧುಸಂತರ ಹಿತನುಡಿಗಳು ಅಗತ್ಯ. ದೇಶದ ಕಾನೂನನ್ನು ಪ್ರತಿಯೊಬ್ಬ ಪ್ರಜೆ ಗೌರಸಿದರೆ ಮಾತ್ರ ಅಹಿತಕರ ಘಟನೆಗಳು ನಡೆಯಲು ಸಾಧ್ಯವಿಲ್ಲ ಎಂದು ಹೇಳಿದರು.

    ಹಿರೇಮಠದ ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಬೌದ್ಧಿಕ, ಧಾರ್ವಿುಕವಾದ ಜ್ಞಾನಗಳನ್ನು ಪಡೆದುಕೊಳ್ಳಲು ಧರ್ಮಸಭೆಗಳಲ್ಲಿ ಜನರು ಪಾಲ್ಗೊಳ್ಳಬೇಕು ಎಂದರು.

    ಶ್ರೀ ಬಸವ ಜಯಚಂದ್ರ ಸ್ವಾಮೀಜಿ ಮಾತನಾಡಿ, ಶ್ರಾವಣ ಮಾಸದಲ್ಲಿ ಕೇಳುವಂತಹ ಪ್ರವಚನಗಳಿಂದ ಮನಸ್ಸುಗಳು ಉಲ್ಲಾಸಿತಗೊಳ್ಳುವ ಜತೆಗೆ ಭಕ್ತಿ ಮಾರ್ಗದೆಡೆ ತೊಡಗಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

    ಒಂದು ತಿಂಗಳ ಕಾಲ ನಡೆಯಲಿರುವ ವಚನಾಮೃತವನ್ನು ಮಹಾಂತೇಶ ಶಾಸ್ತ್ರಿಗಳು ಆರಂಭಿಸಿದರು. ತಹಸೀಲ್ದಾರ್ ಡಾ.ಪಟ್ಟರಾಜಗೌಡ, ಪುರಸಭಾ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಸದಸ್ಯೆ ಕಮಲಾ ಹರೀಶ್, ವೀರಶೈವ ಸಮಾಜದ ಅಧ್ಯಕ್ಷ ರಾಜಶೇಖರಯ್ಯ, ಎಲ್.ಎಂ.ಉಮಾಪತಿ, ಜವಳಿ ಮಹೇಶ್, ಕವಿತಾ ಹಾಲಸ್ವಾಮಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts