More

    ಬಾರದ ಅನುದಾನ, ದೇಣಿಗೆ ಅನುಮಾನ

    ಬೆಳಗಾವಿ: ‘ಕರೊನಾದಿಂದ ಸರ್ಕಾರ ಮಾತ್ರ ಸಂಕಷ್ಟದಲ್ಲಿದೆಯೋ ಇಲ್ಲವೋ ತಿಳಿದಿಲ್ಲ. ಆದರೆ, ಜನರು ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಕ್ಕಳ ಆನ್‌ಲೈನ್ ತರಗತಿಗಳಿಗೆ ಮೊಬೈಲ್ ಕೊಡಿಸಲೂ ಸಹ ಪರದಾಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಜನರ ಬಳಿ ದೇಣಿಗೆ ನೀಡಿ ಎಂದು ಹೇಗೆ ಕೇಳುವುದು…?’ ಹೀಗಂತ, ಜಿಲ್ಲೆಯಲ್ಲಿ ಸರ್ಕಾರಿ ಶಾಲೆಗಳ ಮುಖ್ಯಶಿಕ್ಷಕರು ಕೊರಗುತ್ತಲಿದ್ದಾರೆ. ಇದಕ್ಕೆ ಕಾರಣ, ಶಿಕ್ಷಣ ಇಲಾಖೆಯ
    ಜಿಲ್ಲಾ ಉಪನಿರ್ದೇಶಕರು ನೀಡಿರುವ ಸುತ್ತೋಲೆ.

    ‘ಸ್ಥಳೀಯ ಸಂಘ-ಸಂಸ್ಥೆಗಳು, ಆಸಕ್ತ ಪೋಷಕರು, ದಾನಿಗಳು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳ ಸಹಕಾರ ಪಡೆದು 2020-21ನೇ ಶೈಕ್ಷಣಿಕ ವರ್ಷದ ಪ್ರಾರಂಭಕ್ಕೆ ಮೊದಲೇ ಸುಣ್ಣಬಣ್ಣ ಮಾಡಿಸಬೇಕು’ ಎಂದು ಸುತ್ತೋಲೆ ನೀಡಿದ್ದಾರೆ. ಹೀಗಾಗಿ ಶಿಕ್ಷಕರಿಗೆ ಏನು
    ಮಾಡಬೇಕೆಂದು ತೋಚುತ್ತಿಲ್ಲ.

    ಶಿಕ್ಷಕರಿಗೆ ಅಸಮಾಧಾನ: ಜನರು ದೇಣಿಗೆ ನೀಡುವ ದಿನಗಳಲ್ಲಿ ಸರ್ಕಾರವೇ ಅನುದಾನ ನೀಡುತ್ತಿತ್ತು, ಆದರೆ, ಕರೊನಾ ಕಷ್ಟದಲ್ಲಿ ಅನುದಾನ ನೀಡದೆ, ‘ನೀವೇ ಹೊಂದಿಸಿಕೊಳ್ಳಿ’ ಎಂದಿರುವುದು ನಮ್ಮನ್ನು ಇಕ್ಕಟ್ಟಿಗೆ ಸಿಲುಕಿಸಿದೆ ಎನ್ನುತ್ತಾರೆ ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಹೆಸರು ಹೇಳಲಿಚ್ಛಿಸದ ಮುಖ್ಯಶಿಕ್ಷಕ. ನಮ್ಮ ಶಾಲೆಯಲ್ಲಿ 8 ಕೊಠಡಿಗಳಿವೆ. ಬರೀ ಪೇಂಟ್ ಮಾಡಿಸಲು 90 ಸಾವಿರ ರೂ. ಅಂದಾಜು ವೆಚ್ಚವಾಗಲಿದೆ ಎಂದು ಲೆಕ್ಕಹಾಕಲಾಗಿದೆ. ಬಣ್ಣ ಬಳಿಯುವವರ ಕೂಲಿ 30 ಸಾವಿರ ಸೇರಿದರೆ ಕನಿಷ್ಠ 1.2 ಲಕ್ಷ ಬೇಕು. ಸರ್ಕಾರದಿಂದ ಸ್ವಲ್ಪವೂ ಅನುದಾನವಿಲ್ಲದೆ ಎಲ್ಲವನ್ನೂ ದಾನಿಗಳಿಂದ ಭರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತಿದೆ ಎಂದು ಆ ಶಿಕ್ಷಕರು ಬೇಸರ ವ್ಯಕ್ತಪಡಿಸಿದರು.

    ಅಶ್ಲೀಲ ಬರಹ: ಎಲ್ಲ ಸರ್ಕಾರಿ ಶಾಲೆಗಳಿಗೂ ಪ್ರತಿವರ್ಷ ಬಣ್ಣ ಬಳಿಯಲೇಬೇಕು ಅಂತೇನೂ ಇಲ್ಲ. ಆದರೆ, ಕಳೆದ ಏಳು ತಿಂಗಳಿನಿಂದ ಶಾಲೆಗಳಲ್ಲಿ ಮಕ್ಕಳು ಇಲ್ಲದ ಕಾರಣಕ್ಕೆ ಹಳ್ಳಿಗಳಲ್ಲಿ ಶಾಲಾ ಗೋಡೆಗಳ ಮೇಲೆ ಸ್ಥಳೀಯ ಪಡ್ಡೆ ಹುಡುಗುರು ಮುಜುಗರ ತರುವ ಬರಹ, ಅಶ್ಲೀಲ ಚಿತ್ರಗಳನ್ನು ಬರೆದಿದ್ದಾರೆ. ಇಂತಹ ಅನೇಕ ಶಾಲೆಗಳನ್ನು ಅಂದಗಾಣಿಸಲು ಸುಣ್ಣ-ಬಣ್ಣ ಅತ್ಯಗತ್ಯವಾಗಿದೆ. ಅವುಗಳಿಗಾದರೂ ಸರ್ಕಾರ ಅನುದಾನ ನೀಡಬೇಕಿತ್ತು ಎನ್ನುತ್ತಾರೆ ರಾಮದುರ್ಗದ ಶಿಕ್ಷಣ ಪ್ರೇಮಿ ಆನಂದ ಗಡೇಕಾರ್.

    ನಿರಂತರ ಮಳೆಗೆ ಪಾಚಿಗಟ್ಟಿದ ಶಾಲೆ: ಕಾಲೇಜ್‌ಗಳ ಒಂದು ಕೊಠಡಿ ನಿರ್ಮಾಣಕ್ಕೆ 17 ಲಕ್ಷ ರೂ. ಅನುದಾನ ನೀಡಲಾಗುತ್ತದೆ. ಪ್ರಾಥಮಿಕ ಶಾಲೆಯ ಕೊಠಡಿಗೆ 6 ಲಕ್ಷ ಮಾತ್ರ ಅನುದಾನ ನೀಡಲಾಗುತ್ತದೆ. ಕಡಿಮೆ ಅನುದಾನದಲ್ಲಿ ಉತ್ತಮ ದರ್ಜೆಯ ಕೊಠಡಿಗಳು ನಿರ್ಮಾಣವಾಗಿಲ್ಲ. ದುರಸ್ತಿಗೆ ಬೇಗ ಬರುತ್ತವೆ. ಅದರಲ್ಲೂ ನಮ್ಮ ಶಾಲೆ ಅಧಿಕ ಮಳೆಯಿಂದಾಗಿ ನೆನೆದು ನೆನೆದು ಪಾಚಿಗಟ್ಟಿ ಹಾಳಾದ ಸ್ಥಿತಿಯಲ್ಲಿದೆ. ಅನುದಾನ ಬಾರದೇ ಇದ್ದರೆ ಬಹಳ ಕಷ್ಟ. ಕೊನೆಪಕ್ಷ ಅರ್ಧ ದಷ್ಟಾದರೂ ಅನುದಾನ ನೀಡಿದರೆ ದಾನಿಗಳಿಂದ ಒಂದಿಷ್ಟು ಹಣ ಸೇರಿಸಬಹುದು ಎನ್ನುತ್ತಾರೆ ಶಿಕ್ಷಕರು.

    ಗಡಿ ಜಿಲ್ಲೆಯಲ್ಲಿನ ಸರ್ಕಾರಿ ಶಾಲೆಗಳಿಗೆ ಅನುದಾನ ನೀಡದಿರುವುದು ಸೂಕ್ತವಲ್ಲ. ಕೊನೆ ಪಕ್ಷ ಈ ಬಗ್ಗೆ ಸರ್ವೇ ಮಾಡಿಯಾದರೂ ತೀರಾ ಅನಿವಾರ್ಯ ಎನಿಸುವ ಶಾಲೆಗಳಿಗಾದರೂ ಅನುದಾನ ನೀಡಬೇಕು. ಸರ್ಕಾರಿ ಶಾಲೆಗಳ ಅಂದದ ಆಕರ್ಷಣೆಯೂ ಮಕ್ಕಳನ್ನು ಸೆಳೆಯಲು ಸಹಾಯವಾಗಬಲ್ಲದು.
    | ದೀಪಕ ಗುಡಗೇನಟ್ಟಿ ಕರವೇ ಜಿಲ್ಲಾಧ್ಯಕ್ಷ

    ಕಳೆದ ವರ್ಷ ಶಾಲೆಗಳ ದುರಸ್ತಿಗೆ, ಪೇಂಟ್ ಮಾಡಿಸಲು ಸರ್ಕಾರದಿಂದ ಅನುದಾನ ಬಂದಿತ್ತು. ಈ ಬಾರಿ ಬಂದಿಲ್ಲ. ಆಯಾ ತಾಲೂಕು ಮಟ್ಟದಲ್ಲಿ ಬಿಇಒಗಳು ಹಾಗೂ ಆಸಕ್ತ ಮುಖ್ಯಶಿಕ್ಷಕರು ಜನಪ್ರತಿನಿಧಿಗಳು ಮತ್ತು ಸ್ಥಳೀಯ ದಾನಿಗಳನ್ನು ಹಿಡಿದು ಖರ್ಚು ಭರಿಸಿಕೊಳ್ಳಲು ಇಲಾಖೆಗೆ ಸೂಚನೆ ಬಂದಿದೆ. ಅದರಂತೆ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳೂ ಕಾರ್ಯಪ್ರವೃತ್ತರಾಗಿದ್ದಾರೆ.
    | ಜಿ.ಎ. ಕಂಬಳಿ ವಿಷಯ ಪರಿವೀಕ್ಷಕ, ಡಿಡಿಪಿಐ ಕಚೇರಿ, ಬೆಳಗಾವಿ

    | ರವಿ ಗೋಸಾವಿ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts