ಬೆಂಗಳೂರು: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುವ ಜೆಡಿಎಸ್‌ಗೆ ಸೀಟು ಹಂಚಿಕೆ ವಿಚಾರದಲ್ಲಿ ಇನ್ನೂ ಸಮಾಧಾನ ತಂದಿಲ್ಲ.
ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಕೇಂದ್ರ ಗೃಹ ಸಚಿವ ಅಮಿತ್ ಷಾರನ್ನು ಭೇಟಿ ಮಾಡಿ ಈ ಕುರಿತು ಚರ್ಚಿಸಿದರೂ ಸ್ಪಷ್ಟತೆ ಸಿಕ್ಕಿಲ್ಲ.
ಕಳೆದ ಬಾರಿ ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಾಗ ಹಾಸನ, ಮಂಡ್ಯ, ತುಮಕೂರು, ಉಡುಪಿ-ಚಿಕ್ಕಮಗಳೂರು ಸೇರಿ ಜೆಡಿಎಸ್‌ಗೆ ಆರು ಸೀಟು ಬಿಟ್ಟುಕೊಡಲಾಗಿತ್ತು. ಆದರೆ ಈ ಬಾರಿ ಕೊಟ್ಟಿದ್ದೇ ಮೂರು ಸೀಟು ಅವುಗಳಲ್ಲೂ ಎರಡು ಸೀಟುಗಳ ಬಗ್ಗೆ ಸ್ಪಷ್ಟತೆ ಇಲ್ಲ. ಹಾಸನಕ್ಕೆ ಹಾಲಿ ಸಂಸದ ಪ್ರಜಲ್ವ ರೇವಣ್ಣ ಸೀಟು ಓಕೆ ಆಗಿದೆ. ಕೋಲಾರ ವಿಷಯದಲ್ಲಿ ಬಿಜೆಪಿ ನಾಯಕರಿಂದ ಸಕಾರಾತ್ಮಕ ತೀರ್ಮಾನ ಬಂದಿಲ್ಲ.
ಬಿಜೆಪಿ ಅಭ್ಯರ್ಥಿಗಳಿಗೆ ಟಿಕೆಟ್ ಹಂಚುವಾಗ ತಮ್ಮ ಅಭಿಪ್ರಾಯ ಕೇಳಬಹುದೆಂಬ ನಿರೀಕ್ಷೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ಅವರಿಗಿತ್ತು. ಆದರೆ ಜೆಡಿಎಸ್ ವರಿಷ್ಠರ ಯಾವುದೇ ಅಭಿಪ್ರಾಯ ಕೇಳದೆ ಹೆಸರು ೋಷಣೆ ಮಾಡಿದ್ದು ಕೂಡ ಕುಮಾರಸ್ವಾಮಿ ಅವರಿಗೆ ನಿರಾಸೆ ಉಂಟು ಮಾಡಿದೆ ಎನ್ನಲಾಗಿದೆ.
ಬೆಂಗಳೂರು ಗ್ರಾಮಾಂತರ, ತುಮಕೂರು ಕ್ಷೇತ್ರಗಳಿಗೆ ಚಿಹ್ನೆ ಅದಲು ಬದಲು ಮಾಡಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಜೆಡಿಎಸ್ ಒಲವು ತೋರಿತ್ತು. ಬಿಜೆಪಿ ಅದಾವುದನ್ನೂ ಲೆಕ್ಕಿಸದೆ ಡಾ.ಸಿ.ಎನ್.ಮಂಜುನಾಥ್ ಹೆಸರನ್ನು ಬಿಜೆಪಿ ಪಟ್ಟಿಯಲ್ಲಿ ೋಷಣೆ ಮಾಡಿತು. ಜತೆಗೆ ತುಮಕೂರು ಕ್ಷೇತ್ರಕ್ಕೆ ವಿ.ಸೋಮಣ್ಣ ಹೆಸರು ಅಂತಿಮಗೊಳಿಸಲಾಯಿತು. ಇದರ ಬಗ್ಗೆ ಜೆಡಿಎಸ್ ನಾಯಕರಲ್ಲಿ ಅತೃಪ್ತಿ ವ್ಯಕ್ತವಾಗಿದೆ.
ಕೋಲಾರ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡುವುದು ಗ್ಯಾರಂಟಿ ಎಂದು ಕುಮಾರಸ್ವಾಮಿ ಆ ಭಾಗದ ಶಾಸಕರು, ಪಕ್ಷದ ಮುಖಂಡರ ಸಭೆ ನಡೆಸಿದರು. ಆದರೆ ಆ ಕ್ಷೇತ್ರದಲ್ಲಿ ಬಿಜೆಪಿಯ ಹಾಲಿ ಸಂಸದರು ಇರುವುದರಿಂದ ಅದರ ಬದಲು ಚಿಕ್ಕಬಳ್ಳಾಪುರ ಬಿಟ್ಟುಕೊಡುವುದು ಸೂಕ್ತ ಎಂಬ ಅಭಿಪ್ರಾಯ ಬಿಜೆಪಿ ಹೈಕಮಾಂಡ್ ವಲಯದಲ್ಲಿ ವ್ಯಕ್ತವಾಗಿದೆ. ಹಾಗಾಗಿ ಕೋಲಾರ ಕ್ಷೇತ್ರದ ವಿಚಾರವನ್ನು ಅಮಿತ್ ಷಾ ಪೆಂಡಿಂಗ್ ಇಟ್ಟಿದ್ದಾರೆ.
ನಿಮ್ಮ ಕುಟುಂಬದವರಿಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಟಿಕೆಟ್ ಕೊಟ್ಟಿದ್ದೇವೆ. ನಿಮಗೆ ಮಂಡ್ಯ, ಹಾಸನ ಸಾಕು ಎಂದು ಇನ್ನೊಂದು ಅಭಿಪ್ರಾಯವೂ ಬಿಜೆಪಿ ಹೈಕಮಾಂಡ್‌ದ್ದಾಗಿದೆ ಎನ್ನಲಾಗಿದೆ. ಹಾಗಾಗಿ ಕೋಲಾರ ಸೀಟು ಹಂಚಿಕೆ ಮೈತ್ರಿ ಪಕ್ಷಗಳ ನಡುವೆ ಕಗ್ಗಂಟಾಗಿದೆ.
ಕುಮಾರಸ್ವಾಮಿ ಸ್ಪರ್ಧೆಗೆ ಸಲಹೆ
ಮಂಡ್ಯ ನಿಖಿಲ್ ಕುಮಾರಸ್ವಾಮಿ ಬದಲು ತಾವೇ ಸ್ಪರ್ಧಿಸುವಂತೆ ಅಮಿತ್ ಷಾ ನೀಡಿದ ಸಲಹೆಯನ್ನು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಚಿಕ್ಕಬಳ್ಳಾಪುರ ಮುಖಂಡರ ಸಭೆ ಏಕೆ?
ಕೋಲಾರ ಕ್ಷೇತ್ರದ ನಿರೀಕ್ಷೆಯಲ್ಲಿದ್ದ ಕುಮಾರಸ್ವಾಮಿ ಈಗ ಇದ್ದಕ್ಕಿದ್ದಂತೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಪಕ್ಷದ ಮುಖಂಡರ ಸಭೆ(ಸೋಮವಾರ) ಕರೆದಿರುವುದು ಕೂಡ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಜೆಡಿಎಸ್‌ಗೆ ಈಗ ಅಂದುಕೊಂಡಿರುವ ಕೋಲಾರ ಬದಲು ಚಿಕ್ಕಬಳ್ಳಾಪುರ ಕೊಡಬಹುದೇ ಎಂಬ ಚರ್ಚೆ ರಾಜಕೀಯ ಪಡಸಾಲೆಯಲ್ಲಿ ಶುರುವಾಗಿದೆ. ಚಿಕ್ಕಬಳ್ಳಾಪುರ ಕೊಟ್ಟರೆ ಚಿಹ್ನೆ ಬದಲಿಸಿ ಡಾ.ಸುಧಾಕರ್ ಅವರನ್ನು ಜೆಡಿಎಸ್ ಚಿಹ್ನೆಯಡಿ ಕಣಕ್ಕಿಳಿಸುವ ಆಲೋಚನೆಯೂ ಜೆಡಿಎಸ್‌ನಲ್ಲಿದೆ ಎಂದು ಹೇಳಲಾಗುತ್ತಿದೆ.