ಮನೆ ಮುಂದೆ ಬೈಕ್​ ನಿಲ್ಲಿಸ್ತೀರಾ? ಸೀಟ್​ ಕಳೆದುಕೊಳ್ಳುವ ಸಾಧ್ಯತೆ ಇದೆ..!

1 Min Read

ದಾವಣಗೆರೆ: ಕಂಪೌಂಡ್​ನಲ್ಲಿ ಜಾಗ ಇಲ್ಲ ಎಂದೋ ಅಥವಾ ಇನ್ಯಾವುದೋ ಕಾರಣಕ್ಕೆ ಮನೆಯ ಮುಂದೆ ಬೈಕ್​ ನಿಲ್ಲಿಸುತ್ತೀರಾ? ಹಾಗಾದರೆ ಎಚ್ಚರ! ನೀವು ನಿಮ್ಮ ಬೈಕಿನ ಸೀಟ್​ ಕಳೆದುಕೊಳ್ಳುವ ಸಾಧ್ಯತೆ ಇದೆ. ಇಲ್ಲವಾದರೆ ನೀವು ಅದಕ್ಕಾಗಿ ಪದೇ ಪದೇ ಹಣ ಖರ್ಚು ಮಾಡಬೇಕಾಗಿ ಬರಬಹುದು.

ದಾವಣಗೆರೆಯಲ್ಲಿ ಮನೆಗಳ ಮುಂದೆ ಬೈಕ್ ನಿಲ್ಲಿಸುತ್ತಿದ್ದ ಸವಾರರಿಗೆ ಬೆಳಗ್ಗೆ ಎದ್ದಾಗ ಶಾಕ್ ಕಾದಿತ್ತು. ಬೆಳಗ್ಗೆ ಎದ್ದು ನೋಡಿದರೆ ಸೀಟ್​​ಗಳು ಹರಿದು ನುಚ್ಚು ನೂರಾಗಿತ್ತು. ಇದರ ಹಿಂದಿನ ಕಾರಣ ಏನು ಎಂದು ಅವರು ಹುಡುಕುತ್ತಾ ಹೊರಟಾಗ ಅವರಿಗೆ ವಿಚಿತ್ರ ವಿಚಾರವೊಂದು ಗಮನಕ್ಕೆ ಬಂದಿದೆ. ಆಸುಪಾಸಿನ ಸಿಸಿಟಿವಿ ಕ್ಯಾಮರಾ ಪರಿಶೀಲಿಸಿದಾಗ ರಾತ್ರಿ ವೇಳೆ ಬೀದಿ ನಾಯಿಗಳು ಬೈಕ್ ಸೀಟಗಳನ್ನು ಪರಚಿ ಹಾಳು ಮಾಡುತ್ತಿರುವ ದೃಶ್ಯ ಕಂಡುಬಂದಿದೆ,

ಹಿಂದೆ ರಸ್ತೆಯಲ್ಲಿ ಓಡಾಡುವ ಮಕ್ಕಳು, ಸಾರ್ವಜನಿಕರ ಮೇಲೆ ದಾಳಿ ಮಾಡುತ್ತಿದ್ದ ಬೀದಿ ನಾಯಿಗಳು ಈಗ ಮನೆ ಮುಂದೆ ನಿಲ್ಲಿಸಿದ ಬೈಕ್ ಟಾರ್ಗೆಟ್ ಮಾಡುತ್ತಿವೆ. ಹಲವು ದಿನಗಳಿಂದ ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಸೀಟ್​ಗಳನ್ನು ನಾಯಿಗಳು ಹರಿಯುತ್ತಿವೆ. ಈ ನಾಯಿಗಳು ಒಮ್ಮಿಂದೊಮ್ಮೆಲೆ ಬೈಕ್​ ಸೀಟ್​ಗಳ ಮೇಲೆ ದಾಳಿ ಮಾಡುತ್ತಿರವುದು ಮಾತ್ರ ನಿಜಕ್ಕೂ ಅಚ್ಚರಿಯ ಸಂಗತಿ.

ಈ ಮುಂಚೆ ಇದು ಕಿಡಿಗೇಡಿಗಳು ಮಾಡುತ್ತಿರುವ ಕೆಲಸ ಎಂದು ಶಂಕಿಸಲಾಗಿತ್ತು. ಆದರೆ ಯುವಕನೊಬ್ಬ ಬೀದಿ ನಾಯಿಯೊಂದು ಸೀಟ್ ಕವರ್ ಹರಿಯುವ ದೃಶ್ಯದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾನೆ. ಈ ಆ ವಿಡಿಯೋ ವೈರಲ್ ಆಗಿದ್ದು ನಾಯಿಗಳ ಕುಕೃತ್ಯ ಬೆಳಕಿಗೆ ಬಂದಿದೆ. 

ಇದು ದಾವಣಗೆರೆ ಪಿಜೆ ಬಡಾವಣೆಯಲ್ಲಿ ನಡೆದ ಘಟನೆಯಾಗಿದ್ದು ಒಟ್ಟಾರೆಯಾಗಿ ದಾವಣಗೆರೆಯ ಎಲ್ಲೆಂದರಲ್ಲಿ‌ ಬೀದಿ‌ ನಾಯಿಗಳ‌ ಹಾವಳಿ ಮಿತಿಮೀರಿದೆ. ಬೈಕ್ ಸೀಟ್ ಹರಿದು ಸ್ಕ್ರ್ಯಾಚ್ ಆಗಿದ್ದರೆ ಅದಕ್ಕೆ ಕಾರಣ ಈ ಬೀದಿ ನಾಯಿಗಳೇ. ಆದರೆ ಆಗಿರುವ ನಷ್ಟವನ್ನು ತುಂಬಿಸಿ ಕೊಡುವವರು ಯಾರು ಎನ್ನುವ ಪ್ರಶ್ನೆ ಈಗ ಎದ್ದಿದೆ,

Share This Article