More

    ಮೈಸೂರಲ್ಲಿ ಯೋಗ ದಿನ; ವೇದಿಕೆಯಲ್ಲಿ ಇರಲ್ವೇ ಯದುವೀರ್?

    ಮೈಸೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಈ ಸಲ ಮೈಸೂರಿನಲ್ಲಿ ಅದ್ಧೂರಿಯಾಗಿ ನಡೆಯಲಿದ್ದು, ಅದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಕೂಡ ಉಪಸ್ಥಿತರಿರಲಿದ್ದಾರೆ. ಆದರೆ ಈ ಸಮಾರಂಭದಲ್ಲಿ ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ವೇದಿಕೆ ಕಲ್ಪಿಸಲಾಗಿದೆಯೇ ಇಲ್ಲವೇ ಎಂಬ ಕುರಿತು ಇದೀಗ ವಿವಾದ ಉಂಟಾಗಿದ್ದು, ಸಾರ್ವಜನಿಕರ ಚರ್ಚೆಗೂ ಗ್ರಾಸವಾಗಿದೆ.

    ಪ್ರಧಾನಿ ಮೋದಿ ಭಾಗವಹಿಸಲಿರುವ ಈ ಸಮಾರಂಭದಲ್ಲಿ ಜನಪ್ರತಿನಿಧಿಗಳಲ್ಲಿ ಯಾರ್ಯಾರಿಗೆ ವೇದಿಕೆ ಹಂಚಿಕೊಳ್ಳಲು ಅವಕಾಶವಿದೆ ಎಂಬ ಕುರಿತು ಸಂಸದ ಪ್ರತಾಪ್ ಸಿಂಹ ನೀಡಿದ್ದ ಹೇಳಿಕೆಯಿಂದ ಕೆಲವರು ಗೊಂದಲಕ್ಕೆ ಒಳಗಾದ್ದರಿಂದ ಇಂಥದ್ದೊಂದು ಚರ್ಚೆ ಇದೀಗ ಮುನ್ನೆಲೆಗೆ ಬಂದಿದೆ.

    ಈ ಸಂಬಂಧ ಸಂಸದ ಪ್ರತಾಪ್ ಸಿಂಹ ಇಂದು ಸುದ್ದಿಗಾರರ ಜತೆ ಮಾತನಾಡಿ ಸ್ಪಷ್ಟನೆಯನ್ನು ನೀಡಿದ್ದಾರೆ. ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವೇದಿಕೆ ಹಂಚಿಕೊಳ್ಳುವ ವಿಚಾರ ಕುರಿತು ನಾನು ಯಾವುದೇ ಹೇಳಿಕೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

    ಅಂತಾರಾಷ್ಟ್ರೀಯ ಯೋಗ ದಿನಾಚರಣೆ ರಾಜಕೀಯ ಕಾರ್ಯಕ್ರಮ ಆಗಬಾರದು ಎಂಬ ಉದ್ದೇಶದಿಂದ ವೇದಿಕೆಯಲ್ಲಿ ಕೆಲವೇ ಕೆಲವು ಜನಪ್ರತಿನಿಧಿಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಯಾವೆಲ್ಲ ಜನಪ್ರತಿನಿಧಿಗಳು ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಳ್ಳುತ್ತಾರೆ ಎಂಬುದನ್ನು ನಾನು ಈಗಾಗಲೇ ತಿಳಿಸಿದ್ದೇನೆ. ಆದರೆ, ಗಣ್ಯರು ಯಾರು ವೇದಿಕೆ ಹಂಚಿಕೊಳ್ಳುತ್ತಾರೆ ಎಂಬುದು ಇನ್ನೂ ತೀರ್ಮಾನವಾಗಿಲ್ಲ. ಆ ವಿಚಾರ ಒಂದೆರಡು ದಿನಗಳಲ್ಲಿ ಅಂತಿಮಗೊಳ್ಳಲಿದೆ. ಈ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸುವುದು ಬೇಡ ಎಂದರು.

    ಮೈಸೂರಿನ ರಾಜವಂಶಸ್ಥರ ಬಗ್ಗೆ ಎಲ್ಲರಿಗಿಂತ ಅತಿಯಾದ ಗೌರವ ನಮಗೆ ಇದೆ. ಮೈಸೂರು ಮಹಾರಾಜರ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದಾಗ ಅದರ ವಿರುದ್ಧ ಮೊದಲು ಧ್ವನಿ ಎತ್ತಿದವನು ನಾನು. ಸಿದ್ದರಾಮಯ್ಯ ಮಾತನ್ನು ವಿರೋಧಿಸಲು ಬಹುತೇಕರಿಗೆ ಹೆದರಿಕೆ ಇದೆ. ಆದರೆ, ನಾನು ಅವರಿಗೆ ಉತ್ತರ ಕೊಟ್ಟಿದ್ದೇನೆ. ಈ ಹಿಂದೆ ಸಿದ್ದರಾಮಯ್ಯ ಮಹಾರಾಜರ ಕುಟುಂಬಕ್ಕೆ ಆನೇಕ ಕಾಟ ಕೊಟ್ಟರು, ಹಲವು ಅನ್ಯಾಯ ಮಾಡಿದರು. ಅಂದು ಮೈಸೂರಿನಲ್ಲಿದ್ದ ಯಾವ ಜನಪ್ರತಿನಿಧಿಯೂ ಧ್ವನಿ ಎತ್ತಲಿಲ್ಲ. ಆದರೆ ಬಿಜೆಪಿ ಇಂತಹದನ್ನೆಲ್ಲ ಸಹಿಸದೆ ಮಹಾರಾಜರ ಪರವಾಗಿ ಎಲ್ಲ ಸಂದರ್ಭದಲ್ಲಿ ಧ್ವನಿ ಎತ್ತುತ್ತಿದ್ದೆ ಎಂದು ಹೇಳಿದರು.

    ಮೈಸೂರು ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣಕ್ಕೆ ಮಹಾರಾಜರ ಹೆಸರು ಇಡುತ್ತಿದ್ದೇವೆ. ಇದು ಮಹಾರಾಜರಿಗೆ ನಾವು ಕೊಡುತ್ತಿರುವ ಗೌರವ. ಸಾಮಾಜಿಕ ಜಾಲತಾಣದಲ್ಲಿ ಯಾವುದೋ ಒಂದು ಪೋಸ್ಟ್ ಹಾಕಿ ನಮಗೆ ಮಹಾರಾಜರ ಬಗ್ಗೆ ತಿಳಿ ಹೇಳಬೇಡಿ ಎಂದು ಅಸಮಾಧಾನ ಹೊರಹಾಕಿದರು.

    ಪೋಸ್ಟ್ ಹಾಕುವುದನ್ನು ನಿಲ್ಲಿಸಿ: ದೇವರಾಜ ಮಾರುಕಟ್ಟೆ ನೆಲಸಮ ವಿಚಾರವಾಗಿ ಸಿದ್ದರಾಮಯ್ಯ ಮಾತನಾಡುವ ಸಂದರ್ಭ ’ದೇವರಾಜ ಮಾರುಕಟ್ಟೆಯನ್ನು ಮಹಾರಾಜರು ತಮ್ಮ ಸ್ವಂತ ದುಡ್ಡಿನಲ್ಲಿ ಕಟ್ಟಿದ್ರಾ?’ ಎಂದು ಮಹಾರಾಜರ ಕುರಿತು ಹಗುರವಾದ ಮಾತುಗಳನ್ನಾಡಿದ್ದರು. ಮಹಾರಾಜರು ಕಟ್ಟಿಸಿದ ವಿಶ್ವವಿದ್ಯಾಲಯದಲ್ಲಿ ಓದಿ, ಮಹಾರಾಜರು ಕಟ್ಟಿಸಿದ ಕನ್ನಂಬಾಡಿ ಕಟ್ಟೆಯ ನೀರು ಕುಡಿದು ಬೆಳೆದ ಸಿದ್ದರಾಮಯ್ಯ ಮಹಾರಾಜರ ಕುರಿತು ಹಗುರವಾದ ಮಾತು ಆಡಿದರು. ಆ ಸಂದರ್ಭ ಯಾರು ಸಹ ಸಿದ್ದರಾಮಯ್ಯ ವಿರುದ್ಧ ಧ್ವನಿ ಎತ್ತಲಿಲ್ಲ. ಮೈಸೂರು ಮಹಾರಾಜರ ಕುಟುಂಬದ ಬಗ್ಗೆ ನಾನು ಎಷ್ಟು ಗೌರವ ಹೊಂದಿದ್ದೇನೆ ಎಂಬುದು ಎಲ್ಲರಿಗೂ ಗೊತ್ತಿದ್ದು, ಕ್ಷುಲ್ಲಕ ಪೋಸ್ಟ್​ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವುದನ್ನು ನಿಲ್ಲಿಸಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಕಾಂಗ್ರೆಸ್​ನವರು ಚಡ್ಡಿ ಸುಟ್ಟರು, ಇದೀಗ ನನ್ನ ಪೋಸ್ಟರ್ ಸುಡುತ್ತಿದ್ದಾರೆ. ಅವರಿಗೆ ಸುಡುವುದೇ ಕೆಲಸವಾಗಿದೆ. ನನ್ನನ್ನು ರಾಜಕೀಯವಾಗಿ ಎದುರಿಸಲಾಗದವರು ಈ ರೀತಿಯ ಕೃತ್ಯ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ರಾಜ್ಯಸಭೆ ಅಡ್ಡಮತದಾನದ ಅಡ್ಡಪರಿಣಾಮ; ಕಾಂಗ್ರೆಸ್​ ಬಳಿಕ ಬಿಜೆಪಿಯಿಂದ ಶಾಸಕಿಯ ಉಚ್ಚಾಟನೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts