More

    ಹಣ ಕೊಟ್ಟರಷ್ಟೇ ಆರೈಕೆ, ಇಲ್ಲವಾದರೆ ಸಿಗದು ಚಿಕಿತ್ಸೆ!; ಮಡಿಕೇರಿಯಲ್ಲಿ ಧನದಾಹಿ ವೈದ್ಯ, ವಿಜಯವಾಣಿ-ದಿಗ್ವಿಜಯ ತನಿಖೆಯಲ್ಲಿ ಭ್ರಷ್ಟಾಚಾರ ಬಯಲು

    | ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ

    ಇಲ್ಲಿನ ಕೋವಿಡ್ ಆಸ್ಪತ್ರೆಯಲ್ಲಿ ಹಣ ಕೊಟ್ರೆ ಮಾತ್ರ ಸೋಂಕಿತರನ್ನು ಚೆನ್ನಾಗಿ ನೋಡಿಕೊಳ್ಳುತ್ತಾರೆ. ಆ ರೀತಿಯ ಭಾವನೆ ಎಲ್ಲೆಡೆ ಮೂಡುವಂತೆ ತಜ್ಞ ವೈದ್ಯ ಡಾ.ಶಿವಕುಮಾರ್ ಮಾಡಿದ್ದಾನೆ. ಜಿಲ್ಲಾಸ್ಪತ್ರೆಯಲ್ಲಿ ತೆರೆದಿರುವ ಕೋವಿಡ್ ಸೆಂಟರ್​ನಲ್ಲಿ ರಾತ್ರಿ ಪಾಳಿ ಕೆಲಸ ಮಾಡುತ್ತಿರುವ ಡಾ.ಶಿವಕುಮಾರ್, ಬಾಯಿಬಿಟ್ಟು ರೋಗಿಗಳಿಗೆ ಇಂತಿಷ್ಟು ಹಣ ಬೇಕೆಂದು ಕೇಳುತ್ತಾನೆ. ಗರಿಗರಿ ನೋಟು ತಲುಪಿಸಿದರಷ್ಟೇ ಚೆನ್ನಾಗಿ ನೋಡಿಕೊಳ್ಳುತ್ತಾನೆ.

    ಮಾಲ್ದಾರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಟಿ.ಎಸ್.ಶಮೀರ್ ನೀಡಿದ ಮಾಹಿತಿ ಮತ್ತು ದಾಖಲೆ ಆಧಾರದಲ್ಲಿ ವಿಜಯವಾಣಿ ಹಾಗೂ ದಿಗ್ವಿಜಯ 24/7 ನ್ಯೂಸ್ ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ವೈದ್ಯನ ಲಂಚಾವತಾರ ಸಾಕ್ಷಿಸಹಿತ ಬಯಲುಗೊಂಡಿದೆ. ಕಾರ್ಯಾಚರಣೆಗೆ ವಿಶ್ವ ಹಿಂದು ಪರಿಷತ್ ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್ ಮುತ್ತಪ್ಪ, ಸಾಮಾಜಿಕ ಕಾರ್ಯಕರ್ತ ಸತ್ಯ ಕರ್ಕೆರ್ ಸಾಥ್ ನೀಡಿದರು.

    ಇಬ್ಬರು ಸೋಂಕಿತರನ್ನು ಚೆನ್ನಾಗಿ ನೋಡಿಕೊಳ್ಳುವಂತೆ ನಮ್ಮ ಕಾರ್ಯಾಚರಣೆ ತಂಡದವರು ಮನವಿ ಮಾಡಿದ್ದಾರೆ. ವೈದ್ಯ ಶಿವಕುಮಾರ್ ಒಟ್ಟು 5 ಸಾವಿರ ರೂ. ಕೇಳಿರುವುದು ಹಾಗೂ ಇಬ್ಬರು ಸೋಂಕಿತರನ್ನು ಚೆನ್ನಾಗಿ ನೋಡಿಕೊಳ್ಳುವ ಭರವಸೆಯೊಂದಿಗೆ 4500 ರೂ. ಸ್ವೀಕರಿಸಿರುವುದಕ್ಕೆ ಸಂಬಂಧಿಸಿದಂತೆ ಅಡಿಯೋ ಮತ್ತು ವಿಡಿಯೋ ದಾಖಲೆ ನಮ್ಮ ಬಳಿ ಇದೆ.

    ಮಾಲ್ದಾರೆ ಗ್ರಾಪಂ ವ್ಯಾಪ್ತಿಯ 38ರ ಪ್ರಾಯದ ಮಹಿಳೆಯೊಬ್ಬರಿಗೆ ಚಿಕಿತ್ಸೆ ನೀಡಲು ಆಕೆಯ ಸಂಬಂಧಿಕರು 1 ಸಾವಿರ ರೂ. ಅನ್ನು ವೈದ್ಯನಿಗೆ ನೀಡಿದ್ದರು. ಮೇ 13 ರಂದು ರಾತ್ರಿ 9 ಗಂಟೆಗೆ ಆಸ್ಪತ್ರೆಯಿಂದ ಹೊರಗೆ ಬಂದು ವೈದ್ಯ ಲಂಚ ಪಡೆದುಕೊಂಡಿದ್ದ. ಈ ವೇಳೆ ಟಿ.ಎಸ್. ಶಮೀರ್ ದೂರದಲ್ಲಿದ್ದು, ವೈದ್ಯನ ಕರ್ಮಕಾಂಡದ ಧ್ವನಿಮುದ್ರಿಕೆ ಮಾಡಿಕೊಂಡಿದ್ದರು. ಅದನ್ನು ಪತ್ರಿಕೆಗೆ ತಲುಪಿಸಿದ್ದರು. ತದನಂತರ ವಿಜಯವಾಣಿ- ದಿಗ್ವಿಜಯ ನ್ಯೂಸ್ ಜಂಟಿಯಾಗಿ ಕಾರ್ಯಾಚರಣೆ ಕೈಗೆತ್ತಿಕೊಂಡಿತ್ತು. ಸೋಮವಾರ ರಾತ್ರಿ 8 ಗಂಟೆಗೆ ಕೋವಿಡ್ ಆಸ್ಪತ್ರೆ ಮುಂಭಾಗಕ್ಕೆ ತೆರಳಿದ್ದ ಕಾರ್ಯಾಚರಣೆ ತಂಡದ ಸದಸ್ಯರು ವೈದ್ಯನಿಗೆ ಕರೆ ಮಾಡಿದ್ದು, 5 ನಿಮಿಷ ಬಿಟ್ಟು ಕರೆ ಮಾಡುವುದಾಗಿ ಹೇಳಿದ್ದ. 15 ನಿಮಿಷದ ಬಳಿಕ ಆಸ್ಪತ್ರೆಯಿಂದ ಹೊರ ಬಂದ ವೈದ್ಯ, ತಂಡದ ಸದಸ್ಯರ ಸನಿಹ ಹಾದು ಹೋದರು. ಬಳಿಕ ಕರೆ ಮಾಡಿ ಹತ್ತಿರಕ್ಕೆ ಆಗಮಿಸಿ, ಆಸ್ಪತ್ರೆ ಆವರಣದಲ್ಲಿ ಕತ್ತಲೆಯಾಗಿರುವ ಸುರಕ್ಷಿತ ಸ್ಥಳಕ್ಕೆ ಕರೆದುಕೊಂಡು ಹೋಗಿ, ಯಾರೂ ತಮ್ಮನ್ನು ನೋಡುತ್ತಿಲ್ಲ ಎಂಬುದನ್ನು ಖಚಿತ ಪಡಿಸಿಕೊಂಡ ಬಳಿಕ ಲಂಚದ ಹಣ ಸ್ವೀಕರಿಸಿದ. ಒಬ್ಬ ರೋಗಿಗೆ ಸಂಬಂಧಿಸಿದಂತೆ 4 ಸಾವಿರ ರೂ. ಸ್ವೀಕರಿಸಿದ. ಮತ್ತೊಬ್ಬ ರೋಗಿಗೆ ಸಂಬಂಧಿಸಿದಂತೆ 1 ಸಾವಿರ ರೂ. ಕೇಳಿದ್ದು, ನಮ್ಮ ತಂಡದ ಸದಸ್ಯ ನನ್ನ ಕೈಯಲ್ಲಿ ಈಗ 500 ರೂ. ಇದೆ. ನಾಳೆ ಬಾಕಿ ತಂದುಕೊಡುವುದಾಗಿ ಹೇಳಿದ. ಅದಕ್ಕೆ ಒಪ್ಪಿಕೊಂಡ ವೈದ್ಯ, ರೋಗಿಯನ್ನು ನೋಡಿ ಹೇಗಿದ್ದಾರೆಂದು ಹೇಳುವುದಾಗಿ ಭರವಸೆ ನೀಡಿ ತೆರಳಿದ.

    ಕ್ರಮದ ಕುರಿತು ಕುತೂಹಲ: ಕಳೆದ ವಾರ 3 ದಿನ ಕೊಡಗು ಪ್ರವಾಸದಲ್ಲಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಜಿಲ್ಲೆಯಲ್ಲಿ ಹೆಚ್ಚಾಗಿರುವ ಕೋವಿಡ್ ಸಾವಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ವೈದ್ಯಾಧಿಕಾರಿಗಳು, ವೈದ್ಯರು ಬಹಳ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದರು. ಕರ್ತವ್ಯಲೋಪ ಸಹಿಸಲಾಗದು, ಸಾವಿನ ಸಂಖ್ಯೆ ಇಳಿಕೆ ಆಗದಿದ್ದಲ್ಲಿ ವೈದ್ಯಾಧಿಕಾರಿಗಳನ್ನು ಬದಲಾಯಿಸುವ ಎಚ್ಚರಿಕೆ ನೀಡಿದ್ದರು. ಇದೀಗ ದಾಖಲೆ ಸಹಿತ ಕೋವಿಡ್ ಆಸ್ಪತ್ರೆ ವೈದ್ಯನ ಭ್ರಷ್ಟಾಚಾರ ಬಯಲಾಗಿದ್ದು, ಸಚಿವರು ಯಾವ ಕ್ರಮ ತೆಗೆದುಕೊಳ್ಳುತ್ತಾರೆಂಬ ಕುತೂಹಲವಿದೆ.

    ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಾಗಿರುವ ಬಹುತೇಕ ಸಾವುಗಳು ರಾತ್ರಿ ವೇಳೆ ಸಂಭವಿಸಿರುವುದು ಅನುಮಾನ ಮೂಡಿಸಿದೆ. ರಾತ್ರಿ ಸೋಂಕಿತರನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಶಂಕೆ ವ್ಯಕ್ತವಾಗಿದೆ. ಮಣ್ಣು ತಿನ್ನುವ ಕೆಲಸ ಮಾಡುತ್ತಿರುವ ವೈದ್ಯ ಡಾ.ಶಿವಕುಮಾರ್​ನನ್ನು ಕಾವೇರಿ ತಾಯಿ ಕಾಪಾಡುವುದಿಲ್ಲ.

    | ಸತ್ಯ ಕರ್ಕೆರ ಸಾಮಾಜಿಕ ಕಾರ್ಯಕರ್ತೆ.

    ಜನರಿಗೆ ತೊಂದರೆ ಆಗಬಾರದೆಂಬ ಉದ್ದೇಶಕ್ಕಾಗಿ ದಾಖಲೆ ಸಹಿತ ವಿಜಯವಾಣಿಗೆ ಮಾಹಿತಿ ನೀಡಿದ್ದೇನೆ. ಆಸ್ಪತ್ರೆಗೆ ದಾಖಲಾಗುವ ಪ್ರತಿಯೊಬ್ಬರನ್ನು ಚೆನ್ನಾಗಿ ನೋಡಿಕೊಳ್ಳುವುದು ವೈದ್ಯರ ಕರ್ತವ್ಯ.

    | ಟಿ.ಎಸ್.ಶಮೀರ್ ಅಧ್ಯಕ್ಷ, ಮಾಲ್ದಾರೆ ಗ್ರಾಪಂ.

    ಕರೊನಾಗೆ ಬಲಿಯಾದ ತಾಯಿಯ ಅಂತ್ಯಸಂಸ್ಕಾರದ ಬಳಿಕ ಮಗನಿಗೂ ಸಾವು!

    ರೈತರೇ ಲಾಕ್​ಡೌನ್​ ಚಿಂತೆ ಬಿಡಿ, ನಿಮ್ಮ ಬೆಳೆಗೆ ಸೂಕ್ತ ಬೆಲೆಕೊಟ್ಟು ಖರೀದಿಸುವೆ, ಈ ನಂಬರ್​ಗೆ ಕರೆ ಮಾಡಿ: ನಟ ಉಪೇಂದ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts