More

    ಪರಮ ಪವಿತ್ರವಾದ ವೈದ್ಯ ವೃತ್ತಿ

    ಪರಮ ಪವಿತ್ರವಾದ ವೈದ್ಯ ವೃತ್ತಿಜಗತ್ತು ಅಭಿವೃದ್ಧಿಯ ಪಥದಲ್ಲಿದೆ. ವೈದ್ಯರು ರೋಗಿಯನ್ನು ನೇರವಾಗಿ ನೋಡದೇ ಚಿಕಿತ್ಸೆ ನೀಡುವ ಆನ್​ಲೈನ್ ವೈದ್ಯಸಲಹೆಗಳೂ ಸುಲಭದಲ್ಲಿ ಸಿಗುತ್ತಿವೆ. ಚಿಕಿತ್ಸೆಗೆ ಹೀಗಿರುವ ಅನುಕೂಲತೆಗಳು ಬಂದರೂ ಪರಿಪೂರ್ಣ ಎನಿಸಿಕೊಳ್ಳದೆ ಇರುವುದಕ್ಕೆ ಅನೇಕ ಕಾರಣಗಳಿವೆ. ಅದಿಲ್ಲವಾಗಿದ್ದಲ್ಲಿ ರೋಬೋಟಿಕ್ ಡಾಕ್ಟರ್​ಗಳು ವಿಶ್ವದೆಲ್ಲೆಡೆ ತುಂಬಿರುತ್ತಿದ್ದರು. ಆದರೆ ಹಾಗಾಗಲಿಲ್ಲ! ಅದಕ್ಕೆ ನಿಖರವಾದ ಕಾರಣ ಆದಿವೈದ್ಯಗ್ರಂಥವಾದ ಚರಕ ಸಂಹಿತೆಯಲ್ಲೇ ಸಿಗುತ್ತದೆ. ಜ್ಞಾನ ಹಾಗೂ ಬುದ್ಧಿಯ ಬೆಳಕಿನಿಂದ ವೈದ್ಯನು ರೋಗಿಯ ಅಂತರಾತ್ಮ ಪ್ರವೇಶಿಸದೆ ಇದ್ದರೆ ಯಶಸ್ವೀ ಚಿಕಿತ್ಸೆ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಚಿಕಿತ್ಸೆಯಲ್ಲಿ ವೈದ್ಯರ ತೊಡಗುವಿಕೆ ಪೂರ್ಣ ಪ್ರಮಾಣದಲ್ಲಿರಬೇಕು ಮಾತ್ರವಲ್ಲ ಚಿಕಿತ್ಸೆ ಪ್ರತ್ಯಕ್ಷವಾಗಿ ನಡೆಯಬೇಕು. ದೂರದಲ್ಲಿರುವ ರೋಗಿಯ ಚಿಕಿತ್ಸೆ ಸುಲಭ ಸಂದರ್ಭಗಳಲ್ಲಿ ಮಾತ್ರ ಯಶಸ್ವಿಯಾಗಬಹುದು ಹೊರತು ಅದುವೇ ಚಿಕಿತ್ಸೆಯ ರಾಜಮಾರ್ಗವಾಗಬಾರದು. ರೋಗಿಯನ್ನು ಮುಟ್ಟದೇ ರೋಗ ಪರೀಕ್ಷಾ ವರದಿಗಳನ್ನಷ್ಟೇ ನೋಡಿ ಚಿಕಿತ್ಸೆ ನೀಡುವ ವೈದ್ಯರನ್ನು ಕಾಣುತ್ತಿದ್ದೇವೆ. ಇದು ರೋಗಿಯ ಹಿತದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಶಾಲೆಯಲ್ಲಿ ಗಲಾಟೆ ಮಾಡಿದ್ದಾರೆ ಎನ್ನಲಾದ ಹತ್ತು ವಿದ್ಯಾರ್ಥಿಗಳನ್ನು ಸಾಲಾಗಿ ಎದುರು ತಂದು ನಿಲ್ಲಿಸಿದರೆ ಅವರಲ್ಲಿ ನಿಜಕ್ಕೂ ಗಲಾಟೆಗೆ ಕಿಚ್ಚು ಹಚ್ಚಿದ ವಿದ್ಯಾರ್ಥಿ ಯಾರೆಂಬುದನ್ನು ಕಣ್ಣನೋಟದಿಂದಲೇ ಪತ್ತೆ ಹಚ್ಚಬಲ್ಲ ಸಾಮರ್ಥ್ಯವನ್ನು ಚಾಣಾಕ್ಷ, ಅನುಭವೀ ಶಿಕ್ಷಕರು ಕರಗತ ಮಾಡಿಕೊಂಡಿರುತ್ತಾರೆ. ರೋಗಿಯ ಪ್ರತ್ಯಕ್ಷ ಪರೀಕ್ಷೆಯ ಮಹತ್ವವನ್ನು ಹೇಳಲು ಇದಕ್ಕಿಂತ ಬೇರೆ ಉದಾಹರಣೆ ಬೇಕಿಲ್ಲ.

    ಎಲ್ಲವನ್ನು ತಿಳಿದಿದ್ದೂ ತಪ್ಪಾಗಿ ಪ್ರಯೋಗಿಸಿದರೆ ಅನರ್ಥ ಉಂಟುಮಾಡುತ್ತದೆ, ಉತ್ತಮವಾದ ಔಷಧವೂ ತೀಕ್ಷ್ಣ ವಿಷವಾಗುತ್ತದೆ. ಜ್ಞಾನಿಯಾದ ವೈದ್ಯನಿಗೆ ತೀವ್ರ ವಿಷವನ್ನೂ ಉತ್ತಮ ಔಷಧವನ್ನಾಗಿಸುವ ಶಕ್ತಿ ಇರುತ್ತದೆ. ಹಾಗಾಗಿ ದುಃಖತಪ್ತ, ಹಾಸಿಗೆ ಹಿಡಿದ, ನಂಬಿಕೆ ಇಟ್ಟಿರುವ ರೋಗಿಗೆ ಔಷಧ ಕ್ರಮವನ್ನು ಅರಿಯದೆ ಚಿಕಿತ್ಸೆ ನೀಡಿದರೆ ಅಂತಹ ವೈದ್ಯ ನರಕದ ಹಾದಿ ತುಳಿಯುತ್ತಾನೆ ಎಂಬೆಲ್ಲಾ ಅರ್ಥಪೂರ್ಣ ಮಾತುಗಳು ಚರಕ ಸಂಹಿತೆಯಲ್ಲಿವೆ. ಔಷಧವನ್ನು ಸಮಗ್ರವಾಗಿ ತಿಳಿದುಕೊಳ್ಳದೆ ಇದ್ದರೆ ಅದು ವಿಷ, ಶಸ್ತ್ರ, ಅಗ್ನಿ, ಸಿಡಿಲುಗಳಂತೆ ಮಾರಕ, ತಿಳಿದಿದ್ದರೆ ಅದುವೇ ಅಮೃತ ಎಂದಿದೆ ಭೈಷಜ್ಯ ರತ್ನಾವಲೀ ಗ್ರಂಥ. ಅದಕ್ಷ ಭಿಷಕ್ ಚಿಕಿತ್ಸೆ ನೀಡಲು ಯೋಗ್ಯನಲ್ಲ. ಮೊದಲು ರೋಗಿಯನ್ನು ಪರೀಕ್ಷಿಸಿ, ತದನಂತರ ಬೇಕಾದ ಔಷಧವನ್ನು ಜ್ಞಾನಿಯಾದ ವೈದ್ಯನು ರೋಗಿಯನ್ನು ಭೇಷಜಗಳಿಂದ ರೋಗರಹಿತ ಮಾಡಿದರೆ ಅಂತಹ ವೈದ್ಯರ ಏಳು ಪೀಳಿಗೆಗಳಿಗೆ ಬ್ರಹ್ಮಲೋಕ ಪ್ರಾಪ್ತಿಯಾಗುತ್ತದೆ! ಒಬ್ಬ ರೋಗಿಗೆ ಚಿಕಿತ್ಸೆ ನೀಡಿ ರೋಗಮುಕ್ತಿ ಆಯಿತೆಂದರೆ ಕೋಟಿ ಕಪಿಲಾ ಗೋವುಗಳ ದಾನದ ಪುಣ್ಯಫಲ ವೈದ್ಯನಿಗೆ ಪ್ರಾಪ್ತವಾಗುತ್ತದೆ! ವೈದ್ಯನು ತನ್ನ ದಿವ್ಯಜ್ಞಾನದಿಂದ ಮಾಡುವ ಅತಿಶ್ರೇಷ್ಠವಾದ ಜೀವನದಾನವನ್ನು ಆಯುರ್ವೆದ ಪ್ರಸಾದ ಎಂದೂ ಕರೆಯಲಾಗಿದೆ.

    ಸಂಹಿತೆಗಳನ್ನು ಚೆನ್ನಾಗಿ ಅಧ್ಯಯನ ಮಾಡಿ ಸರಿಯಾಗಿ ಅರ್ಥೈಸಿ ಹೃತ್ಪೂರ್ವಕವಾಗಿ ಅದರ ವಿವರಣೆಗಳನ್ನು ಒಪ್ಪಿಕೊಂಡು ಆ ಬಳಿಕವೇ ಚಿಕಿತ್ಸಾ ಪ್ರಯೋಗವನ್ನು ಸದಾ ಮಾಡುವ ವೈದ್ಯರು ವಿಶೇಷವಾದ ಜ್ಞಾನ ಧಾರಣೆ, ಸ್ಮರಣಶಕ್ತಿ, ಬುದ್ಧಿಶಕ್ತಿ ಹಾಗೂ ಧರ್ಮ ಕಾರ್ಯಗಳು ಪ್ರಾಪ್ತವಾಗಿ ಸುಖವನ್ನು ಹೊಂದುತ್ತಾರೆ ಎಂದು ಚರಕಸಂಹಿತೆ ಹೇಳಿದೆ. ಧರ್ಮ ಅರ್ಥ ಕಾಮ ಮೋಕ್ಷಗಳ ಸಾಧನೆಗೆ ಸ್ವಸ್ಥದೇಹವೇ ಕಾರಣ. ಇಂತಹ ಸ್ವಾಸ್ಥ್ಯ ಮತ್ತು ಆರೋಗ್ಯವನ್ನು ಪ್ರದಾನ ಮಾಡುವ ವೈದ್ಯನೇ ಉತ್ಕೃಷ್ಟ ದಾನಿ ಎಂದು ನಂದಿ ಪುರಾಣ ಉಲ್ಲೇಖಿಸಿದೆ. ಯಾವಾಗಲೂ ಎಲ್ಲವನ್ನೂ ಆಲೋಚಿಸಿ ವ್ಯಾಧಿಯ ಗುಣವನ್ನೂ ಅಭ್ಯಸಿಸಿ ಚಿಕಿತ್ಸೆ ನೀಡಿದರೆ ಸಂದೇಹಗಳು ಉಳಿಯುವುದಿಲ್ಲ. ಇದರಿಂದ ಚಿಕಿತ್ಸೆ ಯಶಸ್ವಿಯಾಗುತ್ತದೆ. ದೀರ್ಘಾಯುಷ್ಯ, ಯಶಸ್ಸು, ಸ್ವಾಸ್ಥ್ಯ ಇವು ಮೂರೂ ಸಿದ್ಧಿಯಾಗುತ್ತವೆ. ಆಯುಷ್ಯಕ್ಕೆ ಪುಣ್ಯತಮವಾದ ಈ ವೇದಕ್ಕೆ ಉತ್ತುಂಗ ಸ್ಥಾನವನ್ನು ವೇದ ವಿಶಾರದರು ನೀಡಿದ್ದಾರೆ.

    ಆಗಮಗಳ ಸಿದ್ಧಿಯಿಂದ ಋಷಿಪುಂಗವರು ಪ್ರತ್ಯಕ್ಷ ಫಲಗಳ ದರ್ಶನವಾಗಿ ಆಯುರ್ವೆದವನ್ನು ಉಪದೇಶಿಸಿರುವುದರಿಂದ ಪವಿತ್ರ ಮಂತ್ರಗಳಂತೆ ನೇರವಾಗಿ ಅನುಷ್ಠಾನಗೊಳಿಸಬೇಕು ಎಂದು ಅಷ್ಟಾಂಗಹೃದಯ ಗ್ರಂಥವು ಹೇಳಿರುವುದು ಸಮಗ್ರವಾಗಿ ಲೋಕಕಲ್ಯಾಣದ ಆಶಯದೊಂದಿಗೆ ಆಯುರ್ವೆದವು ಸಾಗಿ ಬಂದಿರುವುದನ್ನು ಶ್ರುತಪಡಿಸುತ್ತದೆ. ಚರಕಸಂಹಿತೆ ಅಥವಾ ಸುಶ್ರುತಸಂಹಿತೆಯನ್ನು ಮಾತ್ರ ಓದಿದರೆ ಸಾಲದು. ಅಷ್ಟಾಂಗ ಸಂಗ್ರಹ, ಅಷ್ಟಾಂಗ ಹೃದಯ ಹಾಗೂ ಇತರ ಪ್ರಮುಖ ಗ್ರಂಥಗಳನ್ನೂ ಅರ್ಥೈಸಿಕೊಂಡವರು ಮಾತ್ರವೇ ತಜ್ಞ ಆಯುರ್ವೆದ ವೈದ್ಯರಾಗಲು ಸಾಧ್ಯ ಎಂಬ ಮಾತೂ ಗಣನೀಯವಾಗಿದೆ. ಉತ್ತಮ ಕರ್ವಭ್ಯಾಸ ಮಾಡುತ್ತಾ ಎಲ್ಲರಿಗೂ ಒಳಿತನ್ನೇ ಬಯಸುವ ಒಳ್ಳೆಯ ಮನಸ್ಸಿನ ವೈದ್ಯರುಗಳಿಗೆ ಒಳ್ಳೆಯದಾಗಲಿ ಎಂಬ ಶ್ಲೋಕ ಅದೆಷ್ಟು ಶುದ್ಧ, ಶುಭ್ರ, ಸುಂದರ!

    ಎಲ್ಲರೂ ಕರೊನಾ ಲಸಿಕೆ ಮೂರನೇ ಡೋಸ್ ಪಡೆಯಬೇಕು; ರಾಜ್ಯ ಸರ್ಕಾರದಿಂದ ಮಾರ್ಗಸೂಚಿ ಶೀಘ್ರ ಬಿಡುಗಡೆ: ಸಚಿವ ಸುಧಾಕರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts