More

    ನಮ್ಮ ಪ್ರಾಬ್ಲಮ್ ಏನು ಗೊತ್ತಾ? ಇಲ್ಲಿದೆ ಉತ್ತರ…

    ನಮ್ಮ ಪ್ರಾಬ್ಲಮ್ ಏನು ಗೊತ್ತಾ? ಇಲ್ಲಿದೆ ಉತ್ತರ...ಬುದ್ಧ ಹೇಳಿದ್ದು ಸರಿ. ನಾವು ಸಾವಿರ ರೂಪಾಯಿ ಎಲ್ಲಾದರೂ Invest ಮಾಡಿದರೆ, ನಾಳೆ ಅದು ಒಂದು ಲಕ್ಷ ಆಗಬೇಕು ಅಂತ ಬಯಸ್ತೀವಿ. ನಾಡಿದ್ದು ಒಂದು ಕೋಟಿ ಆಗಬೇಕು ಅಂತ ಆಸೆಪಡ್ತೀವಿ. ಅದೇ ಆ ಸಾವಿರ ರೂಪಾಯಿಗಳಲ್ಲಿ ನೂರು ರೂಪಾಯಿ ನಷ್ಟ ಆದರೂ ನಮ್ಮಿಂದ ತಡೆದುಕೊಳ್ಳುವುದಕ್ಕಾಗಲ್ಲ. ನಮಗೆ ಎಲ್ಲದರಲ್ಲೂ ಲಾಭ ಬೇಕು. ಅದೂ ತಕ್ಷಣ ಲಾಭ ಬೇಕು. ಅದೇ ನಷ್ಟವಾದರೆ, ಅದನ್ನು ಬೇರೆಯವರ ಮೇಲೆ ಹಾಕುವುದಕ್ಕೆ ಕಾರಣ ಹುಡುಕುತ್ತೇವೆ. ನಮ್ಮ ಪಾರ್ಟ್​ನರ್​ ಸರಿ ಇಲ್ಲ, ನನ್ನ ಟೈಮ್ ಸರಿ ಇಲ್ಲ, ನಾನು ಗಳಿಸಿದ್ದನ್ನೆಲ್ಲ ಸರ್ಕಾರ ಟ್ಯಾಕ್ಸ್ ರೂಪದಲ್ಲಿ ನುಂಗಿಬಿಡ್ತು… ಒಟ್ಟಾರೆ ನಮ್ಮನ್ನ ಬಿಟ್ಟು ಬೇರೆ ಎಲ್ಲ ಕಾರಣಗಳನ್ನೂ ಆ ನಷ್ಟಕ್ಕೆ ಕಾರಣ ಅಂದುಕೊಳ್ತೀವಿ.

    ನಮ್ಮ ಪ್ರಾಬ್ಲಮ್ ಏನು ಗೊತ್ತಾ?

    ನಮಗೆ ನೋವೇ ಬೇಡ. ಡೆಲಿವರಿ ನೋವಿಲ್ಲದೆ ನೂರು ಮುದ್ದಾದ ಮಕ್ಕಳನ್ನ ಹೆರಬೇಕು, ಜಿಮ್​ಗೆ ಹೋಗದೆಯೇ ಅಥವಾ ಡಯಟ್ ಮಾಡದೆಯೇ ನಮಗೆ ಸಿಕ್ಸ್​ಪ್ಯಾಕ್ ಬೇಕು, ತಲೇಲಿರುವ ಒಂದು ಐಡಿಯಾ ತನ್ನಿಂತಾನೇ ಯಾವುದೇ ಶ್ರಮ ಇಲ್ಲದೆ ಬ್ಯಾಂಕ್ ಬ್ಯಾಲೆನ್ಸ್ ಆಗಿ Convert ಆಗಬೇಕು, ನಾವು ಹಾಕುವ ಪ್ರತಿ ಸೋಷಿಯಲ್ ಮೀಡಿಯಾ ಪೋಸ್ಟ್​ಗೂ ಸಾವಿರಾರು ಲೈಕ್ಸ್ ಸಿಗಬೇಕು…

    ನಮ್ಮ ಪ್ರಾಬ್ಲಮ್ ಏನು ಗೊತ್ತಾ?

    ಯಾವುದೋ ಒಂದು ರೀತಿಯಲ್ಲಿ ಯಾರಾದ್ರೂ ನಮ್ಮ ತಲೆಯ ಮೇಲೆ ಕಿರೀಟ ಇಡುತ್ತಲೇ ಇರಬೇಕು. ನಮ್ಮ ಮಾತಿನ ಬಗ್ಗೆ, ಅಭಿಪ್ರಾಯದ ಬಗ್ಗೆ, ಸೌಂದರ್ಯದ ಬಗ್ಗೆ, ನಡವಳಿಕೆ ಬಗ್ಗೆ… ಕೊಂಡಾಡುತ್ತಿರಲೇ ಇರಬೇಕು. ಯಾರೂ ನಮ್ಮತ್ತ ಬೆರಳು ತೋರಬಾರದು. ಹೀಗೆ ನಮ್ಮ ನಿರೀಕ್ಷೆಗಳೆಲ್ಲ ಒಂಥರಾ Oneway traffic ತರಹ ಆಗೋಗಿದೆ. ನಮ್ಮ ನಿರೀಕ್ಷೆಗಳೆಲ್ಲ Oneway ಆದಾಗ, ಜೀವನ Deadendನಲ್ಲಿ ಮುಗಿಯುವುದರಲ್ಲಿ ಸಂಶಯವೇ ಇಲ್ಲ. ನಿರೀಕ್ಷೆ Oneway ಆಗಿದ್ರೂ, ಜೀವನ Twoway ಅಂತ ಒಪ್ಪಿಕೊಳ್ಳೋ ಮನಸ್ಥಿತಿ ಬಂದಾಗ ಅವರನ್ನು ನಾವು Matured ಅಂತ ಕರೀತೀವಿ.

    ನಮ್ಮ ಪ್ರಾಬ್ಲಮ್ ಏನು ಗೊತ್ತಾ?

    ನಾವು ಅಂದುಕೊಂಡಿದ್ದೇ ಜೀವನ ಎಂಬ ನಂಬಿಕೆಯಲ್ಲಿರುತ್ತೀವಿ. ನಾವೇನಂದು ಕೊಳ್ಳುತ್ತೀವೋ ಅದಲ್ಲ ಜೀವನ. ಏನು ನಡೆಯುತ್ತದೋ ಅದೇ ಜೀವನ. ಜೀವನ ಎಂದರೇನು ಎಂದು ಎಲ್ಲರಿಗೂ ದೊಡ್ಡ ಪಾಠ ಕಲಿಸಿದ್ದು ಕೋವಿಡ್-19 ಕಾಲ. ನಮ್ಮ ಎಲ್ಲ ಲೆಕ್ಕಾಚಾರ, ನಿರೀಕ್ಷೆ ಮತ್ತು ಆಸೆಗಳನ್ನು ಉಲ್ಟಾಪಲ್ಟಾ ಮಾಡಿ, Expected the Unexpected ಅಂತ ಜೀವನದ ಮಹಾಸತ್ಯವನ್ನು ತೋರಿಸಿಕೊಟ್ಟಿದ್ದು ಕೋವಿಡ್-19. ಹೋದ ವರ್ಷ ಫೆಬ್ರವರಿ 28ಕ್ಕೆ ನಮ್ಮ ‘ಶಿವಾಜಿ ಸುರತ್ಕಲ್ – ರಣಗಿರಿ ರಹಸ್ಯ’ ಚಿತ್ರ ಬಿಡುಗಡೆಯಾಯ್ತು. ಜನರ ಮೆಚ್ಚುಗೆ ಗಳಿಸಿ ಯಶಸ್ವಿಯಾಗಿ ಪ್ರದರ್ಶನವಾಯ್ತು. ಈ ವರ್ಷದ ಸೂಪರ್​ಹಿಟ್ ಚಿತ್ರಗಳ ಪಟ್ಟಿಗೆ ನಮ್ಮ ಚಿತ್ರ ಸೇರುತ್ತದೆ ಎಂದು ನಾವೆಲ್ಲ ಖುಷಿಯಾಗಿದ್ದಾಗ, ಮೂರು ವಾರಗಳಲ್ಲಿ ಲಾಕ್​ಡೌನ್ ಘೋಷಣೆಯಾಯಿತು. ‘ಶಿವಾಜಿ ಸುರತ್ಕಲ್’ ಬಿಡುಗಡೆಯ 50ನೇ ದಿನಕ್ಕೆ, ನಾನೇ ನಿರ್ದೇಶನ ಮಾಡಿರೋ ‘100’ ಎಂಬ ಚಿತ್ರ ಬಿಡುಗಡೆ ಮಾಡಬೇಕು ಅಂತ ಪ್ಲಾನ್ ಮಾಡಿಕೊಂಡಿದ್ದೆ. ಸೆನ್ಸಾರ್ ಮಾಡಿ ಬಿಡುಗಡೆ ಮಾಡುವುದಕ್ಕೆ ರೆಡಿಯಾಗಿದ್ದೆ. ಆದರೆ, ಲಾಕ್​ಡೌನ್​ನಿಂದ ಕಳೆದ ಎಂಟು ತಿಂಗಳಿನಿಂದ ಚಿತ್ರ ಬಿಡುಗಡೆಗೆ ಕಾಯುತ್ತಲೇ ಇದ್ದೇವೆ. ಸಿನಿಮಾ ಚೆನ್ನಾಗಿ ಮೂಡಿಬಂದಿದೆ ಮತ್ತು ಆ ಚಿತ್ರಕ್ಕೆ ನಿಮ್ಮೆಲ್ಲರ ಪ್ರತಿಕ್ರಿಯೆ ಹೇಗಿರಬಹುದು ಎಂದು ತಾಳ್ಮೆಯಿಂದ ಕಾಯುತ್ತಿದ್ದೇನೆ. ಏಕೆಂದರೆ, ಒಂದೊಳ್ಳೆಯ ಚಿತ್ರ ಮಾಡೋದು ನನ್ನ ಕಂಟ್ರೋಲ್​ನಲ್ಲಿದೆ. ಆದರೆ, ಕೋವಿಡ್-19 ಯಾರ ಕೈಯಲ್ಲೂ ಇಲ್ಲ.

    ನಮ್ಮ ಪ್ರಾಬ್ಲಮ್ ಏನು ಗೊತ್ತಾ?

    ನಮ್ಮ ಕಂಟ್ರೋಲ್​ನಲ್ಲಿ ಇಲ್ಲದಿರುವ ವಿಷಯಗಳ ಬಗ್ಗೆ ವಿಪರೀತ ತಲೆ ಕೆಡಿಸಿಕೊಳ್ಳುತ್ತೇವೆ. ನಮ್ಮ ಹಿಡಿತದಲ್ಲಿರುವ ವಿಷಯಗಳಿಗೆ 100 ಪರ್ಸೆಂಟ್ ಶ್ರಮ ಹಾಕಿ, ಯಾವುದೇ ರೀತಿಯಲ್ಲಿ ಆ ಕೆಲಸಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಆದರೆ, ನಮ್ಮ ಕಂಟ್ರೋಲ್​ನಲ್ಲೇ ಇಲ್ಲದಿರುವ ವಿಷಯಗಳ ಬಗ್ಗೆ ತುಂಬ ತಲೆ ಕೆಡಿಸಿಕೊಂಡು ಬಿಪಿ ರೈಸ್ ಮಾಡಿಕೊಳ್ಳುವುದರಲ್ಲಿ ಅರ್ಥವೇ ಇಲ್ಲ. ಈ ವಿಷಯದಲ್ಲಿ ರೈತರನ್ನು ನೋಡಿ ಪಾಠ ಕಲಿಯಬೇಕು. ಅವರು ಪ್ರತೀ ದಿನ ಬಿಸಿಲಲ್ಲಿ ಬೆವರು ಸುರಿಸಿ ಗದ್ದೆಯಲ್ಲಿ ಕೆಲಸ ಮಾಡಿರುತ್ತಾರೆ. ಆದರೆ, ಮಳೆ ಬರಲಿಲ್ಲ ಅಂತಲೋ ಅಥವಾ ವಿಪರೀತ ಮಳೆ ಬಂತು ಅಂತಲೋ ಅವರ ಇಡೀ ವರ್ಷದ ಶ್ರಮ ಹಾಳಾಗುತ್ತದೆ. ಹಾಗಂತ ಅವರು ಸುಮ್ಮನಿರುವುದಿಲ್ಲ. ಮುಂದಿನ ವರ್ಷ ಅವರು ಮತ್ತೆ ಹೊಸದಾಗಿ ಶ್ರಮ ಹಾಕುತ್ತಾರೆ. ಅದೇ ವಾಸ್ತವತೆ.

    ನಮ್ಮ ಪ್ರಾಬ್ಲಮ್ ಏನು ಗೊತ್ತಾ?

    ನಾವ್ಯಾರೂ ವಾಸ್ತವವನ್ನು ಒಪ್ಪಿಕೊಳ್ಳುವುದಿಲ್ಲ. ಗಣಿತದಲ್ಲಿ 2+2 ಎಷ್ಟು ಎಂದರೆ 4 ಎಂಬ ನಿರ್ದಿಷ್ಟ ಉತ್ತರ ಹೇಳಬಹುದು. ಗಣಿತದಲ್ಲಿ (a+b)=a2+2ab+b2 ಇಕ್ವೇಶನ್ ಓದಿದ್ದು ನೆನಪಿರಬಹುದು. ಈ ಇಕ್ವೇಶನ್​ನಲ್ಲಿ ಮಾತ್ರ ಬಲಗಡೆ ಮತ್ತು ಎಡಗಡೆ ಸಮಾನವಾಗಿ ಇರುತ್ತದೆ. ಅದನ್ನೇ ಜೀವನಕ್ಕೂ ಅಪ್ಲೈ ಮಾಡೋದು ಕಷ್ಟ. ಜೀವನದಲ್ಲಿ ಎಡಗಡೆ 100 ಪರ್ಸೆಂಟ್ ಶ್ರಮ ಹಾಕಿದರೆ, ಬಲಕ್ಕೂ 100 ಪರ್ಸೆಂಟ್ ಅಮೋಘ ಫಲಿತಾಂಶ ಸಿಗುತ್ತದೆ ಎಂಬ ಗ್ಯಾರಂಟಿ ಇರುವುದಿಲ್ಲ. ಈ ಸತ್ಯವನ್ನು ವಿನಯದಿಂದ ಒಪ್ಪಿ, 100 ಪರ್ಸೆಂಟ್ ಶ್ರಮ ಹಾಕಲೇಬೇಕು. ಏಕೆಂದರೆ, ಹಾಕಿದ ಶ್ರಮ ಈ ಸಲ ಫಲಿತಾಂಶ ಕೊಡದಿದ್ದರೂ, ಮುಂದೆ ಇನ್ನೊಂದು ರೂಪದಲ್ಲಿ ಯಶಸ್ಸಾಗಿ ಬಂದೇ ಬರುತ್ತದೆ. ಯಾವ ಶ್ರಮ ಅಥವಾ ಕಲಿಕೆಯೂ ವೇಸ್ಟ್ ಆಗುವುದಿಲ್ಲ. ಅದು ಅನುಭವವಾಗಿ ಇನ್ನೊಂದು ಕೆಲಸಕ್ಕೆ ನಿಮಗೇ ಗೊತ್ತಿಲ್ಲದೆ ದೊಡ್ಡ ಸಹಾಯವಾಗುತ್ತದೆ.

    ನಮ್ಮ ಪ್ರಾಬ್ಲಮ್ ಏನು ಗೊತ್ತಾ?

    ನಾವು ಯಾವುದಾದರೂ ಪ್ರಯತ್ನದಲ್ಲಿ ಸೋತಾಗ ಬೇಗ ಹತಾಶರಾಗಿಬಿಡುತ್ತೇವೆ. ಒಂದು ವಿಷಯ ಗೊತ್ತಿರಲಿ. ಸೋತಿರುವುದು ನಿಮ್ಮ ಪ್ರಯತ್ನವೇ ಹೊರತು ನೀವಲ್ಲ. ನೀವು ಮತ್ತೆ ಪ್ರಯತ್ನ ಪಡಲೇಬೇಕು. ಒಂದಲ್ಲ ಒಂದು ದಿನ ಗೆಲ್ಲಲೇಬೇಕು. ಪ್ರತಿಯೊಂದು ಸೋಲಿಗೂ ನಾವೇ ಕಾರಣ ಅಂದುಕೊಳ್ಳುವ ಅಗತ್ಯವಿಲ್ಲ. ನಮ್ಮ ಸೋಲಿಗೆ ಹಲವು ಕಾರಣಗಳಿರುತ್ತವೆ. ನಿಮ್ಮ ಐಡಿಯಾ Ahead of its time ಇರಬಹುದು. ಅಂದರೆ, ಐಡಿಯಾ ಸರಿ ಇದ್ದರೂ ಅದನ್ನು ಕಾರ್ಯರೂಪಕ್ಕೆ ತಂದ Timing ತಪ್ಪಿರಬಹುದು ಅಥವಾ ಅದನ್ನು ನಿರ್ವಹಿಸುವುದಕ್ಕೆ ನಿಮ್ಮ ತಂಡ ಸಿದ್ಧವಿಲ್ಲದಿರಬಹುದು ಅಥವಾ ಕರೊನಾ ತರಹ ಹೊರಗಿನ ಯಾವುದಾದರೂ ಕಾರಣ ಇರಬಹುದು.

    ನಮ್ಮ ಪ್ರಾಬ್ಲಮ್ ಏನು ಗೊತ್ತಾ?

    ಕಾರಣ ಏನೇ ಇರಲಿ, ಆ ಸೋಲಿನ ಹೊಣೆಯನ್ನು ನಾವು ಹೆಗಲ ಮೇಲೆ ಹಾಕಿಕೊಂಡು ಬಿಡುತ್ತೇವೆ. ಇದರಿಂದ ನಮ್ಮ ಆತ್ಮವಿಶ್ವಾಸವನ್ನು ಕುಗ್ಗಿಸುವ ಬದಲು, ಕೆಳಗೆ ಬಿದ್ದಾಗ ಮೈಮೇಲಿನ ಮಣ್ಣನ್ನು ಕೊಡವಿಕೊಂಡು ಮತ್ತೆ ಓಡುವುದಕ್ಕೆ ತಯಾರಾಗಬೇಕು. ನಾನು ಎಷ್ಟೋ ಶಾಲೆಗಳಿಗೆ ಪ್ರೖೆಜ್ ಹಂಚುವುದಕ್ಕೆ ಹೋಗುತ್ತಿರುತ್ತೇನೆ. ಆಗ ಹೇಳೋದು ಒಂದೇ ಮಾತು. ಇಲ್ಲಿ ಗೆದ್ದೋರು, ಸೋತೋರು ಅಂತೆಲ್ಲ ಇಲ್ಲ. ಗೆದ್ದವರು ಮತ್ತು ಮುಂದೆ ಗೆಲ್ಲುವವರು ಎಂಬ ಎರಡೇ ವರ್ಗ ಇರೋದು. ತಾನು ಸೋತಿದ್ದೀನಿ ಅಂತ ತಾನು ಒಪು್ಪವವರೆಗೂ ಯಾರೂ ಸೋಲುವುದಿಲ್ಲ. ಹಾಗಾಗಿ ಒಂದೋ, ಎರಡೋ ಸೋಲಿಗೆ ಮನೋಸ್ಥೈರ್ಯ ಕಳೆದುಕೊಳ್ಳಬೇಡಿ. ನಾಳೆ ಎನ್ನುವುದು ಯಾವತ್ತೂ ಇದ್ದೇ ಇರುತ್ತದೆ ಮತ್ತು ಈ ದಿನ ನಿಮ್ಮ ಮುಂದಿನ ಜೀವನದ ಮೊದಲ ದಿನ ಎಂದು ನಿರ್ಧರಿಸಿದರೆ, ನಿಮ್ಮ ಜೀವನವನ್ನು ಹೇಗೆ ಬೇಕಾದರೂ ಪರಿವರ್ತನೆ ಮಾಡಿಕೊಳ್ಳಬಹುದು.

    (ಲೇಖಕರು ನಟ, ನಿರ್ದೇಶಕ)

    ವಾಟ್ಸ್​ಆ್ಯಪ್​ಗೆ ಬಾಯ್​ ಬಾಯ್​, ಟೆಲಿಗ್ರಾಮ್​ಗೆ ಹಾಯ್​ ಹಾಯ್​: ಯಾಕೆ, ಏನಾಯಿತು?

    ಮಗಳನ್ನು ಕೊಂದು ಹೊಲದಲ್ಲಿ ಎಸೆದ ಅಪ್ಪ ಅಮ್ಮ! ಇಷ್ಟಕ್ಕೆಲ್ಲ ಕಾರಣ ಆ ಯುವಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts