More

    ಕೃಷಿ ಭೂಮಿ ಹಡೀಲು ಬಿಡದಿರಿ

    ಗುರುಪುರ: ಮಂಗಳೂರು ತಾಲೂಕಿನ ಗುರುಪುರ-ಸುರತ್ಕಲ್ ಹೋಬಳಿಯಲ್ಲಿ ವರ್ಷಗಳಿಂದ ಹಡೀಲು ಬಿದ್ದಿರುವ ಸುಮಾರು 172 ಹೆಕ್ಟೇರ್ ಕೃಷಿ ಭೂಮಿಯಲ್ಲಿ ಸರ್ಕಾರದ ಕೃಷಿ ನೀತಿಯಾದ ‘ಹಡೀಲು ಗದ್ದೆಯಲ್ಲಿ ಭತ್ತ ಬೆಳೆಯೋಣ’ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಗುರುವಾರ ಗಂಜಿಮಠ ಗ್ರಾಮ ಪಂಚಾಯಿತಿ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ರೈತರು, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳೊಂದಿಗೆ ಪ್ರಾಥಮಿಕ ಹಂತದ ಸಭೆ ನಡೆಯಿತು.

    ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಗುರುಪುರ-ಸುರತ್ಕಲ್ ಹೋಬಳಿಯಲ್ಲಿ ಒಟ್ಟು 263 ಹೆಕ್ಟೇರ್ ಹಡೀಲು ಭೂಮಿ ಗುರುತಿಸಿದ್ದು, 172 ಹೆಕ್ಟೇರ್ ಭೂಮಿ ಮರುಕೃಷಿಗೆ ಅನುಕೂಲವಾಗಿದೆ. ಕೃಷಿ ಭೂಮಿ ಹಡೀಲು ಬಿಡುವಂತಿಲ್ಲ. ಭೂಮಾಲೀಕರು ಕೃಷಿ ಮಾಡಬೇಕು, ಇಲ್ಲವಾದಲ್ಲಿ ಕಾನೂನಿನ ಪ್ರಕಾರ ಸರ್ಕಾರವೇ ಹಡೀಲು ಭೂಮಿಯಲ್ಲಿ ಕೃಷಿ ಕೆಲಸ ಕೈಗೊಳ್ಳಲಿದೆ. ಇದಕ್ಕೆ ಮೊದಲು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಭೌಗೋಳಿಕ ಅನುಕೂಲಕ್ಕೆ ತಕ್ಕಂತೆ ಭತ್ತ ಅಥವಾ ಪರ್ಯಾಯ ಬೆಳೆಗೆ ಅವಕಾಶ ಮಾಡಿಕೊಡಲಾಗುವುದು ಎಂದರು.
    ಹಡೀಲು ಭೂಮಿ ಇತರರಿಗೆ ನೀಡಿದರೆ ಭೂಮಿ ಕೈತಪ್ಪಿ ಹೋಗುವ ಸಾಧ್ಯತೆ ಇದೆ ಎಂಬ ಭೀತಿ ಬೇಡ. ಲಾಭದಲ್ಲಿ ಹಡೀಲು ಭೂಮಾಲೀಕರಿಗೆ ಒಂದಂಶ ಸಿಗಲಿದೆ. ಇದು ಸವಾಲಿನ ಕೆಲಸ. ಕರೊನಾ ಸಂದರ್ಭ ಸರ್ಕಾರದ ಈ ಕೃಷಿ ನೀತಿಗೆ ಹೆಚ್ಚಿನ ಪ್ರೋತ್ಸಾಹ ಲಭಿಸುವ ಭರವಸೆ ಇದೆ ಎಂದು ಸಚಿವರು ವಿವರಿಸಿದರು.

    ಶಾಸಕ ಡಾ.ವೈ.ಭರತ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಗಂಜಿಮಠ ಗ್ರಾಪಂ ಅಧ್ಯಕ್ಷ ನೋಣಯ್ಯ ಕೋಟ್ಯಾನ್, ಉಪಾಧ್ಯಕ್ಷೆ ಕುಮುದಾ ನಾಕ್, ತಹಸೀಲ್ದಾರ್ ಗುರುಪ್ರಸಾದ್, ದ.ಕ ಜಂಟಿ ಕೃಷಿ ನಿರ್ದೇಶಕಿ ಸೀತಾ, ಕೃಷಿ ಉಪ ನಿರ್ದೇಶಕ ಭಾನುಪ್ರಕಾಶ್, ಸಹಾಯಕ ಕೃಷಿ ನಿರ್ದೇಶಕಿ(ಎಡಿ) ವೀಣಾ, ಚುನಾಯಿತ ಪ್ರತಿನಿಧಿಗಳು, ರೈತರು, ಕಂದಾಯ ಇಲಾಖಾ ಅಧಿಕಾರಿಗಳು, ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

    ಮೊದಲಿಗೆ ಏನು ಮಾಡಬೇಕು?: ಯೋಜನೆ ಕಾರ್ಯಗತಗೊಳಿಸಲು ಶಾಸಕರಿಂದ ಪೂರ್ಣ ಸಹಕಾರ ಸಿಗಲಿದೆ. ಯೋಜನೆ ಯಶಸ್ವಿಗಾಗಿ ಗ್ರಾಮ ಪಂಚಾಯಿತಿಗಳು ಹೆಚ್ಚು ಕಾರ್ಯತತ್ಪರವಾಗಲಿದೆ. ಭೂಮಾಲೀಕರ ಮನವೊಲಿಸುವ ಹಾಗೂ ಇನ್ನಿತರ ಕಾನೂನಾತ್ಮಕ ಜವಾಬ್ದಾರಿ ಗ್ರಾಮ ಪಂಚಾಯಿತಿಗಳ ಪಿಡಿಒಗಳು, ವಿಎ, ಕೃಷಿ ಇಲಾಖೆ ಅಧಿಕಾರಿಗಳ ಮೇಲಿದೆ. ಹಡೀಲು ಭೂಮಿಯಲ್ಲಿ ಗರಿಷ್ಠ ಪ್ರಮಾಣದ ಭತ್ತದ ಬೇಸಾಯ ಮಾಡುವ ಮುಂಚೆ ಉಳುಮೆ, ಬೀಜ, ಬಿತ್ತನೆ, ಯಂತ್ರೋಪಕರಣಗಳ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಈ ಕೆಲಸ ನಾಳೆಯಿಂದಲೇ ಆಗಬೇಕೆಂದು ಅಧಿಕಾರಿಗಳಿಗೆ ಸಚಿವರು ಸೂಚಿಸಿದರು.

    ರೈತರಿಗೆ ಸಚಿವರ ಭರವಸೆ: ರೈತ ಮುಖಂಡ ಮನೋಹರ ಶೆಟ್ಟಿ ನಡಿಕಂಬಳಗುತ್ತು ಹಾಗೂ ಇತರ ಕೆಲವರು ಕೇಳಿದ ಕೆಲವು ಪ್ರಶ್ನೆಗಳಿಗೆ ಸಚಿವರು ಉತ್ತರಿಸುತ್ತ, ಕೃಷಿಕರಿಗೆ ಸರ್ಕಾರದಿಂದ ಸಮಯೋಚಿತ ಹಾಗೂ ಲಾಭದಾಯಕ ಸವಲತ್ತುಗಳು ಸಿಗುವ ನಿಟ್ಟಿನಲ್ಲಿ ಕೆಲಸ ಮಾಡುವ ಭರವಸೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts