More

    ಅಡಕೆ ವರ್ತಕರ ಪರವಾನಗಿ ರದ್ದು ಪಡಿಸಬೇಡಿ

    ಸಾಗರ: ಎಪಿಎಂಸಿಯಲ್ಲಿ ವ್ಯವಹರಿಸುತ್ತಿರುವ ಅಡಕೆ ವರ್ತಕರ ಪರವಾನಿಗೆ ರದ್ದುಪಡಿಸಲು ಕೃಷಿ ಮಾರುಕಟ್ಟೆ ಸಚಿವರು ಹೊರಡಿಸಿರುವ ಆದೇಶವನ್ನು ಖಂಡಿಸಿ ಹಾಗೂ ತಕ್ಷಣ ಸುತ್ತೋಲೆಯನ್ನು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿ ಗುರುವಾರ ಅಡಕೆ ವರ್ತಕರ ಸಂಘದಿಂದ ಸಾಗರದ ಎಪಿಎಂಸಿ ಕಾರ್ಯದರ್ಶಿ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

    ಅಡಕೆ ಚೇಂಬರ್ ರಾಜ್ಯ ಉಪಾಧ್ಯಕ್ಷ ಅಶ್ವಿನಿಕುಮಾರ್ ಮಾನತಾಡಿ, ಈಚೆಗೆ ಸಾಗರ ಎಪಿಎಂಸಿ ವರ್ತಕರಿಗೆ ನೀವು ಸರಿಯಾಗಿ ವಹಿವಾಟು ನಡೆಸುತ್ತಿಲ್ಲ. ನಿಮ್ಮ ಪರವಾನಗಿಯನ್ನು ಏಕೆ ವಜಾ ಮಾಡಬಾರದು ಎಂದು ಕೃಷಿ ಮಾರುಕಟ್ಟೆ ಸಚಿವರ ಸೂಚನೆ ಮೇರೆಗೆ ನೋಟಿಸ್ ಜಾರಿಗೊಳಿಸಲಾಗಿದೆ. ಸಾಗರ ಎಪಿಎಂಸಿಯಲ್ಲಿ 100ಕ್ಕೂ ಹೆಚ್ಚು ವರ್ತಕರಿಗೆ ನೋಟಿಸ್ ನೀಡಿರುವುದು ಖಂಡನೀಯ ಎಂದು ಹೇಳಿದರು. ವಹಿವಾಟು ನಡೆಸುವುದು ನಮ್ಮ ಮೂಲ ಕರ್ತವ್ಯಗಳಲ್ಲಿ ಒಂದಾಗಿದೆ. ನಾವು ಪರವಾನಗಿ ಪಡೆಯುವಾಗ ಹಣ ಕಟ್ಟಿ, ಬ್ಯಾಂಕ್ ಗ್ಯಾರಂಟಿ ಕೊಟ್ಟಿರುತ್ತೇವೆ. ಎಪಿಎಂಸಿಯಿಂದ 10 ವರ್ಷಗಳ ಅವಧಿಯ ಲೈಸೆನ್ಸ್ ಕೊಡಲಾಗಿದೆ. ಟೆಂಡರ್‌ನಲ್ಲಿ ಭಾಗವಹಿಸುವುದು, ಬಿಡುವುದು ವರ್ತಕರ ಹಕ್ಕು. ಸರ್ಕಾರಕ್ಕೆ ಆದಾಯ ಸಂಗ್ರಹ ಆಗಬೇಕು ಎನ್ನುವ ನಿಟ್ಟಿನಲ್ಲಿ ವರ್ತಕರು ವಹಿವಾಟು ಕಡ್ಡಾಯವಾಗಿ ನಡೆಸಬೇಕು ಎಂದು ನೋಟಿಸ್ ಮೂಲಕ ಹೇರಿಕೆ ಮಾಡುವ ಕ್ರಮವನ್ನು ಸಂಘ ತೀವ್ರವಾಗಿ ಖಂಡಿಸುತ್ತದೆ. ನಮ್ಮ ಹಕ್ಕನ್ನು ಯಾವುದೇ ಕಾರಣಕ್ಕೂ ಹತ್ತಿಕ್ಕುವ ಕೆಲಸ ಮಾಡಬಾರದು ಎಂದು ಆಗ್ರಹಿಸಿದರು.
    ಸಂಘದ ಅಧ್ಯಕ್ಷ ಕೆ.ಬಸವರಾಜ್ ಮಾತನಾಡಿ, ಸಾಗರ ಎಪಿಎಂಸಿಯಲ್ಲಿ ವರ್ತಕರಿಗೆ ಲೈಸೆನ್ಸ್ ರದ್ದುಗೊಳಿಸುವ ನಿಟ್ಟಿನಲ್ಲಿ ನೀಡಿರುವ ನೋಟಿಸ್ ಅವೈಜ್ಞಾನಿಕ. ಕೆಲವು ವರ್ತಕರು ಕರೊನಾ ಸಂದರ್ಭದಲ್ಲಿ ಅಡಕೆ ವಹಿವಾಟು ನಡೆಸಲು ಆಗಲಿಲ್ಲ. ಆದರೆ ವರ್ತಕರು ಪ್ರಾಂಗಣದ ಜತೆ ನಿರಂತರ ಸಂಪರ್ಕ ಇರಿಸಿಕೊಂಡಿದ್ದಾರೆ. ವರ್ತಕರು ವ್ಯಾಪಾರ ಮಾಡಲಿಲ್ಲ ಎನ್ನುವುದನ್ನು ಬಿಟ್ಟರೆ ಅವ್ಯವಹಾರ ನಡೆಸಿಲ್ಲ. ಇದನ್ನೇ ಆಧಾರವಾಗಿರಿಸಿಕೊಂಡು ಲೈಸೆನ್ಸ್ ರದ್ದು ಮಾಡಲು ಮುಂದಾಗಿರುವ ಕ್ರಮ ಖಂಡನೀಯ. ಕೂಡಲೆ ಅಗತ್ಯ ಕ್ರಮ ಕೈಗೊಳ್ಳದೆ ಇದ್ದರೆ ನಾವು ಸಂಘಟನಾತ್ಮಕವಾಗಿ ಚಿಂತಿಸಿ ಮುಂದೆ ವರ್ತಕರ ಹಿತಾಸಕ್ತಿ ಅನ್ವಯ ಹೋರಾಟದ ಹಾದಿ ಹಿಡಿಯಬೇಕಾಗುತ್ತದೆ ಎಂದು ತಿಳಿಸಿದರು.
    ಎಪಿಎಂಸಿ ಮಾಜಿ ನಿರ್ದೇಶಕ ವೆಂಕಟೇಶ್ ಮಾತನಾಡಿ, ಹಿಂದೆ ಸಹ ಇದೇ ರೀತಿ ನೋಟಿಸ್ ಜಾರಿಗೊಳಿಸಲಾಗಿತ್ತು. ಆಗ ಎಪಿಎಂಸಿ ಅಧ್ಯಕ್ಷರಿಗೆ ಮನವಿ ಮಾಡಿ ನೋಟಿಸ್ ಹಿಂದಕ್ಕೆ ಪಡೆಯುವಂತೆ ಮಾಡಲು ಯಶಸ್ವಿಯಾಗಿದ್ದೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹ ಹೇರಿಕೆ ಕ್ರಮ ಸರಿಯಲ್ಲ. ಇದು ಮಾರುಕಟ್ಟೆ ಮತ್ತು ರೈತರ ಮೇಲೆ ಪರಿಣಾಮ ಬೀರುತ್ತದೆ ಎಂದು ಒತ್ತಾಯಿಸಿದರು.
    ಸಂಘದ ಪ್ರಮುಖರಾದ ಅಮಿತ್ ಹೆಗಡೆ, ಕೆ.ಎನ್.ನಿರಂಜನ, ಕೆ.ಸಿ.ಸುರೇಶ್, ಎಂ.ಎಸ್.ಶಶಿಧರ್, ಸುಂದರ ಸಿಂಗ್, ಕುಮಾರ್, ಹನೀಫ್ ಕುಂಜಾಲಿ, ಮಂಜಣ್ಣ, ಬಿ.ಎಚ್.ಲಿಂಗರಾಜ್, ಎಸ್.ಎಚ್.ಸೊರಟೂರ, ರಶೀದ್, ವಿನಾಯಕ ಇತರರಿದ್ದರು.

    ಮ್ಯಾಮ್ಕೋಸ್ ದಲ್ಲಾಳಿ ಆಕರಣೆ ಮಾಡುವಾಗ ಕಮಿಷನ್‌ನಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಮ್ಯಾಮ್ಕೋಸ್ ತಕ್ಷಣ ತನ್ನ ನೀತಿಯನ್ನು ಬದಲಾಯಿಸಿಕೊಳ್ಳಬೇಕು.
    ವೆಂಕಟೇಶ್, ಎಪಿಎಂಸಿ ಮಾಜಿ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts