More

    ಡಿಕೆಸು ಗಟ್ಟಿ ನೆಲೆಗೆ ಪೆಟ್ಟು ಕೊಡುವರೇ ಹೃದಯದ ಡಾಕ್ಟರ್? ಬೆಂ.ಗ್ರಾಮಾಂತರ ಕ್ಷೇತ್ರದಲ್ಲಿ ಮೈತ್ರಿ ಚಟುವಟಿಕೆ ಬಿರುಸು

    | ಗಂಗಾಧರ್ ಬೈರಾಪಟ್ಟಣ ರಾಮನಗರ

    ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಿಂದ ಏಕೈಕ ಕಾಂಗ್ರೆಸ್ ಸಂಸದರನ್ನು ಗೆಲ್ಲಿಸಿದ್ದ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಈಗಾಗಲೆ ಅಭ್ಯರ್ಥಿಗಳು ಘೊಷಣೆಯಾಗಿದ್ದು, ರಾಜಕೀಯ ಚಟುವಟಿಕೆ ರಂಗು ಪಡೆದುಕೊಂಡಿದೆ. ಡಿಸಿಎಂ ಡಿ.ಕೆ.ಶಿವಕುಮಾರ್ ಸಹೋದರ ಹಾಲಿ ಸಂಸದ ಡಿ.ಕೆ.ಸುರೇಶ್ ಕಾಂಗ್ರೆಸ್ ಅಭ್ಯರ್ಥಿ. ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರ ಅಳಿಯ ಹಾಗೂ ಜಯದೇವ ಹೃದ್ರೋಗ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಬಿಜೆಪಿ-ಜೆಡಿಎಸ್ ಮೈತ್ರಿ ಹುರಿಯಾಳು. ಡಿ.ಕೆ.ಸುರೇಶ್ ಚುನಾವಣೆ ಘೊಷಣೆಗೂ ಮುನ್ನವೇ ಕ್ಷೇತ್ರ ಸಂಚಾರ ಮಾಡಿ ಪಕ್ಷ ಸಂಘಟನೆ ಮಾಡಿದ್ದರೆ, ಅಭ್ಯರ್ಥಿ ಘೊಷಣೆ ನಂತರ ಮೈತ್ರಿ ಪಕ್ಷಗಳು ಮೈ ಕೊಡವಿ ನಿಂತಿವೆ. ಎರಡೂ ಕಡೆಯವರು ಗೆಲುವು ನಮ್ಮದೇ ಎಂದು ಬೀಗುತ್ತಿದ್ದರೂ ಇಬ್ಬರಿಗೂ ಈ ಚುನಾವಣೆ ಅಷ್ಟು ಸುಲಭವಲ್ಲ ಎನ್ನುವ ವಾಸ್ತವ ತಿಳಿದು ಅಖಾಡ ಹದಗೊಳಿಸುವತ್ತ ಕಾರ್ಯೋನ್ಮುಖರಾಗಿದ್ದಾರೆ.

    ಮೈ ಕೊಡವಿದ ಮೈತ್ರಿ: ವಿಧಾನಸಭೆ ಚುನಾವಣೆಯಲ್ಲಿ ರಾಮನಗರ ಜಿಲ್ಲೆಯಲ್ಲಿ ಸೋಲಿನ ರುಚಿ ನೋಡಿರುವ ಜೆಡಿಎಸ್​ಗೆ ಬಿಜೆಪಿಯೊಂದಿಗಿನ ಮೈತ್ರಿ ಮತ್ತು ಡಾ.ಮಂಜುನಾಥ್ ಅವರ ಸ್ಪರ್ಧೆ ಆಕ್ಸಿಜನ್ ನೀಡಿದಂತೆ ಆಗಿದೆ. ರಾಮನಗರ, ಮಾಗಡಿ ಮತ್ತು ಕುಣಿಗಲ್​ನಲ್ಲಿ ಜೆಡಿಎಸ್ ಸೋಲಿಗೆ ಬಿಜೆಪಿ ಅಭ್ಯರ್ಥಿಗಳು ಪಡೆದ ಮತಗಳೇ ಕಾರಣವಾಗಿದ್ದರೂ, ಇದನ್ನು ಪಕ್ಕಕ್ಕೆ ಸರಿಸಿ ಸುರೇಶ್ ಅವರನ್ನು ಸೋಲಿಸಲೇಬೇಕೆಂದು ಟೊಂಕಕಟ್ಟಿ ನಿಂತಿದ್ದಾರೆ. ಎಚ್.ಡಿ. ಕುಮಾರಸ್ವಾಮಿ, ಸಿ.ಪಿ.ಯೋಗೇಶ್ವರ, ಮುನಿರತ್ನ ಆದಿಯಾಗಿ ಎಲ್ಲರೂ ಒಂದೆಡೆ ಸೇರಿ ಸಭೆಗಳನ್ನು ನಡೆಸುವ ಮೂಲಕ ಪ್ರಬಲ ಪೈಪೋಟಿ ನೀಡಲು ಅಖಾಡಕ್ಕೆ ಇಳಿಯುತ್ತಿದ್ದಾರೆ.

    ಗ್ಯಾರಂಟಿ-ಡಾಕ್ಟರ್ ಫೈಟ್
    ಡಿ.ಕೆ.ಸುರೇಶ್ ಅವರಿಗೆ ಡಾ.ಸಿ.ಎನ್.ಮಂಜುನಾಥ್ ಪ್ರಬಲ ಎದುರಾಳಿ. ಕೇಂದ್ರ ಪುರಸ್ಕೃತ ಯೋಜನೆಗಳ ಸಮಗ್ರ ಅನುಷ್ಠಾನ ಮಾಡಿರುವ ಸುರೇಶ್, ರಾಜ್ಯ ಸರ್ಕಾರದಲ್ಲಿ ಪ್ರಭಾವ ಬಳಸಿ ಅಭಿವೃದ್ಧಿ ಕಾರ್ಯಕ್ಕೆ ಒತ್ತು ನೀಡಿದ್ದಾರೆ. ಜತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಲವಿದೆ. ಡಾ.ಸಿ.ಎನ್. ಮಂಜುನಾಥ್ ಸ್ಪರ್ಧೆ ಬಗ್ಗೆ ವಿಭಿನ್ನ ವಿಶ್ಲೇಷಣೆಗಳಿವೆ. ರಾಜಕೀಯಕ್ಕೆ ಹೊಸಬರು ಎನ್ನುವುದು ಬಿಟ್ಟರೆ, ವೈದ್ಯರಾಗಿ ಮಾಡಿದ ಸೇವೆಯಿಂದ ಇಡೀ ರಾಜ್ಯದಲ್ಲಿ ಚಿರಪರಿಚಿತರು. ಪ್ರಧಾನಿ ಮೋದಿ ಅಲೆ ಹಾಗೂ ಜೆಡಿಎಸ್ ಬೆಂಬಲ, ಜಾತಿ ಜನಾಂಗ ನೋಡದೆ, ಸಮಯ ಲೆಕ್ಕಿಸದೆ ಸಹಾಯ ಮಾಡುವ ಗುಣ ಹಾಗೂ ಸಜ್ಜನಿಕೆಯ ವ್ಯಕ್ತಿತ್ವ ಅವರಿಗೆ ಪ್ಲಸ್ ಪಾಯಿಂಟ್.

    ಅಸಮಾಧಾನದ ಹೊಗೆ
    ಒಂದು ದಶಕದಿಂದ ಡಿ.ಕೆ.ಸುರೇಶ್ ಅವರದ್ದೇ ಆದ ಕಾರ್ಯಕರ್ತರ ಪಡೆ ಹೊಂದಿದ್ದಾರೆ. ಬೆಂಬಲಿಗರಿಗೆ ಪ್ರಾಧಿಕಾರಗಳ ಅಧ್ಯಕ್ಷ ಸ್ಥಾನ ಕೊಡಿಸುವ ಮೂಲಕ ಪಕ್ಷದ ಹಿಡಿತ ಸಾಬೀತು ಮಾಡಿದ್ದಾರೆ. ಆದರೆ, ಚುನಾವಣೆ ಹೊಸ್ತಿಲಲ್ಲಿ ಕ್ಷೇತ್ರದ ವಿವಿಧ ಪ್ರಾಧಿಕಾರಗಳಿಗೆ ಮಾಡಿದ ನೇಮಕವೇ ಅಸಮಾಧಾನದ ಹೊಗೆಯಾಡುವಂತೆ ಮಾಡಿದೆ. ಬಹುತೇಕ ಎಲ್ಲ ಪ್ರಾಧಿಕಾರಗಳಿಗೂ ಒಕ್ಕಲಿಗ ಸಮುದಾಯವರನ್ನೇ ಅಧ್ಯಕ್ಷರನ್ನಾಗಿ ಮಾಡಿರುವುದು ಇತರ ಸಮುದಾಯದ ಮುಖಂಡರಿಗೆ ಬೇಸರ ತರಿಸಿದೆ. ಇದು ಚುನಾವಣೆ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಇದನ್ನು ಅರಿತಿರುವ ಡಿಕೆ ಬ್ರದರ್ಸ್ ಆಗಬಹುದಾದ ಡ್ಯಾಮೇಜ್ ನಿಯಂತ್ರಿಸುವ ನಿಟ್ಟಿನಲ್ಲಿ ಒಳಗೊಳಗೇ ಪ್ರಯತ್ನ ಮಾಡುತ್ತಿದ್ದಾರೆ.

    ಮೈತ್ರಿಪಕ್ಷಗಳಿಗೇ ಮತ ಹೆಚ್ಚು
    2023ರ ಮೇನಲ್ಲಿ ನಡೆದ ವಿಧಾನಸಭೆ ಚುನಾವಣೆ ಫಲಿತಾಂಶವನ್ನು ಅವಲೋಕಿಸಿದಾಗ ಬೆಂ. ಗ್ರಾಮಾಂತರ ಲೋಕಸಭೆ ಕ್ಷೇತ್ರ ವ್ಯಾಪ್ತಿಯ ಕ್ಷೇತ್ರಗಳಲ್ಲಿ ಮೈತ್ರಿ ಪಕ್ಷಗಳ ಒಟ್ಟಾರೆ ಮತಗಳು ಕಾಂಗ್ರೆಸ್​ಗಿಂತ ಹೆಚ್ಚೇ ಇವೆ. 8 ಕೇತ್ರಗಳಲ್ಲಿ ಆನೇಕಲ್, ಕನಕಪುರ ಹೊರತುಪಡಿಸಿ 6ರಲ್ಲಿ ಬಿಜೆಪಿ – ಜೆಡಿಎಸ್ 1.59 ಲಕ್ಷ ಮತಗಳ ಮುನ್ನಡೆ ಹೊಂದಿವೆ. ಕಾಂಗ್ರೆಸ್ 8,12,917 ಮತಗಳನ್ನು ಗಳಿಸಿದ್ದರೆ ಬಿಜೆಪಿ – ಜೆಡಿಎಸ್ ಅಭ್ಯರ್ಥಿಗಳಿಗೆ ದಕ್ಕಿರುವುದು 9,72,167 ಮತಗಳು. ಆದರೆ, ಲೋಕಸಭೆಯ ಕಾರ್ಯತಂತ್ರವೇ ಬೇರೆ ಇರುವ ಕಾರಣ ಫಲಿತಾಂಶ ಏರು ಪೇರಾಗುವ ಸಾಧ್ಯತೆ ಇದೆ.

    ಕೈಗೆ ನಗರದ್ದೇ ಚಿಂತೆ
    ಹೆಸರಿಗೆ ಗ್ರಾಮಾಂತರ ಲೋಕಸಭೆ ಕ್ಷೇತ್ರವಾದರೂ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ ಮತ್ತು ಆನೇಕಲ್ ಕ್ಷೇತ್ರಗಳಲ್ಲಿಯೇ ಅತಿ ಹೆಚ್ಚು ಮತದಾರರಿದ್ದಾರೆ. ಕ್ಷೇತ್ರದ ಒಟ್ಟು 27.63 ಲಕ್ಷ ಮತದಾರ ಪೈಕಿ 16.5 ಲಕ್ಷ ಮತದಾರರು ಈ ಕ್ಷೇತ್ರಗಳಲ್ಲಿಯೇ ಇದ್ದಾರೆ. ಅಲ್ಲದೆ, ಇತಿಹಾಸ ಅವಲೋಕಿಸಿದಾಗ ಇಲ್ಲಿ ಬಿಜೆಪಿಯದ್ದೇ ಪ್ರಾಬಲ್ಯ ಇರುವುದು ಕೈ ಚಿಂತೆ ಹೆಚ್ಚಿಸಿದೆ. ರಾಮನಗರ ಜಿಲ್ಲೆಯ ನಾಲ್ಕು ಮತ್ತು ತುಮಕೂರು ಜಿಲ್ಲೆಯ ಕುಣಿಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್, ಮೈತ್ರಿ ಅಭ್ಯರ್ಥಿಗಿಂತ ಹೆಚ್ಚಿನ ಮತ ಪಡೆದುಕೊಂಡರೂ ನಗರ ಪ್ರದೇಶದ ಕತೆ ಏನು ಎನ್ನುವ ಚಿಂತೆ ಕಾಡುತ್ತಿದೆ.

    ಕರ್ಮದ ಫಲ ಸಿಲ್ಕ್​ ಸ್ಮಿತಾ ಸಾವಿಗೆ ಕಾರಣವಾಯ್ತಾ? ಅತಿದೊಡ್ಡ ರಹಸ್ಯ ಬಯಲು ಮಾಡಿದ ಹಿರಿಯ ನಟಿ

    ಶಾಸ್ತ್ರೋಕ್ತವಾಗಿ ಸಹೋದರನನ್ನೇ ಮದುವೆಯಾದ ಮಹಿಳೆ! ಕಾರಣ ತಿಳಿದರೆ ಹೌಹಾರ್ತೀರಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts