More

    ಗಡಿಪಾರು ಭೀತಿಯ ನಡುವೆ ಆಸ್ಟ್ರೇಲಿಯನ್ ಓಪನ್ ಡ್ರಾದಲ್ಲಿ ಜೋಕೊವಿಕ್‌ಗೆ ಸ್ಥಾನ

    ಮೆಲ್ಬೋರ್ನ್: ಲಸಿಕೆ ವಿವಾದದಿಂದಾಗಿ ವೀಸಾ ಅನಿಶ್ಚಿತತೆ ಮುಂದುವರಿದಿರುವ ನಡುವೆಯೂ ವಿಶ್ವ ನಂ. 1 ಆಟಗಾರ ನೊವಾಕ್ ಜೋಕೊವಿಕ್ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಡ್ರಾದಲ್ಲಿ ಸ್ಥಾನ ಪಡೆದಿದ್ದಾರೆ. ಸೋಮವಾರದಿಂದ ನಡೆಯಲಿರುವ ಟೂರ್ನಿಯಲ್ಲಿ ಜೋಕೋ 10ನೇ ಬಾರಿ ಪ್ರಶಸ್ತಿ ಜಯಿಸುವ ಹಂಬಲದಲ್ಲಿದ್ದಾರೆ.

    ಗಡಿಪಾರಿನಿಂದ ಪಾರಾದರೆ ಸೆರ್ಬಿಯಾ ತಾರೆ ಜೋಕೋ ಮೊದಲ ಸುತ್ತಿನಲ್ಲಿ ದೇಶಬಾಂಧವ ಮಿಯೊಮಿರ್ ಕೆಕ್ಮಾನೋವಿಕ್ ವಿರುದ್ಧ ಸೆಣಸಲಿದ್ದಾರೆ. ಕಳೆದ ವಾರ ಆಸೀಸ್‌ಗೆ ಬಂದಿಳಿದ ಬೆನ್ನಲ್ಲೇ ಜೋಕೋ ವೀಸಾ ರದ್ದುಗೊಂಡಿದ್ದರೂ, ಕಾನೂನು ಹೋರಾಟದಲ್ಲಿ ಗೆದ್ದಿದ್ದರು. ಆದರೂ ಲಸಿಕೆ ಹಾಕಿಸಿಕೊಳ್ಳದ ಯಾರಿಗೂ ದೇಶದೊಳಗೆ ಪ್ರವೇಶ ನೀಡುವುದಿಲ್ಲ. ಈ ಕಠಿಣ ನಿಯಮವನ್ನು ಸಡಿಲಿಸುವುದಿಲ್ಲ ಎಂದು ಆಸೀಸ್ ಪ್ರಧಾನಿ ಸ್ಕಾಟ್ ಮಾರಿಸನ್ ಗುರುವಾರ ಮತ್ತೊಮ್ಮೆ ಪುನರುಚ್ಚರಿಸಿದ್ದಾರೆ. ಇದರಿಂದಾಗಿ ವಲಸೆ ಸಚಿವ ಅಲೆಕ್ಸ್ ಹ್ವಾಕ್, ತಮ್ಮ ವಿಶೇಷ ವೈಯಕ್ತಿಕ ಅಧಿಕಾರವನ್ನು ಬಳಸಿ 34 ವರ್ಷದ ಜೋಕೊವಿಕ್‌ರನ್ನು ಗಡಿಪಾರು ಮಾಡಲು ಶೀಘ್ರವೇ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಈ ಹಿಂದೆ ಕ್ರಿಮಿನಲ್‌ಗಳನ್ನು ಮಾತ್ರ ಈ ವಿಶೇಷ ಅಧಿಕಾರದನ್ವಯ ಗಡಿಪಾರು ಮಾಡಲಾಗುತ್ತಿತ್ತು. ಅಲ್ಲದೆ, ಈ ರೀತಿ ಗಡಿಪಾರಾದರೆ ಮತ್ತೆ ಕನಿಷ್ಠ 3 ವರ್ಷ ದೇಶದೊಳಗೆ ಪ್ರವೇಶಿಸುವಂತಿಲ್ಲ.

    ಕಳೆದ ತಿಂಗಳು ಕರೊನಾ ಸೋಂಕಿತರಾಗಿದ್ದ ಕಾರಣ ಜೋಕೋ ಲಸಿಕೆಯಿಂದ ವಿನಾಯಿತಿ ಬಯಸಿದ್ದಾರೆ. ಯಾಕೆಂದರೆ ಆಸೀಸ್ ನಿಯಮದನ್ವಯ ಕಳೆದ 6 ತಿಂಗಳಲ್ಲಿ ಸೋಂಕಿತರಾದವರಿಗೆ ಲಸಿಕೆ ವಿನಾಯಿತಿ ಇದೆ. ಆದರೆ ಈ ರೀತಿಯ ವಿನಾಯಿತಿ ಪಡೆಯಬೇಕಾದರೆ, ಸೋಂಕಿತರೂ ಗಂಭೀರ ಲಕ್ಷಣಗಳನ್ನು ಹೊಂದಿರಬೇಕು ಮತ್ತು ಸೂಕ್ತ ವೈದ್ಯಕೀಯ ಕಾರಣಗಳನ್ನೂ ನೀಡಬೇಕೆಂದು ಆಸೀಸ್ ಸರ್ಕಾರ ವಾದಿಸಿದೆ.

    ಒಂದು ವೇಳೆ ಮತ್ತೊಮ್ಮೆ ಜೋಕೊವಿಕ್‌ರ ವೀಸಾ ಮತ್ತೊಮ್ಮೆ ರದ್ದುಗೊಂಡು ಸರ್ಕಾರ ಗಡಿಪಾರಿಗೆ ಮುಂದಾದರೆ ಅವರ ಪರ ವಕೀಲರು ನ್ಯಾಯಾಲಯದಿಂದ ಪ್ರತಿಬಂಧಕಾಜ್ಞೆಯನ್ನು ತರುವ ಸಾಧ್ಯತೆಯೂ ಇದೆ.

    ಈ ಎಲ್ಲ ಬೆಳವಣಿಗೆಗಳ ನಡುವೆ ಜೋಕೋ, ರಾಡ್ ಲೆವರ್ ಅರೆನಾದಲ್ಲಿ ಟೂರ್ನಿಗೆ ಕಠಿಣ ಅಭ್ಯಾಸ ಮುಂದುವರಿಸಿದ್ದು, ಗ್ರಾಂಡ್ ಸ್ಲಾಂ ಗೆಲುವಿನ ಬೇಟೆಯನ್ನು 21ಕ್ಕೇರಿಸಲು ಗಮನಹರಿಸಿದ್ದಾರೆ.

    ಸಿಂಗಲ್ಸ್‌ಗೆ ಭಾರತೀಯರಿಲ್ಲ
    ಯೂಕಿ ಭಾಂಬ್ರಿ ಅರ್ಹತಾ ಸುತ್ತಿನ 2ನೇ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಇದರೊಂದಿಗೆ ಆಸ್ಟ್ರೇಲಿಯನ್ ಓಪನ್ ಸಿಂಗಲ್ಸ್ ಪ್ರಧಾನ ಸುತ್ತಿನಲ್ಲಿ ಭಾರತದ ಆಟಗಾರರು ಇಲ್ಲದಂತಾಗಿದೆ. ಯೂಕಿ ಭಾಂಬ್ರಿ 1-6, 2-6ರಿಂದ ಜೆಕ್ ಗಣರಾಜ್ಯದ ತೋಮಸ್ ಮಚಾಕ್‌ಗೆ ಶರಣಾದರು. ಈ ಮುನ್ನ ರಾಮ್‌ಕುಮಾರ್ ರಾಮನಾಥನ್ ಗ್ರಾಂಡ್ ಸ್ಲಾಂ ಪ್ರಧಾನ ಸುತ್ತಿಗೇರುವ 23ನೇ ಪ್ರಯತ್ನದಲ್ಲೂ ವಿಲರಾಗಿದ್ದರೆ, ಅಂಕಿತಾ ರೈನಾ ಕೂಡ ನಿರಾಸೆ ಅನುಭವಿಸಿದ್ದರು.

    ಭಾರತದಲ್ಲಿ ಕರೊನಾ 3ನೇ ಅಲೆ ಕಾಡಿದರೆ ದಕ್ಷಿಣ ಆಫ್ರಿಕಾಕ್ಕೆ ಐಪಿಎಲ್ ಸ್ಥಳಾಂತರ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts