More

    ಸತತ 11 ದಿನಗಳ ಹೋರಾಟಕ್ಕೆ ದಕ್ಕಲಿಲ್ಲ ಜಯ; ಕಡೆಗೂ ಆಸ್ಟ್ರೇಲಿಯಾ ತೊರೆದ ವಿಶ್ವ ನಂ.1 ಆಟಗಾರ

    ಮೆಲ್ಬೋರ್ನ್: ಕರೊನಾ ಲಸಿಕೆ ಹಾಕಿಸಿಕೊಳ್ಳದ ಹಿನ್ನೆಲೆಯಲ್ಲಿ ವೀಸಾ ರದ್ದುಗೊಳಿಸಿದ ವಿಚಾರಕ್ಕೆ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಕಾನೂನು ಸಮರ ಸಾರಿದ್ದ ವಿಶ್ವ ನಂ.1 ನೊವಾಕ್ ಜೋಕೊವಿಕ್‌ಗೆ ಸೋಲುಂಟಾಗಿದೆ. ಗಡಿಪಾರು ತಪ್ಪಿಸಿಕೊಳ್ಳುವ ಸಂಬಂಧ ಜೋಕೋ ಮೂವರು ನ್ಯಾಯಾಧೀಶರ ಉನ್ನತ ನ್ಯಾಯಾಲಯದ ಮೊರೆ ಹೋಗಿದ್ದರು. ಭಾನುವಾರ ವಿಚಾರಣೆ ನಡೆಸಿದ ನ್ಯಾಯಾಧೀಶರು 34 ವರ್ಷದ ಜೋಕೋ ಮನವಿಯನ್ನು ತಿರಸ್ಕರಿಸಿದ್ದಾರೆ. ಈ ಮೂಲಕ ಕಳೆದ 11 ದಿನಗಳಿಂದ ನಡೆಯುತ್ತಿದ್ದ ಜೋಕೋ ಹಾಗೂ ಆಸೀಸ್ ಸರ್ಕಾರದ ಕಾನೂನು ಸಮರಕ್ಕೂ ತೆರೆಬಿದ್ದಂತಾಗಿದೆ. ಈ ತೀರ್ಪಿನಿಂದಾಗಿ ಸೋಮವಾರದಿಂದ ಆರಂಭವಾಗಲಿರುವ ವರ್ಷದ ಮೊದಲ ಗ್ರಾಂಡ್ ಸ್ಲಾಂ ಆಸ್ಟ್ರೇಲಿಯನ್ ಓಪನ್‌ಗೆ ಜೋಕೋ ಅಲಭ್ಯರಾಗಲಿದ್ದಾರೆ. ತೀರ್ಪು ಹೊರಬಿದ್ದ ಬೆನ್ನಲ್ಲೇ ಜೋಕೋ ಆಸೀಸ್ ತೊರೆದಿದ್ದಾರೆ.

    ಕೋರ್ಟ್ ತೀರ್ಪಿಗೆ ಬೇಸರ ವ್ಯಕ್ತಪಡಿಸಿರುವ ಜೋಕೊವಿಕ್, ಭಾನುವಾರ ಸಂಜೆ ಆಸ್ಟ್ರೇಲಿಯಾ ತೊರೆದಿದ್ದಾರೆ. ‘ಕೋರ್ಟ್ ತೀರ್ಪನ್ನು ಗೌರವಿಸುವುದು ನನ್ನ ಕರ್ತವ್ಯ, ಆಸ್ಟ್ರೇಲಿಯಾದಿಂದ ತೆರಳುವ ಮೂಲಕ ಸ್ಥಳೀಯ ಆಡಳಿತಕ್ಕೆ ನಾನು ಸಹಕರಿಸುತ್ತೇನೆ’ ಎಂದು ಜೋಕೋ ಹೇಳಿದ್ದಾರೆ. ನಾವೀಗ ಟೂರ್ನಿ ಹಾಗೂ ಆಟದ ಕಡೆ ಹೆಚ್ಚು ಗಮನಹರಿಸಬೇಕು. ಕೆಲದಿನಗಳ ಕಾಲ ವಿಶ್ರಾಂತಿ ಬಯಸುತ್ತೇನೆ. ಸದ್ಯದ ಪರಿಸ್ಥಿತಿಯಲ್ಲಿ ಹೇಳುವುದಕ್ಕೆ ಏನು ಉಳಿದಿಲ್ಲ ಎಂದು ಜೋಕೋ ಹೇಳಿದ್ದಾರೆ. 10ನೇ ಆಸೀಸ್ ಓಪನ್ ಗೆಲುವಿನ ಹಂಬಲದೊಂದಿಗೆ ಜೋಕೋ ಜನವರಿ 5 ರಂದು ಆಸೀಸ್‌ಗೆ ತೆರಳಿದ್ದರು. ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಇತರ ಆಟಗಾರರಿಗೆ, ಸಿಬ್ಬಂದಿಗೆ ಶುಭಾವಾಗಲಿ. ಈ ವೇಳೆಗೆ ನನಗೆ ಸಹಕರಿಸಿದ ಕುಟುಂಬ ಸದಸ್ಯರಿಗೆ, ಸ್ನೇಹಿತರಿಗೆ, ತಂಡ, ಬೆಂಬಲಿಗರು, ಅಭಿಮಾನಿಗಳಿಗೆ ಅಭಾರಿಯಾಗಿರುತ್ತೇನೆ ಎಂದರು.

    * ಪ್ರಕರಣದ ಹಿನ್ನೆಲೆ
    ಕರೊನಾ ಲಸಿಕೆ ಹಾಕಿಸಿಕೊಳ್ಳದೆ ಜನವರಿ 5 ರಿಂದ ಆಸ್ಟ್ರೇಲಿಯಾಗೆ ತೆರಳಿದ್ದ ಜೋಕೋ ಅವರ ವೀಸಾ ರದ್ದುಗೊಳಿಸಿದ್ದ ಸರ್ಕಾರ, ವಿಚಾರಣೆ ಆಗುವವರೆಗೂ ಮೆಲ್ಬೋರ್ನ್ ಹೋಟೆಲ್‌ನಲ್ಲಿ ಉಳಿಸಿತ್ತು. ಈ ವೇಳೆ ಆಸ್ಟ್ರೇಲಿಯಾ ಸರ್ಕಾರದ ವಿರುದ್ಧ ಜೋಕೋ ಕಾನೂನು ಮೊರೆ ಹೋಗಿದ್ದರು. ಆದರೆ, ಕಾನೂನು ಹೋರಾಟದಲ್ಲಿ ಜೋಕೋ ಪರ ತೀರ್ಪು ಬಂದಿದ್ದರೂ ಶುಕ್ರವಾರವಷ್ಟೇ ಆಸೀಸ್ ವಲಸೆ ಸಚಿವರು ತಮ್ಮ ವಿಶೇಷ ಅಧಿಕಾರ ಬಳಸಿ 2ನೇ ಬಾರಿ ಜೋಕೊವಿಕ್‌ರ ವೀಸಾ ರದ್ದುಗೊಳಿಸಿದ್ದರು. ಇದರಿಂದ ಶನಿವಾರ ಬೆಳಗ್ಗೆ ಜೋಕೋರನ್ನು ಬಂಧಿಸಿ ವಲಸಿಗರ ದಸ್ತಗಿರಿ ಹೋಟೆಲ್‌ಗೆ ಕರೆದೊಯ್ಯಲಾಗಿತ್ತು. ಇದರ ಮಧ್ಯೆ ನೊವಾಕ್ ಜೋಕೊವಿಕ್ ಆಸ್ಟ್ರೇಲಿಯನ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯ ಡ್ರಾದಲ್ಲಿ ಸ್ಥಾನ ಪಡೆದಿದ್ದರು. ಗಡಿಪಾರಿನಿಂದ ಪಾರಾಗದಿದ್ದರೆ ದೇಶಬಾಂಧವ ಮಿಯೊಮಿರ್ ಕೆಕ್ಮಾನೋವಿಕ್ ವಿರುದ್ಧ ಸೆಣಸಬೇಕಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts