More

    ಓಬವ್ವ ನಾಡಲ್ಲಿ ನಾರಿಯರೇ ಮೇಲುಗೈ

    ಚಿತ್ರದುರ್ಗ: ಚಿತ್ರದುರ್ಗ ಲೋಕಸಭಾ ಎಸ್‌ಸಿ ಮೀಸಲು ಕ್ಷೇತ್ರದ ಚುನಾವಣೆ ಏಪ್ರಿಲ್ 26ರಂದು ಮತದಾನ ನಡೆಯಲಿದ್ದು, ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಅಧಿಕ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಹೇಳಿದರು.
    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದೇಶಾದ್ಯಂತ ನಡೆಯುವ ಎರಡನೇ ಹಂತದ, ರಾಜ್ಯಕ್ಕೆ ಸಂಬಂಧಿಸಿದಂತೆ ಮೊದಲ ಹಂತವಾಗಿ ಚಿತ್ರದುರ್ಗ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ವೇಳಾಪಟ್ಟಿ ಬಿಡುಗಡೆ ಹಿನ್ನೆಲೆಯಲ್ಲಿ ತಕ್ಷಣದಿಂದ ನೀತಿ ಸಂಹಿತೆ ಜಾರಿಯಾಗಿದೆ ಎಂದರು.
    ಚುನಾವಣೆ ಅಧಿಸೂಚನೆ ಮಾ.28ರಂದು ಹೊರಡಿಸಲಿದೆ. ಅಂದಿನಿಂದ ಏಪ್ರಿಲ್ 4ರ ವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿರುತ್ತದೆ. 5ರಂದು ನಾಮಪತ್ರಗಳ ಪರಿಶೀಲನೆ ಹಾಗೂ ಹಿಂಪಡೆಯಲು 8 ಕೊನೆಯ ದಿನವಾಗಿದೆ. ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, 6ರಂದು ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.
    ಚಿತ್ರದುರ್ಗ ಕ್ಷೇತ್ರದಲ್ಲಿ ಜಿಲ್ಲೆಯ ಆರು ತಾಲೂಕುಗಳು ಹಾಗೂ ತುಮಕೂರು ಜಿಲ್ಲೆಯ ಶಿರಾ ಮತ್ತು ಪಾವಗಡ ತಾಲೂಕುಗಳ ಸಹಿತ 18,41,937 ಮತದಾರರು ಇದ್ದಾರೆ. ಇವರಲ್ಲಿ 9,19,064 ಪುರುಷರು, 9,22,769 ಮಹಿಳೆಯರು ಹಾಗೂ 10 ಇತರ ಮತದಾರರು ಇದ್ದಾರೆ.
    ಎಲ್ಲ ಎಂಟು ವಿಧಾನಸಭಾ ಕ್ಷೇತ್ರಗಳಿಗೂ ಎಸಿ ಗ್ರೇಡ್‌ನ ಅಧಿಕಾರಿಗಳನ್ನು ಸಹಾಯಕ ಚುನಾವಣಾಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಎಲ್ಲ ಮತಗಟ್ಟೆಗಳಿಗೆ ಅಗತ್ಯವಿರುವಂತೆ 3952 ಬ್ಯಾಲೆಟ್ ಯೂನಿಟ್, 2721 ಕಂಟ್ರೋಲ್ ಯೂನಿಟ್ ಹಾಗೂ 2867 ವಿವಿ ಪ್ಯಾಟ್‌ಗಳನ್ನು ಸಜ್ಜುಗೊಳಿಸಲಾಗಿದೆ. ಈ ಬಾರಿ ಅತ್ಯಾಧುನಿಕ ಎಂ-3 ಮಾದರಿ ಇವಿಎಂಗಳನ್ನು ಮತದಾನಕ್ಕೆ ಬಳಸಲಾಗುತ್ತಿದೆ ಎಂದರು.
    ನೀತಿ ಸಂಹಿತೆ ಹಾಗೂ ಚುನಾವಣಾ ಅಕ್ರಮಗಳ ತಡೆಗೆ ವಿವಿಧ ತಂಡಗಳನ್ನು ರಚಿಸಲಾಗಿದೆ. ನೀತಿ ಸಂಹಿತೆ ಉಲ್ಲಂಘನೆ ಆಗದಂತೆ ಗಮನಿಸಲು ಜಿಪಂ ಸಿಇಒ ನೇತೃತ್ವದಲ್ಲಿ ಈ ತಂಡಗಳು ಕಾರ‌್ಯನಿರ್ವಹಿಸಲಿವೆ. ಈಗಾಗಲೇ ಆರಂಭವಾಗಿರುವ ಅಂತರ್‌ರಾಜ್ಯ ಗಡಿ ಚೆಕ್ ಪೋಸ್ಟ್‌ಗಳ ಸಹಿತ ಭಾನುವಾರದಿಂದಲೇ ಕ್ಷೇತ್ರಾದ್ಯಂತ 47 ಚೆಕ್‌ಪೋಸ್ಟ್‌ಗಳು ಕಾರ‌್ಯಾರಂಭವಾಗಲಿವೆ ಎಂದು ಹೇಳಿದರು.
    ದೂರುಗಳಿಗೆ ಸಂಬಂಧಿಸಿದಂತೆ ದಿನದ 24 ಗಂಟೆಗೆ 1950 ಸಹಾಯವಾಣಿ ಸ್ಥಾಪಿಸಲಾಗಿದೆ. ಸಿ-ವಿಜಿಲ್ ಆ್ಯಪ್ ಮೂಲಕವೂ ನಾಗರಿಕರು ದೂರು ಸಲ್ಲಿಸಬಹುದು. ಮತಗಟ್ಟೆಗಳಿಗೆ ಅಗತ್ಯ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಈ ಚುನಾವಣೆಯಲ್ಲೂ ನೋಟಾಕ್ಕೆ ಅವಕಾಶವಿದೆ ಎಂದು ತಿಳಿಸಿದರು.
    ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಧ್ವನಿವರ್ಧಕಗಳನ್ನು ಬಳಸುವಂತಿಲ್ಲ. ಪ್ರಚಾರಕ್ಕಾಗಿ ಪರಿಸರ ಸ್ನೇಹಿ ಪರಿಕರಗಳನ್ನು ಬಳಸಬೇಕು.ಪ್ರಚಾರದ ಅನುಮತಿಗಾಗಿ ರಾಜಕೀಯ ಪಕ್ಷಗಳು ಆನ್‌ಲೈನ್ ಮೂಲಕವೇ ಕೋರಿಕೆ ಸಲ್ಲಿಸಬೇಕು. ಮತಯಂತ್ರಗಳ ಸಾಗಾಟ ಮತ್ತಿತರ ಚುನಾವಣೆ ಕಾರ‌್ಯಕ್ಕೆ ಬಳಸುವ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದೆ ಎಂದರು.
    ಈ ಹಿಂದಿನ ಲೋಕಸಭೆ ಚುನಾವಣೆ 2014ರಲ್ಲಿ ಶೇ.66 ಹಾಗೂ 2019ರಲ್ಲಿ ಶೇ.70.64 ಮತದಾನವಾಗಿತ್ತು. ಈ ಬಾರಿಯೂ ಇನ್ನೂ ಹೆಚ್ಚಿನ ಮತದಾನಕ್ಕೆ ಕ್ರಮ ವಹಿಸಲಾಗಿದೆ. ಸ್ವೀಪ್ ಅಡಿ ಮತದಾನ ಮಾಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಎಲ್ಲರೂ ತಪ್ಪದೆ ಮತಚಲಾಯಿಸಬೇಕೆಂದು ಮನವಿ ಮಾಡಿದರು.
    ಜಿಲ್ಲೆಯಲ್ಲಿ 85 ವರ್ಷ ವಯಸ್ಸು ಮೀರಿದ 11,650 ಮತದಾರರು ಹಾಗೂ 24,750 ಅಂಗವಿಕಲರಿಗೆ ಅವರ ಮನೆಯಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಚಿತ್ರದುರ್ಗ ಜಿಲ್ಲೆಯಲ್ಲಿ 35693 ಮತದಾರರು ಇದ್ದಾರೆ. ತಮ್ಮಲ್ಲಿರುವ ಶಸ್ತಾಸ್ತ್ರಗಳನ್ನು ಪೊಲೀಸ್ ಠಾಣೆಗೆ ಒಪ್ಪಿಸುವಂತೆ ಸಾರ್ವನಿಕರಿಗೆ ಸೂಚಿಸಲಾಗಿದೆ ಎಂದು ಹೇಳಿದರು.
    ಜಿಪಂ ಸಿಇಒ ಎಸ್.ಜೆ.ಸೋಮಶೇಖರ್, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಅಬಕಾರಿ ಉಪ ಆಯುಕ್ತ ಡಾ.ಬಿ.ಮಾದೇಶ್ ಇದ್ದರು.

    *ಇಪ್ಪತ್ತು ಮಂದಿ ಗಡಿಪಾರಿಗೆ ಶಿಫಾರಸು
    ಕಾನೂನು ಸುವ್ಯವಸ್ಥೆ ದೃಷ್ಟಿಯಿಂದ ಜಿಲ್ಲೆಯಿಂದ 20 ಜನರನ್ನು ಗಡಿಪಾರು ಮಾಡುವಂತೆ ಎಸಿಗೆ ಶಿಫಾರಸು ಮಾಡಲಾಗಿದೆ ಎಂದು ಎಸ್‌ಪಿ ಧರ್ಮೇಂದ್ರಕುಮಾರ್‌ಮೀನಾ ಹೇಳಿದರು. ಜಿಲ್ಲೆಯಲ್ಲಿ 1058 ಸಮಾಜಘಾತುಕರ ವಿರುದ್ಧ ಬಾಂಡ್ ಓವರ್ ಕ್ರಮ ಜರುಗಿಸಲಾಗುತ್ತಿದೆ. ಪ್ಯಾರಾಮಿಲಿಟರಿ ಸಿಬ್ಬಂದಿ ಪ್ರತಿ ಹಳ್ಳಿಯಲ್ಲೂ ಪಥಸಂಚಲನ ನಡೆಸಿ ಮತದಾನದೆಡೆ ಜನರಲ್ಲಿ ವಿಶ್ವಾಸ ಮೂಡಿಸಲಿದೆ ಎಂದರು.

    ವಿಧಾನಸಭಾ ಕ್ಷೇತ್ರ-ಮತದಾರರ ಸಂಖ್ಯೆ-ಮತಗಟ್ಟೆಗಳ ಸಂಖ್ಯೆ
    ಮೊಳಕಾಲ್ಮೂರು-249252-285
    ಚಳ್ಳಕೆರೆ-222560-260
    ಚಿತ್ರದುರ್ಗ-264248-288
    ಹಿರಿಯೂರು-245728-287
    ಹೊಸದುರ್ಗ-199457-242
    ಹೊಳಲ್ಕೆರೆ-236966-299
    ಶಿರಾ-226694-266
    ಪಾವಗಡ-197032-240

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts