More

    ಸಡಗರದಿಂದ ದೀಪಾವಳಿ ಆಚರಣೆ

    ಹಾವೇರಿ/ರಾಣೆಬೆನ್ನೂರ: ಕರೊನಾ ಸೋಂಕು ಭೀತಿ ನಡುವೆಯೂ ಬೆಳಕಿನ ಹಬ್ಬ ದೀಪಾವಳಿಯನ್ನು ನಗರ ಸೇರಿ ಜಿಲ್ಲಾದ್ಯಂತ ಸಂಭ್ರಮ, ಸಡಗರದಿಂದ ಭಾನುವಾರ ಆಚರಿಸಲಾಯಿತು.

    ಜಿಲ್ಲೆಯ ಜನ ಈ ಬಾರಿ ಕರೊನಾ ಲಾಕ್​ಡೌನ್, ವರುಣನ ಚೆಲ್ಲಾಟ ಹಾಗೂ ನೆರೆಹಾವಳಿಗೆ ತತ್ತರಿಸಿ ಹೋಗಿದ್ದರೂ ಹಬ್ಬದ 2ನೇ ದಿನವಾದ ಭಾನುವಾರ ಅಮಾವಾಸ್ಯೆ ಪೂಜೆಯನ್ನು ಶ್ರದ್ಧೆ, ಭಕ್ತಿಯಿಂದ ನೆರವೇರಿಸಿದರು.

    ಶನಿವಾರ ಹಾಗೂ ಭಾನುವಾರ ಬೆಳಗ್ಗೆಯಿಂದ ಸಂಜೆವರೆಗೂ ಮಾರುಕಟ್ಟೆಯಲ್ಲಿ ಅಲಂಕಾರಿಕ ಸಾಮಗ್ರಿಗಳು, ಆಕಾಶಬುಟ್ಟಿ, ಹಣ್ಣು-ಹಂಪಲು, ಹೂವು, ಕಬ್ಬು, ಮಾವು, ಬಾಳೆ ವ್ಯಾಪಾರ ಬಿರುಸಾಗಿತ್ತು. ಕೆಲವರು ವ್ಯಾಪಾರ, ವಹಿವಾಟನ್ನು ಬೆಳಗ್ಗೆಯಿಂದಲೇ ಬಂದ್ ಮಾಡಿ ಲಕ್ಷ್ಮೀ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಿದರು. ಅನೇಕರು ಸಂಜೆ ಹೊತ್ತಿಗೆ ತಮ್ಮ ಅಂಗಡಿಗಳನ್ನು ಬಣ್ಣ ಬಣ್ಣದ ದೀಪಗಳಿಂದ ಸಿಂಗರಿಸಿ, ರಂಗೋಲಿ ಬಿಡಿಸಿ, ಹಣತೆಗಳನ್ನು ಹಚ್ಚಿ, ಪಟಾಕಿ ಸಿಡಿಸಿ ಲಕ್ಷ್ಮೀ ಪೂಜೆ ನೆರವೇರಿಸಿದರು. ಜತೆಗೆ ವಾಹನಗಳಿಗೂ ಪೂಜೆ ಸಲ್ಲಿಸಿದರು.

    ಕಬ್ಬು, ಜೋಳದ ದಂಟು, ಉತ್ತರಾಣಿ ಕಡ್ಡಿ, ಹೊನ್ನರಕಿ ಹೂವು, ತಳೀರು ತೋರಣಗಳಿಂದ ಬಾಗಿಲನ್ನು ಸಿಂಗರಿಸಿದ್ದು ಕಂಡು ಬಂದಿತು. ಗ್ರಾಮೀಣ ಭಾಗದಲ್ಲಿಯೂ ಕೂಡ ಹಬ್ಬದ ಆಚರಣೆ ಜೋರಾಗಿತ್ತು. ಮನೆ ಮಂದಿಯೆಲ್ಲ ಹೊಸ ಬಟ್ಟೆ ಧರಿಸಿ ಹಬ್ಬವನ್ನು ಸಂಭ್ರಮದಿಂದ ಆಚರಿಸುವುದು ಕಂಡುಬಂದಿತು.

    ಸಂಜೆಯಾಗುತ್ತಿದ್ದಂತೆ ನಗರದ ಅಂಗಡಿಗಳೆಲ್ಲ ಝುಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಆಕರ್ಷಿಸುತ್ತಿದ್ದವು. ಬಹುತೇಕ ಎಲ್ಲ ಅಂಗಡಿಗಳಲ್ಲಿಯೂ ವಿದ್ಯುತ್ ಅಲಂಕಾರ ಮಾಡಿದ್ದರಿಂದ ಇಡೀ ನಗರವೇ ಬೆಳಕಿನಲ್ಲಿ ಮಿಂಚುವಂತಿತ್ತು.

    ನ. 16ರಂದು ಬಲಿಪಾಡ್ಯ ಆಚರಣೆಗೆ ಜನ ಸಿದ್ಧತೆ ಮಾಡಿಕೊಂಡಿದ್ದು, ಮನೆ ಮುಂದೆ ಹಟ್ಟಿಲಕ್ಕವ್ವಳನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಾರೆ. ಹಬ್ಬದ ನಿಮಿತ್ತ ಮಾರುಕಟ್ಟೆಯಲ್ಲಿ ಜನಜಂಗುಳಿ ಕಂಡು ಬಂದಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts