More

    ಸಂಗೀತದಲ್ಲಿ ಅಡಗಿದೆ ದೈವಿ ಶಕ್ತಿ

    ವಿಜಯಪುರ: ಸಂಗೀತದಲ್ಲಿ ದೈವಿಶಕ್ತಿ ಇದೆ. ಕಟುಕನಲ್ಲೂ ಮನುಷ್ಯತ್ವವನ್ನುಂಟು ಮಾಡುವ ಶಕ್ತಿ ಸಂಗೀತಕ್ಕಿದೆ. ಸಂಗೀತವು ನೆಮ್ಮದಿ ನೀಡುವುದರ ಜತೆಗೆ ಮಕ್ಕಳಲ್ಲಿ ಶಿಸ್ತು, ಶ್ರದ್ಧೆ, ಸೇವಾ ಮನೋಭಾವನೆ ಮೂಡಿಸುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಹೇಳಿದರು.

    ನಗರದ ಗಾನಬನದ ಶ್ರೀಗುರು ಕುಮಾರೇಶ್ವರ ಪ್ರತಿಷ್ಠಾನ ಹಾಗೂ ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನಗಳ ಸಹಯೋಗದಲ್ಲಿ ಗುರುವಾರ ನಡೆದ ಕುಮಾರ ಶಿವಯೋಗಿಗಳ 94ನೇ ಪುಣ್ಯ ಸ್ಮರಣೋತ್ಸವ ಹಾಗೂ ಗಾನಯೋಗಿ ಶಿವಯೋಗಿ ಪಂಡಿತ ಪಂಚಾಕ್ಷರ ಗವಾಯಿಗಳ 132ನೇ ಜಯಂತ್ಯುತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಸಂಗೀತ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

    ಸಂಗೀತದ ಮೂಲಕ ಭಗವಂತನನ್ನು ಒಲಿಸಿಕೊಂಡ ಸಾಧಕರು ಸಾಕಷ್ಟಿದ್ದಾರೆ. ಗಾನಬನದಲ್ಲಿ ಸಂಗೀತ ಕಲೆಯುವ ಮಕ್ಕಳು ಭಾಗ್ಯವಂತರು ಎಂದು ಹೇಳಿದರು.

    ಸಮಾಜ ಸೇವಕ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಸಂಗೀತದಿಂದ ಒಳ್ಳೆಯ ಸಂಸ್ಕಾರ ದೊರೆಯುತ್ತದೆ. ಅನೇಕ ಅಂಧರ ಬಾಳಿಗೆ ಸಂಗೀತವು ದಾರಿದೀಪವಾಗಿದೆ. ಸಂಗೀತ ಶಾಲೆಗಳಿಗೆ ಆರ್ಥಿಕ ಸಹಾಯ ಮಾಡುವುದರೊಂದಿಗೆ ಬೆಳೆಸಬೇಕಾಗಿದೆ ಎಂದರು.

    ವೈದ್ಯಶ್ರೀ ಸದ್ಯೋಜಾತ ರೇಣುಕಾಶಿವಾಚಾರ್ಯರು ಮಾತನಾಡಿ, ಕೇವಲ ರಾಜ ದರಬಾರ್‌ದಲ್ಲಿ ಉಳ್ಳವರ ಸಮ್ಮುಖದಲ್ಲಿ ನಡೆಯುತ್ತಿದ್ದ ಸಂಗೀತವನ್ನು ಜನಸಾಮಾನ್ಯರ ಸಮಾಜದ ಮಧ್ಯೆ ತಂದವರು ಪಂಚಾಕ್ಷರ ಗವಾಯಿಗಳು ಎಂದರು.

    ಪೂಜ್ಯ ಮುರಘೇಂದ್ರ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಬಸವರಾಜ ಕೆಂಗನಾಳ ಅಧ್ಯಕ್ಷತೆ ವಹಿಸಿದ್ದರು. ಮಹಾನಗರ ಪಾಲಿಕೆ ಸದಸ್ಯ ಎಂ.ಎಸ್. ಕರಡಿ, ಉಪನೋಂದಣಾಧಿಕಾರಿ ಬಿ.ಎಸ್. ಬಿರಾದಾರ, ಬಿ.ಎಂ. ಪಾಟೀಲ ಮತ್ತಿತರರಿದ್ದರು.

    ಟಿ. ಚೈತ್ರಾ ಸ್ವಾಗತಿಸಿದರು. ಸುಭಾಸಚಂದ್ರ ಕನ್ನೂರ ನಿರೂಪಿಸಿದರು. ಪಂಚಾಕ್ಷರಿ ಶಾಸ್ತ್ರಿ ಶಿರೋಳಮಠ ನಿರ್ವಹಿಸಿದರು. ಪಿ.ಸಿ. ಅರಕೇರಿಮಠ ವಂದಿಸಿದರು. ಗಾನಬನದ ಹಿರಿಯ ವಿದ್ಯಾರ್ಥಿಗಳಿಂದ ಶಾಸ್ತ್ರೀಯ ಸುಗಮ ಹಾಗೂ ವಾದ್ಯ ಸಂಗೀತ ಕಾರ್ಯಕ್ರಮಗಳು ಜರುಗಿದವು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts